‘ಜಮೀನು-ಜಲ-ಜಂಗಲ್-ಜಾನುವಾರು-ಜನ’ ಪಂಚಸೂತ್ರದಡಿ ತಾಯಿ ವಿಷಯ ಪ್ರಧಾನವಾಗಿಟ್ಟುಕೊಂಡು ನಡೆಸಿದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಕನ್ನಡದ ಪೂಜಾರಿ ಎಂದೇ ಹೆಸರಾದ ಹಿರೇಮಗಳೂರು ಕಣ್ಣನ್ ಅವರ ‘ ಯಾವ ತಾಯಿಯೂ ಮೆಚ್ಚಿಕೊಳ್ಳದಂತಹ ಹಾಸ್ಯದ ಹೊನಲಿನೊಡನೆ ಸಮಾರೋಪಗೊಂಡಿದೆ. ಸೈದ್ಧಾಂತಿಕ ಭಿನ್ನಮತ ಏನೇ ಇದ್ದರೂ ಒಬ್ಬ ವಿದ್ವಾಂಸರಾಗಿ ಮಾನ್ಯತೆ ಪಡೆದಿರುವ ಕಣ್ಣನ್ ತಮ್ಮ ಕೀಳಭಿರುಚಿಯ ನಗೆಹೊನಲಿನ ಮೂಲಕ ‘ಎಲ್ಲವನ್ನೂ’ ಸಮಾರೋಪಗೊಳಿಸಿದ್ದಾರೆ. ಮೂಲತಃ ಮನುಜ ಸಮಾಜದಲ್ಲಿ ‘ತಾಯಿ’ ಎಂಬ ಅಮೂರ್ತ ಕಲ್ಪನೆಯೇ ಒಂದು ಭಾವನಾತ್ಮಕ ಲಹರಿಯನ್ನು ಹರಿಸುತ್ತದೆ. ಪೌರ್ವಾತ್ಯ ದೇಶಗಳಲ್ಲಿ ತಾಯಿಯೊಡನೆ ಭಾವನಾತ್ಮಕ ಸಂಬಂಧಗಳು ತುಸು ಹೆಚ್ಚಾಗಿಯೇ ಕಂಡುಬರುತ್ತದೆ. ಈ ಬಾರಿ ಬಹುರೂಪಿ ನಾಟಕೋತ್ಸವಕ್ಕೆ ತಾಯಿ ವಿಷಯವನ್ನು ಕೇಂದ್ರ ವಸ್ತು ಎಂದು ಆಯ್ಕೆ ಮಾಡಿದಾಗ ಮೂಡಿದ್ದ ಆಶಯಗಳು, ಸಮಾರೋಪದ ಮಾತುಗಳಲ್ಲಿ ಮಣ್ಣಾಗಿ ಹೋಗಿರುವುದು ದುರಂತವಷ್ಟೆ.
ನಿಜ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಪರಿಭಾವಿಸಿಕೊಳ್ಳುವ ಮತ್ತು ಕೂಡು ಬಾಳ್ವೆ ನಡೆಸುವ ತಾಯಿಗೂ, ಚಲನಚಿತ್ರಗಳ ಪರದೆಯ ಮೇಲೆ ಬಿಂಬಿಸಲಾಗುವ ತಾಯಿಯ ಚಿತ್ರಣಕ್ಕೂ, ರಂಗಭೂಮಿಯ ಮೇಲೆ ಕಲಾತ್ಮಕ ಅಭಿವ್ಯಕ್ತಿಯಾಗಿ ಕಾಣಿಸಿಕೊಳ್ಳುವ ತಾಯಿಗೂ ಇರುವ ವ್ಯತ್ಯಾಸವನ್ನು ಅರಿತು ಈ ವಸ್ತುವನ್ನು ಆಯ್ಕೆ ಮಾಡಿದ್ದರೆ, ಬಹುಶಃ ನಾಟಕೋತ್ಸವ ಅರ್ಥಪೂರ್ಣವಾಗುತ್ತಿತ್ತು. ಇರಲಿ, ನಾಟಕಗಳ ವಿಮರ್ಶೆ ಈ ಲೇಖನದ ಪರಿಧಿಯಿಂದ ಹೊರತಾದದ್ದು. ಆದರೆ ನಾಟಕೋತ್ಸವದ ಕೇಂದ್ರ ವಸ್ತುವಾಗಿದ್ದ ತಾಯಿಯ ಪರಿಕಲ್ಪನೆಯನ್ನು ಕುರಿತು ಸಮಾರೋಪದ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆ ಮತ್ತು ಹಿರೇಮಗಳೂರು ಕಣ್ಣನ್ ಅವರು ಆಡಿದ ಮಾತುಗಳು ನಿರಾಸೆ, ಜಿಗುಪ್ಸೆ ಮೂಡಿಸುತ್ತವೆ.
