ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಧಾನಗತಿಯಲ್ಲಿ ಏರಿಕೆ ಆಗ್ತಿದೆ. ಕೋವಿಡ್ ರೂಪಾಂತರಿ ನಾಲ್ಕನೇ ಅಲೆಗೆ ಬಲೆ ಬೀಸಲು ಹೊಸ ಅಸ್ತ್ರ ಬಳಕೆಗೆ ಮುಂದಾಗಿದೆ ಬಿಬಿಎಂಪಿ. ದಕ್ಷಿಣ ಆಫ್ರಿಕಾ ಮಾದರಿಯಲ್ಲಿ ಹೊಸ ತಳಿ ಪತ್ತೆಗೆ ಬಿಬಿಎಂಪಿ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಏನಿದು STP ನೀರಿನಿಂದ ಕೊರೋನಾ ತಳಿ ಪತ್ತೆ ವಿಧಾನ ?
ಮೂರನೇ ಅಲೆ ಮಾಯವಾಯ್ತು ಅನ್ನೋ ಅಷ್ಟೊತ್ತಿಗೆ ನಾಲ್ಕನೇ ಅಲೆ ದಿಗಿಲು ಹುಟ್ಟಿಸಿದೆ. ಯಾವ ಮೂಲಕ ಹರಡುತ್ತೆ ಎಂಬ ಮಾಹಿತಿ ಯಾರಿಗೂ ಇಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ಮಾದರಿಯಲ್ಲಿ ಹೊಸ ತಳಿ ಪತ್ತೆಗೆ ಬಿಬಿಎಂಪಿ, BWSSB ಜಂಟಿಯಾಗಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. 2ನೇ ಕೋವಿಡ್ ಅಲೆ ವೇಳೆ ಈ ಪ್ರಯತ್ನ ಮಾಡುವ ಚಿಂತನೆ ಇತ್ತಾದರೂ, ಪಾಲಿಕೆ ಇದಕ್ಕೆ ಮುಂದಾಗಿರಲಿಲ್ಲ.
ಕೊಳಚೆ ನೀರು ಪರೀಕ್ಷೆ ಮೂಲಕ ರೂಪಾಂತರಿ ವೈರಸ್ ಪತ್ತೆಗೆ ಯತ್ನ !
ಕೊಳಚೆ ನೀರು ಪರೀಕ್ಷೆ ಮೂಲಕ ರೂಪಾಂತರಿ ವೈರಸ್ ಪತ್ತೆ ಹಚ್ಚಲು BBMP ಮುಂದಾಗಿದೆ. BBMP ಪಾಲಿಕೆ ವ್ಯಾಪ್ತಿಯ 34 STP ಕೊಳಚೆ ನೀರು ಪರೀಕ್ಷೆ ಮಾಡಲಾಗುತ್ತೆ. ಮೊದಲು ಕೊಳಚೆ ನೀರನ್ನು ಸಂಗ್ರಹಿಸಿ ಬಳಿಕ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತೆ. ಕೊಳಚೆ ನೀರಿನಿಂದಲೂ ಕೊರೋನಾ ರೂಪಾಂತರಿ ಹರಡುವ ಭೀತಿ ಇದೆ. ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಕೊಳಚೆ ನೀರಿನಲ್ಲಿ ರೂಪಾಂತರಿ ಪತ್ತೆಯಾಗಿತ್ತು. 15 ದಿನಗಳ ಹಿಂದೆಯೇ ಕೊಳಚೆ ನೀರು ಪರೀಕ್ಷೆ ಮಾಡಿದ ಬಳಿಕವೇ ಹೆಚ್ಚು ಜನರಿಗೆ ಸೋಂಕು ಹರಡುವುದನ್ನು ಅಲ್ಲಿ ತಪ್ಪಿಸಲಾಗಿತ್ತು. ಈ ಹಿನ್ನೆಲೆ ಬಿಬಿಎಂಪಿಯಿಂದ ರೂಪಾಂತರಿ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ 34 STP ಗಳಿಂದ ನೀರು ಸಂಗ್ರಹಿಸಿ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.
ಬೊಮ್ಮನಹಳ್ಳಿ, ಮಹದೇವಪುರ & ಪೂರ್ವ ವಲಯಗಳಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ನಡೆದಿದೆ. ಕಳೆದ ಬಾರಿ ಶೇ.70 ರಷ್ಟು ಒಮಿಕ್ರಾನ್, ಶೇ.30 ರಷ್ಟು ಹಳೆ ಕೋವಿಡ್ ಡೆಲ್ಟಾ ಮಾದರಿ ಪತ್ತೆಯಾಗಿತ್ತು. ಇದೀಗ ಹೊಸ ಪ್ರಭೇದದ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. 15 ದಿನಗಳಿಗೆ ಒಮ್ಮೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತಾದರೂ, ಈಗ 7 ದಿನಗಳಿಗೆ ಒಂದು ಬಾರಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಕೊರೊನಾ 4ನೇ ಅಲೆ ಬರುವ ಮುನ್ನವೇ ಹೆಚ್ಚಿನ ನಿಗಾ ವಹಿಸಿ ಕೊರೊನಾ ತಡೆಗಟ್ಟಲು ಎಲ್ಲಾ ರೀತಿಯಲ್ಲಿ ಸಿದ್ಧತೆ ನಡೆದಿದೆ.
ನಾಲ್ಕನೇ ಅಲೆ ಯಾವ ವೇಷದಲ್ಲಾದ್ರೂ ಬರಹುದು. ಸದ್ಯ ಕೊಳಚೆ ನೀರಿನಿಂದ ರೂಪಾಂತರಿ ಪತ್ತೆಗೆ ಬಿಬಿಎಂಪಿ ಬಾಣ ಬಿಟ್ಟಿದೆ. ಒಂದು ವೇಳೆ ಕೊಳಚೆ ನೀರಿನಲ್ಲೇನಾದ್ರೂ ರೂಪಾಂತರಿ ಕಂಡು ಬಂದರೆ, ನಾಲ್ಕನೇ ಅಲೆಗೆ ಬೆಂಗಳೂರಿನ ಮೈ ತುಂಬಾ ಹರಡಿ ಕೂತಿರುವ ಡ್ರೈನೇಜ್ ಗಳಿಂದ ಹೆಮ್ಮಾರಿ ಜನರಿಗೆ ಅಂಟಿಕೊಳ್ಳಲಿದೆ.