ನೆರೆಯ ತೆಲಂಗಾಣ ರಾಜ್ಯದಲ್ಲಿ ಹಾಡಿಯೊಂದರಲ್ಲಿ ಹಸಿವು ಇಂಗಿಸಲಾಗದ ತಂದೆಯೊಬ್ಬ ನಾಲ್ಕು ವರ್ಷದ ಪುತ್ರಿಯನ್ನು ತನ್ನ ಕೈಯ್ಯಾರೆ ಹತ್ಯೆ ಮಾಡಿದ ಆಘಾತಕಾರಿ ಸುದ್ದಿ ಓದುವ ಹೊತ್ತಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಲಸೆ ಕಾರ್ಮಿಕರದಿಂದ ದುಪ್ಪಟ್ಟು ಹಣವಸೂಲಿ ಮಾಡುತ್ತಿರುವ ಅಮಾನವೀಯ ಸುದ್ದಿ ಹೊರಬಿದ್ದಿದೆ. ಇದು ಕನಿಷ್ಠ ಸೂಕ್ಷ್ಮತೆ ಇರುವವರನ್ನೂ ಕಂಗೆಡಿಸುವ ಸಂಗತಿ. ವಲಸೆ ಕಾರ್ಮಿಕರ ಸಮಸ್ಯೆ ಇಂದು ನೆನ್ನೆಯದಲ್ಲಾ. ಲಾಕ್ಡೌನ್ ಘೋಷಿಸಿದ ದಿನದಿಂದಲೂ ಇದೆ. ಅಂದಿನಿಂದಲೂ ವಲಸೆ ಕಾರ್ಮಿಕರ ಸಮಸ್ಯೆಗಳು ಹಾಗೂ ದಯನೀಯ ಪರಿಸ್ಥಿತಿ ಬಗ್ಗೆ ಮುಖ್ಯವಾಹಿನಿ ಮಾಧ್ಯಮಗಳು ನಿರ್ಲಕ್ಷಿಸಿದ್ದರೂ ಪರ್ಯಾಯ ಮಾಧ್ಯಮಗಳು ಬೆಳಕು ಚೆಲ್ಲುತ್ತಲೇ ಬಂದಿವೆ.
ಲಾಕ್ಡೌನ್ ಘೋಷಿಸಿದ ಈ ಮೂವತ್ತೇಳು ದಿನಗಳ ಅವಧಿಯಲ್ಲಿ ವಲಸೆ ಕಾರ್ಮಿಕರು ‘ನಿರ್ಗತಿಕ ವಲಸೆ ಕಾರ್ಮಿಕ’ರಾಗಿ ಪರಿವರ್ತನೆಗೊಂಡಿದ್ದಾರೆ. ಕಷ್ಟಪಟ್ಟು, ಸ್ವಾಭಿಮಾನದಿಂದ ದುಡಿಯುತ್ತಿದ್ದ ಜೀವಗಳು ತುತ್ತು ಕೂಳಿಗೂ ಕೈಯ್ಯೊಡ್ಡುವ ಸ್ಥಿತಿ ಬಂದಿದೆ. ಕಳೆದ ಮೂವತ್ತೇಳು ದಿನಗಳಿಂದ ಕೂಲಿ ಇಲ್ಲದೇ ಅಕ್ಷರಷಃ ನಿರ್ಗತಿಕರಾಗಿರುವ ವಲಸೆ ಕಾರ್ಮಿಕರಿಗೆ ಈಗ ತಮ್ಮ ತಮ್ಮ ತವರಿನ ಗೂಡು ಸೇರಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಆದರೆ, ತಮ್ಮ ಗೂಡು ಸೇರಿಕೊಳ್ಳಲು ಹೊರಟವರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ದುಪ್ಪಟ್ಟು ದರ ವಸೂಲು ಮಾಡಿದ್ದು ದುರಂತವೇ ಸರಿ. ಇದು ಏನನ್ನು ತೋರಿಸುತ್ತದೆ? ರಾಜ್ಯಸರ್ಕಾರವೊಂದಿದೆ, ಅದಕ್ಕೊಬ್ಬ ಸಾರಿಗೆ ಸಚಿವನಿದ್ದಾನೆ, ಆತ ತನ್ನೆಲ್ಲ ಜವಾಬ್ದಾರಿಯನ್ನು ಮರೆತು ಕುಳಿತಿದ್ದಾನೆ. ತತ್ಪರಿಣಾಮ ನಿರ್ಗತಿಕರಾಗಿರುವ ವಲಸೆ ಕಾರ್ಮಿಕರಿಂದಲೂ ಸಾರಿಗೆ ಸಂಸ್ಥೆ ದುಪ್ಪಟ್ಟು ಹಣ ವಸೂಲು ಮಾಡುತ್ತಿದೆ ಎಂಬುದನ್ನು ತಾನೆ?
