ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚಿಗೆ ಹೊರತಂದಿರುವ ರೈತ ಮತ್ತು ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆ ಮತ್ತು ಕಾಯ್ದೆಗಳ ಬಗ್ಗೆ ದೇಶದಾದ್ಯಂತ ವ್ಯಾಪಕ ಚರ್ಚೆ, ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಚುನಾವಣಾ ಸಂದರ್ಭದಲ್ಲಿ ಸುದ್ದಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣವನ್ನು ವ್ಯವಸ್ಥಿತ ರೀತಿಯಲ್ಲಿ ದುರ್ಬಳಕೆ ಮಾಡಿಕೊಂಡು ಮತದಾರರನ್ನು ದಿಕ್ಕುತಪ್ಪಿಸಿ ತಮ್ಮ ಗುರಿ ಸಾಧಿಸುವ ಹುನ್ನಾರದಲ್ಲಿ ಆಳುವ ವರ್ಗ ಇಂದು ಅಪಾರ ಪರಿಣಿತಿ, ಸಾಮರ್ಥ್ಯ ಸಾಧಿಸಿದೆ. ಇದು ಹೀಗೇ ಮುಂದುವರಿದಲ್ಲಿ ಜನಪರ ಚಳುವಳಿ, ಹೋರಾಟ, ಪ್ರತಿಭಟನೆಗಳು ವಿಫಲವಾಗುವುದು ಮಾತ್ರವಲ್ಲ ಚುನಾವಣಾ ಆಧಾರಿತ ಜನ ತಂತ್ರಕ್ಕೆ ಭವಿಷ್ಯವೇ ಇಲ್ಲದಂತಾಗುವ ಅಪಾಯ ನಮ್ಮ ಮುಂದಿದೆ ಎಂದು ಡಾ. ಪ್ರಕಾಶ್ ಕಮ್ಮರಡಿ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಚುನಾವಣೆಯಲ್ಲಿ ಮತದಾರರನ್ನು ದಿಕ್ಕುತಪ್ಪಿಸುವ ಹುನ್ನಾರಕ್ಕೆ ತಡೆ ಹಾಕಿ, ಜನತಂತ್ರವನ್ನು ಉಳಿಸೋಣ ಎಂದು ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ವೇದಿಕೆ ಪರವಾಗಿ ಪ್ರಕಾಶ್ ಕಮ್ಮರಡಿ ಕರೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕಮ್ಮರಡಿ, ದೇಶ, ಅಷ್ಟೇಕೆ ಇಡೀ ವಿಶ್ವವೇ ಕರೋನಾ ಮಹಾಮಾರಿ ಹೊಡೆತಕ್ಕೆ ಸಿಕ್ಕಿ ಕೈ, ಕಾಲು, ಬಾಯಿ ಕಟ್ಟಿ ಬಿದ್ದಿರುವಾಗ ಆಳುವ ವರ್ಗದ ಉಳುವವರಿಗೆ ಮಣೆಹಾಕುವ, ಭೂಮಿ ಕಬಳಿಸುವ ಮೂಲಕ ನೆಡೆಸುತ್ತಿರುವ ನೋಟಿನ ರಾಜಕೀಯ ವ್ಯವಹಾರ ದಿಗ್ಭ್ರಮೆಗೊಳಿಸುವ ಹಾಗೆ ಮಾಡಿದೆ . ಈ ನಿರ್ಣಾಯಕ ಸಮಯದಲ್ಲಿ ಜನತಂತ್ರವನ್ನು ಉಳಿಸುವ ಹೊಣೆಗಾರಿಕೆ ಪ್ರಗತಿಪರ ನಿಲುವು ಹೊಂದಿರುವ ಎಲ್ಲಾ ಸಂಘಟನೆ, ಚಳುವಳಿ, ವ್ಯಕ್ತಿಗಳ ಮೇಲಿದೆ. ತಕ್ಷಣಕ್ಕೆ ಬಂದಿರುವ ಉಪಚುನಾವಣೆ ನಮ್ಮ ಈ ಜವಾಬ್ದಾರಿ, ಹೊಣೆಗಾರಿಕೆಯನ್ನು ನಿರ್ವಹಿಸುವ ಅವಕಾಶ ನೀಡಿದ್ದು, ಇದರ ಸದುಪಯೋಗ ಮಾಡಿಕೊಳ್ಳುವ ಬರವಸೆ ಇದೆ. ಈ ನಿಟ್ಟಿನಲ್ಲಿ “ರೈತ, ದಲಿತ, ಕಾರ್ಮಿಕರ ಐಕ್ಯ ವೇದಿಕೆ ಕಳೆದ ಎರಡು ತಿಂಗಳಿಂದ ನಡೆಸುತ್ತಿರುವ ಹೋರಾಟ, ಪ್ರತಿಭಟನೆಗಳ ಮೂಲಕ ಎತ್ತಿರುವ ವಿಚಾರಗಳು ಈ ಚುನಾವಣೆಯಲ್ಲಿ ಮುಖ್ಯವಾಗಿ ಮತ ಪಟ್ಟಿಗೆ ಮೂಲಕ ಹೊರಬರಬೇಕು ಎನ್ನುವುದು ನಮ್ಮೆಲ್ಲರ ನಿರೀಕ್ಷೆ ಎಂದಿದ್ದಾರೆ.
ಈ ನಿಟ್ಟಿನ ಒಂದು ಸಣ್ಣ ಪ್ರಯತ್ನವಾಗಿ ಸಾಮಾಜಿಕ ಜಾಲತಾಣ ಅಭಿಯಾನ ಪ್ರಾರಂಭಿಸಿದ್ದು ಎಲ್ಲರೂ ಸಕ್ರಿಯವಾಗಿ ಭಾಗವಹಿಸಲು ಕೋರಲಾಗಿದೆ . ಈ ನಿಟ್ಟಿನಲ್ಲಿ ಮಾಡಬಹುದಾದ ಕನಿಷ್ಠ ಕಾರ್ಯಕ್ರಮವೆಂದರೆ ಐಕ್ಯ ಹೋರಾಟದ ಸಾಮಾಜಿಕ ಜಾಲತಾಣ ಗುಂಪು ಪ್ರತಿನಿತ್ಯ ಹೊರತರುವ ಪೋಸ್ಟರ್ ಮತ್ತು ವಿಡಿಯೋಗಳನ್ನು ಅರಿತು, ಅನುಮೋದಿಸಿ ಇತರೆ ಗುಂಪುಗಳಿಗೆ ಫಾರ್ವರ್ಡ್ ಮಾಡಿ. ಹಾಗೆ ಐಕ್ಯ ಹೋರಾಟದ ಫೇಸ್ಬುಕ್, ಟ್ವಿಟರ್ ಗಳಲ್ಲೂ ತಮ್ಮ ಸಕಾರಾತ್ಮಕ ಪ್ರತಿಕ್ರಿಯೆ ದಾಖಲಿಸಿ ಎಂದು ಅವರು ಕೋರಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ವಲಯದ ಮೇಲೆ ಸುಗ್ರೀವಾಜ್ಞೆ ಗಳ ಮೂಲಕ ಧಿಡೀರನೆ ತಂದಿರುವ ತಂದಿರುವ ಎಲ್ಲಾ ಬದಲಾವಣೆಗಳು ಹೇಗೆ ಅಪಾಯಕಾರಿ ಎನ್ನುವ ಬಗ್ಗೆ ವಿವರವಾದ ಟಿಪ್ಪಣಿಯೊಂದನ್ನು ಮುಂದೆ ಲಗತ್ತಿಸಲಾಗಿದೆ. ಆಸಕ್ತರು ಅದರ ಉಪಯೋಗ ಪಡೆದುಕೊಳ್ಳಬಹುದು ಎಂದೂ ಅವರು ತಿಳಿಸಿದ್ದಾರೆ.