ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಓಮೈಕ್ರಾನ್ ರೂಪಾಂತರಿಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ವರ್ಷಾಚರಣೆಗೆ ಹೆಚ್ಚು ಜನಸಂದಣಿ ಸೇರಿದಂತೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಈ ಬಗ್ಗೆ ಮಂಗಳವಾರ ಸುವರ್ಣಸೌಧದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ವರ್ಷದ ಸಮಯದಲ್ಲಿ ಈ ನಿರ್ಬಂಧಗಳು ಜಾರಿಯಲ್ಲಿರುತ್ತದೆ. ಆದರೆ, ಕ್ರಿಸಮಸ್ ಆಚರಣೆಗೆ ಮತ್ತು ಚರ್ಚುಗಳಲ್ಲಿ ಪ್ರಾರ್ಥನೆ ನಡೆಸಲು ಯಾವುದೇ ನಿರ್ಬಂಧವನ್ನು ವಿಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ವೇಳೆ ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಜನರು ಹೆಚ್ಚು ಗುಂಪುಗೂಡದಂತೆ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಹೇಳಿದ್ದಾರೆ. ಡಿಸೆಂಬರ್ 30ರಿಂದ ಜನವರಿ 2ನೇ ತಾರೀಖಿನವರೆಗೂ ಯಾವುದೇ ಸಾರ್ವಜನಿಕ ಮತ್ತು ಸಾಮೂಹಿಕ ಸಭೆಗಳಿಗೆ ನಿರ್ಬಂಧವನ್ನು ಹೇರಲಾಗುತ್ತದೆ. ಪಬ್, ಬಾರ್-ರೆಸ್ಟೋರೆಂಟ್ ಗಳಲ್ಲಿ ಶೇ.50% ಜನರಿಗೆ ಸೇವೆಯನ್ನು ಒದಗಿಸಬೇಕು. ಹೋಟೆಲ್, ಪಬ್ ಗಳಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಎರಡು ಡೋಸ್ ಲಸಿಕೆಯನ್ನ ಪಡೆದಿರಬೇಕು ಮತ್ತು ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಬೇಕು ಮತ್ತು ಈ ನಿಟ್ಟಿನಲ್ಲಿ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ.