ತಮಿಳುನಾಡಿನ ಖ್ಯಾತ ನಟ ಅಜಿತ್ ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲ, ಬೈಕ್, ಕಾರು ಕ್ರೇಜ್ ಹೊಂದಿದ್ದು, ಹಲವಾರು ವೃತ್ತಿಪರ ಟೂರ್ನಿಗಳಲ್ಲೂ ಪಾಲ್ಗೊಂಡಿದ್ದಾರೆ. ಬೈಕ್ ರೇಸ್, ಕಾರು ರೇಸ್ ಗಳಲ್ಲಿ ಸ್ಪರ್ಧಿಸಿದ್ದೂ ಇದೀಗ ಶೂಟಿಂಗ್ ನಲ್ಲೂ ಆಸಕ್ತಿ ಇರುವುದು ಬೆಳಕಿಗೆ ಬಂದಿದೆ. ಅದರಲ್ಲೂ ಅವರ ತಂಡ 6 ಪದಕಗಳನ್ನು ಕೊಳ್ಳೆ ಹೊಡೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದಾರೆ.
ಖ್ಯಾತ ನಟ ಅಜಿತ್ ಕುಮಾರ್ ನೇತೃತ್ವದ ತಂಡ ತಮಿಳುನಾಡು ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ 4 ಚಿನ್ನ ಸೇರಿ 6 ಪದಕ ಗೆದ್ದ ಸಾಧನೆ ಮಾಡಿದೆ.
ತಿರುಚಿಯಲ್ಲಿ ಜುಲೈ 29ರಂದು ನಡೆದ ಟೂರ್ನಿಯಲ್ಲಿ ಅಜಿತ್ ಕುಮಾರ್ ಅವರನ್ನೊಳಗೊಂಡ ತಂಡ ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದು, 6 ಪದಕಗಳನ್ನು ಗೆದ್ದು ಗಮನ ಸೆಳೆದಿದೆ.
ಪುರುಷರ ಫೈರ್ ಪಿಸ್ತೂಲ್ ಮಾಸ್ಟರ್ ವಿಭಾಗದಲ್ಲಿ ಚಿನ್ನದ ಪದಕ, ಸ್ಟ್ರಾಂಡರ್ಡ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ, 50 ಮೀ. ಫ್ರಿ ಪಿಸ್ತೂಲ್ ವಿಭಾಗದಲ್ಲಿ ಹಾಗೂ ಸ್ಟ್ಯಾಂಡರ್ಡ್ ಪಿಸ್ತೂಲ್ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ. 50 ಮೀ. ಪಿಸ್ತೂಲ್ ವಿಭಾಗದ ತಂಡ ವಿಭಾಗದಲ್ಲಿ ಕಂಚಿನ ಪದಕ ಪಡೆದಿದೆ.
ಅಜಿತ್ ಕುಮಾರ್ ಇತ್ತೀಚೆಗಷ್ಟೇ ಬೈಕ್ ನಲ್ಲಿ ಯುರೋಪ್ ಪ್ರವಾಸದಿಂದ ಮರಳಿದ ಬೆನ್ನಲ್ಲೇ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಅಜಿತ್ ಪ್ರಸ್ತುತ ಎಕೆ-61 ಚಿತ್ರದಲ್ಲಿ ನಟಿಸುತ್ತಿದ್ದಾರೆ.