ಪ್ರಮಾಣ ವಚನ ಸ್ವೀಕರಿಸಿದ ಮಾರನೇ ದಿನವೇ ನೆರೆ ಪ್ರದೇಶಗಳ ಪ್ರವಾಸ ಮಾಡಿದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಇದೀಗ ದೆಹಲಿಗೆ ಹಾರಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ದೆಹಲಿಯ ವರಿಷ್ಠರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸುವುದು ಮತ್ತು ಆಶೀರ್ವಾದ ಪಡೆಯುವುದು ಎಲ್ಲಾ ರಾಷ್ಟ್ರೀಯ ಪಕ್ಷಗಳಲ್ಲಿ ಪಾಲಿಸಿಕೊಂಡುಬಂದಿರುವ ಸಂಪ್ರದಾಯ. ಬೊಮ್ಮಾಯಿ ಅವರು ಕೂಡ ಅಂತಹದ್ದೇ ಸಂಪ್ರದಾಯ ಪಾಲನೆಯ ಭಾಗವಾಗಿ ದೆಹಲಿಗೆ ಹೋಗಿದ್ದಾರೆ. ಜೊತೆಗೆ ರಾಜ್ಯದ ನೆರೆಯ ಕುರಿತು ಕೇಂದ್ರದ ಸಹಾಯ ಯಾಚಿಸಲು ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂಬುದು ಬಿಜೆಪಿ ಹೇಳಬಹುದಾದ ನಿರೀಕ್ಷಿತ ಪ್ರತಿಕ್ರಿಯೆ.
ಆದರೆ, ಕೇವಲ ಮುಖ್ಯಮಂತ್ರಿಯೊಬ್ಬರೇ ಪ್ರಮಾಣವಚನ ಸ್ವೀಕರಿಸಿದ್ದು, ಅವರ ಸಂಪುಟ ಸಹೋದ್ಯೋಗಿಗಳ ಸ್ಥಾನಗಳು ಖಾಲಿಯೇ ಇರುವಾಗ, ಏಕವ್ಯಕ್ತಿ ಸಂಪುಟದ ಮುಖ್ಯಸ್ಥರಾಗಿ ಮುಖ್ಯಮಂತ್ರಿಯೊಬ್ಬರು ಪಕ್ಷದ ಹೈಕಮಾಂಡಿನತ್ತ ಹೆಜ್ಜೆ ಹಾಕಿದರೆ ಅದಕ್ಕೆ ಹುಟ್ಟುವ ಅರ್ಥಗಳು ಹಲವು. ಅಂತಹ ಹಲವು ಅರ್ಥಗಳ ಭಾಗವಾಗಿಯೇ ಇದೀಗ ಮುಖ್ಯಮಂತ್ರಿಗಳ ದೆಹಲಿ ಯಾತ್ರೆಯೊಂದಿಗೆ ಸಂಪುಟ ರಚನೆಯ ಕಸರತ್ತಿನ ವಿಷಯವೂ ಪ್ರಸ್ತಾಪಕ್ಕೆ ಬಂದಿದೆ. ತಮ್ಮ ಹೊಸ ಸಂಪುಟದ ಕುರಿತ ಚರ್ಚೆಗಾಗಿಯೇ ಬೊಮ್ಮಾಯಿ ಅವರು ದೆಹಲಿಗೆ ಹಾರಿದ್ದಾರೆ ಮತ್ತು ಯಾರೆಲ್ಲಾ ತಮ್ಮ ‘ಟೀಂ ಬೊಮ್ಮಾಯಿ’ಯ ಭಾಗವಾಗಬೇಕು ಎಂಬುದನ್ನು ದೆಹಲಿ ವರಿಷ್ಠರಿಗೆ ಮನವರಿಕೆ ಮಾಡಲು ತಮ್ಮದೇ ಆದ ಪಟ್ಟಿಯನ್ನೂ ತೆಗೆದುಕೊಂಡು ಹೋಗಿದ್ದಾರೆ. ಆ ಪಟ್ಟಿಯನ್ನು ವರಿಷ್ಠರ ಮುಂದಿಟ್ಟು ಅಲ್ಲಿನ ಹೆಸರುಗಳು ಸಾಧಕ-ಬಾಧಕ ಚರ್ಚಿಸಿ ಅನುಮತಿ ಪಡೆದುಕೊಂಡೇ ಅವರು ವಾಪಸ್ಸಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಹಾಗೆ ನೋಡಿದರೆ, ಇದು ಜನರಿಂದ ಚುನಾಯಿತರಾಗಿ ಬಹುಮತ ಪಡೆದುಕೊಂಡ ಸಂದರ್ಭದ ಹೊಸ ಉಮೇದಿನ, ಯಾವ ಭಿನ್ನಮತ-ಗುಂಪುಗಾರಿಕೆಗಳಿಗೆ ಆಸ್ಪದವಿರದ ಹೊಚ್ಚಹೊಸ ಸರ್ಕಾರ ರಚನೆಯ ಸಂದರ್ಭವಲ್ಲ. ಕಳೆದ ಮೂರೂಕಾಲು ವರ್ಷದಲ್ಲಿ ಒಂದು ಸಮ್ಮಿಶ್ರ ಸರ್ಕಾರವನ್ನು ಕಂಡು, ಅದನ್ನು ಆಪರೇಷನ್ ಕಮಲದ ಮೂಲಕ ಉರುಳಿಸಿ, ಬಳಿಕ ತಮ್ಮದೇ ಪಕ್ಷದ ನಾಯಕ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚಿಸಿ, ಬಳಿಕ ಭ್ರಷ್ಟಾಚಾರ ಮತ್ತು ಗುಂಪುಗಾರಿಕೆಯ ಗಂಭೀರ ಆರೋಪದ ಹಿನ್ನೆಲೆಯ ಭಾರೀ ಭಿನ್ನಮತೀಯ ಚಟುವಟಿಕೆಗಳ ಕಾರಣಕ್ಕೆ ಆ ಸರ್ಕಾರವನ್ನು ವಿಸರ್ಜಿಸಿ, ಇದೀಗ ಮತ್ತೊಂದು ಸರ್ಕಾರ ರಚನೆಯ ಕಸರತ್ತು.
ಹಾಗಾಗಿ ಈಗ ಸಂಪುಟ ರಚನೆ ಎಂಬುದು ಅಷ್ಟು ಸರಳವಿಲ್ಲ. ಹಳೆಯ ಅಸಮಾಧಾನದ ಲಗೇಜು ಮತ್ತು ಹೊಸ ಬೇಡಿಕೆಯ ಭಾರ ಎರಡೂ ಮುಖ್ಯಮಂತ್ರಿಗಳ ಹೆಗಲ ಮೇಲಿದೆ. ಅಂತಹ ಭಾರವನ್ನು ಹೊತ್ತೇ ಅವರು ದೆಹಲಿಗೆ ಹೋಗಿದ್ದಾರೆ. ಅಲ್ಲಿ ವರಿಷ್ಠರೊಂದಿಗೆ ಚರ್ಚಿಸಿ ಆ ಭಾರವನ್ನು ತುಸು ಹಗುರವಾಗಿಸಿಕೊಂಡು ವಾಪಸು ಬೆಂಗಳೂರಿಗೆ ಮರಳಲಿದ್ದಾರೆ. ಬೆಂಗಳೂರಿಗೆ ಮರಳಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆಯ ಅಧಿಕೃತ ಘೋಷಣೆ ಹೊರಬೀಳಲಿದೆ ಎಂಬುದು ಆಪ್ತ ಮೂಲಗಳ ಮಾಹಿತಿ.
ಈ ನಡುವೆ ಮುಖ್ಯಮಂತ್ರಿಗಳು ದೆಹಲಿಗೆ ಓಯ್ದಿರುವ ಪಟ್ಟಿಯ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಒಂದೊಂದು ಬಣದವರು ಒಂದೊಂದು ಹೆಸರುಗಳನ್ನು ತೇಲಿಬಿಡುತ್ತಿದ್ದಾರೆ. ಒಂದೊಂದು ವಲಯದಿಂದ ಒಂದೊಂದು ಹೆಸರು ಹೊರಬೀಳುತ್ತಿದೆ. ಆದರೆ, ಅಂತಿಮವಾಗಿ ಒಂದೂಮುಕ್ಕಾಲು ವರ್ಷದಲ್ಲಿ ಚುನಾವಣೆಗೆ ಹೋಗಬೇಕಾದ ಹಿನ್ನೆಲೆಯಲ್ಲಿ ಪ್ರದೇಶ, ಜನಾಂಗವಾರು ಎಂಬ ಸಾಂಪ್ರದಾಯಿಕ ಲೆಕ್ಕಾಚಾರಗಳ ಜೊತೆಗೆ ಉಳಿದ ಈ ಅಲ್ಪ ಅವಧಿಯಲ್ಲಿ ಈ ಸರ್ಕಾರ ಕೆಲಸ ಮಾಡುತ್ತಿದೆ, ಜನರಿಗೆ ಸ್ಪಂದಿಸುತ್ತಿದೆ ಎಂಬುದನ್ನು ಕನಿಷ್ಟ ತೋರುಗಾರಿಕೆಗಾದರೂ ಮಾಡುವಂತಹ ಕ್ರಿಯಾಶೀಲ ಪಡೆಯನ್ನು ಕಟ್ಟಿಕೊಳ್ಳುವ ಅನಿವಾರ್ಯತೆ ಮುಖ್ಯಮಂತ್ರಿಯ ಮುಂದಿದೆ.
