ಇತ್ತೀಚೆಗಷ್ಟೇ ಬಿಬಿಎಂಪಿ ನಗರದ ಬೀದಿಬದಿ ವ್ಯಾಪಾರಿಗಳಿಗೆ ಸಿಹಿಸುದ್ದಿ ನೀಡಿತ್ತು. ಅದರ ಖುಷಿ ಮಾಸುವ ಮುನ್ನವೇ ಇದೀಗ ಪಾಲಿಕೆ ಬೀದಿಬದಿ ವ್ಯಾಪಾರಿಗಳಿಗೆ ಬಿಗ್ ಶಾಕ್ ಕೊಟ್ಟಿದೆ. ಬಿಬಿಎಂಪಿಯ ಈ ನಿರ್ಧಾರದಿಂದ ಬೀದಿಬದಿ ವ್ಯಾಪಾರಿಗಳು ಕಂಗಾಲಾಗಿ ಹೋಗಿದ್ದಾರೆ.
ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳಿಗೆ ಶಾಕ್ ನೀಡಿದ ಬಿಬಿಎಂಪಿ.
ಬೆಂಗಳೂರಿನ ಇಳಿ ಸಂಜೆಯ ವಾತಾವರಣಕ್ಕೆ ವಾಕಿಂಗ್ ಮಾಡ್ತಾ, ಫುಟ್ ಪಾತ್ ಫುಡ್ ಸವಿಯುತ್ತಾ ನಡೆಯುವುದು ಜನರ ಇಷ್ಟಗಳಲ್ಲೊಂದು. ಆದರೀಗ ಬಿಬಿಎಂಪಿ ಅದಕ್ಕೆ ಕೊಳ್ಳಿ ಇಟ್ಟಿದೆ. ನಗರದ ಮುಖ್ಯ ರಸ್ತೆ & ಆರ್ಟಿರಿಯಲ್ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಪಾಲಿಕೆ ಮುಂದಾಗಿದೆ. ಹೌದು, ಪ್ರಮುಖ ರಸ್ತೆಗಳ ಫುಟ್ ಪಾತ್ ಮೇಲೆ ತಳ್ಳು ಗಾಡಿಯಲ್ಲಿನ ವ್ಯಾಪಾರಕ್ಕೆ ಬಿಬಿಎಂಪಿ ಬ್ರೇಕ್ ಹಾಕಲು ಮುಂದಾಗಿದೆ. ಪಾಲಿಕೆ ನಿರ್ಧಾರದಂತೆ ಇನ್ಮುಂದೆ ನಗರದ ಮುಖ್ಯ ರಸ್ತೆ ಹಾಗೂ ಆರ್ಟಿರಿಯಲ್ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರ ಮಾಡುವ ಹಾಗಿಲ್ಲ ಮತ್ತು ಸದ್ಯ ಮಾಡ್ತಿರುವವರನ್ನು ಖಾಲಿ ಮಾಡಿಸಲಿದೆ ಪಾಲಿಕೆ.

ಪಾದಚಾರಿಗಳಿಗೆ ವಾಹನ ಡಿಕ್ಕಿ.. ಸಾಲು ಸಾಲು ದುರ್ಮರಣ : ಬೀದಿಬದಿ ವ್ಯಾಪರಕ್ಕೆ ಕೊಕ್.
ಬಿಬಿಎಂಪಿಯ ಈ ನಿರ್ಧಾರದ ಹಿಂದೆ ಇರುವುದು ಪ್ರಮುಖವಾದ ಒಂದು ಕಾರಣ. ಪಾದಚಾರಿಗಳು ಓಡಾಡಬೇಕಾದ ಫುಟ್ ಪಾತ್ ಮೇಲೆ ಬೀದಿಬದಿ ವ್ಯಾಪಾರಿಗಳು ಅಂಗಡಿ ಇಟ್ಟುಕೊಂಡಿದ್ದರಿಂದ ನಗರದಲ್ಲಿ ಹಲವು ಅಪಘಾತಗಳು ಸಂಭವಿಸಿದೆ. ಈ ಅಂಗಡಿಗಳ ಕಾರಣ ಜನರು ರಸ್ತೆ ಮೇಲೆ ನಡೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಜನರು ರಸ್ತೆ ಮೇಲೆ ವಾಕಿಂಗ್ ಮಾಡ್ತಿದ್ದು, ಅಪಘಾತಗಳು ಸಂಭವಿಸುತ್ತಿದೆ. ಇಂಥಾ ಅಪಘಾತಗಳನ್ನು ತಪ್ಪಿಸಲು ಮುಖ್ಯ ರಸ್ತೆಗಳ ಬದಿಗಳಲ್ಲಿ ವ್ಯಾಪಾರಕ್ಕೆ ಪಾಲಿಕೆಯಿಂದ ಕೊಕ್ ನೀಡಲಾಗಿದೆ. ಇತ್ತೀಚೆಗಷ್ಟೇ ಟ್ರಾಫಿಕ್ ಪೊಲೀಸರು ಈ ಬಗ್ಗೆ ಪಾಲಿಕೆ ಮುಂದೆ ಪ್ರಸ್ತಾಪಿಸಿದ್ದರು, ನಗರ ಪೊಲೀಸ್ ಇಲಾಖೆಯ ಜೊತೆ ನಡೆದ ಈ ಸಭೆಯಲ್ಲಿ ಬಿಬಿಎಂಪಿಯಿಂದ ಈ ನಿರ್ಧಾರ ತೆಗೆದುಕೊಂಡಿದೆ.
