ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಇವತ್ತು ರಾಜ್ಯ ಬಿಜೆಪಿಯ ಪದಾಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ರಾಜ್ಯ ಬಿಜೆಪಿಗೆ ಪದಾಧಿಕಾರಿಗಳ ನೇಮಕ ಮಾಡಲಾಗಿತ್ತು. ಹಾಗಾಗಿ ಇದು ಮೊದಲ ಪದಾಧಿಕಾರಿಗಳ ಸಭೆ. ಜೊತೆಗಿದು ಎಂದಿನಂತೆ ನಡೆಯುವ ಸಭೆ ಅಷ್ಟೇ. ಆದರೂ ಈ ಸಭೆಯನ್ನು ಸಂತೋಷ್ ಕರೆದಿರುವ ಕಾರಣಕ್ಕೆ ಕುತೂಹಲ ಮೂಡಿದೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದರೂ ಸಂತೋಷ್ ರಾಜ್ಯ ಘಟಕದ ವಿಷಯದಲ್ಲಿ ತೋರುತ್ತಿರುವ ಉತ್ಸಾಹ ಕುತೂಹಲವನ್ನು ಹೆಚ್ಚಿಸಿದೆ.
ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಜೊತೆಗೆ ಇದ್ದ ಭಿನ್ನಾಭಿಪ್ರಾಯಕ್ಕೆ ಮದ್ದು ಅರೆಯಲೆಂದೇ ಬಿ.ಎಲ್. ಸಂತೋಷ್ ಅವರನ್ನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸ್ಥಾನ ಕೊಡಲಾಗಿತ್ತು. ಆದರೆ ಸಂತೋಷ್ ಅವರಿಗೆ ರಾಷ್ಟೀಯ ರಾಜಕಾರಣಕ್ಕಿಂತ ರಾಜ್ಯದ ಬಗ್ಗೆ ಹೆಚ್ಚು ಒಲವು ಎಂಬುದು ಗೊತ್ತಿರುವ ಸಂಗತಿ. ಹಾಗಾಗಿಯೇ ಪ್ರತಿ ಬಾರಿ ಸಂತೋಷ್ ದೆಹಲಿಯಿಂದ ಬೆಂಗಳೂರಿಗೆ ಬಂದಾಗಲೂ ಅದು ದೊಡ್ಡ ಸುದ್ದಿಯಾಗುವಂತೆ ನೋಡಿಕೊಳ್ಳುತ್ತಾರೆ. ತಮ್ಮ ಪ್ರಭಾವ ಬೀರಲು ಪ್ರಯತ್ನಿಸುತ್ತಾರೆ. ಇದು ಅದರ ಮುಂದುವರಿದ ಭಾಗ ಎನ್ನಬಹುದು.
ದಿಲ್ಲಿಯಲ್ಲಿ ಕಡಗಣನೆಯಾದರೆ ಸಂತೋಷ್?
