
ಗುಂಡ್ಲುಪೇಟೆ: ತಾಲೂಕಿನ ಹಂಗಳಪುರ ಹೊರ ವಲಯದ ರೈತರೊಬ್ಬರ ಜಮೀನಿನಲ್ಲಿ ಗುರುವಾರ ಕಬ್ಬು ಕಟಾವು ಮಾಡುವ ವೇಳೆ ಸಿಕ್ಕ ಎರಡು ಚಿರತೆ ಮರಿಗಳನ್ನು ರೈತರು ಮತ್ತು ಕಾರ್ಮಿಕರು ರಕ್ಷಿಸಿ, ಅರಣ್ಯ ಇಲಾಖೆಯವರ ವಶಕ್ಕೆ ಒಪ್ಪಿಸಿದ್ದಾರೆ.
ಹಂಗಳ ಗ್ರಾಮದ ರೈತ ಮಹೇಶ್ ಎಂಬುವರ ಜಮೀನಿನಲ್ಲಿ ಚಿರತೆ ಮರಿಗಳು ಸಿಕ್ಕಿವೆ. ಮರಿಗಳಲ್ಲಿ ಒಂದು ಹೆಣ್ಣು ಮತ್ತೊಂದು ಗಂಡಾಗಿದೆ. ಕಬ್ಬು ಕಟಾವು ಮಾಡುವ ವೇಳೆ ಚೀರಾಟದ ಶಬ್ದ ಕೇಳಿತು. ಚಿರತೆ ಗೂಡಿನಂತೆ ಮಾಡಿಕೊಂಡಿದ್ದ ಪ್ರದೇಶದ ಸುತ್ತಲೂ ಕಬ್ಬು ಕಟಾವು ಮಾಡಿ ಸುರಕ್ಷಿತವಾಗಿ ಮರಿಗಳನ್ನು ಹೊರಕ್ಕೆ ತೆಗೆದುಕೊಂಡೆವು. ಮರಿಗಳನ್ನು ಸುರಕ್ಷಿತವಾಗಿ ಟೊಮೆಟೋ ಟ್ರೇನಲ್ಲಿ ಇಟ್ಟಿದ್ದು, ನಾವು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯವರಿಗೆ ಚಿರತೆ ಮರಿಗಳನ್ನು ಒಪ್ಪಿಸಲಾಯಿತು ಎಂದು ಸ್ಥಳದಲ್ಲಿದ್ದ ರೈತ ಕುಮಾರ್, ಕಾರ್ಮಿಕರು ಮತ್ತು ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿ ಶಿವಕುಮಾರ್, ನೌಕರರಾದ ಸಿದ್ದರಾಜು, ಮಂಜು, ರಾಮು ಚಿರತೆ ಮರಿಗಳನ್ನು ವಶಕ್ಕೆ ಪಡೆದರು.
ಗುಂಡ್ಲುಪೇಟೆ ತಾಲೂಕಿನ ಹಂಗಳಪುರ ಗ್ರಾಮದ ಜಮೀನೊಂದರಲ್ಲಿ ಸಿಕ್ಕ ಚಿರತೆ ಮರಿಗಳನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದಿದ್ದಾರೆ.
