ಕೊಪ್ಪಳ: ನಾವು ಬಿಜೆಪಿ ಮತ ಹಾಕ್ತೇವಿ. ಕಾಂಗ್ರೆಸ್ ಗೆ ಹಾಕಲ್ಲ ಅಂದಿದ್ದಕ್ಕೆ ಹಲ್ಲೆ ನಡೆಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಕೊಪ್ಪಳ ತಾಲೂಕಿನ ಯಲಮಗೇರಿ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ದ್ಯಾಮಣ್ಣ ಬಾಲನಗೌಡರ ಹಾಗೂ ಕುಟುಂಬಸ್ಥರ ಮೇಲೆ ಸುಮಾರು 8ಕ್ಕೂ ಅಧಿಕ ಜನರಿಂದ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಘಟನೆಯಿಂದ ತೀರ್ವವಾಗಿ ಗಾಯಗೊಂಡಿರುವ ದ್ಯಾಮಣ್ಣರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ರಾತ್ರಿ ಗ್ರಾಮದಲ್ಲಿ ಕಾಂಗ್ರೆಸ್ ಪರವಾಗಿ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ಕಾರ್ಯಕರ್ತರು ದ್ಯಾಮಣ್ಣ ಎಂಬುವವರ ಮನೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ನಾವು ಕಾಂಗ್ರೆಸ್ ಗೆ ಮತ ಹಾಕುವುದಿಲ್ಲ. ಬಿಜೆಪಿಗೆ ಮತ ಹಾಕುತ್ತೇವೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ದ್ಯಾಮಣ್ಣ ಅವರ ಮಧ್ಯೆ ಜಗಳ ನಡೆದಿದೆ. ಇದರಿಂದ ಕೋಪಗೊಂಡು ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗವಿಸಿದ್ದಪ್ಪ, ಗಂಗಣ್ಣ, ನೀಲಪ್ಪ, ಬಸವರಾಜ್ ಸೇರಿದಂತೆ 8ಕ್ಕೂ ಅಧಿಕ ಜನ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಕೊಪ್ಪಳ ಗ್ರಾಮೀಣ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.