
ಧರ್ಮದ ಹೆಸರಿನಲ್ಲಿ ತುಳಿಯಲ್ಪಟ್ಟ, ನಿರಾಕರಿಸಲ್ಪಟ್ಟ, ಸಮುದಾಯಗಳನ್ನ ಉನ್ನತಿಗೇರಿಸಲು ಪ್ರಯತ್ನಿಸಿದ್ದು ಒಂದು ಶಕ್ತಿ; ನಿದ್ರಾವಸ್ಥೆಯಲ್ಲಿದ್ದ ಸಮುದಾಯವನ್ನು ಜಾಗೃತಗೊಳಿಸಿದ್ದು ಮತ್ತೊಂದು ಶಕ್ತಿ; ಈ ಎರಡು ಶಕ್ತಿಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿವೆ. ಒಂದು ಗಾಂಧಿಯೆನ್ನುವ ಉದಾರ ಸಹಿಷ್ಣು ವಾತಾವರಣ ನಿರ್ಮಿಸಿದ ಶಕ್ತಿ ಶಕ್ತಿಯು ‘ಪಾಪ’ ಪರಿಕಲ್ಪನೆಯಲ್ಲಿ ಈ ನೆಲದ ಬದುಕನ್ನು ನಿರ್ವಚಿಸಿದರೆ, ಅಂಬೇಡ್ಕರ್ ಶಕ್ತಿಯು ‘ಅಪರಾಧ’ ಪರಿಕಲ್ಪನೆಯಲ್ಲಿ . ವಾಸ್ತವದಲ್ಲಿ ಎರಡು ಗಾಂಧೀಜಿ ಮತ್ತು ಅಂಬೇಡ್ಕರ್ ಈ ಇಬ್ಬರು ಇಲ್ಲದ ಭಾರತವನ್ಳ್ ಸಾಧ್ಯವಿಲ್ಲ ಒಬ್ಬರು ಜನಸಾಮಾನ್ಯರ ಉಪ್ಪಿಗಾಗಿ ಹೋರಾಡಿದರೆ ಮತ್ತೊಬ್ಬರು ದುರ್ಬಲ ವರ್ಗದವರ ಹೇಳಿದಿಗಾಗಿ ಹೋಡಿದ ಶಕ್ತಿಗಳು ಬೇರ್ಪಡಿಸಿ ನೋಡಲಾಗುತ್ತದೆ. ಆದರೆ ಅವು ಒಂದಕ್ಕೊಂದು ಪೂರಕವಾಗಿವೆ. ಹೊರನೋಟಕ್ಕೆ ವರ್ತಮಾನದ ರಾಜಕೀಯ ಮತ್ತು ತಾಂತ್ರಿಕ ಸವಾಲುಗಳು ಗಾಂಧಿ ಮತ್ತು ಅಂಬೇಡ್ಕರ್ ಅವರ ಕಾಲಘಟ್ಟಕ್ಕಿಂತ ಭಿನ್ನವಾಗಿವೆ. ಆದರೆ ನೈತಿಕ ಮತ್ತು ಸಾಮಾಜಿಕ ಸವಾಲುಗಳು ಒಂದೇ ಆಗಿವೆ. ಈ ಕಾಲದ ಸಾಮೂಹಿಕ ದುರುದ್ದೇಶಪೂರಿತ ಶಕ್ತಿಗಳನ್ನು ಹೋಗಲಾಡಿಸಲು ನಮಗೆ ಏಕಕಾಲಕ್ಕೆ ಗಾಂಧಿ ಮತ್ತು ಅಂಬೇಡ್ಕರ್ ಬೇಕು.