ಬೀದಿ ಬದಿ ವ್ಯಾಪಾರಿಗಳಿಂದ ಬಿಬಿಎಂಪಿ ಮೇಲೆ ಅಸಮಾಧಾನ.
ಈಗಾಗಲೇ ಹಲವು ಕಾರಣಗಳಿಂದ ಬೀದಿ ಬದಿ ವ್ಯಾಪಾರಿಗಳು ಸಂಷ್ಟದಲ್ಲಿ ಇದ್ದಾರೆ. ಬಿಬಿಎಂಪಿ ಗುರುತಿಸಿರುವ ಹಾಗೆ ನಗರದಲ್ಲಿ ಸುಮಾರು 70 ಸಾವಿರ ಬೀದಿಬದಿ ವ್ಯಾಪಾರಿಗಳು ಇದ್ದಾರೆ. ಹೀಗಾಗಿ ವ್ಯಾಪಾರಿಗಳಿಗೆ ತೊಂದರೆ ಆಗದಂತೆ ಅವಕಾಶ ಮಾಡಿಕೊಡಬೇಕು. ಬಿಬಿಎಂಪಿ ತನ್ನ ಎಲ್ಲಾ ವಲಯಗಳ ವಾರ್ಡ್ ಮಟ್ಟದಲ್ಲಿ ವೆಂಡಿಂಗ್ ಝೋನ್ ನಿರ್ಮಾಣ ಮಾಡಬೇಕು. ನಿರ್ಮಾಣ ಮಾಡಿ ಪಾಲಿಕೆ ಗುರುತಿನ ಚೀಟಿ ನೀಡಿ ಅಲ್ಲೇ ವ್ಯಾಪಾರ ಮಾಡೋಕೆ ಅವಕಾಶ ಕೊಡಬೇಕು. ಪಾಲಿಕೆಯ 2019ರ ಯೋಜನೆ ಪ್ರಕಾರ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಇದ್ಯಾವುದನ್ನೂ ಮಾಡದೆ ಏಕಾಏಕಿ ತೆರವು ಮಾಡುವುದು ಅನ್ಯಾಯ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ಕಿಡಿಕಾರಿದ್ದಾರೆ.
ಇನ್ನು ಈ ಬಗ್ಗೆ ಬೀದಿಬದಿ ವ್ಯಾಪಾರಿಗಳು ಕೂಡ ಅಸಮಾಧಾನ ಹೊರಹಾಕಿದ್ದಾರೆ. ನಮ್ಮಿಂದ ಯಾರಿಗೂ ಯಾವ ಸಮಸ್ಯೆಯೂ ಇಲ್ಲ. ವಾಹನ ಸವಾರರು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿ ಹೋಗ್ತಾರೆ. ಇದರಿಂದ ಟ್ರಾಫಿಕ್ ಆಗಿ ಅಪಘಾತಗಳು ಆಗುತ್ತಿವೆ ಬಿಟ್ಟರೆ ಬೀದಿಬದಿ ವ್ಯಾಪಾರಿಗಳಿಂದ ಯಾರಿಗೆ ಯಾವ ಸಮಸ್ಯೆಯೂ ಆಗಿಲ್ಲ ಎನ್ನುತ್ತಿದ್ದಾರೆ. ಒಟ್ಟಾರೆ ಬಿಬಿಎಂಪಿಯ ಈ ನಿರ್ಧಾರದಂದ ಬೀದಿಬದಿ ವ್ಯಾಪಾರಿಗಳು ಕಂಗಾಲಾಗಿ ಹೋಗಿದ್ದಾರೆ.