ಚಲನ ಚಿತ್ರಗಳಲ್ಲಿ ತಾಯಿ ನಮ್ಮ ಬದುಕಿನ ನಡುವಿನ ಮೂರ್ತ ಸ್ವರೂಪದ ತಾಯಿಯ ಪ್ರತಿಬಿಂಬವಾಗಿ ಕಾಣಿಸಿಕೊಳ್ಳುತ್ತಾಳೆ. ಅವಳ ಮಮತೆ, ವಾತ್ಸಲ್ಯ, ಒಡಲನೋವು, ನಲಿವು ಎಲ್ಲವೂ ನಮ್ಮೊಳಗಿನ ಭಾವನೆಗಳನ್ನು ಸ್ಫುರಿಸುವಂತೆ ಪಾತ್ರಗಳು ಸೃಷ್ಟಿಯಾಗುತ್ತವೆ. ನಾವು ನಿತ್ಯ ಎದುರಾಗುವ ಬದುಕಿನ ಪಲ್ಲಟಗಳಿಗೆ, ತಲ್ಲಣಗಳಿಗೆ ಸ್ಪಂದಿಸುವ ಪರದೆಯ ಮೇಲಿನ ತಾಯಿ ಮೂರ್ತ ಸ್ವರೂಪದಲ್ಲೇ ನಮ್ಮೊಳಗೊಂದಾಗಿ ನಮ್ಮ ಕಂಬನಿ, ನಗೆ ಮತ್ತು ನಿಟ್ಟುಸಿರುಗಳಿಗೆ ಸಾಕ್ಷಿಯಾಗುತ್ತಾಳೆ. ಆದರೆ ರಂಗಭೂಮಿಯ ತಾಯಿ ತನ್ನ ಮೂರ್ತತೆಯನ್ನು ಕಳೆದುಕೊಂಡಿರುತ್ತಾಳೆ. ಈ ತಾಯಿಯ ವ್ಯಕ್ತಿತ್ವವನ್ನು ಅಮೂರ್ತ ಸ್ವರೂಪದಲ್ಲೇ ಅಭಿವ್ಯಕ್ತಗೊಳಿಸುವ ನಿಟ್ಟಿನಲ್ಲಿ ರಂಗಭೂಮಿ ತಾಯಿ ಎಂಬ ವ್ಯಕ್ತಿತ್ವದ ವಿರಾಟ್ ಸ್ವರೂಪವನ್ನು ವಿಶ್ವವ್ಯಾಪಿಯಾಗಿಸಲು ಪ್ರಯತ್ನಿಸುತ್ತದೆ. ಈ ಅಮೂರ್ತತೆಯಲ್ಲೇ ತಾಯಿ ತನ್ನ ಸಂಕೋಲೆಗಳನ್ನು, ಅಸ್ಮಿತೆಗಳನ್ನು ಮತ್ತು ಅನನ್ಯತೆಗಳನ್ನು ಕಳೆದುಕೊಂಡು ಸಾರ್ವತ್ರಿಕತೆಯನ್ನು ಪಡೆಯುತ್ತಾಳೆ.
