ನಾಯಕತ್ವ ಬದಲಾವಣೆಯ ಚರ್ಚೆಯ ನಡುವೆ ಹಲವು ನಿರೀಕ್ಷೆ ಮತ್ತು ಕುತೂಹಲದ ನಡುವೆ ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಮುಕ್ತಾಯ ಕಂಡಿದೆ.
ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ; ಹಾಲಿ ಸಿಎಂ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಘೋಷಿಸುವ ಮೂಲಕ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳಿಗೆ ಇತಿಶ್ರೀ ಹಾಡುವ ಯತ್ನ ಮಾಡಿದ್ದಾರೆ. ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಆಡಳಿತಕ್ಕೆ ಫುಲ್ ಮಾರ್ಕ್ಸ್ ನೀಡಿರುವ ಅವರು, ಅತ್ಯುತ್ತಮ ಆಡಳಿತ ನಡೆಸುತ್ತಿದ್ದಾರೆ. ವರಿಷ್ಠರಿಗೆ ಸಂಪೂರ್ಣ ತೃಪ್ತಿ ಇದೆ ಎಂದಿದ್ದಾರೆ. ಹಾಗೇ ನಾಯಕತ್ವ ಬದಲಾವಣೆಯೂ ಸೇರಿದಂತೆ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ತರುವ ಹೇಳಿಕೆ ನೀಡಿದಲ್ಲಿ ಪಕ್ಷದ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಆರು ತಿಂಗಳ ಹಿಂದೆ ಬಿ ಎಸ್ ಯಡಿಯೂರಪ್ಪ ಪದಚ್ಯುತಿಗೆ ಮುನ್ನಾ ದಿನ ಕೂಡ ಅರುಣ್ ಸಿಂಗ್ ಅವರು ಇಂತಹದ್ದೇ ಯಥಾವತ್ತು ಡೈಲಾಗ್ ಹೊಡೆದಿದ್ದರು ಮತ್ತು ಆ ಬಳಿಕ ಆಗಿದ್ದು ಸಂಪೂರ್ಣ ತಿರುವು ಮುರುವು ಎಂಬುದನ್ನು ಸ್ಮರಿಸಿಕೊಂಡರೆ, ಉಸ್ತುವಾರಿಯ ಇಂತಹ ಮಾತುಗಳ ಗಂಭೀರತೆಯ ಕುರಿತು ಸ್ಪಷ್ಟತೆ ಸಿಗದೇ ಇರದು.
ಆದರೆ, ವಿಪರ್ಯಾಸವೆಂದರೆ ಕಾರ್ಯಕಾರಿಣಿಯ ಮಗ್ಗುಲಲ್ಲೇ ಹಿರಿಯ ಸಚಿವರು, ಸಿಎಂ ರಾಜಕೀಯ ಕಾರ್ಯದರ್ಶಿ, ಮಾಜಿ ಸಚಿವರು ಮತ್ತಿತರೆ ನಾಯಕರ ಮಾತುಗಳು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದಂತೆ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ. ಸಬ್ ಚೆಂಗಾಸಿ ಎಂಬ ಅವರ ಮಾತು ಕೇವಲ ಔಪಚಾರಿಕ ಮತ್ತು ಪಕ್ಷದ ಶಿಸ್ತಿನ ಶಿಷ್ಟಾಚಾರದ ಮಾತೆ ವಿನಃ ವಾಸ್ತವವಲ್ಲ ಎಂಬುದನ್ನು ಸಾರಿ ಹೇಳಿವೆ.