ಹಾಗಾಗಿ ಸಹಜವಾಗೇ ಇದ್ದುದರಲ್ಲೇ ಕ್ರಿಯಾಶೀಲರಾಗಿರುವ, ಚಟುವಟಿಕೆಯಿಂದಿರುವ ಮತ್ತು ಆಸಕ್ತಿಯಿಂದ ಕೊಟ್ಟ ಇಲಾಖೆಯ ಕೆಲಸ ಮಾಡಬಲ್ಲಂಥ ಶಾಸಕರನ್ನು ಪ್ರದೇಶ, ಜಾತಿ, ಜನಾಂಗವಾರು ಲೆಕ್ಕದಲ್ಲಿ ಆಯ್ದು ಒಂದು ಪಟ್ಟಿ ಸಿದ್ಧಪಡಿಸಿದ್ದಾರೆ. ಆ ಪಟ್ಟಿಗೆ ಸದ್ಯ ‘ಲೋಕಲ್ ಹೈಕಮಾಂಡ್ ‘ ಆಗಿರುವ ಯಡಿಯೂರಪ್ಪ ಅವರ ಒಪ್ಪಿಗೆ ಪಡೆದಿದ್ದಾರೆಯೇ ಇಲ್ಲವೇ ಎಂಬುದು ಮಾತ್ರ ಇನ್ನಷ್ಟೇ ಗೊತ್ತಾಗಬೇಕಿದೆ. ಏಕೆಂದರೆ; ಆ ಪಟ್ಟಿಯಲ್ಲಿ ಯಡಿಯೂರಪ್ಪ ವಿರುದ್ಧ ಎರಡು ವರ್ಷ ಕಾಲ ನಿರಂತರ ಬಂಡಾಯದ ಕಹಳೆಯೂದಿದ ಹಲವರು ಇದ್ದಾರೆ! ಹಾಗಾಗಿ ಬಿಜೆಪಿಯ ಮೂಲಗಳ ಪ್ರಕಾರ, ಮುಖ್ಯಮಂತ್ರಿಗಳು ಈವರೆಗೆ ಆ ಪಟ್ಟಿಯ ಕುರಿತು ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿಲ್ಲ. ಬದಲಾಗಿ ನೇರ ದೆಹಲಿ ನಾಯಕರೊಂದಿಗೆ ಚರ್ಚಿಸಿ ಅನುಮತಿ ಪಡೆದು ಬಳಿಕ ಯಡಿಯೂರಪ್ಪ ಅವರ ಒಪ್ಪಿಗೆ ಪಡೆಯುವುದು ಎಂಬುದು ಸದ್ಯ ಸಿಎಂ ಲೆಕ್ಕಾಚಾರ ಎನ್ನಲಾಗಿದೆ!
ಹಾಗಾಗಿ ಆ ಪಟ್ಟಿಯ ಹೆಸರುಗಳ ಕುರಿತು ಕುತೂಹಲ ಮೂಡಿದ್ದು, ಮೂಲಗಳ ಪ್ರಕಾರ, ಆ ಪಟ್ಟಿಯಲ್ಲಿ ಈಗಾಗಲೇ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ‘ಬಾಂಬೆ ಬಾಯ್ಸ್’ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ ಎಂಬ ಮಾತೂ ಇದೆ. ಅದರಲ್ಲೂ ಸಿಡಿ ವಿಷಯದಲ್ಲಿ ಈಗಾಗಲೇ ನ್ಯಾಯಾಲಯದ ತಡೆಯಾಜ್ಞೆ ತಂದ 11 ಮಂದಿಯನ್ನು ಸಂಪುಟದಿಂದ ಹೊರಗಿಡುವಂತೆ ಸಂಘಪರಿವಾರ ತಾಕೀತು ಮಾಡಿದೆ. ಈಗಾಗಲೇ ರಮೇಶ್ ಜಾರಕಿಹೊಳಿ ಪ್ರಕರಣದಿಂದಾಗಿ ಬಿಜೆಪಿ ಪಕ್ಷಕ್ಕೆ ಮಾತ್ರವಲ್ಲದೆ ಸಂಘಪರಿವಾರಕ್ಕೂ ಸಾಕಷ್ಟು ಇರಿಸುಮುರಿಸು ಉಂಟಾಗಿದೆ. ಅವರಲ್ಲದೆ, ನ್ಯಾಯಾಲಯದ ತಡೆಯಾಜ್ಞೆ ತಂದಿರುವ ಈ 11 ಮಂದಿಯ ಸಿಡಿಗಳೂ ಹೊರಬಂದರೆ ಮತ್ತಷ್ಟು ತಲೆತಗ್ಗಿಸಬೇಕಾಗುತ್ತದೆ. ಆದ್ದರಿಂದ ನಾಳೆಯ ಅಂತಹ ಸಂದರ್ಭ ಎದುರಾಗದಂತೆ ಈಗಲೇ ಎಚ್ಚರಿಕೆ ವಹಿಸುವುದು ಒಳ್ಳೆಯದು ಎಂಬುದು ಸಂಘಪರಿವಾರದ ಸಲಹೆ ಎನ್ನಲಾಗಿದೆ.
