ರಾಜ್ಯದಲ್ಲಿ ಹೆಚ್ಚು ಹೊಸ ಉದ್ಯೋಗ ಸೃಷ್ಟಿಸಲು ಹೂಡಿಕೆದಾರರಿಗೆ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ’ಕರ್ನಾಟಕ ಉದ್ಯೋಗ ನೀತಿ 2022-25′ ಜಾರಿಗೊಳಿಸಲು ಸರಕಾರ ಮುಂದಾಗಿದೆ. ಆ ಮೂಲಕ ಮೂರು ವರ್ಷಗಳಲ್ಲಿ 7.50 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಿದೆ. ಈ ಸಂಬಂಧ ನೂತನ ಉದ್ಯೋಗ ನೀತಿ ಜಾರಿಗೆ ಸಚಿವ ಸಂಪುಟ ಸಭೆ ಶುಕ್ರವಾರ ಅನುಮೋದನೆ ನೀಡಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಹೆಚ್ಚುವರಿ ಹೂಡಿಕೆ ಆಧಾರದಲ್ಲಿ ಅದಕ್ಕೆ ಅನುಗುಣವಾಗಿ ಹೆಚ್ಚುವರಿ ಉದ್ಯೋಗ ನೀಡಲು ಈ ನೀತಿ ರೂಪಿಸಲಾಗಿದೆ. ಎಲ್ಲ ಶ್ರೇಣಿಯಲ್ಲೂ ಸ್ಥಳೀಯ ಕನ್ನಡಿಗರಿಗೆ ಹೆಚ್ಚುವರಿ ಉದ್ಯೋಗ ನೀಡಲು ನಿರ್ಧರಿಸಲಾಗಿದೆ ಎಂದರು.
2022-23ನೇ ಶೈಕ್ಷಣಿಕ ಸಾಲಿಗೆ ವಿದ್ಯಾ ವಿಕಾಸ ಯೋಜನೆಯಡಿ 132 ಕೋಟಿ ರೂ. ಅನುದಾನದಲ್ಲಿ ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್ ಅಥವಾ ಸ್ಯಾಂಡಲ್ಸ್ ವಿತರಿಸಲು ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಒಟ್ಟಾರೆ ಕೈಗಾರಿಕಾ ನೀತಿ ಮೂಲಕ ಮೂರು ವರ್ಷಗಳಲ್ಲಿ 3.50 ಲಕ್ಷ ಉದ್ಯೋಗ ಹಾಗೂ ‘ಜವಳಿ ಮತ್ತು ಗಾರ್ಮೆಂಟ್ ನೀತಿ’ಯಡಿ ಎರಡು ವರ್ಷಗಳಲ್ಲಿ 4 ಲಕ್ಷ ಉದ್ಯೋಗ ಸೃಷ್ಟಿಸುವ ಮೂಲಕ ಒಟ್ಟು 7.50 ಲಕ್ಷ ಉದ್ಯೋಗಾವಕಾಶ ಸೃಷ್ಟಿ ನಿರೀಕ್ಷೆ ಹೊಂದಲಾಗಿದೆ.