ಪ್ರಮುಖವಾಗಿ ನಾಯಕತ್ವ ಬದಲಾವಣೆಯ ವಿಷಯವನ್ನು ದಿಢೀರನೇ ಮುನ್ನೆಲೆ ತಂದ ಹಿರಿಯ ಸಚಿವ ಕೆ ಎಸ್ ಈಶ್ವರಪ್ಪ ಮತ್ತು ಮುರುಗೇಶ್ ನಿರಾಣಿಯವರನ್ನು ಗುರಿಯಾಗಿಟ್ಟುಕೊಂಡೇ ಮಾತನಾಡಿದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಮತ್ತು ಬಿ ಎಸ್ ಯಡಿಯೂರಪ್ಪ ಆಪ್ತ ಎಂ ಪಿ ರೇಣುಕಾಚಾರ್ಯ, ಹಿರಿಯ ಸಚಿವರು ಸಚಿವ ಸ್ಥಾನ ತ್ಯಾಗ ಮಾಡಬೇಕು ಎಂದಿದ್ದಾರೆ. ಹೊಸಬರಿಗೆ ಮತ್ತು ಅವಕಾಶವಂಚಿತರಿಗೆ ಅವಕಾಶ ಮಾಡಿಕೊಡುವ ಮತ್ತು ಪಕ್ಷದ ಸಂಘಟನೆಗೆ ಕೆಲಸ ಮಾಡುವ ನಿಟ್ಟಿನಲ್ಲಿ ಈಗಾಗಲೇ ಹಲವು ಬಾರಿ ಸಚಿವರಾಗಿ ಅಧಿಕಾರ ಅನುಭವಿಸಿರುವ ಹಿರಿಯರು ಸ್ಥಾನ ತ್ಯಾಗ ಮಾಡಬೇಕು ಎಂದು ಅವರು ಹೇಳಿದ್ದಾರೆ.
ರೇಣುಕಾಚಾರ್ಯ ಅವರ ಮಾತು, ಮೇಲ್ನೋಟಕ್ಕೆ ಸಹಜ ಹೇಳಿಕೆ ಎನಿಸಿದರೂ, ಆ ಹೇಳಿಕೆಯ ಬೆನ್ನಲ್ಲೇ ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡರು ಎಂಬಂತೆ ಹಿರಿಯ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿರುವುದು ಹಲವು ಒಳಸುಳಿಗಳ ಸುಳಿವು ನೀಡಿದೆ.
ನಾಯಕತ್ವ ಬದಲಾವಣೆಯ ಕುರಿತು ಹೇಳಿಕೆ ನೀಡಿದ್ದ ಈಶ್ವರಪ್ಪ ಅವರೇ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಪಕ್ಷ ಬಯಸಿದರೆ ಸಚಿವ ಸ್ಥಾನ ತ್ಯಜಿಸಲು ಮತ್ತು ಪಕ್ಷದ ಸಂಘಟನೆಯ ಕೆಲಸ ಮಾಡಲು ಸಿದ್ಧ ಎಂದು ಹೇಳಿರುವುದು ಕೇವಲ ಕಾಕತಾಳೀಯವಲ್ಲ. ನಾಯಕತ್ವ ಬದಲಾವಣೆ ಕುರಿತ ಈಶ್ವರಪ್ಪ ಹೇಳಿಕೆ, ಆ ಬಳಿಕದ ಬೆಳವಣಿಗೆಗಳು, ಇದೀಗ ಕೋರ್ ಕಮಿಟಿ ಸಭೆಯ ಹೊತ್ತಲ್ಲೇ ರೇಣುಕಾಚಾರ್ಯ ಹೇಳಿಕೆ ಮತ್ತು ಅದಕ್ಕೆ ಹಲವು ಹಿರಿಯ ಸಚಿವರಿದ್ದರೂ ಕೇವಲ ಈಶ್ವರಪ್ಪ ಮಾತ್ರ ಪ್ರತಿಕ್ರಿಯಿಸಿರುವುದು,.. ಈ ಎಲ್ಲ ಬಿಡಿಬಿಡಿ ಬಿಂದುಗಳನ್ನೋ ಜೋಡಿಸಿದರೆ ಒಂದು ಸ್ಪಷ್ಟ ಚಿತ್ರಣ ಸಿಗದೆ ಇರದು!