ರಾಷ್ಟೀಯ ಬಿಜೆಪಿಯಲ್ಲಿ ಸಂತೋಷ್ ಅವರನ್ನು ಕಡೆಗಣಸಿಲಾಗಿದೆಯಾ? ಆದುದರಿಂದಲೇ ಅವರು ರಾಜ್ಯ ಬಿಜೆಪಿಗೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದಾರಾ? ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇದಕ್ಕೆ ಪೂರಕವಾಗಿ ಸಂತೋಷ್ ಇದೇ ರೀತಿಯ ಪದಾಧಿಕಾರಿಗಳ ಸಭೆಯನ್ನು ಬೇರೆ ರಾಜ್ಯಗಳಲ್ಲಿ ಮಾಡಿದ ಉದಾಹರಣೆಗಳಿಲ್ಲ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಾಗಲಿ, ಅಥವಾ ಬಿಜೆಪಿಗೆ ನೆಲೆಯೇ ಇಲ್ಲದ ರಾಜ್ಯಗಳಲ್ಲಾಗಲಿ ಅವರು ಸಂಘಟನೆಯನ್ನು ಗಟ್ಟಿ ಮಾಡಬೇಕೆಂದು ಪಟ್ಟಾಗಿ ಕೂತು ಕೆಲಸ ಮಾಡಿದ ನಿದರ್ಶನಗಳಿಲ್ಲ. ಬೇರೆ ರಾಜ್ಯಗಳ ವಿಷಯದಲ್ಲಿ ಅವರದು ‘ಸಾಂಕೇತಿಕ ಪ್ರಯತ್ನ’ ಮಾತ್ರ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ವರ್ಷಾಂತ್ಯದಲ್ಲಿ ನಡೆಯುವ ಬಿಹಾರ ವಿಧಾನಸಭಾ ಚುನಾವಣೆ ಮತ್ತು ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಬಿಜೆಪಿ ಪಾಲಿಗೆ ಬಹಳ ಮಹತ್ವಪೂರ್ಣವಾದವು. ಬಿಹಾರದಲ್ಲಿ ಸ್ವಲ್ಪ ಯಾಮಾರಿದರೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೆ ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಮೈತ್ರಿಕೂಟದ ಕಡೆ ವಾಲುವ ಸಾಧ್ಯತೆಯಿದೆ. ಆಗ ಬಿಜೆಪಿ ಪುನಃ ಪ್ರತಿಪಕ್ಷಕ್ಕೆ ಸೀಮಿತವಾಗಬೇಕಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂಬುದು ಅಮಿತ್ ಶಾ ಕನಸು. ಅವರು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಿಂದಲೂ ಆ ಪ್ರಯತ್ನ ಮಾಡುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಅವರು ಕಳೆದ ಲೋಕಸಭಾ ಚುನಾವಣೆ ವೇಳೆ ಪಶ್ಚಿಮ ಬಂಗಾಳದಿಂದಲೇ ಸ್ಪರ್ಧೆ ಮಾಡುತ್ತಾರೆ ಎಂದು ಕೂಡ ಹೇಳಲಾಗುತ್ತಿತ್ತು. ಇಷ್ಟು ಮಹತ್ವದ ಚುನಾವಣೆಗಳ ಬಗ್ಗೆ ಸಂತೋಷ್ ತೋರುತ್ತಿರುವ ಕಾಳಜಿ ತೀರಾ ಕಡಿಮೆ. ಇದರಿಂದ ‘ದೆಹಲಿಯಲ್ಲಿ ಇವರನ್ನು ಪರಿಗಣಿಸುತ್ತಿಲ್ಲ. ಆ ಕಾರಣಕ್ಕೆ ಇವರು ಆಸಕ್ತಿ ತೋರುತಿಲ್ಲ’ ಅಥವಾ ‘ಇವರಿಗೆ ಆಸಕ್ತಿ ಇಲ್ಲ. ಅದೇ ಕಾರಣಕ್ಕೆ ಇವರನ್ನು ಪರಿಗಣಿಸಲಾಗುತ್ತಿಲ್ಲ’ ಎಂಬ ಅನುಮಾನಗಳು ಕೇಳಿಬರುತ್ತಿವೆ.
ರಾಜ್ಯದ ವಿಷಯಕ್ಕೆ ಬರುವುದಾದರೆ ಪ್ರತಿ ಬಾರಿ ಬೆಂಗಳೂರಿಗೆ ಬಂದಾಗಲೂ ಮಂತ್ರಿಗಳನ್ನು ಕರೆಸಿ ಮಾತನಾಡುತ್ತಾರೆ. ಕೆಲ ಶಾಸಕರನ್ನು ಭೇಟಿಯಾಗುತ್ತಾರೆ. ಕೆಲವು ಅಧಿಕಾರಿಗಳೊಂದಿಗೂ ಸಂಪರ್ಕ ಇಟ್ಟುಕೊಂಡಿದ್ದಾರೆ ಎನ್ನುವುದೂ ಉಂಟು. ಅಷ್ಟೇಯಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗಳಿಗೆ, ನಡೆಗಳಿಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡುತ್ತಾರೆ. ಒಟ್ಟಿನಲ್ಲಿ ಸದಾ ರಾಜ್ಯ ರಾಜಕಾರಣದಲ್ಲಿ ಚರ್ಚೆಯಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ. ಅವರ ಈ ‘ಸಕ್ರೀಯತೆಯೇ’ ಸಂಶಯಕ್ಕೆ ಆಸ್ಪದ ನೀಡಿರುವುದು.