ಗಾಂಧೀಜಿ ಮತ್ತು ಅಂಬೇಡ್ಕರ್ ಇಬ್ಬರು ಇಲ್ಲದ ಭಾರತವನ್ನು ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಒಬ್ಬರು ಜನಸಾಮಾನ್ಯರ ಉಪ್ಪಿಗಾಗಿ ಹೋರಾಡಿದರೆ, ಮತ್ತೊಬ್ಬರು ದುರ್ಬಲ ವರ್ಗದವರ ಏಳಿಗೆಗಾಗಿ ಹೋರಾಡಿದರು. ದೇಶ ವಿಮೋಚನೆಯನ್ನು ಪಕ್ಕಕ್ಕಿಟ್ಟು ವಸಾಹತು ಕಾಲದ ಮತ್ತು ಅದಕ್ಕೂ ಮುಂಚಿನಿಂದಲೂ ಬಂದ ಈ ನೆಲದ ಬದುಕನ್ನೊಮ್ಮೆ ಸಿಂಹಾವಲೋಕನ ಮಾಡಿದರೆ ಈ ಎರಡು ಹೋರಾಟಗಳ ಮಹತ್ತಿನ ಅರಿವಾಗುತ್ತದೆ. ಗಾಂಧಿ ಬಂದೂಕಿನ ಎದುರಿಗೆ ಬಟ್ಟೆ ಬಿಚ್ಚಿ ನಿಂತರೆ, ಅಂಬೇಡ್ಕರ್ ಪ್ರಧಾನರ (ಶೋಷಕರ) ಎದುರಿಗೆ ಕೋಟು ತೊಟ್ಟು ನಿಂತರು. ಬಾಹ್ಯಕ್ಕೆ ಈ ಎರಡು ಭಿನ್ನ ರೂಪಕಗಳಂತೆ ಭಾಸವಾದರೂ ಅಂತರ್ಯದಲ್ಲಿ ಹಲವು ನೆಲೆಗಳಲ್ಲಿ ಸಮಾನ ಅಂಶವುಳ್ಳವಾಗಿವೆ. ಈ ಮಣ್ಣಿನ ಬದುಕಿನ ಬೆಳವಣಿಗೆಗೆ ಪೂರಕವೂ ಆಗಿವೆ. ಇವರಿಬ್ಬರ ರಾಷ್ಟ್ರೀಯ ವಾದಗಳಲ್ಲಿ ಕೊಂಚ ಭಿನ್ನತೆಯೂ ಇತ್ತು. ಗಾಂಧಿಯವರದ್ದು ದೇಸಿ ನೆಲೆಯಲ್ಲಿ ರೂಪುವೊಡೆದ ರಾಷ್ಟ್ರೀಯವಾದ. ಆದರೆ ಅಂಬೇಡ್ಕರ್ ಅವರದು ನಿರ್ದಿಷ್ಟವಾದ ಚೌಕಟ್ಟಿಗೆ ಸೀಮಿತವಾದ ರಾಷ್ಟ್ರೀಯವಾದವಲ್ಲ. ಏಕೆಂದರೆ ಅದಕ್ಕೆ ಹಲವು ಸಾಂಸ್ಕೃತಿಕ ಮತ್ತು ಸಾಮಾಜಿಕ ಆಯಮಗಳಿದ್ದವು. ಇಬ್ಬರೂ ದಾಸ್ಯದಿಂದ, ಸಂಕೋಲೆಯಿಂದ ಹೊರಬರಬೇಕೆಂದು ಆಲೋಚಿಸಿದರು. ಗಾಂಧೀಜಿಯವರದ್ದು ದೇಶ ದಾಸ್ಯದಿಂದ ಹೊರಬರಬೇಕೆಂಬ ಹಂಬಲವಾದರೆ, ಅಂಬೇಡ್ಕರ್ ಅವರದ್ದು ಅದನ್ನೊಳಗೊಂಡಂತೆ ಸಮುದಾಯವು ಶೋಷಣೆಯ ದಾಸ್ಯದಿಂದ ಹೊರಬರಬೇಕೆಂಬ ಹಂಬಲವಾಗಿತ್ತು. ಇಬ್ಬರಲ್ಲೂ ಆಕ್ರಮಣಶೀಲತೆಯ ವಿರುದ್ಧ ಹೋರಾಟವಿತ್ತು. ಆದರೆ ಇಬ್ಬರ ಹೋರಾಟದ ನಡುವಿನ ಎಳೆಯೂ ಸೂಕ್ಷ್ಮವಾದದ್ದು. ಗಾಂಧೀಜಿ ಅನ್ಯರ ವಿರುದ್ಧ ಹೋರಾಡಿದರೆ, ಅಂಬೇಡ್ಕರ್ ನಮ್ಮವರೇನಿಸಿಕೊಂಡವರ ವಿರುದ್ಧ ಹೋರಾಡಿದರು. ಇದೂ ಅನಿವಾರ್ಯವೂ ಆಗಿತ್ತು. ಇವರಿಬ್ಬರ ಆಶಯವೂ ಶ್ರೇಷ್ಠವಾದವುಗಳೇ. ಮಾನವೀಯ ಕಳಕಳಿ ಉಳ್ಳವುಗಳೇ.