ಹಾಗಾಗಿಯೇ ಆದಿಕವಿ ಪಂಪನಿಂದ ಮ್ಯಾಕ್ಸಿಂ ಗಾರ್ಕಿ ಮತ್ತು ರಾಷ್ಟ್ರಕವಿ ಕುವೆಂಪುವರೆಗೆ ತಾಯಿ ಎಂಬ ವಸ್ತು ಸಾಹಿತ್ಯಕವಾಗಿ ತನ್ನ ಅಮೂರ್ತತೆಯಲ್ಲೇ ವ್ಯಕ್ತವಾಗುತ್ತಾಳೆ. ಸಾಹಿತ್ಯದಲ್ಲಿ ಸಂದರ್ಭಗಳಿಗನುಗುಣವಾಗಿ ಮೂರ್ತ ರೂಪ ಪಡೆಯುವ ತಾಯಿಯ ವ್ಯಕ್ತಿತ್ವ ಓದುಗರಿಗೆ ಸಾಂದರ್ಭಿಕವಾಗಿ ನಿಲುಕುತ್ತದೆ. ಓದುಗರ ವ್ಯಕ್ತಿಗತ ಬದುಕಿನಲ್ಲಿ ಪರಕಾಯ ಪ್ರವೇಶ ಮಾಡುವ ಅಕ್ಷರ ರೂಪದ ತಾಯಿ ಅದೇ ಬದುಕಿನ ಒಂದು ಆಯಾಮದಲ್ಲಿ ಪ್ರತಿಷ್ಠಾಪಿತಳಾಗುತ್ತಾಳೆ. ಹಾಗಾಗಿಯೇ “ ತಾಯಿಯಿಂದ ಪಡೆಯುವ ಶಿಕ್ಷಣ, ತಾಯಿಯ ತಾಳ್ಮೆ ಮತ್ತು ಅಕ್ಕರೆ, ತಾಯಿಯ ಆರಾಧನೆ ” ಇವೆಲ್ಲವೂ ಕಾವ್ಯದ ನೆಲೆಯಲ್ಲಿ ಅಪ್ಯಾಯಮಾನವಾಗಿ ಕಾಣುತ್ತದೆ. ಹತ್ತು ದೇವರನ್ನು ಪೂಜಿಸುವ ಬದಲು ಹೆತ್ತ ತಾಯಿಯಿನ್ನು ಪೂಜಿಸು ಎನ್ನುವ ನಾಣ್ಣುಡಿ ಸಾಹಿತ್ಯಕ ಅಭಿವ್ಯಕ್ತಿಯಲ್ಲಿ ಮೂರ್ತ ರೂಪದಲ್ಲೇ ಉಳಿಯುತ್ತದೆ.
ಅದರೆ ರಂಗಭೂಮಿ ಈ ‘ತಾಯಿ’ಯನ್ನು ಅಮೂರ್ತತೆಯತ್ತ ಕೊಂಡೊಯ್ಯಲು ಯತ್ನಿಸುತ್ತದೆ. ರಂಗಮಂಚದ ಮೇಲೆ ಮೂಡುವ ತಾಯಿಯ ಅಮೂರ್ತತೆಯೇ ಆಕೆಯ ವ್ಯಕ್ತಿತ್ವವನ್ನು ಸರ್ವವ್ಯಾಪಿಯಾಗಿಸುತ್ತದೆ. ಎಲ್ಲರಿಗೂ ಸಲ್ಲುವ, ಎಲ್ಲೆಡೆಗೂ ನಿಲುಕುವ ಒಂದು ಅಗೋಚರ ಶಕ್ತಿಯಾಗಿ ತಾಯಿಯನ್ನು ಬಿಂಬಿಸುವ ರಂಗಭೂಮಿ ‘ತಾಯಿ’ ಎಂಬ ವಸ್ತುವನ್ನು ಮುಕ್ತ ಪ್ರಪಂಚದ ಅದ್ವಿತೀಯ ಶಕ್ತಿಯಾಗಿ ಮತ್ತು ವರ್ತಮಾನದ ಸಾಮಾಜಿಕ-ಸಾಂಸ್ಕøತಿಕ ತಲ್ಲಣಗಳಿಗೆ ಸ್ಪಂದಿಸುವಂತಹ ಒಂದು ಸಾಂಸ್ಕೃತಿಕ ಅಭಿವ್ಯಕ್ತಿಯಾಗಿ ರೂಪಿಸಲು ಯತ್ನಿಸುತ್ತದೆ. ಪಂಪನ ಕಲ್ಪನೆಯ ತಾಯಿಯೇ ಆಗಲಿ, ಕುವೆಂಪು-ಬೇಂದ್ರೆಯವರ ಕಲ್ಪನೆಯ ತಾಯಿಯೇ ಆಗಲೀ ಭಾರತದ ಸಮಕಾಲೀನ ಸಂದರ್ಭದಲ್ಲಿ ಸಂಕೋಲೆಗಳಿಂದ ಮುಕ್ತಳಾದ ಅಮೂರ್ತ ಸ್ವರೂಪದಲ್ಲೇ ಕಾಣಿಸಿಕೊಳ್ಳಬೇಕಾಗುತ್ತದೆ.
