ಹೈದರಾಬಾದ್:
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಹಲ್ಲು ಕೀಳುವ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಾಸುವ ಮುನ್ನವೇ, ಹೈದರಾಬಾದ್ ನಲ್ಲಿ ನಕಲಿ ದಂತವೈದ್ಯನೊಬ್ಬ ಸಿಕ್ಕಿಬಿದ್ದಿರುವುದು ವೈದ್ಯಕೀಯ ಕ್ಷೇತ್ರದ ಮೇಲೆ ಮತ್ತೆ ಆತಂಕ ಹುಟ್ಟಿಸಿದೆ.ಉತ್ತರ ಪ್ರದೇಶ ಮೂಲದ ರಮೇಶ್ ಎಂಬ ವ್ಯಕ್ತಿ, 10ನೇ ತರಗತಿಯನ್ನು ಕೂಡ ಪೂರ್ಣಗೊಳಿಸದೆ, ಕಳೆದ 20 ವರ್ಷಗಳಿಂದ ನಕಲಿ ಪ್ರಮಾಣಪತ್ರಗಳ ಆಧಾರದಲ್ಲಿ ದಂತವೈದ್ಯನಂತೆ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.

ಮಲ್ಕಾಜ್‌ಗಿರಿ ವಿಶೇಷ ಕಾರ್ಯಾಚರಣೆ ತಂಡ (SOT) ನಡೆಸಿದ ದಾಳಿಯಲ್ಲಿ ಈತನ ಅಕ್ರಮ ಕ್ಲಿನಿಕ್ ಪತ್ತೆಯಾಗಿದ್ದು, ಸಿಕಂದರಾಬಾದ್‌ನ ನರೆಡ್ಮೆಟ್ ಪ್ರದೇಶದಲ್ಲಿ ಬಂಧಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ರಮೇಶ್ ತನ್ನನ್ನು ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (BDS) ಪದವಿ ಪಡೆದ ವೈದ್ಯನಂತೆ ತೋರಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದನು. ಅವನು ಹೆಚ್ಚಾಗಿ ತಡರಾತ್ರಿ ಮತ್ತು ಬೆಳಗಿನ ಜಾವದ ವೇಳೆಯಲ್ಲಿ ಕ್ಲಿನಿಕ್ ನಡೆಸುತ್ತಿದ್ದುದರಿಂದ ಸ್ಥಳೀಯರಿಗೆ ಅನುಮಾನ ಮೂಡಿದ್ದು, ಅದರ ಆಧಾರದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು.

ತನಿಖೆಯಲ್ಲಿ ಈತನಿಗೆ ಯಾವುದೇ ಮಾನ್ಯತೆ ಪಡೆದ ವೈದ್ಯಕೀಯ ಅರ್ಹತೆ ಇಲ್ಲವೆಂಬುದು ದೃಢಪಟ್ಟಿದ್ದು, ಸುಮಾರು ಎರಡು ದಶಕಗಳಿಂದ ಅಕ್ರಮವಾಗಿ ಚಿಕಿತ್ಸೆ ನೀಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಇಷ್ಟೊಂದು ವರ್ಷಗಳ ಕಾಲ ಯಾರಿಗೂ ಗೊತ್ತಾಗದಂತೆ ಈತನ ಕಾರ್ಯಾಚರಣೆ ಮುಂದುವರಿದಿರುವುದು ಅಚ್ಚರಿ ಮೂಡಿಸಿದೆ.
ಇದೀಗ, ಈತನ ಬಳಿ ಚಿಕಿತ್ಸೆ ಪಡೆದಿರುವ ರೋಗಿಗಳ ಸಂಖ್ಯೆ ಹಾಗೂ ಸಂಭವನೀಯ ಅನಾಹುತಗಳ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಕ್ಲಿನಿಕ್ ಆರಂಭಿಸಲು ಅಗತ್ಯ ಅನುಮತಿಗಳು ಕಡ್ಡಾಯವಾಗಿದ್ದರೂ, ಈ ಪ್ರಕರಣದಲ್ಲಿ ಆಡಳಿತದ ಮೇಲ್ವಿಚಾರಣೆ ಕುರಿತು ಪ್ರಶ್ನೆಗಳು ಎದ್ದಿವೆ.

ಈ ನಡುವೆ, ಕೆಲ ತಿಂಗಳ ಹಿಂದೆ ನಕಲಿ ವೈದ್ಯರಿಂದ ನಡೆದ ಹೆರಿಗೆ ಪ್ರಕರಣದಲ್ಲಿ ಮಹಿಳೆ ಸಾವನ್ನಪ್ಪಿದ ಘಟನೆ ಕೂಡ ನೆನಪಿಗೆ ಬರುತ್ತಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ನಕಲಿ ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯ ಮತ್ತೊಮ್ಮೆ ಒತ್ತಿ ಹೇಳಲಾಗಿದೆ.
ಇದನ್ನೂ ಓದಿ
ಚುನಾವಣೆಯಲ್ಲಿ ಇವಿಎಂ ಬಾಯ್, ಬ್ಯಾಲೆಟ್ ಹಾಯ್: ಕರ್ನಾಟಕದಲ್ಲಿ ಐತಿಹಾಸಿಕ ವಿಧೇಯಕ ಅಂಗೀಕಾರ!






