ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಸ ವಿಲೇವಾರಿ ಪ್ರಕ್ರಿಯೇ ಒಂದು ತಲೆನೋವು ವಿಚಾರ. ಮನೆ ಮನೆಯಿಂದ ತ್ಯಾಜ್ಯ ಸಂಗ್ರಹ ಒಂದು ಕೆಲಸವಾದರೆ, ಸಂಗ್ರಹವಾದ ಕಸವನ್ನು ಸಾಗಿಸಿ ವಿಲೇವಾರಿ ಮಾಡುವುದು ಮತ್ತೊಂದು ಕಷ್ಟದ ಕೆಲಸ. ಹೀಗೆ ಕಸ ಸಾಗಿಸೋಕೆ ಬಿಬಿಎಂಪಿ ಕೋಟ್ಯಾಂತರ ರೂಪಾಯಿ ಪಾಲಿಕೆ ಖರ್ಚು ಮಾಡುತ್ತೆ. ಇದೀಗ ಆ ಖರ್ಚನ್ನು ಉಳಿಸಿಕೊಳ್ಳಲು ಬಿಬಿಎಂಪಿ ಮೆಗಾ ಪ್ಲ್ಯಾನ್ ಒಂದನ್ನು ಮಾಡಿಕೊಂಡಿದೆ.
ಕಸ ಹೊತ್ತು ಸಾಗಿಸೋಕೆ ಆಗುತ್ತಿರುವ ಖರ್ಚಿಗೆ ಹುಬ್ಬೇರಿಸುತ್ತಿರುವ ಬಿಬಿಎಂಪಿ
ಬೆಳ್ಳಂಬೆಳಗ್ಗೆ ಮನೆ ಮನೆಯಿಂದ ಕಸ ಸಂಗ್ರಹ. ಹೀಗೆ ಸಂಗ್ರಹಿಸುವ ತ್ಯಾಜ್ಯವನ್ನು ಲಾರಿಗಳಲ್ಲಿ ಸಾಗಾಟ ಮಾಡಿ ಒಂದು ಕಡೆ ಪಾಲಿಕೆ ವಿಲೇವಾರಿ ಮಾಡುತ್ತೆ. ಈ ಪ್ರಕ್ರಿಯೆಗೆ ಪಾಲಿಕೆ ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತೆ. ಪ್ರತಿ ತಿಂಗಳು ಲಾರಿಗಳಿಗೆ ಕಸ ತುಂಬಿ ವಿಲೇವಾರಿ ಜಾಗಕ್ಕೆ ತಲುಪಿಸಲು ಸುಮಾರು 55 ಕೋಟಿ ವೆಚ್ಚ ಮಾಡುತ್ತಿದೆ ಬಿಬಿಎಂಪಿ. ಹೌದು, ಪಾಲಿಕೆಗೆ ಕಸ ಸಾಗಿಸಿ ವಿಲೇವಾರಿ ಮಾಡುವುದರಿಂದ ಪ್ರತಿ ತಿಂಗಳು ಖಾಜನೆಗೆ 55 ಕೋಟಿ ಹೊರೆಯಾಗುತ್ತಿದೆ. ಈ ಹೆಚ್ಚುವರಿ ಖರ್ಚನ್ನು ಹತೋಟಿಗೆ ತರಲು ಬಿಬಿಎಂಪಿ ಇದೀಗ ಹೊಸ ಪ್ಕ್ಯಾನ್ ಒಂದನ್ನು ಮಾಡಿದೆ.
ಪ್ರತಿ ತಿಂಗಳಿಗೆ ಕಸ ವಿಲೇವಾರಿ ಮಾಡಿ ಡಂಪ್ ಮಾಡಲು ಪಾಲಿಕೆಯಿಂದ ಕೋಟಿ ಕೋಟಿ ವೆಚ್ಚ !
