ಬೆಳಗಾವಿ : ಯಡಿಯೂರಪ್ಪ ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನು ಬಿಜೆಪಿ ಎಂದಿಗೂ ಮರೆಯೋದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಬೆಳಗಾವಿಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಯಡಿಯೂರಪ್ಪ ತಮ್ಮ ಆರೋಗ್ಯದ ಕಾರಣಗಳಿಂದಾಗಿ ಅಧಿಕಾರ ತ್ಯಾಗ ಮಾಡಿದರು. ಬಳಿಕ ಅವರ ಇಚ್ಛೆಯಂತೆಯೇ ಬೊಮ್ಮಾಯಿಯನ್ನು ರಾಜ್ಯದ ಸಿಎಂರನ್ನಾಗಿ ಮಾಡಲಾಯ್ತು. ಬೊಮ್ಮಾಯಿ ಕೂಡ ಅತ್ಯಂತ ಸರಳ , ಸಜ್ಜನಿಕೆಯ ವ್ಯಕ್ತಿ. ಇಡೀ ಕರ್ನಾಟಕ ಯಡಿಯೂರಪ್ಪರಿಗೆ ಸನ್ಮಾನವನ್ನು ಮಾಡಬೇಕು. ಯಡಿಯೂರಪ್ಪರಿಗೆ ಪೂರ್ಣ ಪ್ರಮಾಣದ ಸರ್ಕಾರ ರಚನೆ ಮಾಡಬೇಕೆಂಬ ಆಸೆಯಿದೆ ಎಂದು ಹೇಳಿದ್ದಾರೆ .
ಇಂದು ಬಿಜೆಪಿ ಪಾಲಿಗೆ ಶುಭ ದಿನವಾಗಿದೆ. ತ್ರಿಪುರ, ನಾಗಾಲ್ಯಾಂಡ್ನಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಮೇಘಾಲಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ . ಕರ್ನಾಟಕದಲ್ಲಿಯೂ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ನೀವೆಲ್ಲ ಶಪಥ ಮಾಡಿ. ಬೆಳಗಾವಿ ಕರ್ನಾಟಕದ ಶಿರವಿದ್ದಂತೆ. ಇದೇ ಕಾರಣಕ್ಕೆ ನಾವು ಯೋಚನೆ ಮಾಡಿ ಬೆಳಗಾವಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಸಲು ತೀರ್ಮಾನಿಸಿದೆವು. ಕರ್ನಾಟಕವನ್ನು ದಕ್ಷಿಣ ಭಾರತದ ನಂಬರ್ ರಾಜ್ಯವನ್ನಾಗಿ ಮಾಡ್ತೇವೆ ಎಂದು ಆಶ್ವಾಸನೆ ನೀಡಿದರು.
ಕಳೆದ 50 ವರ್ಷಗಳಲ್ಲಿ ಕಾಂಗ್ರೆಸ್ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಮಾಡಿ ತೋರಿಸಿದೆ. ಶಿವಮೊಗ್ಗದಲ್ಲಿ ಏರ್ಪೋರ್ಟ್ ನಿರ್ಮಾಣವಾಗಿದೆ. ಕರ್ನಾಟಕದಲ್ಲಿ ಹೆಲಿಕಾಪ್ಟರ್ ಸಿದ್ಧಪಡಿಸುವ ಕಾರ್ಖಾನೆ ಆರಂಭಗೊಂಡಿದೆ. ಇಂಡಸ್ಟ್ರೀಸ್ ಕಾರಿಡಾರ್ ಮೂಲಕ ರಾಜ್ಯದ ಯುವಕರಿಗೆ ಉದ್ಯೋಗಾವಕಾಶ ಲಭಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಜನಾಥ ಸಿಂಗ್, ಕಾಂಗ್ರೆಸ್ ಹೇಳೋದೊಂದು ಮಾಡೋದೊಂದು. ಆದರೆ ಬಿಜೆಪಿ ನುಡಿದಂತೆ ನಡೆಯುತ್ತಿದೆ. ಪ್ರಾಣ ಬಿಟ್ಟೆವು ಆದರೆ ವಚನ ಬಿಡಲ್ಲ ಎನ್ನುವುದೇ ನಮ್ಮ ಧ್ಯೇಯ ವಾಕ್ಯವಾಗಿದೆ. ಕಾಶ್ಮೀರದಲ್ಲಿ ವಿಶೇಷ ಮೀಸಲಾತಿ ರದ್ದು, ತ್ರಿವಳಿ ತಲಾಖ್ ನಿಷೇಧ, ಭದ್ರಾ ಯೋಜನೆಗೆ ಅನುಮೋದನೆ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡಿದ್ದೇವೆ ಎಂದು ಹೇಳಿದ್ದಾರೆ.