ಭಾರತದ ಸಂದರ್ಭದಲ್ಲೇ ನೋಡಿದಾಗ, ಸಾಹಿತ್ಯಕವಾಗಿ ಮೂರ್ತ ನೆಲೆಯಲ್ಲಿ ವೈಭವೀಕರಣಕ್ಕೊಳಗಾಗುವ ತಾಯಿ ರಂಗಭೂಮಿಯಲ್ಲಿ ನಿಷ್ಕರ್ಷೆಗೊಳಗಾಗುತ್ತಾಳೆ. ವಾಸ್ತವಗಳಿಗೆ ಮುಖಾಮುಖಿಯಾಗುತ್ತಾ, ಸಾಮಾಜಿಕ ವಿಘಟನೆಗೆ ಕಾರಣವಾಗುವ ಜಾತಿ, ಮತ, ಧರ್ಮ ಮತ್ತು ಸಾಮುದಾಯಿಕ ಅಸ್ಮಿತೆಗಳಿಂದ ವಿಮೋಚನೆ ಪಡೆದ ಒಂದು ಅಮೂರ್ತ ಕಲ್ಪನೆಯಾಗಿ ತಾಯಿ ಸೌಹಾರ್ದತೆ ಮತ್ತು ಸಮನ್ವಯತೆಯ ಕೊಂಡಿಯಾಗಿ ಕಾಣಿಸಿಕೊಳ್ಳುತ್ತಾಳೆ. ಹಾಗಾಗಿ ಮಾತೃಭೂಮಿ ಎಂಬ ಪರಿಕಲ್ಪನೆಯನ್ನು ರಂಗಮಂಚದ ಮೇಲೆ ಭಾರತಾಂಬೆಯಾಗಿ ಕಾಣಲು ಸಾಧ್ಯವಾಗುವುದಿಲ್ಲ. ಒಂದು ನಾಟಕದ ವಸ್ತುವಾಗಿ, ಪಾತ್ರಧಾರಿಯಾಗಿ ಭಾರತಾಂಬೆ ಇದ್ದರೂ, ಅದಕ್ಕೆ ಎಲ್ಲ ತತ್ವಗಳ ಎಲ್ಲೆ ಮೀರಿದ ಒಂದು ಅಮೂರ್ತ ಅಸ್ತಿತ್ವ ಇದ್ದರೆ ಮಾತ್ರ ಸಾರ್ಥಕತೆ ಪಡೆಯಲು ಸಾದ್ಯ.
ಹಾಗಾಗಿ ಸಮಾರೋಪದಲ್ಲಿ ಬಹುರೂಪಿಯ ‘ತಾಯಿ’ ಕುರಿತು ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಅವರ ಮಾತುಗಳನ್ನು ಗಂಭೀರವಾಗಿಯೇ ನಿಷ್ಕರ್ಷೆಗೊಳಪಡಿಸಬೇಕಾಗುತ್ತದೆ. ರಾಮನ ಅಣತಿಯಂತೆ ಕಾಡಿಗೆ ಹೋಗುವ ಸೀತೆ ಉತ್ತರ ರಾಮಾಯಣದಲ್ಲಿ “ ನಾನು ಇಲ್ಲಿರಲಾರೆ ತಾಯಿಯ ಮಡಿಲಿಗೆ ಹೋಗುತ್ತೇನೆ ” ಎಂದು ಹೇಳುವುದನ್ನು ತಾಯ ಮಡಿಲ ಶಕ್ತಿಯ ದ್ಯೋತಕ ಎಂದು ಸೂಲಿಬೆಲೆ ವರ್ಣಿಸುತ್ತಾರೆ. ಇಲ್ಲಿ ಸೀತೆಯೊಳಗಿನ ಒಂದು ‘ತಾಯಿಯ’ ಸ್ವರೂಪವನ್ನು ಗುರುತಿಸಲು ಸಾಧ್ಯವಾಗದೆ ಹೋದುದಾದರೂ ಏಕೆ ? ಪರಿತ್ಯಕ್ತಳಾಗುವ ಸೀತೆಯೊಳಗಿನ ಅಮೂರ್ತ ಸ್ವರೂಪದ ತಾಯಿಯನ್ನು ಗುರುತಿಸಲು ಸೂಲಿಬೆಲೆ ವಿಫಲವಾಗುವಂತೆಯೇ, ಹಿರೇಮಗಳೂರು ಕಣ್ಣನ್ ಹಿಜಾಬ್ ಧರಿಸುವ ಹೆಣ್ಣುಮಕ್ಕಳೊಳಗಿನ ಅಮೂರ್ತ ತಾಯಿಯನ್ನು ಗುರುತಿಸಲು ವಿಫಲರಾಗುತ್ತಾರೆ. ಕಣ್ಣನ್ ಅವರಿಗೆ ರಂಗಭೂಮಿಯ ‘ತಾಯಿ’ ಹೇಗಿರಬಲ್ಲಳೆಂಬ ಪರಿವೆ ಇದ್ದಿದ್ದರೆ, ಬಹುರೂಪಿಯ ಸಂದರ್ಭದಲ್ಲಿ ಹಿಜಾಬ್ ಪ್ರಧಾನವಾಗಿ ಕಾಣುತ್ತಿರಲಿಲ್ಲ, ಅಲ್ಲಿ ಶಿಕ್ಷಣವಂಚಿತ ಹೆಣ್ಣು ಮಗು ಕಾಣುತ್ತಿತ್ತು.
ಜಲ, ಜಮೀನು, ಜನ ಮತ್ತು ಜಾನುವಾರುಗಳಲ್ಲಿ ಸಮಾಜ ಕಾಣುವ ತಾಯಿಯನ್ನು ರಂಗಭೂಮಿಯ ಮೇಲೆ ಪ್ರಸ್ತುತಪಡಿಸುವಾಗ ಆಕೆ ಮನುಜ ಸಹಜವಾದ ಎಲ್ಲ ಸೇತುಬಂಧಗಳನ್ನೂ ದಾಟಿದ, ಎಲ್ಲ ಸಂಕೋಲೆಗಳನ್ನೂ ಕಳಚಿಕೊಂಡ ಸ್ವರೂಪದಲ್ಲಿ ಕಾಣಬೇಕಾಗುತ್ತದೆ. ಮ್ಯಾಕ್ಸಿಂ ಗಾರ್ಕಿಯ ತಾಯಿ ಎಲ್ಲರ ತಾಯಿಯಾಗುತ್ತಾಳೆ. ಧರೆಗಿಳಿವ ಗಂಗೆಯಲ್ಲಿ ತಾಯ ಸ್ವರೂಪವನ್ನು ಕಾಣುವ ಬೇಂದ್ರೆಯ ತಾಯಿ ಸಮಸ್ತ ಜಗತ್ತಿನ ಜಲಸಂಪತ್ತಿನ ಒಡತಿಯಾಗುತ್ತಾಳೆ. ಸಕಲ ಚರಾಚರ ಜೀವಿಗಳ ಸ್ಫೂರ್ತಿಯ ಸೆಲೆಯಾಗಿ ತಾಯಿ ತನ್ನ ವಿರಾಟ್ ವಿಶ್ವರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಇಂತಹ ಒಂದು ಅಮೂರ್ತತೆಯ ನೆಲೆಯಲ್ಲಿ ‘ತಾಯಿ’ಯನ್ನು ಕಾಣಬೇಕಾದ ರಂಗಾಯಣದ ನಿರ್ದೇಶಕರು “ 32 ವರ್ಷದ ರಂಗಾಯಣದ ಇತಿಹಾಸದಲ್ಲಿ ಮೊದಲ ಬಾರಿಗೆ “ಭಾರತ್ ಮಾತಾ ಕಿ ಜೈ ಘೋಷಣೆ ಮೊಳಗಿತು ” ಎಂದು ಪುಳಕಿತರಾಗುವುದೇ ದುರಂತ ಎನಿಸುವುದಿಲ್ಲವೇ ? ಬಹುರೂಪಿ ಸಂಘಪರಿವಾರದ ಅಥವಾ ಒಂದು ಸಮುದಾಯದ ಅಭಿವ್ಯಕ್ತಿಯ ವೇದಿಕೆ ಅಲ್ಲ ಎನ್ನುವ ಪರಿವೆ ನಿರ್ದೇಶಕರಿಗೆ ಇರಬೇಕಿತ್ತು.
