ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು IPL 2026 ಆರಂಭಕ್ಕೂ ಮುನ್ನ ಮಾನವೀಯತೆ ತೋರಿಸಿ, ಕಳೆದ ವರ್ಷದ ವಿಜಯೋತ್ಸವ ದುರಂತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಗೌರವ ಸಲ್ಲಿಸಿದೆ. ಮಾರ್ಚ್ 28ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸನ್ ರೈಸ್ ಹೈದ್ರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.

2025ರ ಜೂನ್‌ನಲ್ಲಿ ಆರ್‌ಸಿಬಿ ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದ ಬಳಿಕ ನಡೆದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಅಭಿಮಾನಿಗಳು ಮೃತಪಟ್ಟಿದ್ದರು. ಈ ಘಟನೆಗೆ ಗೌರವ ಸೂಚಕವಾಗಿ, ಚಿನ್ನಸ್ವಾಮಿ ಕ್ರೀಡಾಂಗಣದ ಪಿ1 ಸ್ಟ್ಯಾಂಡ್‌ನಲ್ಲಿ 11 ಆಸನಗಳನ್ನು ಶಾಶ್ವತವಾಗಿ ಖಾಲಿ ಇರಿಸುವ ಮಹತ್ವದ ನಿರ್ಧಾರವನ್ನು ಆರ್‌ಸಿಬಿ ಮ್ಯಾನೇಜ್ಮೆಂಟ್ ತೆಗೆದುಕೊಂಡಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿರುವ ತಂಡ, “ಈ 11 ಆಸನಗಳು ನಮ್ಮ ತಂಡದೊಂದಿಗೆ ಅವರ ಅಚಲ ಬಾಂಧವ್ಯಕ್ಕೆ ಸಲ್ಲಿಸುವ ಗೌರವ” ಎಂದು ತಿಳಿಸಿದೆ. ಈ ನಡೆಗೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಇದರ ಜೊತೆಗೆ, ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ಆರ್‌ಸಿಬಿ ಆಟಗಾರರು ‘11’ ಸಂಖ್ಯೆಯ ಜೆರ್ಸಿ ಧರಿಸಿ ಕಣಕ್ಕಿಳಿದು ಮೃತರ ಸ್ಮರಣೆಗೆ ನಮನ ಸಲ್ಲಿಸಿದರು. ಅಲ್ಲದೆ, ಪಂದ್ಯಾವಳಿಯ ವೇಳೆ ಆಟಗಾರರು ತಮ್ಮ ತೋಳಿಗೆ ಕಪ್ಪು ಪಟ್ಟಿಯನ್ನು ಧರಿಸಿ ಸಂತಾಪ ಸೂಚಿಸಿದರು.ಆರ್‌ಸಿಬಿಯ ಈ ಮಾನವೀಯ ಹೆಜ್ಜೆ ಕ್ರೀಡಾಭಿಮಾನಿಗಳ ಮನಗೆದ್ದಿದ್ದು, ತಂಡದ ಮೇಲಿನ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ.






