ಇಡೀ ಸಮಾಜದ ಕೈಗಳಿಗೆ ಮುಕ್ತವಾಗಿ ಆಯುಧಗಳನ್ನು ನೀಡಿದ್ದೇವೆ ಎನಿಸುತ್ತಿದೆ. ಹಲ್ಲೆ, ಥಳಿತ, ಆಕ್ರಮಣ, ಗುಂಪು ಥಳಿತ, ಕೊಲೆ, ಅತ್ಯಾಚಾರ, ಅಪಹರಣ ಇವೆಲ್ಲವೂ ನಮ್ಮ ನಡುವಿನ ಸ್ವಾಭಾವಿಕ ನಡವಳಿಕೆ ಆಗಿಹೋಗಿದೆ. ಕೊಲ್ಲಲು ಬಲವಾದ ಕಾರಣವೇ ಇರಬೇಕೆಂದಿಲ್ಲ ಅಸಮಾಧಾನದ ಕಿಡಿಯೊಂದಿದ್ದರೆ ಸಾಕು. ಕೈಯ್ಯಲ್ಲಿ ಬಂದೂಕು, ಚಾಕು ಇದ್ದರೆ ಸಾಕು. ಅಸಮಾಧಾನಗೊಂಡವರು ಹಲ್ಲೆ ನಡೆಸಲಿ, ಹತ್ಯೆ ಮಾಡಲಿ ಸಮರ್ಥಿಸಿಕೊಳ್ಳುವ ಒಂದು ವರ್ಗವನ್ನೇ ಸೃಷ್ಟಿಸಿಬಿಟ್ಟಿದ್ದೇವೆ. ಅಪ್ಪನಿಂದ ಮಕ್ಕಳು, ಸೋದರನಿಂದ ಸೋದರಿ, ತಾಯಿಯಿಂದ ಮಗು, ಗೆಳೆಯರಿಂದ ಗೆಳೆಯರೇ ಹತ್ಯೆಗೀಡಾಗುವುದು ಇತ್ತೀಚಿನ ದಿನಗಳಲ್ಲಿ ವಿಶೇಷ ಎನಿಸುವುದೇ ಇಲ್ಲ. ಏಕೆಂದರೆ ಯಾವುದೋ ಒಂದು ಕಾರಣಕ್ಕೆ ಈ ಕೊಲೆಗಳು ನಡೆಯುತ್ತಲೇ ಇವೆ.
ಪ್ರೇಮ ವಿವಾಹವೋ, ಅಂತರ್ಜಾತಿ ವಿವಾಹವೋ, ಧಕ್ಕೆಗೊಳಗಾದ ಭಾವನೆಗಳೋ, ಅಪಾಯಕ್ಕೊಳಗಾದ ಅಸ್ಮಿತೆಗಳೋ , ಹೀಗೆ ಅತೃಪ್ತಿ, ಅಸಮಾಧಾನಕ್ಕೆ ಯಾವುದೋ ಒಂದು ಕಾರಣ ಇದ್ದರೆ ಸಾಕು. ಅದೇ ಆಕ್ರೋಶವಾಗಿ, ಮಾನವ ಜೀವ ನಿಕೃಷ್ಟವಾಗಿಬಿಡುತ್ತದೆ. ಇದನ್ನೇ ಆಂಗ್ಲ ಭಾಷೆಯಲ್ಲಿ Fratricide ಎನ್ನಲಾಗುತ್ತದೆ. ಭ್ರಾತೃಘಾತುಕತೆ. ಒಂದು ಸಮಾಜ ಎಂದರೆ ಒಂದು ಕುಟುಂಬದಂತೆ, ಇಲ್ಲಿ ಬಾಳುವವರೆಲ್ಲರೂ ಸೋದರ ಭಾವದೊಂದಿಗೆ ಬದುಕಬೇಕು ಎಂದು ಆಶಿಸಬೇಕಾದ ಹೊತ್ತಿನಲ್ಲಿ , ನಮ್ಮ ಸುತ್ತ ನಡೆಯುತ್ತಿರುವ ಕೊಲೆಗಳು ಹಾಗೆಯೇ ಕಾಣುತ್ತವೆ. ಈ ಪ್ರವೃತ್ತಿಯನ್ನು ನಮ್ಮದೇ ಆದ ಕಾರಣಗಳಿಗಾಗಿ, ಅಸ್ಮಿತೆಗಳಿಗಾಗಿ, ಮಾತು-ಮೌನಗಳ ಮೂಲಕ ಅನುಮೋದಿಸುತ್ತಲೇ ಬಂದಿದ್ದೇವೆ. ಕ್ರಿಯೆ ಮತ್ತು ಪ್ರತಿಕ್ರಿಯೆಯ ನಡುವೆ ಇರುವ ಸೂಕ್ಷ್ಮ ತಂತು, ಮನುಜ ಜೀವದ ಮೌಲ್ಯವನ್ನರಿತು ಬೆಸೆಯುವ ಸೇತುವೆಯಾಗಬೇಕಲ್ಲವೇ ? ಹಾಗಾಗುತ್ತಿಲ್ಲ ಜೀವ ಭಂಜಕ ಅಸ್ತ್ರವಾಗುತ್ತಿದೆ.
ಅಸಮಾಧಾನಕ್ಕೊಳಗಾದ ಅತೃಪ್ತ-ಹತಾಶ ಮನಸ್ಸುಗಳು ಆಕ್ರೋಶಕ್ಕೊಳಗಾಗುವುದು ಮಾನವ ಸಹಜ ಗುಣ. ಸಮಾಜದಲ್ಲಿ, ವಿಶೇಷವಾಗಿ ಯುವ ಮನಸುಗಳಲ್ಲಿ, ಈ ಆಕ್ರೋಶ , ಹತಾಶೆ, ಜಿಗುಪ್ಸೆ, ಕ್ರೋಧ ಇವುಗಳನ್ನು ನಿಯಂತ್ರಿಸುವಂತಹ ಮಾನವೀಯ ಪರಿಸರವನ್ನು ನಿರ್ಮಿಸುವುದು ನಾಗರಿಕತೆಯನ್ನೊಪ್ಪಿಕೊಂಡ ಯಾವುದೇ ಸಮಾಜದ ಆದ್ಯತೆಯಾಗಿರಬೇಕು. ಈ ಪರಿಸರ ನಿರ್ಮಾಣಕ್ಕೆ ವಾರಸುದಾರರು ಯಾರಾಗಬೇಕು ? ಸಮಾಜದ ಹಿರಿಯ ನಾಗರಿಕರೇ, ಸಾಹಿತಿ ಕಲಾವಿದರೇ, ಶಿಕ್ಷಣ ಕ್ಷೇತ್ರದ ಪರಿಚಾರಕರೇ, ಸುಶಿಕ್ಷಿತ ಜನತೆಯೇ, ಧರ್ಮ ಪ್ರಚಾರಕರೇ, ಮತಧರ್ಮ ಪರಿಚಾರಕರೇ , ಮಾಧ್ಯಮಗಳೇ( !!! )ಅಥವಾ ರಾಜಕಾರಣಿಗಳೇ ? ಈ ಎಲ್ಲರ ನಡುವೆಯೂ ಯಾವುದೋ ಒಂದು ಅಸ್ಮಿತೆಯ ಸೈಜುಗಲ್ಲು ತನ್ನ ಇರುವಿಕೆಯನ್ನು ಪ್ರಚುರಪಡಿಸುತ್ತಲೇ ಇದೆ. ಹಂತಕರಿಗಿಂತಲೂ ಹೆಚ್ಚಾಗಿ ಹತ್ಯೆಗೊಳಗಾದವರು ಪ್ರಶ್ನಾರ್ಹರಾಗುತ್ತಿದ್ದಾರೆ. ಹಲ್ಲೆಕೋರರು, ಹಂತಕರು ಪ್ರಶ್ನಾತೀತರಾಗದಿದ್ದರೂ ” ಅಸಮಾಧಾನದ ” ಚಾವಡಿಯಲ್ಲಿ ವಿಶ್ರಮಿಸಿಬಿಡುತ್ತಾರೆ. ಏಕೆಂದರೆ “ದಾಳಿ” ಗಳನ್ನು ಸಮರ್ಥಿಸುವ ಕಾರಣಗಳನ್ನು ನಿರಂತರವಾಗಿ ಉತ್ಪಾದಿಸಲಾಗುತ್ತಿದೆ.