ಈ ಎರಡು ಮಾನವ ಪರ ಕಾಳಜಿಗಳು ಸ್ವಾತಂತ್ರೋತ್ತರ ಭಾರತದಲ್ಲಿ ನನ್ನ ತಲೆಮಾರಿನವರು ಹುಟ್ಟುವ ಹೊತ್ತಿಗೆ ಪ್ರಬಲವಾದ ಮಾದರಿಗಳಾಗಿ ಸಮಾಜವನ್ನು ಆವರಿಸಿಕೊಂಡಿದ್ದವು. ಒಂದು ಸಮಾಜವೆಂಬ ಬೆಟ್ಟದ ತುದಿಯಿಂದ ಕೆಳಗೆ ಇಳಿದದ್ದು ಅದುವೇ ಮಹಾತ್ಮ ಗಾಂಧೀಜಿ. ಮತ್ತೊಂದು ಸಮಾಜದ ತಳದಲ್ಲಿದ್ದವರನ್ನು ಮೇಲೆತ್ತುವಲ್ಲಿ ಸ್ವತಃ ಅಪಮಾನ – ನೋವುಗಳನ್ನು ನುಂಗಿಕೊಳ್ಳುತ್ತಲೇ ತಾಳಭಾರವನ್ನೆಲ್ಲ ಹೊತ್ತುಕೊಂಡು ಅನೇಕ ವಿರೋಧಗಳ ನಡುವೆ ಬೆಟ್ಟವನ್ನೇರಿದುದರ ಜೊತೆಜೊತೆಗೆ ಹಲವರನ್ನು ಏರಿಸಿದ ಪ್ರತಿ ಸಂಸ್ಕೃತಿಯ ಮಾದರಿ. ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರದ್ದು. ಈ ಎರಡು ಮಾದರಿಯ ವ್ಯಕ್ತಿತ್ವಗಳು ಇಂದು ತಮ್ಮ ಚಿಂತನೆಯ ಮೂಲಕ ಜಗತ್ತನ್ನಾಳುತ್ತಿವೆ.
ಸಾಮಾಜಿಕ ನೆಲೆಯಲ್ಲಿ ಅಸ್ಪೃಶ್ಯತೆ ಉದ್ದೀಪನಗೊಳ್ಳುತ್ತಿದೆ ಎಂದು ಹೇಳಲು ಹೇಸಿಗೆಯಾಗುತ್ತಿದೆ. ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರದ ಹರಣವಾಗುತ್ತಿರುವ, ಹಿಂಸಾ ಮನೋಭಾವದ ಉದ್ದೇಶಪನೆಗೊಳ್ಳುತ್ತಿರುವ, ಕೋಮು ಭಾವನೆಗಳು ಸ್ವಾತಂತ್ರ್ಯ ಪರಿಕಲ್ಪನೆಗೆ ಮಾರಕವಾಗುತ್ತಿರುವ ವರ್ತಮಾನದ ಸಂದರ್ಭದಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ಅವರನ್ನು ಬದಿಗಿಟ್ಟು ಭಾರತವನ್ನು ನಿರ್ವಚಿಸಲು ಸಾಧ್ಯವಿಲ್ಲ. ಇಬ್ಬರ ಚಿಂತನೆಗಳು ಈ ದೇಶಕ್ಕೆ ಯಾವ ಕಾಲಕ್ಕೂ ಅಗತ್ಯ ಮತ್ತು ಅನಿವಾರ್ಯ ಎಂಬುದನ್ನು ಸತ್ಯದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳು ಸ್ಪಷ್ಟಪಡಿಸುತ್ತವೆ. ಹಾಗಾಗಿ ಸಮಕಾಲಿನ ವಿವೇಚನೆಗೆ ಇವರೀರ್ವರ ಆಲೋಚನೆಗಳು ಅಗತ್ಯವಾದ ಅಸ್ತ್ರಗಳು.

