ಅನಿರೀಕ್ಷಿತವಾಗಿ ಬಂದೆರಗೊದ ಕೋವಿಡ್ ದೇಶದ ಆರ್ಥಿಕ ಸ್ಥಿತಿಯ ಮೇಲೆ ಎಷ್ಟು ಪ್ರತಿಕೂಲ ಪರಿಣಾಮ ಬೀರಿದೆಯೋ ಜನರ ಆರೋಗ್ಯದ ಮೇಲೂ ಅಷ್ಟೇ ಪರಿಣಾಮ ಬೀರಿದೆ. ಜನಸಾಮಾನ್ಯರ ಉದ್ಯೋಗ, ಆಶ್ರಯಗಳನ್ನು ಮಾತ್ರವಲ್ಲದೆ ಆರೋಗ್ಯದ ಮೇಲೂ ಅಗಾಧ ಪರಿಣಾಮ ಬೀರಿದೆ. ಕೋವಿಡ್ ಹಲವು ಸಾವುಗಳಿಗೆ ಕಾರಣವಾಗಿರುವುದಲ್ಲದೆ ಅದು ಬಂದು ಹೋದ ಜನರ ಮೇಲೂ ಅತೀವ ಪರಿಣಾಮವನ್ನು ಬೀರುತ್ತಲೇ ಇದೆ.
ಕೋವಿಡ್‌ನಿಂದ ಚೇತರಿಸಿ ಆರು ತಿಂಗಳುಗಳೇ ಕಳೆದರೂ ಇನ್ನೂ ಅನೇಕ ಮಂದಿ ಸುಸ್ತು, ಬಳಲಿಕೆಯಿಂದ ಬಿಡುಗಡೆ ಗೊಂಡಿಲ್ಲ. ಮೊದಲಿನಂತೆ ಶಕ್ತಿ ಇಲ್ಲ ಎಂಬುವುದು ಕೋವಿಡ್‌ನಿಂದ ಚೇತರಿಸಿಕೊಂಡಿರುವವರ ಸಾಮಾನ್ಯ ದೂರು. ಇದು ಹಲವು ಮಾನಸಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ.
ಅದರಲ್ಲೂ ಈ ಬಗ್ಗೆ ಅರಿವೇ ಇಲ್ಲದ ಗ್ರಾಮೀಣ ಪ್ರದೇಶದ ಜನ ತಮ್ಮ ಸುಸ್ತು, ಆಯಾಸಗಳಿಗೆ ಕಾರಣ ಗೊತ್ತಿಲ್ಲದೇ ಒತ್ತಡ, ಖಿನ್ನತೆಗೆ ಒಳಗಾಗುತ್ತಿದ್ದಾರೆ. ನಗರ ಪ್ರದೇಶದ ಜನರಿಗೆ ಕೊನೆಯ ಪಕ್ಷ ಇದರ ಅರಿವಾದರೂ ಇದೆ ಮತ್ತು ಖಿನ್ನತೆ ಕಾಡಿದಾಗ ವೈದ್ಯರನ್ನು ಭೇಟಿಯಾಗಿ ಕೌನ್ಸಿಲಿಂಗ್ ಪಡೆದುಕೊಳ್ಳುತ್ತಿದ್ದಾರೆ.
ಆರು ಮಕ್ಕಳ ತಾಯಿಯಾಗಿರುವ 69 ವರ್ಷದ ಗೌರಮ್ಮ ಬೆಳಿಗ್ಗೆ 5 ಗಂಟೆಗೆ ಎದ್ದು ದನದ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ, ಕುಟುಂಬಕ್ಕಾಗಿ ಅಡುಗೆ ಮಾಡಿಟ್ಟು ತನ್ನ ಪತಿಯೊಂದಿಗೆ ಕೆಲಸ ಮಾಡಲು ಹೊಲಕ್ಕೆ ಹೋಗುತ್ತಿದ್ದರು. ಈಗ ಇಷ್ಟೆಲ್ಲಾ ಕೆಲಸ ಮಾಡಲು ಅವರಿಂದ ಸಾಧ್ಯವೇ ಆಗುತ್ತಿಲ್ಲ. ಅವರು ಕೋವಿಡ್‌ನಿಂದ ಚೇತರಿಸಿಕೊಂಡು ಆರು ತಿಂಗಳಾಗಿದೆ.
