ಅದು ನಿಜಕ್ಕೂ ಸಾಕಷ್ಟು ಸಮಸ್ಯೆಗಳನ್ನು ಹೊತ್ತು ಕುಂಟುತ್ತಾ ಸಾಗುತ್ತಿರುವ ಗ್ರಾಮ. ಈ ಗ್ರಾಮದ ಜನರ ಸಮಸ್ಯೆ ನೋಡಿದರೇ ಎಂತವರಿಗೂ ಅಯ್ಯೋ ಪಾಪ ಅನಿಸುವುದು ಖಂಡಿತ. ಹಾಗಿದ್ದರೇ ಈ ಗ್ರಾಮದ ಸಮಸ್ಯೆ ಹಾಗೂ ಇಲ್ಲಿನ ಜನರ ಕಣ್ಣೀರಿನ ಕಥೆಯನ್ನು ನಾವು ಎಳೆ ಎಳೆಯಾಗಿ ಬಿಚ್ಚಿಡುತ್ತಿದೆ ನೋಡಿ.
ಹೀಗೆ ಎಲ್ಲೆಂದರಲ್ಲಿ ಕೆಸರು ಗದ್ದೆಯಾಗಿರುವ ರಸ್ತೆಗಳು. ನಡೆದಾಡಲು ಹರಸಾಹಸ ಮಾಡುತ್ತಿರುವ ಗ್ರಾಮಸ್ಥರು. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮ. ಈ ಗ್ರಾಮದ ಜನರು ಗಾಡಿಯಲ್ಲಿ ಓಡಾಡುವುದಲ್ಲಿ ಇರಲಿ ನಡೆದಾಡಲು ಕಷ್ಟ ಪಡುತ್ತಿದ್ದಾರೆ.
ಜವಾಬ್ದಾರಿ ವಹಿಸಬೇಕಿದ್ದ ಜನಪ್ರತಿನಿಧಿಗಳು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಕೆಸರು ಗದ್ದೆಯಂತಾದ ಗ್ರಾಮದ ರಸ್ತೆಗಳಿಂದ ಜನರು ದಿನವೂ ಪರದಾಡುವಂತಾಗಿದೆ. ಜಿಟಿ ಜಿಟಿ ಮಳೆಗೆ ಕಂಗೆಟ್ಟ ಗ್ರಾಮದ ಜನರು ಅಧಿಕಾರಿಗಳು ಹಾಗೂ ಸಚಿವರಗೆ ಹಿಡಿಶಾಪ ಹಾಕುತ್ತಿದ್ದಾರೆ.
ಒಂದು ಕಡೆ ಗ್ರಾಮದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಕುಡಿಯಲು ಕೆರೆಯ ನೀರನ್ನೆ ಅವಲಂಬಿತರಾದ ಜನತೆ. ಇದೇ ನೀರನ್ನ ತರಬೇಕಾದ್ರೆ ಹರಸಾಹಸ ಪಡುವ ಜನರು. ಗ್ರಾಮದ ಒಂದೇ ಒಂದು ರಸ್ತೆ ಸರಿಯಿಲ್ಲ. ಈ ರಸ್ತೆಗಳಲ್ಲಿ ಕಾಲಿಟ್ಟರೆ ಬೀಳುವುದು ಗ್ಯಾರಂಟಿ. ವಯೋವೃದ್ಧರು ಮನೆಯಿಂದ ಹೊರಗೆ ಬರುತ್ತಿಲ್ಲ. ಸಾಯುವ ಮುಂಚೆ ಈ ರಸ್ತೆ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಅಂಗಲಾಚುತ್ತಿದ್ದಾರೆ.

ರಸ್ತೆಗಾಗಿ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಇಲ್ಲಿಯವರೆಗೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.
ಗ್ರಾಮೀಣಾಭಿವೃದ್ಧಿಗೆ ಕೋಟಿ ಕೋಟಿ ಖರ್ಚು ಮಾಡುವ ಸರ್ಕಾರ. ಕೋಟಿ ಕೋಟಿ ಖರ್ಚಾದ್ರೂ ಈ ಗ್ರಾಮದ ರಸ್ತೆಗಳು ಅಭಿವೃದ್ಧಿ ಆಗಿಲ್ಲ ಏಕೆ..? ಇದೇನಾ ನಿಮ್ಮ ಗ್ರಾಮಗಳ ಅಭಿವೃದ್ಧಿ ಎಂದು ಸರ್ಕಾರದ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.