ಈ ಎರಡು ಮಾದರಿಗಳು ಸ್ವತಂತ್ರ ಭಾರತದ ವಿಶಿಷ್ಟ ಚೇತನಗಳು. ಗಾಂಧಿ ಹಾಗೂ ಅಂಬೇಡ್ಕರ್ ಬೆಳೆದ ರೀತಿಗಳೇ ಭಿನ್ನವಾದವು. ಮುಟ್ಟುವ ಗಮ್ಯ ಒಂದೇ ಆಗಿದ್ದಾಗಲೂ ಅವರು ಹಿಡಿದಿದ್ದ ಮಾರ್ಗಗಳು ಭಿನ್ನವಾಗಿದ್ದವು. ಹಾಗಂತ ಅವರಲ್ಲಿ ಎಲ್ಲಾ ವಿಷಯಕ್ಕೂ ಭಿನ್ನಭಿಪ್ರಾಯಗಳಿರಲಿಲ್ಲ. ದೇಶ ಸ್ವಾತಂತ್ರದ ವಿಷಯದಲ್ಲಿ ಅವರಿಬ್ಬರಲ್ಲೂ ಒಂದೇ ಬಗೆಯ ಅಭಿಪ್ರಾಯವಿತ್ತು. ಆದರೆ ಅಸ್ಪೃಶ್ಯತೆಯ ನಿವಾರಣೆಯ ವಿಷಯದಲ್ಲಿ ಭಿನ್ನ ಆಲೋಚನೆಗಳಿದ್ದವು. ಅದಕ್ಕೆ ಕಾರಣವೂ ಇತ್ತು. ಗಾಂಧೀಜಿ ಅಸ್ಪೃಶ್ಯತೆಯನ್ನು ಅನುಭವಿಸಿದವರಲ್ಲ. ಅದರ ಅನುಭವ ಕೇಳಿದ, ನೋಡಿದ ಮಟ್ಟಕ್ಕೆ ಮಾತ್ರ ಸೀಮಿತವಾದದ್ದು. ಆದರೆ ಅಂಬೇಡ್ಕರ್ ಅವರದ್ದು ಸ್ವತಃ ಅನುಭವಿಸಿದ್ದು. ಅಷ್ಟೇ ಅಲ್ಲದೆ ಗಾಂಧೀಜಿಯವರು ಕಾಣದ, ನೋಡದೆ ಇದ್ದ ಅಸ್ಪೃಶ್ಯತೆಯ ಕ್ರೂರ ದೌರ್ಜನ್ಯಗಳನ್ನು ಅಂಬೇಡ್ಕರ್ ಅನುಭವಿಸಿದ್ದರು.
ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ನಡುವೆ ಧರ್ಮ, ಮೀಸಲಾತಿ, ಪ್ರತ್ಯೇಕ ಮೀಸಲಾತಿ ವಿಷಯದಲ್ಲಿ ಭಿನ್ನಾಭಿಪ್ರಾಯವಿರುವದಂತು ಸತ್ಯವಾದದ್ದು. ಕಾರಣ ಅದಕ್ಕೆ ಅವರದೇ ಆದ ಮಿತಿಗಳಿದ್ದವು. ಆ ಮಿತಿಗಳಲ್ಲಿ ನೋಡಿದಾಗ ಅವರನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲಿಕ್ಕೆ ಸಾಧ್ಯ. ಈ ಎಲ್ಲಾ ಮಿತಿಗಳ ನಡುವೆಯೂ ಇಬ್ಬರು ಮಾನವೀಯತೆಯನ್ನು ಎತ್ತಿ ಹಿಡಿಯುವ ಅಚಲವಾದ ನಿಷ್ಠೆ ಹೊಂದಿದ್ದರು. ಆ ನೆಲೆಯಲ್ಲಿಯೇ ಇಬ್ಬರು ಹೋರಾಟಗಳನ್ನು ಮಾಡಿದರು. ಸತ್ಯಕ್ಕಾಗಿ ತನ್ನ ಪರಿಸರದ ವಿರುದ್ಧ ಗಾಂಧೀಜಿ ಸಿಡಿದು ನಿಂತ ನಿಲುವು ಒಂದೆಡೆಯಾದರೆ, ಅಸಶ್ಯತೆಯ ಕಾರಣದಿಂದ ಅಪಮಾನ, ನೋವುಗಳನ್ನು ಅನುಭವಿಸಿದ ಅಂಬೇಡ್ಕರ್ ಅವುಗಳನ್ನು ತೊಲಗಿಸಲು ಆ ಮೂಲಕ ಸಮಸಮಾಜ ಕಟ್ಟಲು ವ್ಯವಸ್ಥೆ ವಿರುದ್ಧ ನಡೆಸಿದ ಹೋರಾಟ ಅವರದಾಗಿತ್ತು.