“ನನಗೆ ಯಾರೊಂದಿಗೂ ಮಾತನಾಡಬೇಕು ಅನಿಸುತ್ತಿಲ್ಲ. ನನ್ನ ಸುಸ್ತಿನ ಬಗ್ಗೆ ಬಗ್ಗೆ ಹೇಳಿಯೇ ಸಾಕಾಗಿದೆ. ಇದು ತುಂಬಾ ನಿರಾಶಾದಾಯಕ ಮತ್ತು ನಾನು ಹೆಚ್ಚು ಕಾಲ ಬದುಕಲಾರೆ ಎಂದು ನನಗೆ ಅನಿಸುತ್ತಿದೆ” ಎಂದು ಗೌರಮ್ಮ ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಇದು ಗೌರಮ್ಮ ಒಬ್ಬರ ಸಮಸ್ಯೆಯಲ್ಲ. ಕೋವಿಡ್‌ನಿಂದ ಚೇತರಿಸಿಕೊಂಡಿರುವ ಸಾವಿರಾರು ರೋಗಿಗಳದೂ ಇದೇ ಅನುಭವ. ವೈರಲ್ ಸೋಂಕಿನ ನಂತರದ ಪರಿಣಾಮವು ನೂರಾರು ರೋಗಿಗಳ ಮೇಲೆ ಪರಿಣಾಮ ಬೀರಿದೆ ಎಂದು ವೈದ್ಯರೂ ಹೇಳುತ್ತಾರೆ. ಹಲವಾರು ನಗರ ನಿವಾಸಿಗಳು ಆಸ್ಪತ್ರೆಗೆ ಬಂದು ಕೋವಿಡ್ ನಂತರದ ಪರಿಣಾಮಗಳ ಬಗ್ಗೆ ಸಲಹೆ ಪಡೆದುಕೊಳ್ಳುತ್ತಾರೆ. ಆದರೆ ಈ ಬಗ್ಗೆ ಸುಳಿವೇ ಇಲ್ಲದ ಗ್ರಾಮೀಣ ಪ್ರದೇಶಗಳಲ್ಲಿನ ಜನರು ಮಾನಸಿಕ ಸಮಸ್ಯೆಗಳು, ಪಾರ್ಶ್ವವಾಯು ಮತ್ತು ಹೃದಯಾಘಾತದಿಂದ ಬದುಕು ಕೊನೆಗೊಳಿಸುತ್ತಾರೆ ಎಂದು ವೈದ್ಯರು ಹೇಳುತ್ತಾರೆ.