ಈ ಬಾರಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಜೊತೆ ಚರ್ಚೆ ನಡೆಸಿದ್ದಾರೆ. ಇದಕ್ಕೂ ಮೊದಲು ದೆಹಲಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಿಕಿಹೊಳಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು. ಯಡಿಯೂರಪ್ಪ ವಿರೋಧಿ ಬಣ ಎಂದು ಗುರುತಿಸಿಕೊಂಡಿರುವ ಎಲ್ಲರ ಜೊತೆ ಸಂತೋಷ್ ಹೆಚ್ಚು ಆತ್ಮೀಯರಾಗಿದ್ದಾರೆ. ‘ಯಡಿಯೂರಪ್ಪ ಅವರ ಟೈಮ್ ಮುಗಿಯಿತು’ ಎಂಬ ಸಂದೇಶವನ್ನು ಹರಿಯಬಿಡಲಾಗಿದೆ. ಸಂತೋಷ್ ಶಿಷ್ಯರು ‘ಯಡಿಯೂರಪ್ಪ ಅವರನ್ನು ಬಿಟ್ಟಾಕಿ, ಸಂತೋಷ್ ಜೊತೆ ಚೆನ್ನಾಗಿರಿ’ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಮುಖ್ಯವಾಗಿ ಈ ಸಂದೇಶವನ್ನು ಸಚಿವರು ಮತ್ತು ಶಾಸಕರಿಗೆ ರವಾನಿಸಲಾಗುತ್ತಿದೆ. ಇದನ್ನು ‘ಹೆಚ್ಚೆಚ್ಚು ಸಚಿವರು ಮತ್ತು ಶಾಸಕರನ್ನು ತಮ್ಮ ಪಾಳೆಯಕ್ಕೆ ಸೆಳೆಯುವ ತಂತ್ರಗಾರಿಕೆ’ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸಂತೋಷ್ ‘ಏನೋ ಮಾಡಲು’ ಹೊರಟಂತಿದೆ. ಅದು ಏನು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಕಟೀಲ್ಗೆ ಕಿಮ್ಮತ್ತೇ ಇಲ್ಲ
ಸಂತೋಷ್ ಅವರಿಗೆ ತವರು ರಾಜ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ಇದೆ ಎಂದು ಇಟ್ಟುಕೊಂಡರೂ ಪದಾಧಿಕಾರಿಗಳ ಸಭೆ ನಡೆಸಲು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ಗೆ ಸೂಚಿಸಬಹುದಿತ್ತು. ನಿರ್ದಿಷ್ಟವಾದ ಮಾಹಿತಿಗಳನ್ನು ಕೇಳಬಹುದಿತ್ತು. ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೇಶನ ನೀಡಬಹುದಿತ್ತು. ಅದು ಬಿಟ್ಟು ಸ್ವತಃ ಸಂತೋಷ್ ಅವರೇ ಅಖಾಡಕ್ಕೆ ಇಳಿದಿದ್ದಾರೆ. ಇದರಿಂದ ನಳೀನ್ ಕುಮಾರ್ ಕಟೀಲ್ಗೆ ಪಕ್ಷದಲ್ಲಿ ಕಿಮ್ಮತ್ತಿಲ್ಲವೇ? ಕಟೀಲ್ ಸಭೆ ನಡೆಸಿದ್ದರೆ ಪದಾಧಿಕಾರಿಗಳು ಸ್ಪಂದಿಸುತ್ತಿರಲಿಲ್ಲವೇ? ನಳೀನ್ ಕುಮಾರ್ ಕಟೀಲ್ ಮಾತನ್ನು ಮಂತ್ರಿಗಳು ಕೇರು ಮಾಡುವುದಿಲ್ಲವೇ ಎಂಬ ಗುಮಾನಿಗಳು ಕೂಡ ಇವೆ.