ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ರಾಜ್ಯದ ಜನತೆಗೆ ಅಕ್ಕಿ ವಿತರಣೆ ವಿಚಾರವಾದಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಗಳು ಮುಂದುವರಿದಿದೆ. ಮೋದಿ ಸರ್ಕಾರವು ರಾಜ್ಯದ ಜನತೆಯ ಮೇಲೆ ಪ್ರತೀಕಾರ ತೀರಿಸಿಕೊಳ್ತಿದೆ ಅಂತಾ ಕಾಂಗ್ರೆಸ್ ಗುಡುಗಿದೆ. ಅಲ್ಲದೇ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಜೂನ್ 20ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಈಗಾಗಲೇ ನಿರ್ಧರಿಸಿದೆ.

ರಾಜ್ಯದಲ್ಲಿ ಪಕ್ಷದ ಸೋಲಿನಿಂದಾಗಿ ಜನರಿಗೆ ಅನ್ನ ನಿರಾಕರಿಸುವಷ್ಟರ ಮಟ್ಟಿಗೆ ಬಿಜೆಪಿ ಹಾಗೂ ಪ್ರಧಾನಿ ಮೋದಿ ಕುರುಡಾಗಿದ್ದಾರಾ?ಬಿಜೆಪಿ ಹಾಗು ಮೋದಿ ಸರ್ಕಾರದ ಬೆಂಬಲವಿರುವ ದೊಡ್ಡ ವ್ಯಾಪಾರಿಗಳ ಕೂಟ ಬಡವರ ಅಕ್ಕಿಯನ್ನು ಕಸಿಯಲು ಮುಂದಾಗಿದೆಯೇ?ಬಡವರ ವಿರೋಧಿಯಾಗಿರುವ ಈ ನೀತಿ ಬಗ್ಗೆ ಬಿಜೆಪಿಯ ಬಿ ಟೀಮ್ ಆಗಿರುವ ಜೆಡಿಎಸ್ ಯಾಕೆ ಮೌನವಾಗಿದೆ? ಎಂದು ಕಾಂಗ್ರೆಸ್ ಪ್ರಶ್ನೆಗಳ ಸುರಮಳೆಯನ್ನೇಗೈದಿದೆ.
ಕರ್ನಾಟಕ ರಾಜ್ಯದ ಸಂಸದರು, ಕೇಂದ್ರದ ಮಂತ್ರಿಗಳು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಕಂಡು ಮೌನವಾಗಿರುವುದೇಕೆ? ಇಷ್ಟಾದರೂ ಅವರು ಸಂಸದ ಹಾಗೂ ಸಚಿವ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರೇ?ಅಕ್ಕಿ ನಿರಾಕರಿಸಿರುವ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ಬಾಯಿಗೆ ಬೀಗ ಹಾಕಿಕೊಂಡಿರುವುದು ಏಕೆ? ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಕೇಳಿದೆ.
ಕಾಂಗ್ರೆಸ್ ನಾಯಕರ ಆರೋಪಕ್ಕೆ ಕಮಲ ಕಲಿಗಳು ತಿರುಗೇಟು ನೀಡಿದ್ದಾರೆ. ಅನ್ನಭಾಗ್ಯ ಯೋಜನೆಯನ್ನು ಘೋಷಣೆ ಮಾಡಿರುವ ಕಾಂಗ್ರೆಸ್ ಅದಕ್ಕೆ ಬೇಕಾದ ಅಗತ್ಯ ಪ್ರಮಾಣದ ಅಕ್ಕಿ ಸಂಗ್ರಹ ಮಾಡುವಲ್ಲಿ ವಿಫಲವಾಗಿದೆ. ತನ್ನ ವೈಫಲ್ಯಗಳನ್ನು ಮುಚ್ಚಿಡೋಕೆ ಪ್ರಧಾನಿ ಹಾಗೂ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದೆ ಎಂದು ಟಾಂಗ್ ನೀಡಿದೆ.
ಅನ್ನ ಭಾಗ್ಯ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅಡ್ಡಿ ಪಡಿಸುತ್ತಿದೆ ಎಂದು ರಾಜ್ಯದ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ತಿರುಗೇಟು ನೀಡಿರುವ ಬಿಜೆಪಿ. ಕಾಂಗ್ರೆಸ್ ನೀಡಿರುವ ಭರವಸೆಯಂತೆ ಜುಲೈ 1ರಿಂದ 10 ಕೆ ಜಿ ಉಚಿತ ಅಕ್ಕಿ ನೀಡದಿದ್ದರೆ ಹೋರಾಟ ಆರಂಭಿಸುವುದಾಗಿ ಕೇಸರಿ ಕಲಿಗಳು ಎಚ್ಚರಿಕೆ ನೀಡಿದ್ದಾರೆ.