ಈ ಎಲ್ಲ ಆಯಾಮಗಳಲ್ಲೂ ಗಮನವಿರಿಸುತ್ತಾ ಸಮಾಜದಲ್ಲಿ ಮನುಜ ಜೀವಿಗಳ ಮತ್ತು ಚರಾಚರ ಜೀವಿಗಳ ರಕ್ಷಣೆಗೆ ಪೂರಕವಾದ ಸಮನ್ವಯದ-ಸೌಹಾರ್ದತೆಯ-ಮಾನವೀಯತೆಯ ವಾತಾವರಣವನ್ನು ನಿರ್ಮಿಸಬೇಕಾದ ಜವಾಬ್ದಾರಿ ಸಮಾಜದ ಮೇಲಿರುವಷ್ಟೇ ಪ್ರಜಾಸತ್ತಾತ್ಮಕ ಸರ್ಕಾರದ ಮೇಲೆ ಸಹ ಇರುತ್ತದೆ. ನಾವು ಎಲ್ಲಿ ಎಡವುತ್ತಿದ್ದೇವೆ ಎಂದು ಪ್ರಜ್ಞಾಪೂರ್ವಕವಾಗಿ ಆಲೋಚನೆ ಮಾಡುವ ವಿವೇಕ ಮತ್ತು ವಿವೇಚನೆಯನ್ನೂ ಕಳೆದುಕೊಂಡಿದ್ದೇವೆ. ಏಕೆಂದರೆ ಪ್ರತಿ ಘಟನೆ ನಡೆದಾಗಲೂ ” ಏಕೆ” ಎನ್ನುವುದಕ್ಕಿಂತಲೂ “ಯಾರು” ಎನ್ನುವುದೇ ಮುನ್ನೆಲೆಗೆ ಬರುತ್ತದೆ. ಮತ್ತದೇ ಅಸ್ಮಿತೆಗಳ ಸೈಜುಗಲ್ಲುಗಳು ಆಲಿಕಲ್ಲಿನಂತೆ ಉದುರಿ ನಮ್ಮನ್ನು ಪ್ರಜ್ಞಾಶೂನ್ಯರನ್ನಾಗಿ ಮಾಡಿಬಿಡುತ್ತದೆ.
ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿ ಹಾಡಹಗಲಿನಲ್ಲೇ, ಪ್ರತಿಷ್ಠಿತ ಹೋಟೆಲಿನ ಹೊರ ಆವರಣದಲ್ಲಿ, ಏಳೆಂಟು ಜನರ ಸಮ್ಮುಖದಲ್ಲಿ ಹತ್ಯೆಗೀಡಾಗುವುದು ಏನನ್ನು ಸೂಚಿಸುತ್ತದೆ ? ಅವರ ವೃತ್ತಿ ಮತ್ತು ಅನುಸರಿಸಿದ ವ್ಯಾಪಾರದ ಮಾರ್ಗ ನಮಗೆ ಅಪ್ರಸ್ತುತ. ಅವರ ಹತ್ಯೆಗೆ ಏನೇ ವ್ಯಾವಹಾರಿಕ ಕಾರಣಗಳಿರಬಹುದು. ವಾಣಿಜ್ಯ ಲೋಕವೇ ಮೋಸ ವಂಚನೆಗಳ ಕೂಪ. ಅದರಲ್ಲಿ ವಾಸ್ತು, ಜ್ಯೋತಿಷ್ಯ ಇತ್ಯಾದಿಗಳೂ ಒಂದು. ಅವರ ವೃತ್ತಿಯೇ ಮೌಢ್ಯ ಬಿತ್ತನೆಯನ್ನು ಅವಲಂಬಿಸಿರುವಂತಹುದು. ಆದರೆ ಅದಕ್ಕೆ ಸಾವು ಉತ್ತರವಲ್ಲ. ಅವರಿಗೂ ಬದುಕುವ ಹಕ್ಕಿದೆ. ಅವರಿಂದ ವಂಚನೆಗೊಳಗಾದವರೇ ಇದ್ದರೂ ನಮ್ಮಲ್ಲೊಂದು ನ್ಯಾಯಾಂಗ ವ್ಯವಸ್ಥೆ ಇದೆಯಲ್ಲವೇ ? ವ್ಯಾಪಾರ ವಹಿವಾಟಿನಲ್ಲಿ ಅನ್ಯಾಯಕ್ಕೊಳಗಾದವರೆಲ್ಲರೂ ಹಂತಕರಾಗಲು ಸಾಧ್ಯವೇ ? ಅಥವಾ ಅನ್ಯಾಯ ವಂಚನೆ ಮಾಡುವವರೆಲ್ಲರೂ ದಾಳಿಗೊಳಗಾಗಲು ಸಾಧ್ಯವೇ ? ಹಾಗಾಗುವುದು ತರವೇ ?
