5 ವರ್ಷಗಳಾಚೆ ದೇಶಕ್ಕೇ ಸಂದೇಶ ರವಾನಿಸಲಿದೆ ‘ಕೇರಳ ಮಾದರಿ’ಯ ಈ ನೂತನ ಸಚಿವ ಸಂಪುಟ!

1977ರ ಬಳಿಕ, ಅಂದರೆ ಸುಮಾರು ನಾಲ್ಕೂವರೆ ದಶಕಗಳ ನಂತರ ಕೇರಳದಲ್ಲಿ ಆಡಳಿತ ಪಕ್ಷ ಮತ್ತೆ ಅಧಿಕಾರಕ್ಕೆ ಏರಿದೆ. ಅದೂ ಪ್ರಚಂಡ ಬಹುಮತದೊಂದಿಗೆ. ಮುಂದುವರಿದ ಸರಕಾರ (ಥುಡಾರ್ ಭರಣಂ) ಎಂಬುದು ಈ ಬಾರಿಯ ಚುನಾವಣೆಯಲ್ಲಿ ಎಲ್.ಡಿ.ಎಫ್.ನ ಘೋಷವಾಕ್ಯವಾಗಿತ್ತು. ಮತದಾರರು ಈ ಘೋಷವಾಕ್ಯಕ್ಕೆ ಪ್ರಚಂಡವಾಗಿ ಮುದ್ರೆ ಒತ್ತಿ ಹಿಂದಿನ ಸರಕಾರವನ್ನೇ ಮುಂದುವರಿಸಿದರು. ಆದರೆ ಸಚಿವ ಸಂಪುಟ ಮುಂದುವರಿಯಲಿಲ್ಲ.
ಚುನಾವಣೆಯ ಫಲಿತಾಂಶ ಬಂದ ಬಳಿಕ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಸಂಪುಟದಲ್ಲಿ ಹಳಬರು ಯಾರೂ ಮುಂದುವರಿದಿಲ್ಲ. ಸಿಪಿಎಂ ನಾಯಕರ ಪೈಕಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತ್ರ ಪ್ರಮಾಣ ವಚನ ಸ್ವೀಕರಿಸಿದ ಏಕೈಕ ಹಳಬರು. ಉಳಿದಂತೆ 11 ಮಂದಿ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಅವರೆಲ್ಲರಿಗೂ ಸಚಿವ ಪದವಿಗೇರುವ ಮೊದಲ ಅವಕಾಶ ದೊರೆತಿದೆ. ಆದರೆ ಆ ಪೈಕಿ ಹೊಸ ಸಚಿವರಲ್ಲಿ ದಲಿತ ನಾಯಕ ಕೆ.ರಾಧಾಕೃಷ್ಣನ್ ಅವರು ಹಿಂದಿನ ಸರಕಾರದಲ್ಲಿ ಸ್ಪೀಕರ್ ಆಗಿದ್ದರು. ಅವರಿಗೂ ಮಂತ್ರಿ ಪದವಿ ಹೊಸತು.
ಪಶ್ಚಿಮ ಬಂಗಾಳ, ತ್ರಿಪುರಗಳಲ್ಲಿ ಅಧಿಕಾರ ಕಳೆದುಕೊಂಡ ನಂತರ ಎಡ ಪಕ್ಷಗಳ ಮುಂಚೂಣಿಯಲ್ಲಿರುವ ಸಿಪಿಎಂ, ಆ ಎರಡು ರಾಜ್ಯಗಳಿಂದ ಕಲಿತ ಪಾಠವನ್ನು ಕೇರಳದಲ್ಲಿ ಪ್ರಯೋಗಿಸಲು ನಿರ್ಧರಿಸಿದೆ. ಪಕ್ಷಕ್ಕಿಂತಲೂ ಹೆಚ್ಚಾಗಿ ‘ಸುಪ್ರೀಂ ಪವರ್’ ಆಗಿ ಬೆಳೆದಿರುವ ಸಿಎಂ ಪಿಣರಾಯಿ ವಿಜಯನ್ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಹಿಂದಿನ ಸಂಪುಟದಲ್ಲಿ ಉತ್ತಮ ನಿರ್ವಹಣೆ ಮೂಲಕ ದೇಶ, ವಿದೇಶದಲ್ಲಿ ಖ್ಯಾತಿ ಗಳಿಸಿದ ಸಚಿವರನ್ನೂ ಕೈಬಿಟ್ಟು ಅವರ ಜಾಗಕ್ಕೆ ಅಷ್ಟೇ ‘ಸಮರ್ಥ’ರು ಎನ್ನಲಾಗುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಿದ್ದಾರೆ.


