ಅವರು ಕಳ್ಳರು, ಅತ್ಯಾಚಾರಿಗಳು, ಕೊಲೆಗಡುಕರು. ಇಂದಲ್ಲಾ ನಾಳೆ ನಿಮ್ಮ ಮನೆಗೆ ಬಂದು ನಿಮ್ಮ ಅಕ್ಕತಂಗಿಯರನ್ನು ಹೊತ್ತೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಲೂ ಹಿಂದೆ ಮುಂದೆ ನೋಡುವುದಿಲ್ಲ. ಅವರ ಮಾತನ್ನು ಕೇಳಿ ನೀವು ಅವರಿಗೆ ಬೆಂಬಲ ನೀಡಬೇಡಿ. . .
ಹೀಗೆ ಸಿಎಎ ವಿರುದ್ಧ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರ ಬಗ್ಗೆ ತುಚ್ಛವಾಗಿ ಮಾತನಾಡಿದವರು ಗೃಹಮಂತ್ರಿ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು. ತಮ್ಮ ಹಕ್ಕಿಗೆ ಚ್ಯುತಿ ಬರುತ್ತಿದೆ ಎಂಬ ಆತಂಕದಿಂದ ಸಿಎಎ ವಿರುದ್ಧ ಈ ಹೋರಾಟಗಾರರು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂತಹವರನ್ನು ದೇಶದ್ರೋಹಿಗಳು ಎಂಬ ಮಟ್ಟಕ್ಕೆ ಬಿಜೆಪಿ ನಾಯಕರು ಬಿಂಬಿಸುತ್ತಾ ಬಂದಿದ್ದಾರೆ.
ಅಷ್ಟೇ ಅಲ್ಲದೇ, ಇದೇ ಪ್ರತಿಭಟನಾಕಾರರ ವಿಚಾರವನ್ನು ಮುಂದಿಟ್ಟುಕೊಂಡು ದೆಹಲಿ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಹವಣಿಕೆಯನ್ನೂ ಮಾಡಿತ್ತು. ಕಳೆದ ಹತ್ತಾರು ದಿನಗಳಿಂದ ಚುನಾವಣೆ ಪ್ರಚಾರ ರ್ಯಾಲಿಗಳಲ್ಲಿ ಈ ಶಾಹೀನ್ ಬಾಗ್ ಪ್ರತಿಭಟನೆ ವಿಚಾರದ ಬಗ್ಗೆ ಬಿಜೆಪಿ ನಾಯಕರು ಪ್ರಸ್ತಾಪ ಮಾಡುತ್ತಾ ಬಂದಿದ್ದಾರೆ. ಆದರೆ, ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ ಕಳೆದ ಐದು ವರ್ಷಗಳಲ್ಲಿ ನೀಡಿರುವ ಜನಪರ ಕಾರ್ಯಕ್ರಮಗಳ ಮುಂದೆ ಈ ವಿಚಾರ ಗೌಣವಾಗುತ್ತಿದೆ. ಈ ವಿಚಾರದಿಂದ ಮತಗಳನ್ನು ಸೆಳೆಯಲು ಸಾಧ್ಯವಿಲ್ಲ ಎಂಬುದನ್ನು ಅರಿತ ಬಿಜೆಪಿ ನಾಯಕರು ಇದೀಗ ಶಾಹೀನ್ ಬಾಗ್ ಪ್ರತಿಭಟನಾಕಾರರ ಎದುರು ಮಂಡಿಯೂರಲು ಸಿದ್ಧತೆ ನಡೆಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯ ಶಾಹೀನ್ ಬಾಗ್ ನಲ್ಲಿ ಕಳೆದ ಎರಡು ತಿಂಗಳಿಂದ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಹೋರಾಟಗಾರರಿಗೆ ಏನೆಲ್ಲಾ ಕಿರುಕುಳ ನೀಡಲು ಕೇಂದ್ರದ ಬಿಜೆಪಿ ಸರ್ಕಾರ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ಹೋರಾಟಗಾರರ ಪ್ರತಿಭಟನೆಯ ಕೆಚ್ಚು ಕಡಿಮೆಯಾಗಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಹೋರಾಟಗಾರರ ಜತೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಘೋಷಿಸಿದೆ.
ಕೇಂದ್ರ ಸರ್ಕಾರ ಶಾಹೀನ್ ಬಾಗ್ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಅವರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಇರುವ ಕೆಲವು ಅನುಮಾನಗಳನ್ನು ಹೋಗಲಾಡಿಸಿ ಕಾಯ್ದೆಯ ಸದುದ್ದೇಶವನ್ನು ಮನವರಿಕೆ ಮಾಡಿಕೊಡಲು ಮುಕ್ತ ಮನಸು ಹೊಂದಿದೆ ಎಂದು ಕೇಂದ್ರ ಕಾನೂನು ಸಚಿವರೂ ಆಗಿರುವ ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರ ಹೋರಾಟಗಾರರೊಂದಿಗೆ ಮಾತುಕತೆ ನಡೆಸಲು ಸಿದ್ಧವಿದೆ. ಆದರೆ, ಈ ಮಾತುಕತೆಯ ಸಭೆಯು ರಚನಾತ್ಮಕವಾಗಿರಬೇಕು ಎಂದು ಹೇಳಿದ್ದಾರೆಯೇ ಹೊರತು ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿ ಬಗ್ಗೆ ಪುನರ್ ಪರಿಶೀಲನೆ ನಡೆಸಲಾಗುತ್ತದೆ ಎಂಬುದನ್ನು ಹೇಳಿಲ್ಲ. ಅಂದರೆ, ಕಾಯ್ದೆಯನ್ನು ಜಾರಿಗೆ ತಂದೇ ತರುತ್ತೇವೆ. ಈ ಬಗ್ಗೆ ಇರುವ ಅನುಮಾನಗಳನ್ನು ಹೋಗಲಾಡಿಸುತ್ತೇವೆ ಎಂದು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ದೇಶವ್ಯಾಪಿ ತರಲು ಉದ್ದೇಶಿಸಿರುವ ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಹೋರಾಟಗಾರರು ಕಳೆದ 45 ದಿನಗಳಿಂದ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಿಂದ ನೋಯ್ಡಾ ಮತ್ತು ದೆಹಲಿಯನ್ನು ಸಂಪರ್ಕಿಸುವ ರಸ್ತೆಯನ್ನು ನೋಯ್ಡಾ ಸಂಚಾರಿ ಪೊಲೀಸರು ಬಂದ್ ಮಾಡಿದ್ದಾರೆ.
