ಕೆಐಎಡಿಬಿ ಜಮೀನಿನ ಡಿನೋಟಿಫಿಕೇಷನ್ ಆರೋಪದ ತನಿಖೆಯ ರದ್ದತಿಗೆ ರಾಜ್ಯ ಹೈಕೋರ್ಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಕ್ಷಣ ರಾಜೀನಾಮೆ ನೀಡಿ ಮುಕ್ತ ಮತ್ತು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಕಾನೂನುಬಾಹಿರವಾಗಿ ಜಮೀನನ್ನು ಡಿನೋಟಿಫೈ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಅವರ ವಿರುದ್ಧದ ಆರೋಪಗಳು Cognizable offence ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಡಿಸೆಂಬರ್ 22ರ ಆದೇಶದಲ್ಲಿ ಹೈಕೋರ್ಟ್ ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಕೆಐಎಡಿಬಿ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾತ್ರದ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು 2015ರಲ್ಲಿ ಎಫ್ ಐ ಆರ್ ಸಲ್ಲಿಸಿದ್ದು, ಲೋಕಾಯುಕ್ತ ನ್ಯಾಯಾಲಯ ವಿಚಾರಣೆ ಕೂಡಾ ನಡೆಸಿತ್ತು. ಇದರಲ್ಲಿ ಯಡಿಯೂರಪ್ಪ ಅವರನ್ನು ಎರಡನೇ ಆರೋಪಿಯಾಗಿ ಮಾಡಿದ್ದರು. ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ತಮ್ಮ ವಿರುದ್ಧ ದೂರು ದಾಖಲಿಸಿರುವುದು ಕಾನೂನುಬಾಹಿರ ಕ್ರಮವಾಗಿರುವ ಕಾರಣ ಪ್ರಕರಣವನ್ನು ರದ್ದುಪಡಿಸಬೇಕೆಂಬ ಬಿ.ಎಸ್.ಯಡಿಯೂರಪ್ಪನವರ ಕೋರಿಕೆಯನ್ನು ಹೈಕೋರ್ಟ್ ತಿರಸ್ಕರಿಸಿರುವುದರಿಂದ ಬಿ.ಎಸ್.ಯಡಿಯೂರಪ್ಪನವರಿಗೆ ರಾಜೀನಾಮೆ ಹೊರತು ಬೇರೆ ದಾರಿ ಇಲ್ಲದಂತಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿದರೆ ತನ್ನ ಅಧಿಕಾರದ ಬಲದಿಂದ ತನಿಖೆಯ ಹಾದಿ ತಪ್ಪಿಸುವ ಸಾಧ್ಯತೆಗಳಿವೆ. ತಾವು ಮುಖ್ಯಮಂತ್ರಿಯಾದ ಕೂಡಲೇ ಈ ಪ್ರಕರಣದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ಪಡೆದಿರುವುದೇ ಇದಕ್ಕೆ ಸಾಕ್ಷಿ ಎಂದು ಆತಂಕ ವ್ಯಕ್ತಪಡಿಸಿದ ಅವರು, ʼಯಡಿಯೂರಪ್ಪನವರ ವಿರುದ್ದದ ಆರೋಪ ಗಂಭೀರ ಸ್ವರೂಪದ್ದು, ಇದು ಸಾಮಾನ್ಯ ಡಿನೋಟೀಫಿಕೇಷನ್ ಪ್ರಕರಣ ಅಲ್ಲ. ಕೈಗಾರಿಕಾ ಸ್ಥಾಪನೆಗಾಗಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನನ್ನು ಉದ್ಯಮಿಗಳಿಗೆ ಹಂಚಿಕೆ ಮಾಡಿದ ನಂತರ ಡಿನೋಟೀಫಿಕೇಷನ್ ಮಾಡಲಾಗಿದೆ. ಪ್ರಕರಣದ ಗಂಭೀರತೆಯನ್ನು ನ್ಯಾಯಮೂರ್ತಿಗಳು ಕೂಡಾ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ
‘ನಾ ಕಾವೂಂಗಾ, ನಾ ಕಾನೇ ದೂಂಗಾ’ ಎಂದು ಘೋಷಿಸಿದ್ದ ಪ್ರಧಾನಿ ನರೇಂದ್ರಮೋದಿಯವರಿಗೆ ಅವರದ್ದೇ ಪಕ್ಷದ ಮುಖ್ಯಮಂತ್ರಿಯವರ ಮೇಲಿನ ಈ ಗಂಭೀರ ಆರೋಪ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ದೇಶಪಾಂಡೆ ಮತ್ತು ಯಡಿಯೂರಪ್ಪ ವಿರುದ್ಧದ ಆರೋಪಗಳು ಭಿನ್ನವಾದವು. ಅವರ ವಿರುದ್ಧ ಅಕ್ರಮ ಡಿನೋಟಿಫೈ ಆರೋಪ ಇರಲಿಲ್ಲ. ಉದ್ದಿಮೆಗಳಿಗೆ ಜಮೀನು ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಖಾಸಗಿ ದೂರಿನಲ್ಲಿ ಆರೋಪಿಸಲಾಗಿತ್ತು. ಅದನ್ನು ಹೈಕೋರ್ಟ್ ಮಾನ್ಯ ಮಾಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
2000–2001ನೇ ಸಾಲಿನಲ್ಲಿ ನಗರದ ವೈಟ್ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸುಮಾರು 500 ಎಕರೆಯನ್ನು ಐಟಿ ಕಾರಿಡಾರ್ ಆಗಿ ಸರ್ಕಾರ ಘೋಷಣೆ ಮಾಡಿತ್ತು. ಮಾರತ್ ಹಳ್ಳಿ, ಬೆಳ್ಳಂದೂರು, ಸರ್ಜಾಪುರ, ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸುಮಾರು 434 ಎಕರೆ ಸ್ವಾಧೀನಕ್ಕೆ ಕೆಐಎಡಿಬಿ ಅಧಿಸೂಚನೆ ಹೊರಡಿಸಿತ್ತು.
ದೇವರಬೀಸನಹಳ್ಳಿ ಸರ್ವೆ ನಂಬರ್ 49ರಲ್ಲಿ 4 ಎಕರೆ 30 ಗುಂಟೆ, ಬೆಳ್ಳಂದೂರು ಗ್ರಾಮದ ಸರ್ವೆ ನಂಬರ್ 46/1ರಲ್ಲಿ 1 ಎಕರೆ 17 ಗುಂಟೆ, ಸರ್ವೆ ನಂಬರ್ 18ರಲ್ಲಿ 1 ಎಕರೆ 10 ಗುಂಟೆ, ಸರ್ವೆ ನಂಬರ್ 10ರಲ್ಲಿ 33 ಗುಂಟೆ ಜಾಗವನ್ನು ಅಕ್ರಮವಾಗಿ ಡಿ–ನೋಟಿಫೈ ಮಾಡಲು 2006ರ ಜೂನ್ನಲ್ಲಿ (ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದ ವೇಳೆ) ಆದೇಶಿಸಲಾಗಿದೆ’ ಎಂದು ಆರೋಪಿಸಿ ವಾಸುದೇವ ರೆಡ್ಡಿ ಎಂಬವರು 2013ರ ಜುಲೈ 10ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು.
ವಿಚಾರಣೆ ನಡೆಸಿದ್ದ ಲೋಕಾಯುಕ್ತ ನ್ಯಾಯಾಲಯ, ಈ ಕುರಿತು ತನಿಖೆ ನಡೆಸುವಂತೆ ಆದೇಶಿಸಿತ್ತು. 2015ರ ಫೆ.21ರಂದು ಎಫ್ಐಆರ್ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು, ದೇಶಪಾಂಡೆ ಅವರನ್ನು ಮೊದಲ ಆರೋಪಿಯನ್ನಾಗಿಯೂ, ಯಡಿಯೂರಪ್ಪ ಅವರನ್ನು 2ನೇ ಆರೋಪಿಯನ್ನಾಗಿಯೂ ಮಾಡಿದ್ದರು.