ಟೀಚರ್ ಜಾಗಕ್ಕೆ ಬಂದರು ಮಾಜಿ ಪತ್ರಕರ್ತೆ:
ಕೇರಳವನ್ನು ಮೂರು ವರ್ಷಗಳ ಹಿಂದೆ ಆತಂಕದಂಚಿಗೆ ದೂಡಿದ್ದ ನಿಫಾ ವೈರಸ್, ಬಳಿಕ ಆಕ್ರಮಣ ಮಾಡಿದ ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ವಿಪರೀತ ಪರಿಸ್ಥಿತಿಯಲ್ಲಿ ಆರೋಗ್ಯ ಕ್ಷೇತ್ರವನ್ನು ಮುನ್ನಡೆಸಿ, ದೇಶ, ವಿದೇಶಗಳ ಮಾಧ್ಯಮಗಳು, ನಾಯಕರು, ದೇಶ ಪ್ರಧಾನಿ ನರೇಂದ್ರ ಮೋದಿ ಸಹಿತ ಪಕ್ಷಾತೀತವಾಗಿ ಭೇಷ್ ಅನ್ನಿಸಿಕೊಂಡಿದ್ದ ಶೈಲಜಾ ಟೀಚರ್ ಅಲಿಯಾಸ್ ಕೆ.ಕೆ. ಶೈಲಜಾ ಅವರ ಜಾಗಕ್ಕೆ ಮಾಜಿ ಪತ್ರಕರ್ತೆ ವೀಣಾ ಜಾರ್ಜ್ ಅವರಿಗೆ ಅವಕಾಶ ನೀಡಲಾಗಿದೆ.

ವೀಣಾ ಜಾರ್ಜ್


ರಾಜಕೀಯಕ್ಕೆ ಕಾಲಿಡುವ ಮುನ್ನ, ಅಂದರೆ 2015ರಲ್ಲಿ ‘ಟಿವಿ ನ್ಯೂ’ ಚಾನೆಲ್ ನ ಕಾರ್ಯನಿರ್ವಾಹಕ ಸಂಪಾದಕಿಯಾಗುವ ಮೂಲಕ, ಆ ಸ್ಥಾನಕ್ಕೆ ಏರಿದ ಕೇರಳದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದ ವೀಣಾ ಜಾರ್ಜ್, ಈಗ ಆ ರಾಜ್ಯದ ಆರೋಗ್ಯ ಸಚಿವೆಯಾಗಿ ಅಧಿಕಾರದ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರಿಗೂ ಶೈಲಜಾ ಟೀಚರ್ ಅವರ ಹಾಗೆಯೇ ಕೇರಳದಲ್ಲಿನ ಆರೋಗ್ಯ ಪರಿಸ್ಥಿತಿಯನ್ನು ನಿರ್ವಹಿಸುವ ತಾಕತ್ತಿದೆ ಎನ್ನುವುದು ಅವರ ಅತ್ಮೀಯರ ಅಭಿಮತ.