ಭಾರತೀಯ ಸಂಸ್ಕೃತಿಗೆ ಅಪಚಾರವೆಂಬಂತಹ ಪಿಡುಗು ಅಸ್ಪೃಶ್ಯತೆ. ಇದು ಪೇಷಗಳ ಕಾಲದಿಂದ ಯಾವ ರೀತಿಯಲ್ಲಿ ಬಳಕೆಯಲ್ಲಿತ್ತು ಎನ್ನುವುದು ಎಂತವರಿಗೂ ದಂಗು ಬಡಿಸುತ್ತದೆ. ಊರ ಪ್ರವೇಶದ ನಿರ್ಬಂಧ, ಬೆನ್ನಿಗೆ ಬಾರಿಗೆ, ಕೊರಳಲ್ಲಿ ಪರಕೆ ಹಾಕಿಕೊಂಡು ‘ಜೋಹರ್ ಮಾಯೆ ಬಾಪ್’ ಎಂದು ಕೂಗುತ್ತಾ ಊರ ಪ್ರವೇಶ ಮಾಡುವುದು. ಇಂತಹ ಕ್ರೂರ ಪದ್ಧತಿಯನ್ನು ನಡೆಸಿಕೊಂಡು ಬಂದ ವರ್ಗದಿಂದ ಗಾಂಧೀಜಿ ಬಂದರೆ, ಆ ಅಮಾನವೀಯತೆಯನ್ನು ಅನುಭವಿಸಿದ, ಅನುಭವಿಸುತ್ತಿರುವ ಸಮುದಾಯದಿಂದ ಬಂದ ಅಂಬೇಡ್ಕರ್ ಅವರು ಪಯಣಿಸಿದ ದಾರಿ ಸುಖಕರವಾಗಿರಲಿಲ್ಲ.
ಬುದ್ಧ, ಬಸವ ಹಾಗೂ ಗಾಂಧೀಜಿ ಇವರೆಲ್ಲ ಭಾರತೀಯ ಸಮಾಜದ ಅಸ್ಪೃಶ್ಯತೆ ಎಂಬ ರೇಖೆಯ ಹೊರಗಿದ್ದವರು. ಆದರೆ ಅಂಬೇಡ್ಕರ್ ಅವರು ಈ ಅಪಮಾನದ ರೇಖೆಯೊಳಗಿದ್ದವರು. ಈ ಜನ್ಮಜಾತ ಕೊರಳಿಗಂಟಿಕೊಂಡು ಬಂದ ಕೊಳೆಯನ್ನು ಗಾಂಧೀಜಿ ಕೀಳಲೆತ್ನಿಸಿದರು. ಅಷ್ಟೇ ಅಲ್ಲ ಮುಂದೊಂದು ಜನ್ಮವೆನ್ನುವುದೇನಾದ್ರು ಇದ್ದರೆ ನಾನು ಅಸ್ಪೃಶ್ಯನಾಗಿ ಹುಟ್ಟಲು ಬಯಸುತ್ತೇನೆ. ‘ಜಾತಿಯನ್ನು ಶಾಸ್ತ್ರಗಳು ಪುರಸ್ಕರಿಸುವುದಾದರೆ, ನಾನು ನನ್ನನ್ನು ಹಿಂದೂ ಎಂದು ಕರೆದುಕೊಂಡು ಅದರಲ್ಲಿ ಉಳಿಯಲಾರೆ’ ಎಂದು ಘೋಷಿಸಿದರು. ಆ ನೆಲೆಯಲ್ಲಿ ಅಪಮಾನಿತರ ನಡುವೆ ತಾವು ಒಬ್ಬರಾಗಲು ಹವಣಿಸುತ್ತಾರೆ. ಬದುಕಿದ್ದಾಗಲೇ ಕಸಗುಡಿಸುವ, ಮಾಲದ ಮಡಿಕೆ, ಗುಂಡಿಗಳನ್ನು ತೊಳೆಯುವವರಾಗಿ ಪರಿವರ್ತಿತರಾಗುವ ಕಡೆ ಮುಖ ಮಾಡಿರುವುದು ಸಾಮಾನ್ಯವಾದ ವಿಚಾರವೇನಲ್ಲ. ಅವರ ಸಮಕಾಲೀನ ಹಿಂದುವಾದಿಗಳಲ್ಲಿ ಗಾಂಧೀಜಿಯವರನ್ನು ಹೊರತುಪಡಿಸಿ ಅಸ್ಪೃಶ್ಯತೆ ನಿವಾರಣೆಯ ವಿಷಯವಾಗಿ ಶ್ರಮಿಸಿದ ನಾಯಕರನ್ನು ಕಾಣಲಾರೆವು.