ಮಂಡೂರು, ಕನ್ನಹಳ್ಳಿಯಲ್ಲಿ ಸದ್ಯಕ್ಕೆ ಲ್ಯಾಂಡ್ ಫಿಲ್ ಮಾಡುತ್ತಿದೆ ಬಿಬಿಎಂಪಿ. ಎಲ್ಲಾ ವಲಯಗಳಿಂದಲೂ ಪ್ರತಿ ದಿನ ಈ ಜಾಗಕ್ಕೆ ಕಸ ತಂದು ವಿಲೇವಾರಿ ಮಾಡುತ್ತೆ. ಇದರಿಂದ ಪಾಲಿಕೆ ಖಜಾನೆಗೆ ಪ್ರತಿ ತಿಂಗಳು ಸರಿಸುಮಾರು 55 ಕೋಟಿ ಎಂದರೆ ಪ್ರತಿ ವರ್ಷಕ್ಕೆ ಕಸ ಸಾಗಾಟಕ್ಕೆ ಪಾಲಿಕೆ ಖರ್ಚು ಮಾಡ್ತಿರುವುದು ಬರೋಬ್ಬರಿ 660 ಕೋಟಿ. ಈ ಹಣ ಉಳಿಸಿಕೊಳ್ಳಲು ಮತ್ತೊಂದು ಮೆಗಾ ಪ್ಲ್ಯಾನ್ ಮಾಡಿರುವ ಬಿಬಿಎಂಪಿ, ಅಪಾರ್ಟ್ಮೆಂಟ್, ಹೋಟೆಲ್, ಕೈಗಾರಿಕಾ ಕಂಪೆನಿಗಳೇ ತ್ಯಾಜ್ಯ ಸಾಗಾಟ ಮಾಡುವ ಹೊಣೆಯನ್ನು ನೀಡಲು ಪಾಲಿಕೆ ಚಿಂತಿಸಿದೆ. ಅಪಾರ್ಟ್ಮೆಂಟ್ ಗಳು, ಹೋಟೆಲ್ ಗಳು ಏಜೆನ್ಸಿಗಳ ಜೊತೆಗೆ ಮಾತನಾಡಿ ಪಾಲಿಕೆ ಲ್ಯಾಂಡ್ ಫಿಲ್ ಗೆ ಕಸ ತಲುಪಿಸಬೇಕು. ಬಿಬಿಎಂಪಿ SWM ವಿಭಾಗ ಕಸ ಸಾಗಾಟಕ್ಕೆ ಅರ್ಹ ಏಜೆನ್ಸಿಗಳಿಗೆ ಪರವಾನಗಿ ನೀಡಲಿದೆ. ಬಿಬಿಎಂಪಿಯಿಂದ ಲೈಸೆನ್ಸ್ ಪಡೆದ ಏಜೆನ್ಸಿಗಳು ಅಪಾರ್ಟ್ಮೆಂಟ್, ಹೋಟೆಲ್, ಇಂಡಸ್ಟ್ರೀಸ್ ಗಳಿಂದ ಕಸ ಸಂಗ್ರಹಿಸಬಹುದು. ಇದಕ್ಕೆ ಬಿಬಿಎಂಪಿಯೇ ದರ ನಿಗದಿಯೂ ಮಾಡಲಿದೆ. ಹೆಚ್ಚು ವಸೂಲಿ ಮಾಡಿದರೆ ಪಾಲಿಕೆಯಿಂದಲೇ ಕ್ರಮ ಕೈಗೊಳ್ಳಲಾಗುತ್ತೆ. ಈ ಮೂಲಕ ತ್ಯಾಜ್ಯ ಸಾಗಾಟ ವೆಚ್ಚಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಮುಂದಾಗಿದೆ.
ಏನಿದು ಬಿಬಿಎಂಪಿ ನೂತನ ಪ್ಲ್ಯಾನ್ !