ಯಾವುದೇ ಒತ್ತಡಕ್ಕೆ ಮಣಿಯದ ಸರಕಾರ, ಪಕ್ಷ:
ಹಾಗೆ ನೋಡಿದರೆ, ಕೆ.ಕೆ. ಶೈಲಜಾ ಅವರಿಗೆ ನೂತನ ಸಂಪುಟದಲ್ಲಿ ಜಾಗ ಕೊಡದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ರಂಪಾಟವೇ ನಡೆದಿದೆ. ಕೊರೋನಾದೊಂದಿಗಿನ ಕದನ ಇನ್ನೂ ಮುಗಿದಿಲ್ಲ. ಹೀಗಾಗಿ ದೇಶಕ್ಕೇ ಮಾದರಿಯಾಗಿ ಕೆಲಸ ಮಾಡಿದ್ದ ಅವರನ್ನೇ ಆರೋಗ್ಯ ಸಚಿವರಾಗಿ ಮುಂದುವರಿಸುವಂತೆ ಪಕ್ಷಾತೀತವಾಗಿ ಜನರು ಒತ್ತಡ ಹೇರಲಾರಂಭಿಸಿದ್ದರೂ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಾಗಲಿ ಸಿಎಪಿಂ ಪಕ್ಷದ ರಾಜ್ಯ ಸಮಿತಿಯ ಪ್ರಭಾರಿ ಕಾರ್ಯದರ್ಶಿ ಎ.ವಿಜಯರಾಘವನ್ ಅವರಾಗಲಿ ಅದಕ್ಕೆ ಮಣಿದಿಲ್ಲ. ಈ ಸಂಬಂಧ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ್ದ ಎ.ವಿಜಯರಾಘವನ್, ಶೈಲಜಾ ಅವರನ್ನು ಮತ್ತೆ ಸಚಿವರಾಗಿಸಲು ಸಾಧ್ಯವೇ ಇಲ್ಲ. ಸಚಿವ ಸಂಪುಟಕ್ಕೆ ಹೊಸ ಮುಖಗಳನ್ನು ತರಲು ಪಕ್ಷವು ಸಂಘಟನಾತ್ಮಕ ಹಾಗೂ ರಾಜಕೀಯ ನಿರ್ಧಾರವನ್ನು ಕೈಗೊಂಡಾಗಿದೆ ಎಂದು ಸ್ಪಷ್ಟಪಡಿಸಿದ್ದರು.
ಚುನಾವಣೆಯಲ್ಲಿನ ಗೆಲುವು ಶೈಲಜಾ ಅವರ ಗೆಲುವಲ್ಲ. ಅವರು ಅತ್ಯುತ್ತಮ ಸಚಿವೆಯಾಗಿದ್ದು ಜನರ ಸಮೂಹದ ಪ್ರಯತ್ನಗಳಿಂದಾಗಿ. ಇ.ಪಿ.ಜಯರಾಜನ್, ಟಿ.ಪಿ. ರಾಮಕೃಷ್ಣನ್, ಐಸಾಕ್ಅವರೂ ಕೂಡ ಕೇರಳದ ಅತ್ಯುತ್ತಮ ಮಂತ್ರಿಗಳೇ ಆಗಿದ್ದರು. ಶೈಲಜಾ ಅವರು 2016ರಲ್ಲಿ ಸಂಪುಟಕ್ಕೆ ಹೊಸ ಮುಖವಾಗಿದ್ದರು. ವ್ಯಕ್ತಿಗಳನ್ನು ಉತ್ತಮ ಸಚಿವರನ್ನಾಗಿ ಮಾಡುವುದು ಪಕ್ಷ. ವ್ಯಕ್ತಿಗಳು ಕೇವಲ ಪಕ್ಷದ ಪ್ರತಿನಿಧಿಗಳು ಮಾತ್ರ ಎನ್ನುವ ಮೂಲಕ ಶೈಲಜಾ ಅವರಿಗೆ ಸಂಪುಟದಿಂದ ನೀಡಲಾದ ಗೇಟ್ ಪಾಸ್ ಅನ್ನು ಸಮರ್ಥಿಸಿದ್ದರು. ಮಾತ್ರವಲ್ಲ, ಶೈಲಜಾ ಅವರನ್ನು ಮತ್ತೆ ತರುವ ಪ್ರಯತ್ನಗಳಿಗಾಗಿ ನಡೆಯುತ್ತಿರುವ ಚಳವಳಿ ತನ್ನ ಗಮನಕ್ಕೆ ಬಂದಿಲ್ಲ ಎಂದು ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುವ ಮೂಲಕ ಸ್ಪಷ್ಟ ಸಂದೇಶವನ್ನು ಕಳಿಸಿದ್ದರು.

