ಮೈಸೂರು: ಶಾಲಾ ವಾಹನಕ್ಕೆ ಹುರುಳಿ ಸೊಪ್ಪು ಸುತ್ತಿಕೊಂಡ ಪರಿಣಾಮ ಶಾಲಾ ವಾಹನಕ್ಕೆ ಬೆಂಕಿ ತಗುಲಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಎಂ.ಕೊಂಗಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹುಲ್ಲಹಳ್ಳಿಯ ಜ್ಞಾನ ಸಂಜೀವಿನಿ ಶಾಲೆಯ ವಾಹನ ಬೆಂಕಿಗಾಹುತಿಯಾಗಿದೆ. ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ.
ರಸ್ತೆಯಲ್ಲಿ ಒಕ್ಕಣೆಗೆ ಹುರುಳಿ ಸೊಪ್ಪು ಹಾಕಿದ್ದು ಸಂದರ್ಭದಲ್ಲಿ ಇದೇ ಮಾರ್ಗವಾಗಿ ಸಂಚರಿಸಿದ ಶಾಲಾ ವಾಹನಕ್ಕೆ ಉರುಳಿ ಸೊಪ್ಪು ಸುತ್ತಿಕೊಂಡು ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ವಾಹನದ ಚಾಲಕ ಮಕ್ಕಳನ್ನು ವಾಹನದಿಂದ ಇಳಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ನಡೆದ ವೇಳೆ ಬಸ್ಸಿನಲ್ಲಿ ಅಂದಾಜು 30 ಮಕ್ಕಳು ವಾಹನದಲ್ಲಿದ್ದರು.
ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತದೆ. ಈ ಹಿಂದೆಯೂ ಕೂಡ ಇದೇ ಸ್ಥಳದಲ್ಲಿ ಹುರುಳಿ ಸೊಪ್ಪು ಸುತ್ತಿಕೊಂಡು ಆಂಬ್ಯುಲೆನ್ಸ್ ಬೆಂಕಿಗೆ ಆಹುತಿಯಾಗಿತ್ತು. ಆದರು ಬುದ್ದಿ ಕಲಿಯದ ಗ್ರಾಮಸ್ಥರು ರಸ್ತೆಯಲ್ಲೇ ಒಕ್ಕಣೆ ಕಾರ್ಯ ನಡೆಸುತ್ತಾರೆ. ಹೀಗಾಗಿ ಪೊಲೀಸ್ ಇಲಾಖೆ ರಸ್ತೆಯಲ್ಲಿ ಒಕ್ಕಣೆ ಮಾಡದಂತೆ ಕೂಡಲೇ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.