ಸಾರಿಗೆ ಸಚಿವರಿಗೆ ಜವಾಬ್ದಾರಿ ಇದ್ದಿದ್ದರೆ, ವಲಸೆ ಕಾರ್ಮಿಕರನ್ನು ತಮ್ಮ ಊರಿಗೆ ಕಳುಹಿಸುವ ದಿನವೊಂದು ಬರುತ್ತದೆ, ಅಂತಹ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಾತ್ರವೇ ಅವರನ್ನು ಸುರಕ್ಷಿತವಾಗಿ ಕಳುಹಿಸಲು ಸಾಧ್ಯ. ಅದಕ್ಕಾಗಿ ಕ್ರಮಗಳನ್ನು ಕೈಗೊಂಡು ಎಷ್ಟು ಸಾಧ್ಯವೇ ಅಷ್ಟು ತ್ವರಿತವಾಗಿ ರವಾನಿಸಲು ಏನೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಕಾರ್ಯಕ್ರಮ ರೂಪಿಸುತ್ತಿದ್ದರು. ದುರಾದೃಷ್ಟವಶಾತ್, ಸಾರಿಗೆ ಸಚಿವರು ಆ ಕೆಲಸ ಮಾಡಿಲ್ಲ. ಸಾರಿಗೆ ಸಚಿವರು ಜವಾಬ್ದಾರಿಯಿಂದ ತಮ್ಮ ಕಾರ್ಯನಿರ್ವಹಿಸಿದ್ದರೆ, ಸಾರಿಗೆ ಸಂಸ್ಥೆ ನಿರ್ಗತಿಕರಾಗಿರುವ ವಲಸೆ ಕಾರ್ಮಿಕರಿಂದ ದುಡ್ಡು ವಸೂಲು ಮಾಡುವ ಅಗತ್ಯವೇ ಇರಲಿಲ್ಲ.
ಇಂತಹ ಸಂಕಷ್ಟ ಸ್ಥಿತಿಯಲ್ಲಿ ಜನರ ನೆರವಿಗೆ ಬಾರದಿರುವ ಸಾರಿಗೆ ಸಂಸ್ಥೆಗೂ ಖಾಸಗಿ ಸಾರಿಗೆ ಸಂಸ್ಥೆಗಳಿಗೂ ಏನು ವ್ಯತ್ಯಾಸ? ನಿರ್ಗತಿಕರಾಗಿರುವ ವಲಸೆ ಕಾರ್ಮಿಕರಿಂದಲೂ ದುಪ್ಪಟ್ಟು ವಸೂಲು ಮಾಡುವ ದಂಧೆ ಮಾಡಲಿಕ್ಕೆ ಸಾರಿಗೆ ಸಂಸ್ಥೆ ಇದೆಯೇನು? ಬಸ್ಸುಗಳ ಖರೀದಿಯಲ್ಲಿ ಕೋಟ್ಯಂತರ ರುಪಾಯಿ ಕಮಿಷನ್ ಹೊಡೆಯುವಾಗ, ಪದೇ ಪದೇ ಬಸ್ಸುಗಳನ್ನು ದುರಸ್ಥಿಗೆ ಕಳುಹಿಸುವಾಗ, ಬಿಡಿಭಾಗಗಳನ್ನು ಬದಲಾಯಿಸುವಾಗ ಸಂಸ್ಥೆಗೆ ಆಗುವ ಕೋಟ್ಯಂತರ ನಷ್ಟಕ್ಕಿಂತಲೂ ನಿರ್ಗತಿಕರಾಗಿರುವ ವಲಸೆ ಕಾರ್ಮಿಕರನ್ನು ಉಚಿತವಾಗಿ ಅವರ ಗೂಡಿಗೆ ಸೇರಿಸಿದರೆ ನಷ್ಟವಾಗಿ ಬಿಡುತ್ತದೆಯೇ?
ಒಂದು ಸರ್ಕಾರ, ಆ ಸರ್ಕಾರದಲ್ಲಿನ ಸಚಿವರು ಮಾನವೀಯತೆಯೇ ಇಲ್ಲದೇ ಅಧಿಕಾರ ಚಲಾಯಿಸುವಾಗ ಮಾತ್ರವೇ ಇಂತಹ ಅಮಾನವೀಯ ದುರಂತಗಳು ಸಂಭವಿಸುತ್ತವೆ. ಬೀದಿಗೆ ಬಿದ್ದ ಬಡಜನರ ಸಂಕಷ್ಟಗಳಲ್ಲೂ ಲಾಭ ಹೆಕ್ಕಿಕೊಳ್ಳುವ ದುರ್ಬುದ್ದಿ ಬರುತ್ತದೆ. ಈ ಹಂತದಲ್ಲಿ ಆಗಿರುವ ತಪ್ಪನ್ನು ಸರ್ಕಾರ ತಿದ್ದಿಕೊಳ್ಳಲು ಸಾಧ್ಯವಿದೆ. ಆದರೆ, ಇಂತಹದ್ದೊಂದು ತಪ್ಪು ನಡೆದಿರುವುದು ಅತ್ಯಂತ ಅಮಾನವೀಯ ಎಂಬುದನ್ನು ಸರ್ಕಾರ ಮತ್ತು ಸಾರಿಗೆ ಸಚಿವರು ತಿಳಿಯದೇ ಹೋದರೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಇಂತಹ ಅಮಾನವೀಯ ಆಘಾತಗಳು ನಡೆಯುತ್ತಲೇ ಇರುತ್ತವೆ.
ಇಷ್ಟೆಲ್ಲದರ ನಡುವೆ ಸಮಾಧಾನಕರ ವಿಷಯವೇನೆಂದರೆ, ಕಾರ್ಮಿಕರಿಂದ ವಸೂಲಿ ಮಾಡಲಾಗುತ್ತಿರುವ ದುಪ್ಪಟ್ಟು ಹಣವನ್ನು ರದ್ದುಗೊಳಿಸಲು ಸಿಎಂ ಯಡಿಯೂರಪ್ಪ ಹಸಿರು ನಿಶಾನೆ ತೋರಿಸಿದ್ದಾರೆಂದು, ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಆದಷ್ಟು ಬೇಗ ಈ ನಿರ್ಧಾರ ಜಾರಿಯಾದಲ್ಲಿ, ಸಾರಿಗೆ ಸಚಿವರ ಅಮಾನವೀಯ ನಿರ್ಧಾರದಿಂದ ಕಂಗೆಟ್ಟ ಕಾರ್ಮಿಕರ ದುಗುಡ ಕಡಿಮೆಯಾದೀತು.
ನೆರೆರಾಜ್ಯ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಗೊಂಗಲೂರು ಹಾಡಿಯಲ್ಲಿ ರೈತನೊಬ್ಬ ತನ್ನ ಮಕ್ಕಳ ಹಸಿವು ಇಂಗಿಸಲಾರದೇ ತನ್ನ ಕೈಯ್ಯಾರೆ ನಾಲ್ಕು ವರ್ಷದ ಮಗಳ ಕತ್ತು ಕೊಯ್ದು ಹತ್ಯೆಗೈಯ್ದಿದ್ದಾನೆ. ಈ ಪ್ರಕರಣದ ಬಗ್ಗೆ ದೇಶದ ಪ್ರಧಾನಿಗಾಗಲಿ, ರಾಜ್ಯದ ಮುಖ್ಯಮಂತ್ರಿಗಾಗಲಿ ಅಥವಾ ಉನ್ನತ ಅಧಿಕಾರ ವರ್ಗಕ್ಕಾಗಿ ನಾಚಿಕೆ ಪಡುವಂತಹ ಸಂಗತಿ ಎನಿಸುತ್ತಲೇ ಇಲ್ಲ. ಅದು ಈ ದೇಶದ ದುರಂತ ಮತ್ತು ಮಾನವೀಯತೆ ನಶಿಸುತ್ತಿರುವುದರ ಸಂಕೇತ. ಸಲಬ್ರಿಟಿಗಳ ಹುಟ್ಟುಹಬ್ಬಕ್ಕೆಲ್ಲ ಟ್ವೀಟ್ ಮಾಡುವ ಮಾನ್ಯ ಪ್ರಧಾನಮಂತ್ರಿಗಳ ಗಮನಕ್ಕೆ ಇಂತಹ ಅಮಾನವೀಯ ಘಟನೆ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಪ್ರಧಾನಿ ಮೋದಿ ಇಂತಹದ್ದಕ್ಕೆಲ್ಲ ಟ್ವೀಟ್ ಮಾಡಬೇಕೆ? ಹೌದು. ದೇಶದ ಜನತೆಯ ಹೊಣೆ ನನ್ನದು ನನ್ನ ದೇಶದ ಯಾರೂ ಹಸಿವಿನಿಂದ ಸಾಯಬಾರದು, ಹಸಿವಿನ ಅಸಾಯಕತೆಯಿಂದ ತಮ್ಮವರನ್ನು ಕೊಲ್ಲುವಷ್ಟು ಅತಿರೇಕಕ್ಕೆ ಹೋಗಬಾರದು ಎಂಬ ಸಂದೇಶವೊಂದನ್ನು ಪ್ರಧಾನಿ ನೀಡಿದರೆ, ಅದನ್ನು ಅವರ ಸಚಿವರು, ಅಧಿಕಾರಿಗಳು, ಕೆಳ ಹಂತದ ಅಧಿಕಾರಿಗಳು ಅಷ್ಟೇ ಏಕೆ, ಜನರನ್ನು ಸದಾ ಸಂಪರ್ಕಿಸುವ ಗ್ರಾಮಪಂಚಾಯ್ತಿ ಮಟ್ಟದ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ. ಹಸಿವಿನಿಂದ ಕಂಗೆಟ್ಟವರಿಗೆ ಆಹಾರವನ್ನು ಒದಗಿಸುತ್ತಾರೆ. ಮತ್ತೆ ಇಂತಹ ಅಮಾನವೀಯ ದುರಂತಗಳು ನಡೆಯುವುದು ತಪ್ಪುತ್ತದೆ.
