ಬೆಂಗಳೂರು: ತಂದೆ ತಾಯಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಮಾತೊಂದಿದೆ. ಆದರೆ ತಂದೆ ತಾಯಿ ಜಗಳದಲ್ಲಿ ಮಗುವಿನ ಪ್ರಾಣವೇ ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 11 ತಿಂಗಳ ಮಗುವನ್ನು ಕೊ** ಮಾಡಿ, ಅದರ ಸಾವನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಮಗುವಿನ ತಂದೆ-ತಾಯಿಯನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆಯಲ್ಲಿ ಹೊಸ ಸಾಕ್ಷ್ಯಗಳು ಬೆಳಕಿಗೆ ಬಂದ ಬಳಿಕ ಪೊಲೀಸರು ಕೊ** ಪ್ರಕರಣ ದಾಖಲಿಸಿದ್ದಾರೆ. ಶೇಕಪ್ಪ ಹಾಗೂ ವಿಜಯಲಕ್ಷ್ಮಿ ಬಂಧಿತ ಆರೋಪಿಗಳು.

ಮೊದಲು ಮಗುವಿನ ತಂದೆ ಶೇಕಪ್ಪ, ತಾಯಿ ವಿಜಯಲಕ್ಷ್ಮಿ ಮಗುವಿಗೆ ಹಾಲುಣಿಸುವಾಗ ನಿದ್ದೆಗೆ ಜಾರಿದ್ದು, ಮಗು ಹಾಸಿಗೆಯಿಂದ ಕೆಳಗೆ ಬಿದ್ದು ಮೃತಪಟ್ಟಿದೆ ಎಂದು ಪೊಲೀಸರಿಗೆ ತಿಳಿಸಿದ್ದರು. ಈ ಮಾಹಿತಿ ಆಧರಿಸಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ತನಿಖೆಯಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳು ಪೋಷಕರು ನೀಡಿದ ಹೇಳಿಕೆಗೆ ಹೊಂದಿಕೆಯಾಗಲಿಲ್ಲ. ಮಗುವಿನ ಸಾವಿನ ಹಿಂದೆ ಅನುಮಾನಾಸ್ಪದ ಅಂಶಗಳಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಮರುಪರಿಶೀಲಿಸಿ ಕೊಲೆ ಪ್ರಕರಣವಾಗಿ ದಾಖಲಿಸಿದರು.

ತನಿಖೆಯ ವೇಳೆ ಪೋಷಕರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಹಲವು ಮಾಹಿತಿಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ದಂಪತಿ ಜಗಳದಲ್ಲಿ ಮಗು ಸಾವನ್ನಪ್ಪಿದ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.