ಅಂಬೇಡ್ಕರ್ ಅವರು ಅಸ್ಪೃಶ್ಯತೆ ವಿರುದ್ಧ ತಾರ್ಕಿತವಾಗಿ, ವೈಜ್ಞಾನಿಕವಾಗಿ ಬಂಡೆದ್ದರು. ಆ ಅಪಮಾನದ ವಿರುದ್ಧ ಹೋರಾಡುವಾಗ ಆಕ್ರೋಶ ವ್ಯಕ್ತವಾದುದಂತೂ ಸತ್ಯ. ಯಾರೋ ಅಂಟಿಸಿದ ಆ ಕೊಚ್ಚೆಯನ್ನು ತೊಳೆಯಲು ಶ್ರಮಿಸಿದ ರೀತಿ ವಿಭಿನ್ನವಾದದ್ದು. ‘ಸ್ವರಾಜ್ಯವೇ ನನ್ನ ಜನ್ಮ ಸಿದ್ಧ ಹಕ್ಕು’ ಎಂದು ತಿಲಕರು ಸಾರಿದರು. ಅದಕುತ್ತರವಾಗಿ ಅಂಬೇಡ್ಕರ್ ಅವರು ತಿಲಕರು ಒಂದು ವೇಳೆ ಅಸ್ಪೃಶ್ಯರಾಗಿ ಹುಟ್ಟಿದ್ದರೆ ‘ಅಸ್ಪೃಶ್ಯತೆ ನಿವಾರಣೆಯೇ ನನ್ನ ಜನ್ಮ ಸಿದ್ಧ ಹಕ್ಕು’ ಎಂದು ಹೇಳುತ್ತಿದ್ದರು ಎಂದು ಪ್ರತಿಪಾದಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಜಕೀಯ ಸ್ವತಂತ್ರಕ್ಕಿಂತ ಯಾವುದೇ ಒಬ್ಬ ವ್ಯಕ್ತಿಗೆ ಸಾಮಾಜಿಕ ಸ್ವತಂತ್ರ ಬಹಳ ಮುಖ್ಯವಾದದ್ದು ಎಂಬ ಮಾತು ಅಂಬೇಡ್ಕರ್ ಅವರ ದೂರದೃಷ್ಟಿಯ ದ್ಯೋತಕವೆಂಬುದು ಖಚಿತವಾಗುತ್ತದೆ. ಈ ಹೋರಾಟದಲ್ಲಿ ಹಿಂದೂ ಧರ್ಮವೆಂಬ ಗಾಜಿನ ಮನೆಗೆ ಅಂಬೇಡ್ಕರ್ ಅವರ ವಿಚಾರದ ಶಕ್ತಿಯ ಕಲ್ಲು ತಾಗಿದ್ದರಿಂದ ಪುಡಿಯಾದ ಗಾಜಿನ ಚೂರು ಗಾಂಧೀಜಿಯವರಿಗೂ ತಾಗಿರಲು ಸಾಧ್ಯವಿದೆ.
ಅಸ್ಪೃಶ್ಯರಷ್ಟೇ ಹೀನಾಯವಾಗಿ ಮಹಿಳೆಯರನ್ನು ಅನಾದಿಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಅದರಲ್ಲೂ ತಳ ಸಮುದಾಯದ ಮಹಿಳೆಯರ ಸ್ಥಿತಿಯಂತೂ ಅಯೋಮಯವಾಗಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಸ್ತ್ರೀಯರ ಕುರಿತು ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ವ್ಯಕ್ತವಾದ ವಿಚಾರಗಳನ್ನು ಅವಲೋಕಿಸಿದರೆ ಹೆಣ್ಣಿಗೆ ಎಂತ ಸ್ಥಾನ ಇತ್ತು ಹಾಗೂ ಇದೇ ಎನ್ನುವುದು ಅರ್ಥವಾಗುತ್ತೆ. ‘ಯತ್ರ ನಾರ್ಯಸ್ತು ಪೂರ್ಜ್ಯಂತೇ ರಮಂತೇ ತತ್ರ ದೇವತಾಃ ‘ ಅಂದರೆ ಹೆಣ್ಣು ಮಕ್ಕಳು ಎಲ್ಲಿ ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂದು ಹೇಳುತ್ತಲೇ ಅವಳು ಕಿರುಬನ ಹೃದಯದವಳು, ಎಲ್ಲಾ ಕೆಡುಕಿನ ಬೇರು, ಅವಳೊಂದು ಪದಾರ್ಥ, ಭೋಗದ ವಸ್ತು, ಬಳಕೆ ಸೀಮಿತ ಎಂದು ಅವಳ ಸ್ವಾತಂತ್ರ ಹರಣ ಮಾಡಿದ್ದರು. ಇಂಥ ಗ್ರಂಥಗಳನ್ನು ನಂಬಿದ ಗಾಂಧೀಜಿ ‘ಭಾರತದ ಹೆಣ್ಣು ಮಗಳು ನಡುರಾತ್ರಿ ಬೀದಿಯಲ್ಲಿ ಸ್ವತಂತ್ರವಾಗಿ ತಿರುಗಾಡಿದಾಗ ಮಾತ್ರ ಅವಳು ಸ್ವತಂತ್ರಳು, ಅದು ನಿಜವಾದ ಸ್ವತಂತ್ರ’ ಎಂದು ಸ್ತ್ರೀಯರ ಸ್ವಾತಂತ್ರದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಗಾಂಧೀಜಿಯಂತೆ ಅಂಬೇಡ್ಕರ್ ಅವರು ಬೋಧಿಸಲಿಲ್ಲ. ಅದನ್ನು ಒಂದು ಹಕ್ಕನ್ನಾಗಿಸಿ ಸ್ತ್ರೀ ಸ್ವಾತಂತ್ರ್ಯಕ್ಕೆ ನಿಜವಾದ ಮೌಲ್ಯ ತಂದುಕೊಟ್ಟರು.

