ಶಿವಮೊಗ್ಗ: ಶಿವಮೊಗ್ಗ ನಗರದ ಸವಳಂಗ ರಸ್ತೆಯ ಚನ್ನಮುಂಭಾಪುರದಲ್ಲಿರುವ ಅಕ್ಷರ ಶಾಲೆ ಭೂತಪ್ಪನ ಕಟ್ಟೆ ತೆರವು ಮಾಡಿರುವ ಆರೋಪ ಎದುರಿಸುತ್ತಿದೆ. ಶಾಲೆಯು ಶಿವಮೊಗ್ಗ ಗ್ರಾಮಾಂತರ ಶಾಸಕ ಕೆಬಿ ಅಶೋಕ್ ನಾಯ್ಕ್ ಒಡೆತನದಲ್ಲಿದೆ. ಹಾಗಾಗಿ ಬಿಜೆಪಿ ಶಾಸಕರೇ ಹಿಂದೂ ದೇವರ ವಿಗ್ರಹ ಧ್ವಂಸ ಮಾಡಿದ್ದಾರೆಂದು ಕೆಲ ದಿನಗಳಿಂದ ಊರ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈಗಾಗಲೇ ಭೂತಪ್ಪನ ಕಲ್ಲನ್ನ ಸ್ಥಳಾಂತರಮಾಡಲಾಗಿದೆ. ಈ ವಿಡಿಯೋಗಳು, ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಈ ಕುರಿತು
ಕಾಲೇಜು ಪ್ರಾಂಶುಪಾಲ ಗಿರೀಶ್ ಮಾತನಾಡಿದ್ದಾರೆ.
ಈ ಅಕ್ಷರ ಸಂಸ್ಥೆ ಸವಳಂಗ ರಸ್ತೆಯಲ್ಲಿದೆ. ಹತ್ತು ವರ್ಷಗಳ ಹಿಂದೆ ಸಣ್ಣದಾಗಿ ಚೌಡೇಶ್ವರಿ ದೇವಸ್ಥಾನ ಇರೋದು ನನ್ನ ಗಮನಕ್ಕೆ ಬಂದಿತ್ತು. ಅಂದಿನಿಂದ ದೇವಸ್ಥಾನದ ಪೂಜಾಕಾರ್ಯಗಳು ನಡೆಯುತ್ತಾ ಬಂದಿವೆ. ನಾವೂ ಕೂಡ ಹೂವು ಹಣ್ಣುಗಳನ್ನ ನೀಡುತ್ತಾ ಬಂದಿದ್ದೇವೆ. ಚೌಡೇಶ್ವರಿ ತಾಯಿಗೆ ಶಕ್ತಿ ಕೂಡ ಇದೆ. ಆದರೆ ಶಿವರಾತ್ರಿ ದಿನ ಶನಿವಾರ ಹಾಗೂ ಭಾನುವಾರ ಶಾಲೆಗೆ ರಜೆ ನೀಡಲಾಗಿತ್ತು. ಅಂದು ಕಾಲೇಜಿನ ಬೇಲಿ ತೆರವುಗೊಳಿಸಿದ ಗ್ರಾಮಸ್ಥರು ಭೂತಪ್ಪನ ವಿಗ್ರಹ ಇರಿಸಿದ್ದಾರೆ. ಈ ಬಗ್ಗೆ ಕೆಲ ಗ್ರಾಮಸ್ಥರ ಗಮನಕ್ಕೆ ತಂದಾಗ ಇದನ್ನ ತೆರವುಗೊಳಿಸೋದಾಗಿಯೂ ಕೂಡ ಒಪ್ಪಿಕೊಂಡಿದ್ದರು ಎಂದು ಹೇಳಿದರು.

ಎರಡು ದಿನಗಳಲ್ಲಿ ನೋಡು ನೋಡುತ್ತಿದ್ದಂತೆ ಆ ಜಾಗದಲ್ಲಿ ಕೆಂಪು ಬಟ್ಟೆ ಕಟ್ಟಿ, ಕುಂಕುಮ ಚೆಲ್ಲಿ ಭೂತಪ್ಪ ಎಂದು ಬಿಂಬಿಸಿ ಭಯ ಮೂಡಿಸಿದ್ದರು. ಮಕ್ಕಳೂ ಕೂಡ ಬೆದರತೊಡಗಿದರು. ಇದು ತಾರಕಕ್ಕೆ ಹೋಗುತ್ತಿದ್ದಂತೆ ನಾವು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದೆವು. ಎರಡು ಮೂರು ದಿನಗಳ ನಂತರ ಪೊಲೀಸರು ಸ್ಥಳಕ್ಕೆ ಬಂದು ವಿಗ್ರಹ ತೆರವುಗೊಳಿಸಿದರು. ನಂತರ ಪಟ್ಟು ಬಿಡದೇ ರಚ್ಚೆ ಹಿಡಿದ ಕೆಲವರು ಪ್ರತಿಭಟನೆ ಮಾಡುತ್ತಿರುವುದಲ್ಲದೇ ರಸ್ತೆ ತಡೆಯನ್ನೂ ಮಾಡಿದ್ದಾರೆ. ಮಕ್ಕಳು ಓದುವ ಸ್ಥಳದಲ್ಲಿ ಪರಂಪರೆ, ಹಿನ್ನೆಲೆ ಇಲ್ಲದ ಅನಧಿಕೃತ ಭೂತಪ್ಪ ಬೇಡ. ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದೇವೆ. ಅವರ ಜಾಗದಲ್ಲಿ ಬೇಕಾದರೆ ಮಾಡಿಕೊಳ್ಳಲಿ ಶಾಲಾ ಆವರಣದಲ್ಲಿ ಬೇಡ ಎಂದು ಗಿರೀಶ್ ಹೇಳಿದರು.
ಕಾಲೇಜು ಕನ್ನಡ ಉಪನ್ಯಾಸಕ ಸುರೇಶ್ ಮಾತನಾಡಿ, ಶಾಲೆಯಲ್ಲಿ ಐನೂರು ಮಕ್ಕಳು ಹಾಗೂ ಕಾಲೇಜಿನಲ್ಲಿ ಆರುನೂರು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಊರಿನ ಜನ ಶಾಲಾ ಆವರಣದಲದಲ್ಲಿ ಭಯಾನಕ ವಾತಾವರಣ ನಿರ್ಮಾಣ ಮಾಡಿದ್ದರು. ಕೋಳಿ ಕೊಯ್ದು, ರುಂಡ ಮುಂಡ ಬಿಟ್ಟು ಹೋಗಿದ್ದರು. ಪೋಷಕರ ಗಮನಕ್ಕೂ ಇದು ಬಂದಿತ್ತು.ಪೋಷಕರೂ ಸಹ ನಮಗೆ ಮನವಿ ಮಾಡುತ್ತಿದ್ದರು. ಹೊಸದಾಗಿ ಭಯ ಸೃಷ್ಟಿಸಿದ ಸ್ಥಳದಲ್ಲಿ ಮಕ್ಕಳ ಭೋಜನಾಶಾಲೆ ಕೂಡ ಇದೆ ಎಂದರು.