ಇಲ್ಲಿ ಮೂಲ ಪ್ರಶ್ನೆ ಉದ್ಭವಿಸುತ್ತದೆ. ಹತಾಶೆ, ಅಸಮಾಧಾನ, ಅಸಂತೃಪ್ತಿ ಮತ್ತು ಭಾವನಾತ್ಮಕ ಧಕ್ಕೆ ಇವೆಲ್ಲಕ್ಕೂ ಹಿಂಸೆಯೇ ಪ್ರತ್ಯುತ್ತರವಾಗಬೇಕೇ ? ನಾವು ಒಂದು ಪ್ರಜ್ಞಾವಂತ ಸಮಾಜವಾಗಿ ಎಡವುತ್ತಿದ್ದೇವೆ ಎನಿಸುವುದಿಲ್ಲವೇ ? ವ್ಯಕ್ತಿಗತ-ತಾತ್ವಿಕ ಕಾರಣಗಳಿಗಾಗಿ ಹಿಂಸೆಯನ್ನು ಅನುಮೋದಿಸುವ ಮೂಲಕ ಸಮಾಜ ಘೋರ ಅಪರಾಧ ಮಾಡುತ್ತಿದೆ ಎನಿಸುವುದಿಲ್ಲವೇ ? ಕೂಡುಬಾಳ್ವೆಯ ಸಂದೇಶವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪಿಸುವುದರಲ್ಲಿ ನಾವು ವಿಫಲರಾಗಿದ್ದೇವೆ ಎನಿಸುವುದಿಲ್ಲವೇ ? ಇದಕ್ಕೆಲ್ಲಾ ಯಾರು ಹೊಣೆ ? ಈ ಜವಾಬ್ದಾರಿಯನ್ನು ಯಾರು ಹೊರಬೇಕು ? ಸರ್ಕಾರಗಳಿಗೆ ಇದು ಕೇವಲ ಕಾನೂನು ಪ್ರಶ್ನೆಯಾಗಿ ಉಳಿಯುತ್ತದೆ.
ಇಂದು ಪ್ರತಿಯೊಬ್ಬರೂ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಿದೆ. ಅಮಾಯಕರ ಹತ್ಯೆ,-ಅತ್ಯಾಚಾರ-ದೌರ್ಜನ್ಯಗಳು ನಿತ್ಯಸುದ್ದಿಯಾಗುತ್ತಿರುವ ವಿಷಮ ಸನ್ನಿವೇಶದಲ್ಲಿ ನಾವು ನಾಗರಿಕತೆಯ ಹೊದಿಕೆಯಡಿ ವಿರಮಿಸುತ್ತಿದ್ದೇವೆ ಎನಿಸುತ್ತದೆ. ಸಮಾಜ ಸುಧಾರಕರ ಹೆಜ್ಜೆಗುರುತುಗಳನ್ನೇ ಅಳಿಸಿಹಾಕುತ್ತಿದ್ದೇವೆ ಎನಿಸುತ್ತದೆ.
ಸಮಾಜದಲ್ಲಿ ಹಿಂಸೆ-ಪ್ರತಿಹಿಂಸೆಯ ಮಾರ್ಗಗಳು ಬೌದ್ಧಿಕ ನೆಲೆಯಲ್ಲಿ ಹಿಂಸಾತ್ಮಕ ಮನಸುಗಳನ್ನು ಸೃಷ್ಟಿಸುತ್ತವೆ. ಆಯುಧ ಹಿಡಿದ ವ್ಯಕ್ತಿಯ ಹಿಂದೆ ಒಂದು ಸಾಮಾಜಿಕ ವ್ಯವಸ್ಥೆ ಇದ್ದೇ ಇರುತ್ತದೆ. ಆ ಸಾಮಾಜಿಕ ವ್ಯವಸ್ಥೆಯಲ್ಲಿ ಮನುಜ ಪ್ರೀತಿ, ಸಂಯಮ, ಸೌಜನ್ಯ, ಸಂವೇದನೆಗಳನ್ನು ಬೆಳೆಸುವುದು ನಮ್ಮ ಆದ್ಯತೆಯಾಗಬೇಕಿದೆ. ಮೊದಲು ಮಾನವರಾಗೋಣ , ವಿಶ್ವಮಾನವ ನಮ್ಮಿಂದ ಬಹುದೂರದಲ್ಲಿದ್ದಾನೆ, ದಿಗಂತದಾಚೆ.