
ಬೆಂಗಳೂರು: ನಗರ ಜನತೆಯ ಹಲವು ದಶಕಗಳ ಬೇಡಿಕೆಯಾಗಿರುವ ಉಪನಗರ ರೈಲು ಯೋಜನೆಯ (Suburban train )ಪಾರಿಜಾತ ಕಾರಿಡಾರ್ ನಿರ್ಮಾಣ ಕೈಬಿಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿರುವುದಕ್ಕೆ ಆಮ್ ಆದ್ಮಿ ಪಕ್ಷ ತೀವ್ರ (Aam Aadmi Party )ವಿರೋಧ ವ್ಯಕ್ತಪಡಿಸಿದ್ದು, ಪಾರಿಜಾತ ಕಾರಿಡಾರ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ಪಕ್ಷದ ರಾಜ್ಯ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ದರ್ಶನ್ ಜೈನ್ ಒತ್ತಾಯಿಸಿದ್ದಾರೆ.

ಬೆಂಗಳೂರು ನಗರದ ಪಕ್ಷದ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪನಗರ ರೈಲು ಯೋಜನೆಯ ಪಾರಿಜಾತ ಕಾರಿಡಾರ್ ಬೇಡ ಎನ್ನುವ ಕುರಿತು ಚರ್ಚೆಯಾಗಿದ್ದು, ನಮ್ಮ ಮೆಟ್ರೋಗೆ ನಷ್ಟವಾಗುತ್ತದೆ ಎನ್ನುವ ಕಾರಣ ನೀಡಿ ಈ ಯೋಜನೆ ಕೈಬಿಡಲು ಮುಂದಾಗಿರುವುದು ಅವೈಜ್ಞಾನಿಕ ಎಂದರು.
ಬೆಂಗಳೂರಿಗೆ ಉಪನಗರ ರೈಲ್ವೆಯ ಬೇಡಿಕೆಯ ಕೂಗು 65 ವರ್ಷ ಹಳೆಯದಾಗಿದ್ದು , ಇಂದಿನವರೆಗೂ ಕೈಗೂಡದೇ ಇರುವುದು ನಮ್ಮ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತದೆ. ಬೆಂಗಳೂರು ಉಪನಗರ ರೈಲು ಯೋಜನೆಯಡಿ ನಾಲ್ಕು ಕಾರಿಡಾರ್ ಮಾಡಲು ಯೋಜಿಸಲಾಗಿತ್ತು. ಆ ಕೆಲಸ ಇಷ್ಟೊತ್ತಿಗಾಗಲೇ ಮುಕ್ತಾಯವಾಗಿರಬೇಕಿತ್ತು, ಆದರೆ ಕಾಮಗಾರಿ ಕುಂಟುತ್ತಾ ಸಾಗಿದೆ ಇದರಲ್ಲಿ ಪಾರಿಜಾತ ಕಾರಿಡಾರ್ ಅತ್ಯಂತ ಪ್ರಮುಖವಾಗಿದ್ದು ಅದನ್ನೇ ಬೇಡ ಎಂದು ಚರ್ಚೆ ನಡೆಸಿದ್ದು, ಅದೇ ಜಾಗದಲ್ಲಿ ಟ್ವಿನ್ ಟನಲ್ ರಸ್ತೆ ಮಾಡಿ ಉಳ್ಳವರಿಗೆ ಅನುಕೂಲ ಮಾಡಿಕೊಡಲು ₹14,000 ಕೋಟಿ ಖರ್ಚು ಮಾಡಲು ಸಿದ್ದವಾಗಿದೆ ,
ಮೆಟ್ರೊ ಮಾರ್ಗ ಮತ್ತು ಸಬ್ ಆರ್ಬನ್ ಮಾರ್ಗಗಳು ಬೇರೆಬೇರೆಯಾಗಿದ್ದು ಒಂದಕ್ಕೊಂದು ಪೂರಕವಾಗಿವೆ ಮತ್ತು ಉಪನಗರ ರೈಲು ಮೆಟ್ರೊಗಿಂತ ಹೆಚ್ಚಿನ ಜನಪಯೋಗಿಯಾಗಿದೆ. ಇಂತಹ ಯೋಜನೆಯನ್ನು ಕೈಬಿಟ್ಟು ಬೆಂಗಳೂರನ್ನು ಹಾಳು ಮಾಡುವ ಯತ್ನಕ್ಕೆ ಕೈ ಹಾಕಿರುವುದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಜನಸಂಖ್ಯೆಗೆ ಹೋಲಿಸಿದಾಗ ಮೆಟ್ರೊ ಸೇವೆಯು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದೆ . 1.25 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಒಂದು ಅಂದಾಜಿನ ಪ್ರಕಾರ 16,000 ಸಾರ್ವಜನಿಕ ಬಸ್ಗಳು ಸಂಚರಿಸಬೇಕಿತ್ತು, ಆದರೆ ಬಿಎಂಟಿಸಿ 5 ಸಾವಿರ ಬಸ್ಗಳನ್ನು ಮಾತ್ರ ಹೊಂದಿದೆ. 3 ಸೆಕ್ಟರ್ ಮುಗಿಯಬೇಕಿದ್ದ ನಮ್ಮ ಮೆಟ್ರೋ ಕಾಮಗಾರಿ 2 ಸೆಕ್ಟರ್ ಮಾತ್ರ ಮುಕ್ತಾಯವಾಗಿದ್ದು, ಜನ ದಟ್ಟಣೆ ಹೆಚ್ಚಾಗಿದೆ. ನೇರಳೆ ಮಾರ್ಗದಲ್ಲಿ ನಿಲ್ಲಲು ಕೂಡ ಜಾಗ ಇರದಂತ ಪರಿಸ್ಥಿತಿ ಇರುತ್ತದೆ.
