
ಶುಕ್ರವಾರ ದಿಢೀರ್ ಸಚಿವ ಸಂಪುಟ ಸಭೆ ಕರೆದಿದ್ದಾರೆ ಸಿಎಂ ಸಿದ್ದರಾಮಯ್ಯ. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮಹತ್ವದ ಸಂಪುಟ ಸಭೆ ನಡೆಯಲಿದೆ. ಜನವರಿ 30ರಂದು ಸಚಿವ ಸಂಪುಟ ಸಭೆ ಕರೆದಿದ್ದ ಸಿಎಂ ಸಿದ್ದರಾಮಯ್ಯ, ಇದೀಗ ತುರ್ತು ಸಚಿವ ಸಂಪುಟ ಸಭೆ ನಡೆಸಲು ಮುಂದಾಗಿದ್ದಾರೆ.
ಜನವರಿ 27 ರಂದು ಮುಡಾ ಹಗರಣದ ಬಗ್ಗೆ ಹೈಕೋರ್ಟ್ ನಿರ್ಧಾರ ಪ್ರಕಟ ಮಾಡುವ ಸಾದ್ಯತೆಯಿದ್ದು, ಒಂದು ವೇಳೆ ಹೈಕೋರ್ಟ್ ಆದೇಶ ದೂರುದಾರರ ಪರವಾಗಿ ಬಂದರೆ ಸರ್ಕಾರದಲ್ಲಿ ಇದ್ದುಕೊಂಡು ನಾವು ಏನು ಮಾಡಬೇಕು..? CBI ತನಿಖೆ ಕುರಿತ ಅರ್ಜಿ ವಿಚಾರಣೆ ಆದೇಶ ಹೊರಬಂದರೆ ಮುಂದೇನು ಮಾಡೋದು ಎಂದು ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಆದರೆ ಒಂದು ವಾರ ಮುಂಚಿತವಾಗಿ ಕ್ಯಾಬಿನೆಟ್ ಸಭೆ ನಡೆಸುವ ಅವಶ್ಯಕತೆ ಏನಿತ್ತು ಅನ್ನೋ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಇನ್ನು ಬೆಂಗಳೂರು ಪ್ಯಾಲೇಸ್ ಗ್ರೌಂಡ್ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶವಿದ್ದು, ರಾಜ್ಯ ಸರ್ಕಾರಕ್ಕೆ ಕೊಂಚ ಹಿನ್ನಡೆ ಆಗಿರುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಿದ್ದಾರೆ ಎನ್ನಲಾಗ್ತಿದೆ. ಈ ಎಲ್ಲಾ ಆಯಾಮದಲ್ಲೂ ಸಿಎಂ ಸಿದ್ದರಾಮಯ್ಯ ಏಕಾಏಕಿ ಕರೆದಿರುವ ಸಚಿವ ಸಂಪುಟ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ.