ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ 50 ಜಂಕ್ಷನ್ ಗಳನ್ನು ಗುರುತಿಸಲಾಗಿದ್ದು, ಅದನ್ನು ಸುಧಾರಣೆ ಮಾಡಲು ಬಿಬಿಎಂಪಿ ಮುಂದಾಗಿದೆ. ಇದಕ್ಕಂತಲೇ ಹೊಸ ಪ್ಲ್ಯಾನ್ ಅನ್ನೂ ಪಾಲಿಕೆ ಮಾಡಿಕೊಂಡಿದೆ.
ಟ್ರಾಫಿಕ್ ಪೊಲೀಸ್‌ಗೆ ಬಿಬಿಎಂಪಿ ಸಾಥ್.. ನಯಾ ಐಡಿಯಾ ಮಾಡಿದ ಪಾಲಿಕೆ.!
ರಾಜಧಾನಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿನ್ನೆ ಮೊನ್ನೆಯದ್ದಲ್ಲ. ಎಷ್ಟೇ ಪ್ರಯತ್ನಿಸಿದರೂ ಟ್ರಾಫಿಕ್ ಕಿರಿಕ್ ತಪ್ಪಿಸಲು ಮಾತ್ರ ಆಗುತ್ತಿಲ್ಲ. ಹೀಗಾಗಿ ಈ ಬಾರಿ ಟ್ರಾಫಿಕ್‌ಗೊಂದು ಪರಿಹಾರ ಕಂಡು ಹಿಡಿಯಲೇ ಬೇಕು ಎಂಬ ಟ್ರಾಫಿಕ್ ಪೊಲೀಸರ ಆಸೆಗೆ ಬಿಬಿಎಂಪಿ ಸಾಥ್ ಕೊಡುತ್ತಿದೆ. ನಗರದಲ್ಲಿ ಅತಿಹೆಚ್ಚು ಟ್ರಾಫಿಕ್ ಉಂಟಾಗುವ ಜಂಕ್ಷನ್ ಗಳನ್ನು ಗುರುತಿಸಿ ಬೇಕಾದ ಕ್ರಮ ತೆಗೆದುಕೊಳ್ಳುವ ಕೆಲಸಕ್ಕೆ ಪಾಲಿಕೆ ಇಳಿದಿದೆ. ಇದರ ಭಾಗವಾಗಿಯೇ ಬಿಬಿಎಂಪಿ ಅಧಿಕಾರಿಗಳು ಹಾಗೂ ಇತರೆ ಇಲಾಖೆ ಅಧಿಕಾರಿಗಳು ನಿನ್ನೆ ರಾತ್ರಿ ರೌಂಡ್ಸ್ ಮಾಡಿದ್ದು ನಗರದ ಪ್ರಮುಖ ಮೂರ್ನಾಲ್ಕು ಜಂಕ್ಷನ್ ಗಳ ಪರಿಶೀಲನೆ ಮಾಡಿದ್ದಾರೆ.

ಸದ್ಯ ಆರಂಭಿಕವಾಗಿ ಗೋರಗುಂಟೆ ಪಾಳ್ಯ, ಹೆಬ್ಬಾಳ, ಕೆ.ಆರ್ ಪುರಂ ಜಂಕ್ಷನ್ ನಲ್ಲಾಗುವ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಪಾಲಿಕೆ ಮುಂದಾಗಿದೆ. ಇನ್ನೂ ಕೆಲವು ಜಂಕ್ಷನ್ ಗಳಲ್ಲಿ ಸ್ಕೈವಾಕ್, ಪಬ್ಲಿಕ್ ಟಾಯ್ಲೆಟ್ ವ್ಯವಸ್ಥೆ ಮಾಡುವ ಅಗತ್ಯವಿದೆ. ಹೆಬ್ಬಾಳ ಫ್ಲೈ ಓವರ್ ಸಿಕ್ಕಾಪಟ್ಟೆ ದಟ್ಟಣೆ ಎದುರಿಸುತ್ತಿದ್ದು, ಇಲ್ಲೊಂದು ಅಂಡರ್ ಪಾಸ್ ನಿರ್ಮಾಣಕ್ಕೆ ಯೋಚಿಸಿದೆ. ಅಲ್ಲದೆ ಲೂಪ್ ವ್ಯವಸ್ಥೆಯಲ್ಲೂ ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಇನ್ನು ಗೊರಗುಂಟೆ ಪಾಳ್ಯ ಜಂಕ್ಷನ್, ಸುಮಾರು 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಪ್ರತಿನಿತ್ಯ ಸಹಸ್ರಾರು ವಾಹನಗಳು ಸಂಚರಿಸಲಿವೆ. ವಾರದ ಕೊನೆಯ ದಿನ ಸಂಚಾರ ದಟ್ಟಣೆ ಇನ್ನೂ ಹೆಚ್ಚಾಗಿ ಸಾಲುಗಟ್ಟಲೆ ವಾಹನಗಳು ನಿಂತಿರುತ್ತವೆ. ಈ ಪೈಕಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಅಲ್ಪಾವಧಿಯ ಯೋಜನೆಗಳನ್ನು ಕೈಗೆತ್ತಿಕೊಂಡು ಅವುಗಳನ್ನು ತುರ್ತಾಗಿ ಪೂರ್ಣಗೊಳಿಸುವುದರಿಂದ ವಾಹನ ಸಂಚಾರ ದಟ್ಟಣೆ ಶೇ. 20 ಸುಧಾರಿಸಲಿದೆ. ಈ ಪೈಕಿ ತುರ್ತಾಗಿ ಕೆಲಸಗಳನ್ನು ಪ್ರಾರಂಭಿಸಲು ಬಿಬಿಎಂಪಿ ಮುಂದಾಗಿದೆ.
ಈ ಬಗ್ಗೆ ಮಾತನಾಡಿದ ಅವರು, ಎಲ್ಲಾ ಇಲಾಖೆಗಳ ಅಧಿಕಾರಿಗಳ ಜತೆ ನಗರದ ಕೆಲವು ಕಡೆ ಪರಿಶೀಲನೆ ನಡೆಸಲಾಗಿದೆ. ಕೆಲ ಜಂಕ್ಷನ್ ನಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದಿರುವುದನ್ನು ಗಮನಿಸ ಕೂಡಲೆ ಜಂಕ್ಷನ್ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸದ್ಯ ಇರುವ ಶೌಚಾಲಯವನ್ನು ಮುಚ್ಚಲಾಗಿದ್ದು, ಅದನ್ನು ಕೂಡಲೆ ದುರಸ್ತಿಪಡಿಸಿ ಸಾರ್ವಜನಿಕರು ಉಪಯೋಗಕ್ಕೆ ಅನುವು ಮಾಡಿಕೊಡಬೇಕು. ರಸ್ತೆ ದಾಟುವ ಪ್ರಯಾಣಿಕರ ಸಂಖ್ಯೆ ಹೆಚಿದ್ದು, ಪಿಪಿಪಿ ಮಾದರಿಯಲ್ಲಿ ತ್ವರಿತಗತಿಯಲ್ಲಿ ಪಾದಚಾರಿ ಮೇಲುಸೇತುವೆ ತುರ್ತಾಗಿ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಒಟ್ಟಾರೆ ಟ್ರಾಫಿಕ್ ಪೊಲೀಸರ ಕೆಲಸಕ್ಕೆ ಬಿಬಿಎಂಪಿ ಸಾಥ್ ಕೊಡಲು ನಿರ್ಧರಿಸಿದೆ. ಒಗ್ಗಟ್ಟಾಗಿ ಕೆಲಸ ಮಾಡಿ ರಾಜಧಾನಿಯ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಕೊಡಲು ಬಿಬಿಎಂಪಿ ಅಧಿಕಾರಿಗಳು ಎದುರು ನೋಡುತ್ತಿದ್ದಾರೆ. ಆದರೆ ಇಲ್ಲೂ ಕೂಡ ಕಳಪೆ ಕಾಮಗಾರಿ ಮಾಡಿದರೆ ಛೀಮಾರಿ ಹಾಗೂ ಮುಖಭಂಗ ಮಾತ್ರ ತಪ್ಪಿದ್ದಲ್ಲ.