ಅರ್ಧ ಹೆಲ್ಮೆಟ್ ಧರಿಸಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಬೆಂಗಳೂರಿನ ಆರ್ಟಿ ನಗರದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ದಂಡ ವಿಧಿಸಿದ್ದಾರೆ. ಅರ್ಧ ಹೆಲ್ಮೆಟ್ ಅನ್ನು ನಿಷೇಧಿಸಲಾಗಿದ್ದರೂ, ಕೆಲವು ಪೊಲೀಸರು, ಇಲಾಖೆ ನೀಡಿದ ಅರ್ಧ ಹೆಲ್ಮೆಟನ್ನೇ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದರು. ಹಲವಾರು ಬಾರಿ ಸಾರ್ವಜನಿಕರೇ ಪೊಲೀಸರು ಧರಿಸುವ ಅರ್ಧ ಹೆಲ್ಮೆಟಿನ ಬಗ್ಗೆ ಆಕ್ಷೇಪ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಮತ್ತೋರ್ವ ಸಿಬ್ಬಂದಿ ದಂಡ ವಿಧಿಸಿದ್ದು ಸಾಕಷ್ಟು ಗಮನ ಸೆಳೆದಿದೆ.
ಗೇರ್ಲೆಸ್ ಸ್ಕೂಟರ್ ಚಾಲನೆ ಮಾಡುವಾಗ ತಪ್ಪಾದ ಹೆಲ್ಮೆಟ್ ಧರಿಸಿದ್ದಕ್ಕಾಗಿ ಇನ್ನೊಬ್ಬ ಪೊಲೀಸ್ ಅಧಿಕಾರಿಗೆ ದಂಡ ವಿಧಿಸುವ ಚಿತ್ರವನ್ನು ಆರ್ಟಿ ನಗರ ಟ್ರಾಫಿಕ್ ಠಾಣೆ ಟ್ವೀಟ್ ಮೂಲಕ ಹಂಚಿಕೊಂಡಿದೆ.
“ಶುಭ ಸಂಜೆ. ಪೊಲೀಸರ ವಿರುದ್ಧ ಹೆಲ್ಮೆಟ್ ಕೇಸ್ ದಾಖಲಿಸಲಾಗಿದೆ” ಎಂದು ಪೊಲೀಸರು ಟ್ವಿಟರ್ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.
ಆರ್ಟಿ ನಗರ ಪೊಲೀಸರು ಸೋಮವಾರ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಯಾರನ್ನೂ ಬಿಡುವುದಿಲ್ಲ ಎಂದು ಕೆಲವು ಇಂಟರ್ನೆಟ್ ಬಳಕೆದಾರರು ಪೊಲೀಸರನ್ನು ಶ್ಲಾಘಿಸಿದರೆ, ಇತರರು ಇದು ಕೇವಲ ಶೋಆಫ್ ಎಂದು ಕಾಲೆಳೆದಿದ್ದಾರೆ.
ಆನ್ಲೈನ್ ಮೂಲಕ ಕೆಲವರು ಪೊಲೀಸ್ ಕೂತಿರುವ ವಾಹನದ ಸಂಖ್ಯೆ ನೋಡಿ, ಸ್ಕೂಟರ್ ಮೇಲೆ ಏಳು ಪ್ರಕರಣಗಳಿವೆ ಎಂದು ಬಹಿರಂಗಪಡಿಸಿದ್ದಾರೆ. ಇನ್ಸುರೆನ್ಸ್, ಎಮಿಷನ್ ಕೂಡಾ ಇಲ್ಲ, ಕೇವಲ ಹೆಲ್ಮೆಟ್ಗೆ ಮಾತ್ರ ಹೇಗೆ ದಂಡ ವಿಧಿಸಿ ಕಳಿಸಿದ್ದೀರ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
“ ಮತ್ತೆ ಅವರ ವಾಹನದ ಮೇಲೆ ೭ ಕೇಸುಗಳಿವೆ ಹೇಗೆ ಬಿಟ್ಟು ಕಳುಹಿಸಿದ್ದೀರಾ ಸರ್ ? ಸಾಮಾನ್ಯ ಜನರಿಗೆ ಒಂದು ನ್ಯಾಯ ಸರ್ಕಾರಿ ಹುದ್ದೆಯಲ್ಲಿರುವವರಿಗೆ ಒಂದು ನ್ಯಾಯನಾ!?”ಎಂದು ಪ್ರಭು ಎಂಬವರು ಪ್ರಶ್ನಿಸಿದ್ದಾರೆ.