ಹೊಸ ಮುಖಗಳೊಂದಿಗೆ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಸಿಎಂ:
ರಾಜಕೀಯ ಕ್ಷೇತ್ರದಲ್ಲಿ ಸಮರ್ಥರಾಗಿದ್ದ ಹಳಬರಿಗೆ ಅವಕಾಶ ನಿರಾಕರಿಸಿ, ಹೊಸಬರಿಗೆ ಅವಕಾಶ ನೀಡಿದಾಗ ಬಂಡಾಯವೇಳುವ ಸಾಧ್ಯತೆಗಳನ್ನು ನಿರಾಕರಿಸಲಾಗದು. ಆದರೆ ಎರಡನೇ ಬಾರಿಯ ಗೆಲುವಿನ ಶ್ರೇಯ ಸಂಪೂರ್ಣವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಂದಿರುವುದರಿಂದ ಅವರು ಪಕ್ಷ, ಆಡಳಿತದಲ್ಲಿ ಸಂಪೂರ್ಣವಾಗಿ ಶಕ್ತಿಶಾಲಿಯಾಗಿದ್ದಾರೆ. ಅಷ್ಟೇಕೆ ಪಕ್ಷದ ಕ್ಯಾನ್ವಸ್ ಗಿಂತಲೂ ದೊಡ್ಡದಾಗಿ ಬೆಳೆದಿದ್ದಾರೆ. ಹೀಗಾಗಿ ಅವರ ನಿರ್ಧಾರವನ್ನು ಪಕ್ಷ ಕೂಡ ಒಪ್ಪಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅವರ ತೀರ್ಮಾನಗಳನ್ನು ಪಕ್ಷವು ಅನುಮೋದಿಸದಿದ್ದರೆ ಗತ್ಯಂತರವಿಲ್ಲ ಎನ್ನುವಂತಾಗಿದೆ. ಇಂಥ ಸನ್ನಿವೇಶಗಳೇ ಪಕ್ಷಕ್ಕೆ ಇರುವ ಸವಾಲುಗಳು ಕೂಡ.

ಆದರೆ ಅದೇ ವೇಳೆ ಬಲಿಷ್ಠ ನಾಯಕನಿದ್ದರೆ, ತಂಡವೂ ಶಕ್ತಿಶಾಲಿಯಾಗುತ್ತದೆ ಎನ್ನುವುದನ್ನು ಒಪ್ಪಬೇಕಾಗುತ್ತದೆ. ಕೇರಳದ 140 99 ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿ ಎರಡನೇ ಬಾರಿಗೆ ಮುಖ್ಯಮಂತ್ರಿ ಪದವಿಗೇರಿದಾಗ ಶಕ್ತಿವರ್ಧನೆ ಆಗುವುದು ಸಹಜ. ಅವರು ಮುಂದಿನ ದಿನಗಳಲ್ಲಿ ತಮಗೆ ಪ್ರತಿಸ್ಪರ್ಧಿಯಾಗಬಹುದಾಗಿದ್ದವರನ್ನು ತೆರೆಮರೆಗೆ ಸರಿಸುವ ಉದ್ದೇಶದಿಂದಲೋ ಅಥವಾ ಕೇರಳದಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿಸಲೋ ಗೊತ್ತಿಲ್ಲ. ನೂತನ ಸಂಪುಟದಲ್ಲಿ ತಮ್ಮ ಪಕ್ಷದಿಂದ ಸಚಿವರ ಆಯ್ಕೆ ಮಾಡುವಾಗ ಬಹಳ ದೊಡ್ಡ ನಿರ್ಧಾರ ಕೈಗೊಂಡಿದ್ದಾರೆ. ಹಳೆಯ ಯಶಸ್ವೀ ಸಂಪುಟದಲ್ಲಿದ್ದ ಮಾತ್ರ ಮುಂದುವರಿಯಲು ಅವಕಾಶ ಕೊಟ್ಟುಕೊಂಡಿದ್ದಾರೆ. ಉಳಿದಂತೆ ದೊಡ್ಡ ಹೆಸರು ಮಾಡಿದ್ದ ಸಚಿವರಿಗೆಲ್ಲ ರೆಡ್ ಕಾರ್ಡ್ ತೋರಿಸಿದ್ದಾರೆ. ಹೊಸ ಮುಖಗಳಿಗೆ ಗ್ರೀನ್ ಕಾರ್ಡ್ ಪ್ರದರ್ಶಿಸಿದ್ದಾರೆ.