“ಹಳ್ಳಿಗಳಲ್ಲಿ ಇಂತಹ ಅನೇಕ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಅವರಿಗೆ ಏನಾಗಿದೆ ಎಂದು ಅವರು ಆಶ್ಚರ್ಯ ಪಡುತ್ತಾರೆ. ಆಯಾಸವು ಅನೇಕರಲ್ಲಿನ ಸಾಮಾನ್ಯ ಲಕ್ಷಣವಾಗಿದೆ. ಅನೇಕರು ಮಧುಮೇಹ ಹೊಂದುತ್ತಾರೆ ಅಥವಾ ಅವರು ಮೊದಲೇ ಮಧುಮೇಹ ಹೊಂದಿದವರಾಗಿದ್ದರೆ ಕೋವಿಡ್ ನಂತರ ಅದು ನಿಯಂತ್ರಣಕ್ಕೆ ಬರುವುದಿಲ್ಲ. ಶ್ವಾಸಕೋಶದ ಫೈಬ್ರೋಸಿಸ್ ಸಮಸ್ಯೆಯೂ ಕಾಡುತ್ತದೆ. ಇವುಗಳನ್ನು ಪ್ರತಿ ತಿಂಗಳು ಪರಿಶೀಲಿಸಬೇಕಾಗುತ್ತದೆ” ಎಂದು ಜಯದೇವ ಹೃದ್ರೋಗ ರೋಗಗಳ ನಿರ್ದೇಶಕ ಡಾ. ಮಂಜುನಾಥ್ ಸಿಎನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂರು ತಿಂಗಳ ಸುದೀರ್ಘ ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಂಡ ಹಿರೇಕೆರೂರಿನ ರಾಮಪ್ಪ ಕಲ್ವಾಡ್ (49) ಆಯಾಸ ಮತ್ತು ಕೀಲು ನೋವು ತನ್ನ ಜೀವನೋಪಾಯದ ಮೇಲೆ ಪರಿಣಾಮ ಬೀರಿದೆ ಎಂದು ಹೇಳುತ್ತಾರೆ. “ಮೊದಲು ಲಾಕ್‌ಡೌನ್ ನನ್ನ ಉದ್ಯೋಗವನ್ನು ಕಸಿದುಕೊಂಡಿತು. ನಾನು ಏಳು ಗಂಟೆಗಳ ಕಾಲ ನಿಂತು ಬಟ್ಟೆಗಳಿಗೆ ಇಸ್ತ್ರಿ ಮಾಡುತ್ತಿದ್ದೆ. ಈಗ ನನ್ನ ಕಾಲುಗಳಲ್ಲಿ ಭೀಕರವಾದ ಕೀಲು ನೋವಿನಿಂದಾಗಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ನಿಲ್ಲಲು ಸಾಧ್ಯವಿಲ್ಲ. ವಿಕ್ಟೋರಿಯಾ ಆಸ್ಪತ್ರೆಗೆ ಹೋದಾಗ ಅವರು ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಇದು ಸಾಮಾನ್ಯ ಎಂದು ಹೇಳಿದರು “ಎಂದು ರಾಮಪ್ಪ ಹೇಳುತ್ತಾರೆ.
ಅವರ ಮಾತನ್ನು ಅನುಮೋದಿಸುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ಡಾ.ಚಂದ್ರಶೇಖರ್ ಕೀಲು ನೋವು ಕೋವಿಡ್ ನಂತರದ ಲಕ್ಷಣ ಎಂದು ಒಪ್ಪಿಕೊಳ್ಳುತ್ತಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮೂಲಕ ಕೋವಿಡ್ ನಂತರದ ಪರಿಣಾಮಗಳ ಅಧ್ಯಯನವನ್ನು ಯೋಜಿಸಲಾಗಿದೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ. “ಉದ್ಯೋಗ ನಷ್ಟ, ಹದಗೆಟ್ಟ ಆರ್ಥಿಕ ಸ್ಥಿತಿ ಅಥವಾ ಪ್ರೀತಿಪಾತ್ರರ ಸಾವು ಪರೋಕ್ಷ ಜನರ ಮೇಲೆ ಪರಿಣಾಮ ಬೀರಿವೆ. ದೈಹಿಕ ಸಮಸ್ಯೆಗಳೊಂದಿಗೆ ಯಾವುದೇ ಸಂಬಂಧವಿಲ್ಲದಿದ್ದರೂ, ಕೋವಿಡ್ -19 ಗೆ ಸಂಬಂಧಿಸಿದ ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಡುವುದು ಇತ್ತೀಚಿಗೆ ಸಾಮಾನ್ಯವಾಗಿದೆ ” ಎಂದು ಅವರು ವಿವರಿಸಿದ್ದಾರೆ.

