ಸಂಘಟಿತ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡ 4 ವಿಕೆಟ್ ಗಳಿಂದ ಭಾರತ ವಿರುದ್ಧ ಜಯಭೇರಿ ಬಾರಿಸುವ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಶುಭಾರಂಭ ಮಾಡಿದೆ.
ಮೊಹಾಲಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 208 ರನ್ ಸಂಪಾದಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಆಸ್ಟ್ರೇಲಿಯಾ 19.2 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಮೂಲಕ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿತು.
ಆಸ್ಟ್ರೇಲಿಯಾ ತಂಡದ ಪರ ಕೆಮರೂನ್ ಗ್ರೀನ್ 30 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ 61 ರನ್ ಸಿಡಿಸಿದರು. ಕೊನೆಯಲ್ಲಿ ಮ್ಯಾಥ್ಯೂ ವೇಡ್ 21 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ ಅಜೇಯ 45 ರನ್ ಸಿಡಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಸ್ಟೀವನ್ ಸ್ಮಿತ್ (35), ಟಿಮ್ ಡೇವಿಡ್ (18) ಉಪಯುಕ್ತ ಕಾಣಿಕೆ ನೀಡಿದರು.
ಭಾರತದ ಪರ ಅಕ್ಸರ್ ಪಟೇಲ್ 3, ಉಮೇಶ್ ಯಾದವ್ 2 ಮತ್ತು ಯಜುರ್ವೆಂದ್ರ ಚಾಹಲ್ 1 ವಿಕೆಟ್ ಪಡೆದರು. ಆದರೆ ಭಾರತದ ಫೀಲ್ಡಿಂಗ್ ಅತ್ಯಂತ ಕಳಪೆಯಾಗಿದ್ದು, ಮೂರು ಕ್ಯಾಚ್ ಗಳನ್ನು ಕೈಬಿಟ್ಟಿದ್ದು ಭಾರತಕ್ಕೆ ದುಬಾರಿಯಾಯಿತು.

ಹಾರ್ದಿಕ್, ರಾಹುಲ್ ಅರ್ಧಶತಕ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತದ ಆರಂಭ ಚೆನ್ನಾಗಿರಲಿಲ್ಲ. ನಾಯಕ ರೋಹಿತ್ ಶರ್ಮ (11) ಮತ್ತು ವಿರಾಟ್ ಕೊಹ್ಲಿ (2) ಬೇಗನೇ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಯಾದ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಮೂರನೇ ವಿಎಕಟ್ ಗೆ 68 ರನ್ ಜೊತೆಯಾಟ ನಿಭಾಯಿಸಿದರು.
ರಾಹುಲ್ 35 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 55 ರನ್ ಸಿಡಿಸಿದರು. ಈ ಮೂಲಕ ಭರ್ಜರಿಯಾಗಿ ಫಾರ್ಮ್ ಗೆ ಮರಳಿದರು. ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 46 ರನ್ ಗಳಿಸಿದ್ದಾಗ ಔಟಾಗಿ 4 ರನ್ ಗಳಿಂದ ಅರ್ಧಶತಕ ವಂಚಿತರಾದರು.
ಕೊನೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಹಾರ್ದಿಕ್ ಪಾಂಡ್ಯ ರನ್ ಸುರಿಮಳೆ ಸುರಿಸಿದರು. ಹಾರ್ದಿಕ್ ಪಾಂಡ್ಯ 30 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್ ಸೇರಿದ ಅಜೇಯ 71 ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಆಸ್ಟ್ರೇಲಿಯಾ ಪರ ನಾಥನ್ ಇಲಿಯಾಸ್ 3 ಮತ್ತು ಜೋಷ್ ಹಾಜ್ಲೆವುಡ್ 2 ವಿಕೆಟ್ ಪಡೆದು ಗಮನ ಸೆಳೆದರು.