ಮುಂದಿನ ತಿಂಗಳೂ ಚುನಾವಣೆ ಎದುರಿಸಲಿರುವ ಪಂಚರಾಜ್ಯಗಳಲ್ಲಿ ಗೋವಾ ಕೂಡ ಒಂದು. ಗೋವಾ ರಾಜ್ಯ ರಾಜಕೀಯಲ್ಲಿ ವಿವಿಧ ಚಟುವಟಿಕೆಗಳು ಗರಿಗೆದರಿದ್ದು ಬಿಜೆಪಿ, ಎಎಪಿ, ಕಾಂಗ್ರೆಸ್, ಟಿಎಂಸಿ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮದೇ ಆದ ಲೆಕ್ಕಾಚಾರ ಮತ್ತು ತಂತ್ರಗಾರಿಕೆಯನ್ನು ಹೆಣೆಯುವುದರಲ್ಲಿ ನಿರತವಾಗಿವೆ.
ಈ ಮಧ್ಯೆ ಆಡಳಿತರೂಢ ಪಕ್ಷ ಬಿಜೆಪಿ ತಾನು 40 ರಲ್ಲಿ 38 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಬೆನೌಲಿಮ್ ಹಾಗೂ ನುವೆಮ್ ಕ್ಷೇತ್ರಗಳಿಗೆ ಪಕ್ಷ ಅಭ್ಯರ್ಥಿಗಳನ್ನ ಹಾಕುವುದಿಲ್ಲ ಎಂದು ಕಾರ್ಯಕಾರಿಣಿ ಸದಸ್ಯರೊಬ್ಬರು ತಿಳಿಸಿದ್ದಾರೆ.
ಈ ಎರಡು ಕ್ಷೇತ್ರಗಳಲ್ಲಿ ಜನರು ಸಾಂಪ್ರದಾಯಿಕವಾಗಿ ಬಿಜೆಪಿಗೆ ಮತವನ್ನ ಹಾಕಿಲ್ಲ. ಈ ಕ್ಷೇತ್ರಗಳಲ್ಲಿ ಕ್ರೈಸ್ತರ ಪ್ರಾಬಲ್ಲ ಹೆಚ್ಚಿದ್ದು ಬಿಜೆಪಿಗೆ ಈ ಎರಡು ಪ್ರದೇಶಗಳಲ್ಲಿ ಮತ ಹಾಕುವುದಿಲ್ಲ ಎಂದು ಬಿಜೆಪಿ ಮುಖಂಡ ಹೇಳಿದ್ದಾರೆ. ಆದರೆ, ನುವೆಮ್ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದು ಅವರು ಸಹ ಪ್ರಬಲ ವಿರೋಧಿ ಅಲೆ ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಗೋವಾ ಚುನಾವಣಾ ಉಸ್ತುವಾರಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅಧ್ಯಕ್ಷತೆಯಲ್ಲಿ ಸರಣಿ ಸಭೆಗಳನ್ನು ನಡೆಸಲಾಗುತ್ತಿದ್ದು ಜನವರಿ 16ರಂದು ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಹಾಲಿ ವಿಧಾನಸಭೆಯಲ್ಲಿ 27 ಶಾಸಕರ ಬಲವನ್ನ ಹೊಂದಿದ ಬಿಜೆಪಿ ನಾಲ್ವರು ಶಾಸಕರಾದ ಮೈಕೆಲ್ ಲೋಬೋ, ಅಲೀನಾ ಸಲ್ಡಾನಾ, ಕಾರ್ಲೋಸ್ ಅಲ್ಮೇಡಾ ಹಾಗೂ ಪ್ರವೀಣ್ ಝಾಂಟ್ಯೆ ಅವರುಗಳು ಬಿಜೆಪಿ ತೊರೆದಿರುವ ಕಾರಣ ಬಿಜೆಪಿಯ ಸಂಖ್ಯಾ ಬಲ 23ಕ್ಕೆ ಕುಸಿದಿದೆ.
ಈ ಭಾರೀ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕೇಜ್ರಿವಾಲ್ ನೇತೃತ್ವದ ಎಎಪಿ ಹಾಗೂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕಣಕ್ಕಿಳಿಯುತ್ತಿರುವುದು ಚುನಾವಣ ಕದನವನ್ನ ಮತ್ತಷ್ಟು ರೋಚಕವಾಗಿಸಿದೆ. ಮತದಾರ ಯಾರ ಕಡೆ ಹೆಚ್ಚು ಒಲವು ತೋರುತ್ತಾನೆ ಎಂಬ ಸ್ಪಷ್ಟ ಚಿತ್ರಣ ಮಾರ್ಚ್ 10ರಂದು ಹೊರಬೀಳುತ್ತದೆ.