ದೇಶದಾದ್ಯಂತ ಮತದಾನದ ಹಕ್ಕಿನ ಕುರಿತು ಚರ್ಚೆ ನಡೆದಾಗ ಜಮೀನು ಹೊಂದಿದವರಿಗೆ ಮಾತ್ರ ಮತ ಹಾಕುವ ಹಕ್ಕು ನೀಡಬೇಕೆಂದು ಹೇಳುವವರು ಹೆಚ್ಚಿದ್ದರು. ಹಾಗೆ ಆಗಿದ್ದಲ್ಲಿ ಬಹುಸಂಖ್ಯಾತ ಮಹಿಳೆಯರು, ದಲಿತರು, ದುಡಿಯುವ ವರ್ಗದವರು ಮತದಾನದ ಹಕ್ಕಿನಿಂದ ದೂರ ಉಳಿಯಬೇಕಾಗುತ್ತದೆ. ಹಾಗಾಗಿದ್ದರೆ ಭಾರತದ ಮುಕ್ಕಾಲು ಭಾಗ ಜನಸಂಖ್ಯೆ ಪ್ರಾಣಿಗಳಂತೆ ಬದುಕಬೇಕಾಗುತ್ತದೆ. ‘ನೊಂದವರ ನೋವ ನೋಯದವರೆತ್ತ ಬಲ್ಲರ ಬಲ್ಲರು’ ಎಂಬ ಶರಣರ ಮಾತಿನಂತೆ ಅಂಬೇಡ್ಕರ್ ಅವರಿಗೆ ಅಸ್ಪೃಶ್ಯತೆ ಅಪಮಾನದ ಅರಿವಿದ್ದುದ್ದರಿಂದ ಇಂಥದೊಂದು ಅಪಾಯ ತಪ್ಪಿಸಿ ವಯಸ್ಕ ಮತದಾನ ಪದ್ಧತಿ ಜಾರಿಗೆ ತರಲು ಶ್ರಮಿಸಿದರು. ಅಂಬೇಡ್ಕರ್ ಅವರು ಹಾಗೆ ಮಾಡಿದ್ದರಿಂದಲೇ ಸಾಮಾನ್ಯನಿಗೂ, ರಾಷ್ಟ್ರಪತಿಗೂ ‘ಒಂದೇ ವೋಟು, ಒಂದೇ ಮೌಲ್ಯ’ ಎಂಬ ಅರ್ಥದಲ್ಲಿ ಮಹಿಳೆ ಪುರುಷನ ಸಮಾನವಾಗಿ ನಿಲ್ಲಲು ಸಾಧ್ಯವಾಗಿದೆ. ಮಹಿಳೆ ಅಕ್ಷರ ಪಡೆದು ಪುರುಷನ ಸಮಾನವಾಗಿ ನಿಂತಾಗ ಮಾತ್ರ ಸಾಮಾಜಿಕ ಬದಲಾವಣೆಯ ಸಾಧ್ಯವೆಂದು ಬಲವಾಗಿ ನಂಬಿದ್ದರು. ಸ್ತ್ರೀಯರ ಸ್ವತಂತ್ರ, ಸರ್ವರ ಸಮಾನತೆ ಕುರಿತಾಗಿ ಸಂವಿಧಾನ ಒಂದು ಶಕ್ತಿಯಾಗಿ ನಿಂತಿದೆ. ಸ್ತ್ರೀಸಬಲೀಕರಣದ ‘ಹಿಂದೂ ಕೋಡ್’ ಮಸೂದೆ ಲೋಕಸಭೆಯಲ್ಲಿ ಒಪ್ಪಿತವಾಗಲಿಲ್ಲವೆಂದು ತಕ್ಷಣ ತಮ್ಮ ಮಂತ್ರಿ ಪದವಿಗೆ ರಾಜಿನಾಮೆ ನೀಡಿ ಹೊರಬಂದರು ಅಂಬೇಡ್ಕರ್. ಇದು ಅವರ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ. ದೇಶ ಅಥವಾ ಜಗತ್ತಿನ ಚರಿತ್ರೆಯಲ್ಲಿ ಇಂತಹ ದೃಢ ನಿಲುವಿನ ವ್ಯಕ್ತಿತ್ವ ವಿರಳವೆಂದೇ ಹೇಳಬೇಕು.
