ಕನ್ನಡ ಚಿತ್ರರಂಗದ ಹಿರಿಯ ನಟ, ರೆಬಲ್ ಸ್ಟಾರ್ ಅಂಬರೀಶ್ ಅವರ ಹೆಸರನ್ನ ಇಂದು ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಗೆ ನಾಮಕರಣ ಮಾಡಲಾಯ್ತು. ಶಿವಾಜಿನಗರ ಕ್ಷೇತ್ರಕ್ಕೆ ಒಳಪಡುವ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರನ್ನು ಇಡಲಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರು ರೇಸ್ ಕೋರ್ಸ್ ರಸ್ತೆಯನ್ನ ಉದ್ಘಾಟನೆ ಮಾಡಿದ್ರು. ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ರಾಘವೇಂದ್ರ ರಾಜ್‌ಕುಮಾರ್, ಸುಂದರ್‌ರಾಜ್, ರಾಕ್‌ಲೈನ್ ವೆಂಕಟೇಶ್, ಭಾಮಾ ಹರೀಶ್ ಭಾಗಿಯಾಗಿದ್ರು.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು ಇಡ್ಬೇಕು ಅನ್ನೋದು ಅಭಿಮಾನಿಗಳ ಬೇಡಿಕೆ ಆಗಿತ್ತು. ಇಂದು ಅವರ ಆಸೆಯಂತೆ ಅಂಬಿ ಅಭಿಮಾನಿಗಳ ಸಮ್ಮುಖದಲ್ಲಿ ರೇಸ್ ಕೋರ್ಸ್ ರಸ್ತೆಗೆ ರೆಬಲ್ ಸ್ಟಾರ್ ಡಾ.ಎಂ. ಹೆಚ್. ಅಂಬರೀಶ್ ರಸ್ತೆ ಎಂದು ನಾಮಕರಣ ಮಾಡಲಾಯ್ತು. ರಸ್ತೆ ಉದ್ಘಾಟನೆ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ. ಅಂಬರೀಶ್ ಜೊತೆಗಿನ ನೆನಪುಗಳನ್ನ ಮೆಲುಕು ಹಾಕಿದ್ರು. ಹಾಗೆಯೇ ಚಿತ್ರರಂಗಕ್ಕೆ ಮತ್ತು ಕರುನಾಡಿಗೆ ಅಂಬಿ ನೀಡಿದ ಕೊಡುಗೆ ಬಗ್ಗೆಯೂ ಮಾತನಾಡಿದ್ರು. ಕಾರ್ಯಕ್ರಮಕ್ಕೆ ಅಂಬಿ ಕುಟುಂಬ ಹಾಗೂ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಸಾಕ್ಷಿಯಾಗಿದ್ರು
