ಬಳ್ಳಾರಿ: ಹೊಸ ವರ್ಷದ ದಿನವೇ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದು, ಘಟನೆಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸೇರಿದಂತೆ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಬಳ್ಳಾರಿ ನಗರದ ಅವ್ವಂಬಾವಿಯಲ್ಲಿರುವ ಶಾಸಕ ಜನಾರ್ದನ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮದ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ ಆರಂಭವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ವಿಕೋಪಕ್ಕೆ ಹೋಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಮಾಡಿದ ಏರ್ ಫೈರ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬುವವರಿಗೆ ಗುಂಡು ತಗುಲಿದೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ರಾಜಶೇಖರ್ ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆ ಸಂಬಂಧ ನಗರ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಚಾನಾಳ್ ಶೇಖರ್ ನೀಡಿದ ದೂರು ಆಧರಿಸಿ ಜನಾರ್ದನ ರೆಡ್ಡಿ ಅವರನ್ನು ಪ್ರಕರಣದಲ್ಲಿ ಎ1 ಆರೋಪಿ ಮಾಡಲಾಗಿದೆ. ಸೋಮಶೇಖರ ರೆಡ್ಡಿ ಎ2, ಶ್ರೀರಾಮುಲು ಎ3, ಪಾಲಿಕೆ ವಿರೋಧ ಪಕ್ಷದ ನಾಯಕ ಮೋತ್ಕರ್ ಶ್ರೀನಿವಾಸ ಅವರನ್ನು ಎ4 ಮಾಡಲಾಗಿದೆ. ಒಟ್ಟು 11 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.












