
ಹನಿಟ್ರ್ಯಾಪ್ ವಿಚಾರವಾಗಿ ಬಿಜೆಪಿ ನಾಯಕರು ಪ್ರಚಾರ ಗಿಟ್ಟಿಸಿಕೊಳ್ಳಲು ಸದನದಲ್ಲಿ ಗದ್ದಲ ಮಾಡಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿಕಾರಿದ್ದಾರೆ. ಹನಿಟ್ರ್ಯಾಪ್ಗಾಗಿ ಹೋರಾಟ ಮಾಡಿ ಬಿಜೆಪಿಯವರು ಅಮಾನತ್ತಾಗಿದ್ದಾರೆ. ಸರ್ಕಾರ ಉನ್ನತ ತಂಡ ರಚಿಸಿ, ತನಿಖೆ ಮಾಡಿಸೋದಾಗಿ ಹೇಳಿದೆ. ಸಿಎಂ ಸಿದ್ದರಾಮಯ್ಯ ಅವರ ಉತ್ತರಕ್ಕೆ ಬಿಜೆಪಿಯವರಿಗೆ ಆಸಕ್ತಿ ಇರಲಿಲ್ಲ. ಹೀಗಾಗಿ ಹನಿಟ್ರ್ಯಾಪ್ ನೆಪ ಮಾಡಿಕೊಂಡು ಗದ್ದಲ ಮಾಡಿದ್ದಾರೆ ಎಂದಿದ್ದಾರೆ.
ಸಿಬಿಐ ತನಿಖೆಗೆ ಡಿಮ್ಯಾಂಡ್ ಮಾಡೋದಾರೆ ಮಾಡಲಿ, ಆದರೆ ಕೂಗಾಡಿ, ಪೇಪರ್ಗಳನ್ನು ಹರಿದು ಸ್ಪೀಕರ್ ಮೇಲೆ ಎಸೆದು ಗಲಾಟೆ ಮಾಡುವುದು ಏನಿತ್ತು..? ಇದಕ್ಕಿಂತ ಬೇರೆ ವಿಚಾರಗಳು ಇರಲಿಲ್ಲವೆ..? ಸಿಎಂ ಉತ್ತರ ಕೊಡುವ ಮುಂಚೆಯೇ ಬಿಜೆಪಿಯವರು ನಾಟಕ ಮಾಡಿದ್ದಾರೆ. ಸದನದಲ್ಲಿಯೇ ತಕ್ಷಣ ನ್ಯಾಯ ಕೊಡಿಸಲು ಆಗುತ್ತದೆಯೇ..? ಈ ವ್ಯವಸ್ಥೆ ನಾಚಿಕೆಗೇಡಿನದು. ಇದರ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಬೇರೆ ದೇಶಗಳು ಪ್ರಗತಿಯ ಬಗ್ಗೆ ಮಾತನಾಡುತ್ತಿವೆ. ನಾವು ಮಾತ್ರ ಹನಿಟ್ರ್ಯಾಪ್ ಬಗ್ಗೆ ಮಾತನಾಡೋ ವ್ಯವಸ್ಥೆಯಲ್ಲಿ ಸಿಲುಕಿಕೊಂಡಿದ್ದೇವೆ ಎಂದು ಬೇಸರ ಹೊರಹಾಕಿದ್ದಾರೆ.

ಸದನದಲ್ಲಿ ವರ್ತಿಸೋದಕ್ಕೆ ಕೆಲ ಮಿತಿಗಳಿರುತ್ತವೆ. ಪಾರ್ಲಿಮೆಂಟ್ನಲ್ಲಿ ನಮ್ಮವರಿಗೂ ಹೊರಗೆ ಎಸೆದಿದ್ದಾರೆ. ನಾವು ಪಾರ್ಲಿಮೆಂಟ್ನಲ್ಲಿ ಮಾತನಾಡಿದ್ದು, ಜನಪರ ವಿಚಾರಗಳ ಬಗ್ಗೆ. ನಮ್ಮ ಸಚಿವರೇ ವಿಚಾರ ಎತ್ತಿದ್ದಾರೆ. ಸ್ವಯಂ ಪ್ರೇರಣೆಯಿಂದ ನಾವು ದೂರು ತೆಗೆದುಕೊಂಡು ತನಿಖೆ ಮಾಡ್ತಿದ್ದೇವೆ. ವೀರಪ್ಪ ಮೊಯ್ಲಿ ಅವರು ಹೇಳಿರೋ ಮಾತಿಗೆ ನನ್ನ ಸಹಮತವಿದೆ. ಹನಿಟ್ರ್ಯಾಪ್ ಗದ್ದಲದ ವಿಚಾರವಾಗಿ ಹೊರಟ್ಟಿ ರಾಜೀನಾಮೆ ಪ್ರಸ್ತಾಪ ವಿಚಾರ, ಹೊರಟ್ಟಿ ಅವರ ಜೊತೆಗೆ ನಮಗೂ ಮುಜುಗರವಿದೆ. ತಲೆ ತಗ್ಗಿಸೋ ವಿಚಾರಗಳು ಬಹಳಷ್ಟಿವೆ ಎಂದಿದ್ದಾರೆ.

ಎಲ್ಲ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇರೋದು ನಮ್ಮನ್ನು ತಲೆತಗ್ಗಿಸುವಂತೆ ಮಾಡಿದೆ. ರಾಜಕಾರಣದಲ್ಲಿ ಹೊಸಗಾಳಿ ಬರಲಿ, ಯುವಕರು ರಾಜಕಾರಣಕ್ಕೆ ಬರಲಿ, ವಿಚಾರವಾದಂತಹ ರಾಜಕಾರಣ ಬರಲಿ ಎಂದು ಹುಬ್ಬಳ್ಳಿಯಲ್ಲಿ ಸಂತೋಷ್ ಲಾಡ್ ಆಶಿಸಿದ್ದಾರೆ.