ಖಾತೆ ಹಂಚಿಕೆಗೆ ಚಿಗುರೊಡೆದ ಅಸಮಾಧಾನದ ಹೊಗೆ:
ತಮ್ಮ ಪ್ರಾಮಾಣಿಕ ಕೆಲಸ, ದಕ್ಷತೆಯಿಂದ ದೊಡ್ಡ ಹೆಸರು ಮಾಡಿ, ಮುಂದಿನ ಮುಖ್ಯಮಂತ್ರಿಯಾಗುವ ತಾಕತ್ತು ಇರುವವರು ಎಂದು ಮಾಧ್ಯಮಗಳಿಂದ ಕರೆಸಿಕೊಂಡಿದ್ದ ಕೆ.ಕೆ.ಶೈಲಜಾ ಮಾತ್ರವಲ್ಲ, ಇಂಥ ಹಲವು ಹಕ್ಕಿಗಳನ್ನು ಸಿಎಂ ಒಂದೇ ಕಲ್ಲಿನಲ್ಲಿ ಹೊಡೆದಿದ್ದಾರೆ. ಹಣಕಾಸು ಸಚಿವರಾಗಿ ಒಳ್ಳೆಯ ಹೆಸರು ಸಂಪಾದಿಸಿದ್ದ ಟಿ.ಎಂ.ಥಾಮಸ್ ಐಸಾಕ್ ಅವರಿಗೂ ಈ ಬಾರಿ ಎಲ್ಲರೊಂದಿಗೆ ಗೇಟ್ ಪಾಸ್ ಸಿಕ್ಕಿದೆ. ಅವರ ಜಾಗಕ್ಕೆ ತಮ್ಮ ವಿಧೇಯ ಶಿಷ್ಯ ಹಾಗೂ ಮೊದಲ ಬಾರಿಗೆ ಶಾಸಕನಾದ ಕೆ.ಎನ್.ಬಾಲಗೋಪಾಲ್ ಅವರಿಗೆ ಮೊದಲ ಸಲವೇ ವಿತ್ತ ಖಾತೆಯಂಥ ಅತೀ ಮಹತ್ವದ ಹೊಣೆ ಸಿಕ್ಕಿದೆ.

ಟಿ.ಎಂ.ಥಾಮಸ್ ಐಸಾಕ್

ಇನ್ನೊಂದೆಡೆ ಸಿಎಂ ಪಿಣರಾಯಿ ಅವರ ಅಳಿಯ (ಮಗಳ ಗಂಡ) ಕೂಡ ನೂತನ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಪ್ರವಾಸೋದ್ಯಮದಂಥ ಪ್ರಮುಖ ಖಾತೆಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಅಳಿಯನಿಗೆ ನೀಡಿರುವ ಆದ್ಯತೆಗೆ ಪಕ್ಷದಲ್ಲಿ ಅಸಮಾಧಾನವಿದ್ದರೂ ಅದು ಮೋಡ ಕವಿದ ವಾತಾವರಣದಂತಿದೆ. ಸ್ವಜನ ಪಕ್ಷಪಾತದ ಆರೋಪಗಳು ಕೇಳಿಬಂದಿದ್ದರೂ ಅದನ್ನು ಬಹಿರಂಗಪಡಿಸುವ ಧೈರ್ಯ ಯಾರಿಗೂ ಇಲ್ಲ.