ಆ ಚಿತ್ರ ಯಾವುದು ಎಂಬುದು ಬಹುಶಃ ಸಂಕ್ರಾಂತಿಯ ಬಳಿಕ ಗೊತ್ತಾಗಲಿದೆ ಎನ್ನುತ್ತವೆ ಬಿಜೆಪಿಯ ಆಂತರಿಕ ಮೂಲಗಳು. ಸಂಕ್ರಾಂತಿಯ ಬಳಿಕ ಸಚಿವ ಸಂಪುಟ ಪುನರ್ ರಚನೆಯಾಗಲಿದೆ. ಆ ವೇಳೆ ಮಲೆನಾಡಿನ ಹಿರಿಯ ಸಚಿವರೊಬ್ಬರು ಸೇರಿದಂತೆ ಪಕ್ಷಕ್ಕೆ ಪದೇ ಪದೆ ಮುಜುಗರ ತರುತ್ತಿರುವ ಮೂವರು ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗುವುದು. ಜೊತೆಗೆ ಇತ್ತೀಚಿನ ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯುಂಟುಮಾಡಿದ ರಮೇಶ್ ಜಾರಕಿಹೊಳಿ ಸೇರಿದಂತೆ ಪಕ್ಷದ ಶಿಸ್ತು ಉಲ್ಲಂಘಿಸುತ್ತಿರುವವರ ವಿರುದ್ಧವೂ ದಿಟ್ಟ ಕ್ರಮ ಜರುಗಿಸುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು, ಪಕ್ಷದ ಕಾರ್ಯಕಾರಿಣಿಗೆ ಯಡಿಯೂರಪ್ಪ ಅಥವಾ ರಮೇಶ್ ಜಾರಕಿಹೊಳಿ ಅನಿವಾರ್ಯವಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಆ ಮೂಲಕ ಪಕ್ಷ ಯಾರಿಲ್ಲದೆಯೂ ಮುನ್ನಡೆಯಲಿದೆ. ಪಕ್ಷಕ್ಕೆ ಈಗ ಯಾರೂ ಅನಿವಾರ್ಯವಲ್ಲ ಎಂಬ ಸಂದೇಶವನ್ನು ಅವರು ಪರೋಕ್ಷವಾಗಿ ರವಾನಿಸಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ, ಶಿವಮೊಗ್ಗ ಕೋಟಾದಿಂದ ಈಶ್ವರಪ್ಪ ಅವರನ್ನು ಕೈಬಿಟ್ಟು, ಪಕ್ಷದ ಸಂಘಟನೆಯ ಹೊಣೆ ವಹಿಸಿ, ಹೊಸಬರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬುದು ಯಡಿಯೂರಪ್ಪ ಬಣದ ವಾದ. ಆ ನಿಟ್ಟಿನಲ್ಲಿ ವರಿಷ್ಠರ ಮೇಲೆ ಒತ್ತಡ ಹಾಕುವ ಯತ್ನವಾಗಿಯೇ ರೇಣುಕಾಚಾರ್ಯ ಕಾರ್ಯಕಾರಿಣಿಯ ನಡುವೇ ಹಿರಿಯ ಸಚಿವರ ತಲೆದಂಡದ ಹೇಳಿಕೆ ನೀಡಿದ್ದಾರೆ. ಆ ಮೂಲಕ ಸಚಿವ ಸ್ಥಾನಕ್ಕಾಗಿ ಕಾಯುತ್ತಿರುವ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ಸಂಪುಟ ಸೇರ್ಪಡೆಗೆ ದಾರಿ ಸುಗಮ ಮಾಡುವ ತಂತ್ರಗಾರಿಕೆಯೂ ಇದೆ. ಆ ತಂತ್ರಗಾರಿಕೆಯ ಸುಳಿವರಿತೇ ಈಶ್ವರಪ್ಪ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ ಎಂಬ ಮಾತೂ ಇದೆ.
ಒಟ್ಟಾರೆ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಪ್ರಮುಖರು, ಸಬ್ ಚೆಂಗಾಸಿ ಚಿತ್ರಣವನ್ನು ಮೂಡಿಸುವ ಏನೇ ಪ್ರಯತ್ನಗಳನ್ನು ಮಾಡಿದರೂ, ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಮತ್ತು ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂಬುದನ್ನು ಕಾರ್ಯಕಾರಿಣಿಯ ಅಂಗಳದ ವಿದ್ಯಮಾನಗಳೇ ಸಾರಿ ಹೇಳಿವೆ. ಸಂಕ್ರಾಂತಿಯ ಬಳಿಕದ ಕ್ರಾಂತಿಯ ಸೂಚನೆಗಳನ್ನು ನೀಡಿವೆ!