ಭಾರತವೇನೂ ಬಡರಾಷ್ಟ್ರವಲ್ಲ. ಮೋದಿಯೇನೂ ಈ ರಾಷ್ಟ್ರವನ್ನು ಬಲಾಢ್ಯಮಾಡಿಲ್ಲ. ಈ ದೇಶದ ರೈತರು ಬೆವರು ಸುರಿಸಿದ ಪ್ರತಿಫಲವಾಗಿ ಗೋದಾಮುಗಳಲ್ಲಿ 80 ಲಕ್ಷ ಟನ್ ಆಹಾರಧಾನ್ಯ ಇದೆ. ಇದನ್ನು ವ್ಯವಸ್ಥಿತವಾಗಿ ಹಸಿದ ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಈ ದೇಶದ ಪ್ರಧಾನಿಯಾಗಲೀ, ಈ ದೇಶದ ಆಡಳಿತ ವ್ಯವಸ್ಥೆಯಾಗಲೀ ಮಾಡುತ್ತಿಲ್ಲ ಅಷ್ಟೇ. ಅಷ್ಟಕ್ಕೂ ಪ್ರಧಾನಿ ಮೋದಿಯ ಇತ್ತೀಚಿನ ಟ್ವೀಟ್ ಏನು ಗೊತ್ತೇ? ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ (ಸಿಡಿಎಸ್) ಕರೋನಾ ವಾರಿಯರ್ ಗಳ ಮೇಲೆ ವಿಮಾನದಲ್ಲಿ ಹೂಮಳೆಗೆರೆಯುವ ನಿರ್ಧಾರವನ್ನು ಸ್ವಾಗತಿಸುವುದು.
ಪ್ರಧಾನಿ ಮೋದಿಗೆ ಯಾವಾಗ ಏನು ಮಾಡಬೇಕೆಂಬುದರ ಅರಿವಿಲ್ಲ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ. ಕರೋನಾ ಸೋಂಕು ಇನ್ನು ಆರಂಭವಾಗುವ ಹೊತ್ತಿಗೆ, ಚಪ್ಪಾಳೆ ತಟ್ಟಿಸಿ, ತಟ್ಟೆ, ಜಾಗಟೆ ಬಾರಿಸಿದಿ ಮೋದಿ, ನಂತರ ದೀಪ ಹಚ್ಚಿಸಿದರು. ಅದು ತಪ್ಪಲ್ಲಾ. ಆದರೆ, ಯಾವಾಗ? ಕರೋನಾ ವ್ಯಾಪಕವಾಗಿ ಹರಡುತ್ತಿರುವಾಗ, ಕರೋನಾ ವಾರಿಯರ್ ಗಳಿಗೆ ವೈಯಕ್ತಿಕ ಸುರಕ್ಷತಾ ಪರಿಕರ (ಪಿಪಿಇ) ಗಳನ್ನು ಒದಗಿಸುವುದಕ್ಕೆ ಆದ್ಯತೆ ನೀಡಬೇಕೆ ಹೊರತು, ಅವರಿಗೆ ಚಪ್ಪಾಳೆ ತಟ್ಟಿ, ದೀಪ ಹಚ್ಚುವುದಕ್ಕಲ್ಲಾ ಅಲ್ಲವೇ?