ಬೀದರ್: ಜಿಲ್ಲೆಯಲ್ಲಿ ಡೆಂಗಿ, ಚಿಕುನ್ಗುನ್ಯಾ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಅವರು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಗೆ ಭೇಟಿ ಕೊಟ್ಟು ಮಾಹಿತಿ ಪಡೆದರು.
ಡೆಂಗಿ, ಚಿಕುನ್ಗುನ್ಯಾ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಅದರ ಕುರಿತು ಜಾಗೃತಿ ಮೂಡಿಸಲು ಏನೇನು ಮಾಡಲಾಗುತ್ತಿದೆ ಎಂಬುದರ ಬಗ್ಗೆ ಡಿಎಚ್ಒ ಡಾ. ಧ್ಯಾನೇಶ್ವರ ನೀರಗುಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕರೆಪ್ಪ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಾಜಶೇಖರ ಪಾಟೀಲ ಅವರಿಂದ ಮಾಹಿತಿ ಪಡೆದರು. ‘ಆರೋಗ್ಯ ಇಲಾಖೆಯ ಸಲಹೆಗಳನ್ನು ಪಾಲಿಸಿ, ಜನ ರೋಗ ಬರದಂತೆ ನೋಡಿಕೊಳ್ಳಬೇಕು. ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ರಕ್ತ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು. ಡಾ. ಶಂಕರೆಪ್ಪ, ಡಾ. ರಾಜಶೇಖರ ಪಾಟೀಲ ಅವರು ಜಿಲ್ಲೆಯಲ್ಲಿ ಜನವರಿಯಿಂದ ಇದುವರೆಗೆ 59 ಡೆಂಗಿ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಇಬ್ಬರು ತೆಲಂಗಾಣಕ್ಕೆ ಸೇರಿದವರಿದ್ದಾರೆ. ಡೆಂಗಿಯಿಂದ ಇದುವರೆಗೆ ಯಾರೂ ಸಾವನ್ನಪ್ಪಿಲ್ಲ ಎಂದು ಮಾಹಿತಿ ನೀಡಿದರು. ಡಿಎಚ್ಒ ಡಾ. ಧ್ಯಾನೇಶ್ವರ ನೀರಗುಡಿ, ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಜ್ವರ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವೈದ್ಯರ ಉಪಸ್ಥಿತಿಯಲ್ಲಿ ಶಂಕಿತ ಪ್ರಕರಣಗಳ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಶಂಕಿತ ಪ್ರಕರಣಗಳ ರಕ್ತದ ಮಾದರಿಯನ್ನು ಪಡೆದು ಜಿಲ್ಲಾ ಪ್ರಯೋಗಾಲಯಕ್ಕೆ ಡೆಂಗಿ ಪರೀಕ್ಷೆಗೆ ಕಳುಹಿಸುವಂತೆ ಸೂಚಿಸಲಾಗಿದೆ. ಎಲ್ಲ ತಾಲ್ಲೂಕು ಆರೋಗ್ಯಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ನಗರ ಪ್ರದೇಶಗಳಲ್ಲಿ ಡೆಂಗಿ ಪ್ರಕರಣಗಳ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ನಗರ ಪ್ರದೇಶಗಳಲ್ಲಿ ಸೊಳ್ಳೆಗಳ ಲಾರ್ವಾ ಸಮೀಕ್ಷೆ ಹಾಗೂ ನಿರ್ಮೂಲನೆ ಕಾರ್ಯ ಚಟುವಟಿಕೆಗಳನ್ನು ಹಮ್ಮಕೊಳ್ಳಲಾಗುತ್ತಿದೆ. ಎಲ್ಲ ತಾಲ್ಲೂಕುಗಳಿಗೆ ಜಿಲ್ಲಾಮಟ್ಟದಿಂದ ಮೇಲ್ವಿಚಾರಣಾಧಿಕಾರಿಗಳು ಹಾಗೂ ತಾಲ್ಲೂಕು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಶಂಕಿತ ಡೆಂಗಿ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣವೇ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