• ದೊಡ್ಡ ಪ್ರಮಾಣದ ತ್ಯಾಜ್ಯ ವಿಲೇವಾರಿ ಆಯಾ ಸಂಸ್ಥೆಯ ಹೊಣೆ
• ಅಪಾರ್ಟ್ಮೆಂಟ್, ಹೋಟೆಲ್, ಕೈಗಾರಿಕಾ ಸಂಸ್ಥೆಗಳಿಂದ ನಗರದಲ್ಲಿ ಹೆಚ್ಚು ವೇಸ್ಟ್ ಉತ್ಪತಿ
• ಇವರು ಉತ್ಪಾದಿಸುವ ತ್ಯಾಜ್ಯವನ್ನು ಇವರೇ ಲ್ಯಾಂಡ್ ಫಿಲ್ಗೆ ತಲುಪಿಸಬೇಕು
• ಖಾಸಗಿ ಏಜೆನ್ಸಿಗಳಿಗೆ ತ್ಯಾಜ್ಯ ಕೊಟ್ಟು ಸಾಗಾಟ ಮಾಡುವುದು
• ಯಾವ ಏಜೆನ್ಸಿ ಖಾಸಗಿಯಾಗಿ ತ್ಯಾಜ್ಯ ಸಾಗಾಟ ಮಾಡಬಹುದು ಎಂದು ಪಾಲಿಕೆ ನಿರ್ಧಾರ
• ಪಾಲಿಕೆಯಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಏಜೆನ್ಸಿಗಳಗಷ್ಟೇ ತಮ್ಮ ತ್ಯಾಜ್ಯ ಹಸ್ತಾಂತರ ಮಾಡಬೇಕು
• ಇದಕ್ಕೆ ಇಂತಿಷ್ಟು ದರ ಬಿಬಿಎಂಪಿಯಿಂದಲೇ ನಿರ್ಧಾರವಾಗಲಿದೆ
• ಈ ದರವನ್ನು ಸಂಸ್ಥೆಗಳು ನೇರವಾಗಿ ಖಾಸಗಿ ಏಜೆನ್ಸಿಗಳಿಗೆ ಪಾವತಿಸಬೇಕು
• ಮೊತ್ತ ನಿಗದಿ ಮಾತ್ರ ಪಾಲಿಕೆ ಮಾಡಲಿದೆ, ಪಾವತಿ ಸಂಸ್ಥೆಯೇ ಮಾಡಬೇಕು
• ಇದರಿಂದ ಬಿಬಿಎಂಪಿ ಜೇಬಿಂದ ಖರ್ಚಾಗುತ್ತಿದ್ದ ಹಣ ಉಳಿತಾಯವಾಗಲಿದೆ
• ಇದರಿಂದ ಅಪಾರ್ಟ್ಮೆಂಟ್, ಹೋಟೆಲ್, ಕೈಗಾರಿಕೆಗಳು ತ್ಯಾಜ್ಯ ಉತ್ಪತಿಯ ಪ್ರಮಾಣವನ್ನು ಕಂಟ್ರೋಲ್ ಮಾಡಬಹುದು
• ತ್ಯಾಜ್ಯ ಹೆಚ್ಚಾದಷ್ಟು ಸಂಸ್ಥೆಗಳು ಏಜೆನ್ಸಿಗಳಿಗೆ ಹೆಚ್ಚು ಹಣ ಪಾವತಿಸಬೇಕಾಬಹುದು
ಒಟ್ಟಾರೆ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲೆಂದೇ ಪಾಲಿಕೆ ತನ್ನ ಕೈಯಿಂದ 660 ಕೋಟಿ ವಾರ್ಷಿಕವಾಗಿ ವೆಚ್ಚಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಹೊಸ ತಂತ್ರ ಮಾಡಿಕೊಂಡಿದ್ದು, ಇದು ಎಷ್ಟರ ಮಟ್ಟಿಗೆ ಯಶ ಕಾಣಲಿದೆ ಎಂಬುವುದನ್ನು ಕಾದು ನೋಡಬೇಕಿದೆ.