“ ನಾವು ತಾಯಿಗೆ ನೀಡುವ ಗೌರವವನ್ನು ರಾಷ್ಟ್ರಕ್ಕೂ ನೀಡಬೇಕು,,,,, ವಿವಿಧ ದೇಶಗಳಲ್ಲಿ ಕಿರುಕುಳಕ್ಕೊಳಗಾದ ವಲಸೆ ಬಂದ ಎಲ್ಲರನ್ನೂ ತನ್ನೊಳಗೆ ಸೇರಿಸಿಕೊಂಡಿರುವ ದೇಶವಾಗಿ ಭಾರತ ಜಗತ್ತಿಗೆಲ್ಲವೂ ತಾಯಿ ಆಗಿದೆ,,,,” ಎಂದು ಹೇಳುತ್ತಲೇ “ ನಮ್ಮ ದೇಶದಲ್ಲಿ ತಾಯಿ ಕೇವಲ ಪ್ರೀತಿ ವಾತ್ಸಲ್ಯವನ್ನು ಕೊಟ್ಟು ಸುಮ್ಮನಾಗದೆ, ಅಗತ್ಯ ಬಿದ್ದಾಗ ಕೈಗೆ ಕತ್ತಿಯನ್ನು ಕೊಟ್ಟು ಯುದ್ಧ ಮಾಡಲೂ ಹೇಳಿದ್ದಾಳೆ,,,,, ರಾಷ್ಟ್ರದ ಬಗ್ಗೆ ಕೆಟ್ಟ ಮಾತು ಆಡಿದರೆ ಸಹಿಸಲು ಸಾಧ್ಯವಿಲ್ಲ ಎಂಬ ವಾತಾವರಣ ಸೃಷ್ಟಿಯಾಗಬೇಕಿದೆ ”, ಇವೇ ಮುಂತಾದ ಸಮಾರೋಪದ ಮಾತುಗಳ ಮೂಲಕ ಚಕ್ರವರ್ತಿ ಸೂಲಿಬೆಲೆ ಬಹುರೂಪಿಯ ತಾಯಿಯನ್ನು ವಿರೂಪಗೊಳಿಸಿ, ಸಮಾರೋಪದ ವೇದಿಕೆಯನ್ನು ತಮ್ಮ ಸಾಂಸ್ಕೃತಿಕ ರಾಜಕಾರಣದ ಭೂಮಿಕೆಯನ್ನಾಗಿ ಪರಿವರ್ತಿಸಿದ್ದಾರೆ. (ಈ ಕಾರಣಕ್ಕಾಗಿಯೇ ಅವರ ಆಯ್ಕೆಯನ್ನು ವಿರೋಧಿಸಲಾಗಿತ್ತು ಎನ್ನುವುದನ್ನು ಹೇಳಬೇಕಿಲ್ಲ). ಇದನ್ನು ರಂಜನೀಯವಾಗಿಸಲು ಯತ್ನಿಸಿರುವ ಹಿರೇಮಗಳೂರು ಕಣ್ಣನ್ ತಮ್ಮ ಹಿಜಾಬ್ ಕೇಂದ್ರಿತ ‘ ಅಶ್ಲೀಲ ಹಾಸ್ಯದ ’ ಮೂಲಕ ಪ್ರೇಕ್ಷಕರನ್ನು ನಗಿಸಿ, ಪ್ರತಿಯೊಂದು ಹೆಣ್ಣು ಮಗಳ ಆಂತರ್ಯದೊಳಗೂ ಇರಬಹುದಾದ ಅಮೂರ್ತ ಸ್ವರೂಪದ ತಾಯಿಗೆ ಅವಮಾನ ಮಾಡಿದ್ದಾರೆ.
ಜಲ, ಜಮೀನು, ಜನ ಮತ್ತು ಜಾನುವಾರುಗಳ ಮೂಲಕ ತಾಯಿಯನ್ನು ಕಾಣಲು ಬಯಸಿದ ಈ ಬಾರಿಯ ಬಹುರೂಪಿಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಕಾಣದೆ ಹೋದುದೇಕೆ ? ತಮ್ಮ ಅಡವಿ ತಾಯಿಯ ಮಡಿಲಿನಿಂದ ನಿರಂತರವಾಗಿ ಉಚ್ಚಾಟಿಸಲ್ಪಡುತ್ತಿರುವ ಕಾಡಿನ ಮಕ್ಕಳ ಆಕ್ರಂದನ ಮತ್ತು ಬರಿದಾಗುತ್ತಿರುವ ಆ ತಾಯಿಯ ಹಸಿರೊಡಲು ಕಾಣದಾದುದೇಕೆ ? ಜಲದೊಡಲಿನಲ್ಲಿ ತಾಯಿಯನ್ನು ಕಾಣಬೇಕಾದ ಸಾಂಸ್ಕೃøತಿಕ ಮನಸುಗಳಿಗೆ ಮತಶ್ರದ್ಧೆ ಮತ್ತು ನಂಬಿಕೆಗಳಿಗೆ ಬಲಿಯಾಗಿ ಮಲಿನವಾಗುತ್ತಿರುವ ಗಂಗೆ ಕಾವೇರಿ ತಾಯಿಯರ ಕಂಬನಿಯ ಧಾರೆ ಗೋಚರಿಸದಾದುದೇಕೆ ? ಜಾನುವಾರುಗಳಲ್ಲಿ (ಗೋವಿನಲ್ಲಿ ಮಾತ್ರ ಎಂದು ಹೇಳಬೇಕಿಲ್ಲ) ತಾಯಿಯನ್ನು ಕಾಣುವ ಸೂಕ್ಷ್ಮ ಹೃದಯಗಳಿಗೆ ಮನುಷ್ಯನನ್ನೂ ಸೇರಿದಂತೆ, ಪ್ರತಿಯೊಂದು ಚರಾಚರ ಜೀವಿಯ, ಒಡಲೊಳಗೆ ತಾಯಿಯ ಅಮೂರ್ತ ಪ್ರೀತಿ ಅಡಗಿರುತ್ತದೆ ಎಂದು ಅರ್ಥವಾಗದೆ ಹೋದುದೇಕೆ ?
ಹೀಗೆ ಅಮೂರ್ತಳಾಗಿ, ಅಮೂರ್ತತೆಯ ನೆಲೆಯಲ್ಲಿ ತನ್ನ ಮೂರ್ತ ಸ್ವರೂಪವನ್ನು ಕಳಚಿಕೊಂಡು, ರಂಗಭೂಮಿಯ ಮೇಲೆ ಸಂಕೋಲೆಗಳಿಂದ ಮುಕ್ತಳಾಗಿ ಕಾಣಬೇಕಾದ ‘ ತಾಯಿ ’ ಬಹುರೂಪಿಯ ಸಮಾರೋಪದಲ್ಲಿ ವಿರೂಪಗೊಂಡು ಸಾಂಸ್ಕೃತಿಕ ಸಂಕೋಲೆಯಲ್ಲಿ ಬಂಧಿತಳಾಗಿರುವುದು ಶತಮಾನದ ದುರಂತ.