ಈ ನಡುವೆ ಸಿಎಂ ದೆಹಲಿಗೆ ತೆಗೆದುಕೊಂಡಿರುವ ಪಟ್ಟಿಯಲ್ಲಿ ಯಾವೆಲ್ಲಾ ಸಂಭಾವ್ಯ ಹೆಸರುಗಳಿವೆ ಎಂಬ ಕುರಿತು ಹಲವು ಪಟ್ಟಿಗಳು ಹರಿದಾಡುತ್ತಿವೆ. ಹೆಚ್ಚು ಸಾಧ್ಯತೆ ಇರುವ ಅಂತಹದ್ದೊಂದು ಪಟ್ಟಿಯ ಪ್ರಕಾರ, ಕೆ ಎಸ್ ಈಶ್ವರಪ್ಪ, ಆರ್ ಅಶೋಕ್, ಮುರುಗೇಶ್ ನಿರಾಣಿ, ಬಿ ಶ್ರೀರಾಮುಲು, ಡಾ ಅಶ್ವಥನಾರಾಯಣ, ಜೆ ಸಿ ಮಾಧುಸ್ವಾಮಿ, ವಿ ಸುನೀಲ್ ಕುಮಾರ್, ಮುನಿರತ್ನ, ವಿ ಸೋಮಣ್ಣ, ಎಂ ಪಿ ರೇಣುಕಾಚಾರ್ಯ, ಹರತಾಳು ಹಾಲಪ್ಪ ಅಥವಾ ಕುಮಾರ್ ಬಂಗಾರಪ್ಪ, ರಾಜೂಗೌಡ ಅಥವಾ ಶಿವನಗೌಡ ನಾಯಕ್, ಎ ಎಸ್ ಪಾಟೀಲ್ ನಡಹಳ್ಳಿ, ಸತೀಶ್ ರೆಡ್ಡಿ, ಎಸ್ ಎ ರಾಮದಾಸ್, ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ಸಿ ಪಿ ಯೋಗೇಶ್ವರ್, ಪೂರ್ಣಿಮಾ ಶ್ರೀನಿವಾಸ್ ಅಥವಾ ರೂಪಾಲಿ ನಾಯ್ಕ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಸುರೇಶ್ ಕುಮಾರ್, ಎಸ್ ಎಸ್ ಅಂಗಾರ, ಬಾಲಚಂದ್ರ ಜಾರಕಿಹೊಳಿಗೆ ಮಂತ್ರಿ ಸ್ಥಾನ ಒಲಿಯುವ ನಿರೀಕ್ಷೆ ಇದೆ. ಆ ಪೈಕಿ ಕೆ ಎಸ್ ಈಶ್ವರಪ್ಪ, ಬಿ ಶ್ರೀರಾಮುಲು ಮತ್ತು ಆರ್ ಅಶೋಕ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಕೂಡ ಸಿಗುವ ನಿರೀಕ್ಷೆ ಇದೆ.
ಆದರೆ, ದೆಹಲಿಯ ವರಿಷ್ಠರೊಂದಿಗಿನ ಮಾತುಕತೆ ವೇಳೆ ಇದರಲ್ಲಿ ಕೆಲವು ಹೆಸರುಗಳು ಉದುರಬಹುದು, ಮತ್ತೆ ಕೆಲವು ಹೊಸ ಸೇರ್ಪಡೆಯಾಗಲೂಬಹುದು ಎಂಬುದಂತೂ ನಿಜ. ಒಟ್ಟಾರೆ, ನೂತನ ಸಿಎಂ ತಮ್ಮ ‘ಟೀಂ ಬೊಮ್ಮಾಯಿ’ಗೆ ಬಹುತೇಕ ಇಂದೇ ಕೇಂದ್ರ ವರಿಷ್ಠರ ಷರಾ ಪಡೆಯಲಿದ್ದು, ಇನ್ನು ಒಂದೆರಡು ದಿನಗಳಲ್ಲಿ ಪೂರ್ಣಪ್ರಮಾಣದ ಹೊಸ ಸಚಿವ ಸಂಪುಟ ರಚನೆಯಾಗಲಿದೆ!