ನಮ್ಮ ಮೆಟ್ರೋ ಯೋಜನೆಗೆ ಪೂರಕವಾಗಿ ಇರಬೇಕಿದ್ದ ಉಪ ನಗರ ರೈಲು ಯೋಜನೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿರುವುದು ಇಡೀ ಬೆಂಗಳೂರು ನಗರ ಜನತೆಗೆ ಮಾಡಿರುವ ಅನ್ಯಾಯ. ಬಿಎಂಎಲ್ಟಿಎ (ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ಮಸೂದೆ) ಮಾಡಿ 2 ವರ್ಷ ಆಗಿದ್ದರೂ ಇಂದಿಗೂ ಜಾರಿ ಮಾಡಿಲ್ಲ. ಬೆಂಗಳೂರು ಸಬ್ಅರ್ಬನ್ ಮತ್ತು ಸಾರಿಗೆಗೆ ಸಂಬಂಧಪಟ್ಟ ಕೆ-ರೈಡ್ ಸಂಸ್ಥೆಗೆ ಮುಖ್ಯಸ್ಥರನ್ನು ಸಹ ನೇಮಕ ಮಾಡದೇ ನಿರ್ಲಕ್ಷ ತೋರಲಾಗಿದೆ ಎಂದರು.
ವಿ ಸೋಮಣ್ಣ ಇಂದು ಕೇಂದ್ರ ಸಚಿವರಾಗಲು ಬೆಂಗಳೂರು ಜನತೆ ಕೊಡುಗೆ ಮುಖ್ಯವಾಗಿದೆ. ಜನರ ಋಣ ತೀರಿಸುವ ಮನಸ್ಸಿದ್ದರೆ ಪಾರಿಜಾತ ಕಾರಿಡಾರ್ ಕಾಮಗಾರಿ ಮುಂದುವರೆಸಲು ಸಚಿವ ಸೋಮಣ್ಣ ಕ್ರಮ ತೆಗೆದುಕೊಳ್ಳಬೇಕು. ಪಾರಿಜಾತ ಕಾರಿಡಾರ್ ಕೈಬಿಟ್ಟರೆ ಆಮ್ ಆದ್ಮಿ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಮ್ ಆದ್ಮಿ ಪಾರ್ಟಿ ಬೆಂಗಳೂರು ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಮಾತನಾಡಿ, ಮೂರು ಪಕ್ಷಗಳ ನಾಯಕರು ಇಂದು ಬೆಂಗಳೂರಿಗೆ ಟ್ರಾಫಿಕ್ ಸಿಟಿ ಎನ್ನುವ ಕೆಟ್ಟ ಹೆಸರು ತಂದಿದ್ದಾರೆ. ಇಡೀ ದೇಶದಲ್ಲಿ ಬೆಂಗಳೂರು ನಗರದಲ್ಲಿ ಮಾತ್ರ ರೈಲು ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಮುಂಬೈ, ಚೆನ್ನೈ ಸೇರಿದಂತೆ ಬೇರೆ ನಗರಗಳಲ್ಲಿ ಸಬ್ ಅರ್ಬನ್ ಮತ್ತು ಮೆಟ್ರೋ ಪೂರಕವಾಗಿ ಕೆಲಸ ಮಾಡುತ್ತಿವೆ. ನಗರಕ್ಕೆ ಅತ್ಯವಶ್ಯಕವಾಗಿರುವ ಪಾರಿಜಾತ ಕಾರಿಡಾರ್ ನಿರ್ಮಾಣ ಕೈಬಿಡಬಾರದು ಎಂದು ಆಗ್ರಹಿಸಿದರು.