ಈ ನಡುವೆ, ಶುದ್ಧಹಸ್ತರೆಂದು ರಾಜಕೀಯ ಮೊಗಸಾಲೆಯಲ್ಲಿ ಪರಿಚಿತರಾಗಿರುವ ಮಾಜಿ ಸ್ಪೀಕರ್ ಕೆ.ರಾಧಾಕೃಷ್ಣನ್ ಅವರಿಗೆ ಸಚಿವ ಸಂಪುಟದಲ್ಲಿ ದಲಿತ ಮುಖವಾಗಿ ಸ್ಥಾನ ಸಿಕ್ಕಿದೆ. ಅವರಿಗೆ ದೇವಸ್ಯಂ ಅಂದರೆ ದೇವಾಲಯಗಳ ಆಡಳಿತ ಮತ್ತು ದೇಗುಲಗಳ ನಿರ್ವಹಣೆಯ ಖಾತೆ ಸಿಕ್ಕಿದೆ. ಶಬರಿಮಲೆ ಸೇರಿದಂತೆ ಹಲವು ರಾಜ್ಯ ಸರಕಾರದಿಂದ ನಿರ್ವಹಣೆಗೆ ಒಳಗಾಗುವ ದೇವಸ್ಥಾನಗಳ ಹೊಣೆ ಅವರ ಹೆಗಲಿಗೇರಿದೆ.
ಸಿಎಪಿಂ ಪಕ್ಷದ ರಾಜ್ಯ ಸಮಿತಿಯ ಪ್ರಭಾರಿ ಕಾರ್ಯದರ್ಶಿ ಎ.ವಿಜಯರಾಘವನ್ ಅವರ ಪತ್ನಿ ಆರ್. ಬಿಂದು ಅವರಿಗೆ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ಖಾತೆಯನ್ನು ನೀಡಲಾಗಿದೆ.
ಹೊಸ ತಂಡ, ಹೊಸ ನಿರೀಕ್ಷೆಗಳು:
ಪಿಣರಾಯಿ ವಿಜಯನ್ ಅವರು ಅಧಿಕಾರ ವಹಿಸಿಕೊಂಡ ನಂತರದ ದಿನಗಳಲ್ಲಿ ಸಿಪಿಎಂ ಪಕ್ಷದ ಕಚೇರಿ ಮತ್ತು ಮುಖ್ಯಮಂತ್ರಿ ಕಚೇರಿಗಳ ನಡುವಿನ ಸಮನ್ವಯತೆಯಲ್ಲಿ ಒಂದಿಷ್ಟು ಅಸಮತೋಲನವಾಗಿರುವುದು ನಿಜ. ಪಕ್ಷದ ಇತಿಹಾಸದ ಹಿನ್ನೆಲೆಯಲ್ಲಿ ನೋಡಿದರೆ ಇವೆರಡೂ ಕಚೇರಿಗಳು ಪರ್ಯಾಯ ಶಕ್ತಿ ಕೇಂದ್ರಗಳಾಗಿವೆ. ಪಕ್ಷವು ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸಿದರೆ, ಮುಖ್ಯಮಂತ್ರಿ ರಾಜ್ಯ ಮತ್ತು ಸರಕಾರದ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತಾರೆ. ಆದರೆ ಈಗೀಗ ಕೇರಳದಲ್ಲಿ ಪಕ್ಷದ ಪಾರಮ್ಯ ಕ್ಷೀಣವಾಗುತ್ತಿದ್ದು, ಕೇವಲ ಸರಕಾರವನ್ನು ಪ್ರಶಂಸಿಸುವುದಕ್ಕೆ ಸೀಮಿತವಾಗುತ್ತಿರುವುದು ಮುಖ್ಯಮಂತ್ರಿಯ ಬಲವರ್ಧನೆಗೆ ಸಾಕ್ಷಿಯಾಗಿದೆ.