ಈ ಮಧ್ಯೆ ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್ (ಆರ್‌ಜಿಐಸಿಡಿ)ನಲ್ಲಿ ಕೋವಿಡ್‌ನಿಂದಾಗಿ ಶ್ವಾಸಕೋಶದ ಕಾಯಿಲೆಗಳಿಗೆ ಸಂಬಂಧಿಸಿದ ಗರಿಷ್ಠ ಸಂಖ್ಯೆಯ ಪ್ರಕರಣಗಳು ದಾಖಲಾಗುತ್ತಿವೆ. ಹಾಗಾಗಿ ಅದು ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ನಂತರದ ಆರೈಕೆ ಕೇಂದ್ರವನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. “ತೀವ್ರ ತೂಕ ನಷ್ಟ, ಆಯಾಸ, ಅಲರ್ಜಿ, ಖಿನ್ನತೆ, ಶುದ್ಧತ್ವ ಮಟ್ಟದಲ್ಲಿನ ಕುಸಿತ, ಮನಸ್ಥಿತಿಯಲ್ಲಿನ ಬದಲಾವಣೆಗಳು ಕೋವಿಡ್‌ನಿಂದ ಚೇತರಿಸಿಕೊಂಡ ರೋಗಿಗಳಿಂದ ಕೇಳಿ ಬರುತ್ತಿರುವ ಕೆಲವು ಸಾಮಾನ್ಯ ದೂರುಗಳಾಗಿವೆ. ನಾವು ಶ್ವಾಸಕೋಶದ ಕಾರ್ಯ ಪರೀಕ್ಷೆ, ಶ್ವಾಸಕೋಶದ ಸ್ಥಿತಿಸ್ಥಾಪಕತ್ವ ಪರೀಕ್ಷೆ, ಎದೆಯ ಕ್ಷ-ಕಿರಣ, ಇಸಿಜಿ, ಎಚ್‌ಬಿ ಮಟ್ಟದ ಪರಿಶೀಲನೆ ಮತ್ತು ಪುನರ್ವಸತಿ ಸಮಾಲೋಚನೆ ನಡೆಸುತ್ತಿದ್ದೇವೆ. ಆದರೆ ನಮ್ಮ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಸೌಲಭ್ಯವಿಲ್ಲ. ಹಾಗಾಗಿ ನಾವು ಮೊಬೈಲ್ ಆರೈಕೆ ಕೇಂದ್ರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೇವೆ” ಎನ್ನುತ್ತಾರೆ ಆರ್‌ಜಿಐಸಿಡಿಯ ನಿರ್ದೇಶಕರಾದ ಸಿ ನಾಗರಾಜ್.
ಗ್ರಾಮೀಣ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವುದು ಮತ್ತು ಯಾವುದೇ ವೈರಲ್ ಸೋಂಕು ದೀರ್ಘಕಾಲದ ಪರಿಣಾಮಗಳನ್ನು ಉಂಟುಮಾಡಬಹುದು ಮತ್ತು ಇವು ಶಾಶ್ವತವಲ್ಲ ಎಂದು ವಿವರಿಸುವುದು ಮುಖ್ಯ ಎಂದು ವೈದ್ಯರು ಹೇಳುತ್ತಾರೆ. ಪಾರ್ಶ್ವವಾಯು ಮತ್ತು ಇತರ ಹೃದಯದ ತೊಂದರೆಗಳನ್ನು ಹೊರತುಪಡಿಸಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಕೋವಿಡ್‌ನಿಂದ ಚೇತರಿಸಿಕೊಂಡ ರೋಗಿಗಳಿಗೆ ನಿಯಮಿತವಾಗಿ ಮಾಸಿಕ ತಪಾಸಣೆ ನಡೆಸಿ ಧೈರ್ಯ ತುಂಬುವ ಕೆಲಸ ಆಗಬೇಕಿರುವುದು ಸದ್ಯದ ತುರ್ತು.






