ಬೆಂಗಳೂರು : ಸಂತೋಷ್ ಲಾಡ್ ಫೌಂಡೇಶನ್ ನ ಸಂಸ್ಥಾಪಕರಾದ ಸಂತೋಷ್ ಹಾಗೂ ಇಂಡಿಯಾ ರೈಸಿಂಗ್ ಫೌಂಡೇಶನ್ ಸಹಯೋಗದಲ್ಲಿ ನಗರದ ಬಳ್ಳಾರಿ ರಸ್ತೆಯಲ್ಲಿರುವ ಎಂಬೆಸಿ ಒನ್ ನ ಫೋರ್ ಸೀಸನ್ಸ್ ಹೊಟೇಲ್‌ನಲ್ಲಿ ವಿಶೇಷಚೇತನ ಸಂಶೋಧಕರಿಗೆ ದೇಶದ ಮೊದಲ ಬಾರಿಗೆ ಬಹುಶಿಸ್ತೀಯ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗೆ ಪೂರಕವಾದ ಪರಿಸರ ವ್ಯವಸ್ಥೆ ಕಲ್ಪಿಸುವ ʻಇನ್ನೋವ್8ಎಬಿಲಿಟಿ ಫಾರ್ ಇಂಡಿಯಾ (Innov8Ability For India) ಎಂಬ ಮಹಾತ್ವಾಕಾಂಕ್ಷೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಸಚಿವ ಹಾಗೂ ಸಂತೋಷ್ ಲಾಡ್ ಫೌಂಡೇಶನ್‌ನ ಮುಖ್ಯಸ್ಥ ಸಂತೋಷ್ ಎಸ್ ಲಾಡ್, ಒಂದು ಉತ್ತಮ ಕಾರ್ಯಕ್ರಮಕ್ಕೆ ನಮ್ಮ ಫೌಂಡೇಶನ್ ಸಹಯೋಗ ಮಾಡಿದೆ. ವಿಶೇಷಚೇತನರೂ ಸೇರಿದಂತೆ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಮಾದರಿಗಳಿಂದ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ, ವಿಶೇಷಚೇತನರಿಗೆ ಕರ್ನಾಟಕ ಸರ್ಕಾರವು ತರಲು ಉದ್ದೇಶಿಸಿರುವ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಮಸೂದೆಗೆ ಬೆಂಬಲವಾಗಿ ನಿಲ್ಲುವ ಮೂಲಕ ಇಡೀ ದೇಶಕ್ಕೆ ಕರ್ನಾಟಕ ರಾಜ್ಯ ಮಾದರಿಯಾಗುವಂತೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಟ್ರಂಪ್ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!
ನಮ್ಮ ಫೌಂಡೇಶನ್ ಇಂತಹ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ನೀಡಲಿದೆ. ಸಮಾಜದ ನಾಗರಿಕರಾಗಿ ನಮಗೆ ಸಾಕಷ್ಟು ಜವಾಬ್ದಾರಿ ಇದೆ. ಈ ದೇಶ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೇರಿಲ್ಲ. ದೇಶ ಎಲ್ಲರದು. ವಿಶ್ವದ ಹಲವು ದೇಶಗಳು ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ತಲಾದಾಯದಲ್ಲಿ ಹೆಚ್ಚಿವೆ. ಅಂಗವಿಕಲರಿಗೆ ಅವಕಾಶ ದೊರೆಯುವಂತೆ ಮಾಡಲು ನಾವು ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.

ದೇಶದಲ್ಲಿ ಕೋಟ್ಯಂತರ ವಿಶೇಷಚೇತನರು ಇದ್ದಾರೆ. ಅವರಿಗೆ ನಾವು ಒಂದಲ್ಲ ಒಂದು ರೀತಿಯಲ್ಲಿ ನೆರವಾಗಬಹುದು. ನಮ್ಮ ಇಲಾಖೆ ವಿಶೇಷಚೇತನರಿಗೆ ಕರ್ನಾಟಕ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಲು ಸಾಕಷ್ಟು ಕೆಲಸ ಮಾಡುತ್ತಿದೆ. ವಿವಿಧ ರೀತಿಯ ವಿಶೇಷ ಚೇತನರು ಇದ್ದಾರೆ. ಅವರಿಗೆ ಎಲ್ಲ ರೀತಿಯ ಅವಕಾಶಗಳು ಸಿಗುವಂತಾಗಬೇಕು. ಒಂದು ಹೊಸ ಬದಲಾವಣೆಗೆ ನಾವೆಲ್ಲ ಕೈ ಜೋಡಿಸೋಣ ಎಂದು ಹೇಳಿದ್ದಾರೆ.