ಸಿಎಎ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತಿರುವವರ ವಿರುದ್ಧ ಪ್ರಚಾರ ಮಾಡಿದರೆ ಕನಿಷ್ಠ ಪಕ್ಷ ಹಿಂದೂ ಮತಗಳನ್ನಾದರೂ ಕ್ರೋಢೀಕರಿಸಬಹುದು ಎಂಬ ದೂರದೃಷ್ಟಿಯನ್ನು ಇಟ್ಟುಕೊಂಡಿದ್ದ ಬಿಜೆಪಿ ನಾಯಕರಿಗೆ ಆರಂಭದಲ್ಲೇ ವಿಘ್ನ ಎದುರಾದಂತೆ ಕಾಣುತ್ತಿದೆ. ಚುನಾವಣೆಗೆ ಇನ್ನು ಇರುವುದು ಕೇವಲ ಒಂದು ವಾರ ಸಮಯ. ಈ ಅಲ್ಪಾವಧಿಯಲ್ಲಿ ಕೇವಲ ಈ ವಿಚಾರವನ್ನು ಮುಂದಿಟ್ಟುಕೊಂಡು ಹೋದರೆ ಮತ ಗಳಿಕೆ ಸಾಧ್ಯವಿಲ್ಲ ಎಂಬ ಅಂಶವನ್ನು ನಾಯಕರು ಅರಿತುಕೊಂಡಂತಾ ಕಾಣುತ್ತಿದೆ.

ಅಲ್ಲದೇ, ಕೆಲವೊಂದು ಬಿಜೆಪಿ ಕಾರ್ಯಕರ್ತರ ರ್ಯಾಲಿಯನ್ನು ಹೊರತುಪಡಿಸಿದರೆ ಬಿಜೆಪಿ ನಾಯಕರು ನಡೆಸಿದ ಚುನಾವಣೆ ಪ್ರಚಾರ ರ್ಯಾಲಿಗಳಲ್ಲಿ ಶಾಹೀನ್ ಬಾಗ್ ಪ್ರತಿಭಟನೆ ವಿರುದ್ಧದ ಮತ್ತು ಸಿಎಎ ಪರವಾದ ಭಾಷಣ ಮಾಡಿದಾಗ ಜನರ ಪ್ರತಿಸ್ಪಂದನೆ ಅಷ್ಟಕಷ್ಟೇ ಇದ್ದದ್ದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಹೀಗೆ ಮಾಡುತ್ತಾ ಹೋದರೆ ಇರುವ ಒಂದು ವಾರದಲ್ಲಿ ಬರುವ ಮತಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬ ನಗ್ನ ಸತ್ಯವನ್ನು ಅರಿತಿರುವ ಬಿಜೆಪಿ ನಾಯಕರು, ಅಂತಿಮ ಕ್ಷಣದಲ್ಲಾದರೂ ಹೋರಾಟಗಾರರ ಜತೆ ಸಭೆ ನಡೆಸಿ ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸೋಣ. ಈ ಮೂಲಕ ಹೋರಾಟಗಾರರನ್ನು ಮನವೊಲಿಸಿ ಪ್ರತಿಭಟನೆಯನ್ನು ವಾಪಸ್ ತೆಗೆದುಕೊಳ್ಳುವಂತೆ ಮಾಡಿ ನಾವು ಸಿಎಎ ವಿಚಾರದಲ್ಲಿ ಮುಕ್ತ ಮನಸ್ಸನ್ನು ಹೊಂದಿದ್ದೇವೆ ಎಂದು ತೋರಿಸಿಕೊಡುವ ಮೂಲಕ ಮತಗಳನ್ನು ಸೆಳೆಯುವ ತಂತ್ರ ಹೆಣೆಯುತ್ತಿದೆ.
ಆದರೆ, ಈಗಾಗಲೇ ಸಿಎಎ ಮತ್ತು ಎನ್ಆರ್ ಸಿ ವಿಚಾರದಲ್ಲಿ ದೇಶಾದ್ಯಂತ ದಂಗೆ ಎದ್ದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಜನತೆ ತಿರುಗಿಬಿದ್ದಿದ್ದಾರೆ. ಹೀಗಾಗಿ ಬಿಜೆಪಿ ನಡೆಸಿರುವ ಈ damage control strategy ಗೆ ಮತದಾರರು ಮಣಿಯುತ್ತಾರೆ ಎಂಬ ವಿಶ್ವಾಸ ಸ್ವತಃ ಮತದಾರರಿಗೇ ಇಲ್ಲದಂತಾಗಿದೆ.