ಚುನಾವಣೆಯಲ್ಲೂ ಪಕ್ಷದ, ಎಲ್.ಡಿ.ಎಫ್. ಮೈತ್ರಿಕೂಟದ ಏಕೈಕ ಮುಖವಾಗಿ ರಾಜ್ಯದೆಲ್ಲೆಡೆ ಮಿಂಚಿದ್ದ ಅವರು, ಪಕ್ಷವನ್ನು ಅಭೂತಪೂರ್ವ ಜಯಭೇರಿಯೊಂದಿಗೆ ಮರಳಿ ಅಧಿಕಾರಕ್ಕೆ ತಂದಿದ್ದಾರೆ. ಆದರೆ ಒಂದೇ ಒಂದು ತಪ್ಪು ಅವರಿಂದ ಆಗಿದೆ. ಇದು ಎಲ್.ಡಿ.ಎಫ್. ಸರಕಾರದ ಮುಂದುವರಿಕೆ ಎಂಬ ಘೋಷ ವಾಕ್ಯದೊಂದಿಗೆ ಮತ ಕೇಳಿದ್ದ ಅವರೀಗ ಮಾತು ತಪ್ಪಿದ್ದಾರೆ ಎನ್ನುವುದು ಅವರ ಮೇಲೆ ಬಂದಿರುವ ಕೇಳಿ ಬಂದಿರುವ ಆರೋಪ. ಅವರ ಜತೆಗೆ ಅವರ ಸಚಿವ ಸಂಪುಟದ ಕಾರ್ಯ ನಿರ್ವಹಣೆಗೂ ಮತಗಳು ಸಿಕ್ಕಿವೆ. ಆರೋಗ್ಯ ಸಚಿವೆಯಾಗಿದ್ದ ಕೆ.ಕೆ. ಶೈಲಜಾ ಅವರು ಕೇರಳದ ಇತಿಹಾಸದಲ್ಲೇ ದಾಖಲೆ ಮತಗಳ ಅಂತರದಿಂದ ಗೆದ್ದು ಮತ್ತೆ ಶಾಸಕಿಯಾಗಿದ್ದಾರೆ. ಅವರಿಗೆ ಸಂಪುಟದಲ್ಲಿ ಸ್ಥಾನ ಕೊಡದಿರುವುದು ಸರಿಯಲ್ಲ ಎಂಬ ಆರೋಪಗಳಿಗೆ ಸಿಎಂ ಈವರೆಗೂ ತುಟಿ ಪಿಟಕ್ ಎಂದಿಲ್ಲ.

ಅಲ್ಲದೆ 50 ಶೇಕಡಾಕ್ಕಿಂತಲೂ ಹೆಚ್ಚು ಮಹಿಳೆಯರಿರುವ ಕೇರಳದ ನೂತನ ಸಚಿವ ಸಂಪುಟದ 21 ಸ್ಥಾನಗಳಲ್ಲಿ ಮೂರು ಮಾತ್ರ ಮಹಿಳೆಯರ ಪಾಲಾಗಿದೆ. ಅಲ್ಲದೆ ತಮ್ಮ ದಕ್ಷ, ಪ್ರಾಮಾಣಿಕ ಸೇವೆಯಿಂದ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಮಹಿಳೆಗೆ ಸಂಪುಟದಲ್ಲಿ ಸ್ಥಾನ ನಿರಾಕರಿಸಲಾಗಿದೆ.
ಇಂಥ ಸನ್ನಿವೇಶದಲ್ಲಿ ಕೇರಳದ ಮುಖ್ಯಮಂತ್ರಿಯವರು ಮಾಡಿರುವ ಹೊಸ ಪ್ರಯೋಗವು ‘ಕೇರಳ ಮಾದರಿ’ ಎಂದು ಭವಿಷ್ಯದಲ್ಲಿ ಕರೆಸಿಕೊಳ್ಳುವುದು ಖಚಿತ. ಏಕೆಂದರೆ ಈ ಮಾದರಿಯ ಯಶಸ್ಸು ಮತ್ತು ವೈಫಲ್ಯಗಳೆರಡೂ ಸಿಪಿಎಂ ನೇತೃತ್ವದ ಮೈತ್ರಿ ಕೂಟಕ್ಕೆ ಮತ್ತು ಕೇರಳಕ್ಕೆ ಮಾತ್ರವಲ್ಲ ದೇಶಕ್ಕೂ ಒಂದು ಸಂದೇಶವನ್ನು ರವಾನಿಸಲಿದೆ

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...