
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಸೈಟ್ ಹಂಚಿಕೆ ವಿಚಾರವಾಗಿ ನಡೆದಿದೆ ಎನ್ನಲಾದ ಅಕ್ರಮ ಖಂಡಿಸಿ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಆಯೋಜಿಸಿರುವ ಮೈಸೂರು ಪಾದಯಾತ್ರೆಗೆ ಚಾಲನೆ ದೊರೆತಿದೆ.ಕೆಂಗೇರಿಯ ಕೆಂಪಮ್ಮ ದೇವಸ್ಥಾನದ ಬಳಿ ಇರುವ ಜೆ ಕೆ ಗ್ರ್ಯಾಂಡ್ ಅರೆನಾ ಸೆಂಟರ್ನಲ್ಲಿ ಮೈಸೂರು ಪಾದಯಾತ್ರೆಯಗೆ ಕೆಂಪಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಚಾಲನೆ ನೀಡಿದರು.

ಮುಡಾದಿಂದ ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಅಕ್ರಮವಾಗಿ 14 ನಿವೇಶಗಳನ್ನು ಹಂಚಲಾಗಿದೆ ಎಂಬ ಆರೋಪವನ್ನು ಬಿಜೆಪಿ, ಜೆಡಿಎಸ್ ಬ್ರಹ್ಮಾಸ್ತ್ರವನ್ನಾಗಿಸಿಕೊಂಡಿವೆ. ಸಿದ್ದರಾಮಯ್ಯ ಅವರ ರಾಜೀನಾಮೆ ಆಗ್ರಹಿಸಿ ಆಯೋಜಿಸಿರುವ ಪಾದಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆಯ ಜೆಡಿಎಸ್ ನಾಯಕ ಸಿ ಬಿ ಸುರೇಶ್ ಬಾಬು, ಮಾಜಿ ಸಚಿವ ಜಿ ಟಿ ದೇವೇಗೌಡ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ದರು.ಪಾದಯಾತ್ರೆಗೆ ನಮ್ಮ ನಿರೀಕ್ಷೆಗೂ ಮೀರಿ ಜನರು ಬರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಸಂತಸ ವ್ಯಕ್ತಪಡಿಸಿದರು.ಮಾಧ್ಯಮ ಪ್ರತಿನಿಧಿಗಳ ಜೊತೆ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಮಾತನಾಡಿದ ಅವರು, “ಪಾದಯಾತ್ರೆ ಯಶಸ್ವಿಯಾಗಬೇಕು.

ಈ ಭ್ರಷ್ಟ, ಹಗರಣಗಳ ಕಾಂಗ್ರೆಸ್ ಸರ್ಕಾರ ವಿರುದ್ಧ ಹೋರಾಟದ ಯಶಸ್ಸಿಗಾಗಿ ನಮ್ಮೆಲ್ಲ ಕಾರ್ಯಕರ್ತರು ಅತ್ಯುತ್ತಮ ವ್ಯವಸ್ಥೆ ಮಾಡಿದ್ದಾರೆ” ಎಂದರು.ಮೈಸೂರು ಚಲೋ ಪಾದಯಾತ್ರೆಯ ಆರಂಭಕ್ಕೂ ಮುನ್ನ ವಿಜಯೇಂದ್ರ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಆರ್.ರಘು ಕೌಟಿಲ್ಯ, ಜಿಲ್ಲಾಧ್ಯಕ್ಷರಾದ ಎಲ್. ನಾಗೇಂದ್ರ, ಎಲ್.ಆರ್.ಮಹದೇವಸ್ವಾಮಿ, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.