ವಿಶೇಷಚೇತನರ ಬಲವರ್ಧನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, 2047ರ ವೇಳೆಗೆ ಭಾರತವನ್ನು ವಿಶ್ವದ ಅತ್ಯಂತ ಸಮಗ್ರ ಸಂಶೋಧನೆ ಮತ್ತು ಅಭಿವೃದ್ಧಿ ರಾಜಧಾನಿಯನ್ನಾಗಿ ಮಾಡುವ ಗುರಿ ಹೊಂದಿರುವ ಈ ಕಾರ್ಯಕ್ರಮದ ಅಡಿಯಲ್ಲಿ ₹10 ಕೋಟಿ ರೂ. ಆರಂಭಿಕ ನಿಧಿಯೊಂದಿಗೆ ದೇಶಾದ್ಯಂತ 100+ ಮುಕ್ತ ಪ್ರಯೋಗಾಲಯಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಶೇಷಚೇತನರನ್ನು ಕೇವಲ ವಿವಿಧ ರೀತಿಯ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನಾಗಿ ಪರಿಭಾವಿಸದೆ, ಅವರ ಸಬಲೀಕರಣ, ಒಳಗೊಳ್ಳುವಿಕೆ ಮತ್ತು ಅವರ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಅವರನ್ನು ಆರ್ಥಿಕತೆಯ ಪ್ರಮುಖ ಪಾಲುದಾರರಾಗಿ ಗುರುತಿಸುವ ʻಪರ್ಪಲ್ ಎಕಾನಮಿʼಯ ಮಾದರಿಯಿಂದ ಈ ಯೋಜನೆಯನ್ನು ಮುನ್ನೆಡೆಸುವ ಗುರಿಯನ್ನು ಈ ಇನ್ನೋವ್8ಎಬಿಲಿಟಿ ಹೊಂದಿದೆ ಎಂದು ವಿವರಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಆಹಾರ ಮತ್ತು ಕೃಷಿ, ಇಂಧನ, ನೀರು ಮತ್ತು ಮರು ಉತ್ಪಾದನೆ, ನಿರ್ಮಿತ ಪರಿಸರ ಮತ್ತು ಆವಾಸ ಸ್ಥಾನಗಳು, ಆರೋಗ್ಯ ರಕ್ಷಣೆ ಮತ್ತು ಔಷಧ, ಡೀಪ್ ಟೆಕ್ ಮತ್ತು ಭವಿಷ್ಯದ ಸ್ಟೆಮ್ ತಂತ್ರಜ್ಞಾನ, ಶಿಕ್ಷಣ ಮತ್ತು ಸಾಹಿತ್ಯ, ಅರ್ಥಶಾಸ್ತ್ರ, ಕಲೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆ ಹಾಗೂ ಸ್ಥಳೀಯ ಜ್ಞಾನಶಾಖೆಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ 10 ಮಂದಿಯನ್ನು ಗೌರವಿಸಲಾಯಿತು.
ಸಮರ್ಥನಂ ಟ್ರಸ್ಟ್‌ನ ಸಂಸ್ಥಾಪಕ ಟ್ರಸ್ಟಿ, ಡಾ. ಜಿ ಕೆ ಮಹಾಂತೇಶ್, ಹಿರಿಯ ಕ್ರೀಡಾಪಟು ಶಾಲಿನಿ ಸರಸ್ವತಿ, ಜೆಎಸ್‌ಡಬ್ಲ್ಯೂ ಇಂಡಸ್ಟ್ರೀಸ್‌ನ ಅಧ್ಯಕ್ಷ ಬಿ ಕೆ ಮುರುಗನ್, ಕಿರ್ಲೋಸ್ಕರ್ ಮೋಟಾರ್ಸ್‌ನ ಉಪಾಧ್ಯಕ್ಷರಾದ ರಮೇಶ್ ರಾವ್, ಇಂಡಿಯಾ ರೈಸ್ ಫೌಂಡೇಶನ್‌ನ ಸುನಿಲ್ ಜೋಸ್, ಜಾರ್ಜ್ ಕಣ್ಣನ್, ಕಾರ್ಪೋರೇಟ್ ಉದ್ಯಮಿಗಳು, ಪ್ರಾಯೋಜಕರು ಉಪಸ್ಥಿತರಿದ್ದರು.