ಅಮೇರಿಕಾದಲ್ಲಿ ಓದುವಾಗ ಅಲ್ಲಿನ ಸಮಾನ ಹಕ್ಕುಗಳ ಸಂವಿಧಾನದ ವಿಧಿಯ ಪ್ರಭಾವಕ್ಕೊಳಗಾದ ಅಂಬೇಡ್ಕರ್ ಅವರು ಹೆಣ್ಣು ಮಕ್ಕಳ ಶಿಕ್ಷಣದ ಅನಿವಾರ್ಯತೆಯ ಕುರಿತು ಅವರ ತಂದೆಯ ಸ್ನೇಹಿತರಿಗೆ ಪತ್ರ ಬರೆದು – ‘ನೋಡಿ ಮಕ್ಕಳಿಗೆ ಜನ್ಮ ಕೊಡುವುದೊಂದೇ ತಂದೆ ತಾಯಿಗಳ ಕೆಲಸವಾಗಬಾರದು. ಗಂಡು ಮಕ್ಕಳಿಗೆ ವಿದ್ಯೆ ಕೊಡಿಸುವಂತೆ ಹೆಣ್ಣು ಮಕ್ಕಳಿಗೂ ವಿದ್ಯೆ ಕೊಡಿಸುವ ಕೆಲಸ ಕಡ್ಡಾಯವಾಗಬೇಕು’ ಎಂದು ಸಮುದಾಯದವರನ್ನು ಒತ್ತಾಯಿಸಿದ್ದರು. ಮಹಿಳೆಯು ಕುಟುಂಬದ ಒಳಗೂ ಹೊರಗೂ ದುಡಿಯುತ್ತಿದ್ದಾಳೆ. ಆದ್ದರಿಂದ ಅವಳ ಶ್ರಮ ಸಾರ್ಥಕವಾಗಬೇಕಾದರೆ ರಾಷ್ಟ್ರೀಯ ಉತ್ಪಾದನೆ ಮತ್ತು ಪ್ರಗತಿಯಲ್ಲಿ ಮಹಿಳೆಯರನ್ನು ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಗಾಂಧೀಜಿ – ಅಂಬೇಡ್ಕರ್ ಅವರ ವಿಚಾರಗಳನ್ನು ಪರಿಶೀಲಿಸುತ್ತಿರುವಾಗ ಭಾರತೀಯ ಸಮಾಜ ನಡಕೊಂಡ ರೀತಿ ಎಂತವರನ್ನು ಬೆರವುಗೊಳಿಸುತ್ತದೆ. ಗಾಂಧೀಜಿಯವರು ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯಿಂದ ರೋಸಿ ಹೋರಾಟ ಮಾಡಿ ಭಾರತಕ್ಕೆ ಬಂದಾಗ ಸಿಕ್ಕ ಗೌರವ ಮಹತ್ವದ್ದಾದರೂ, ಅವರ ರಾಜಕೀಯ ಪ್ರವೇಶ ಸುಲಭದ್ದೇನು ಆಗಿರಲಿಲ್ಲ. ಅದೇ ರೀತಿ ಅಂಬೇಡ್ಕರ್ ಅವರ ವಿಷಯಕ್ಕೆ ಬಂದಾಗ ಅವರು ಅಮೆರಿಕದಿಂದ ವಿದ್ಯಾಭ್ಯಾಸ ಮುಗಿಸಿಕೊಂಡು ಭಾರತಕ್ಕೆ ಬಂದಾಗ ದೊಡ್ಡ ಗೌರವವೇನು ಸಿಗಲಿಲ್ಲ. ಆದರೆ ದಂಡು ಮೇಜಿನ ಸಭೆಗೆ ಹಾಜರಾದಾಗ ಸಿಕ್ಕ ಗೌರವ ಮಹತ್ವದ್ದಾಗಿದೆ.

ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧೀಜಿಯವರಿಗೆ ಹೆಸರು ತಂದದ್ದು ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ಧ ಮಾಡಿದ ಹೋರಾಟ. ಇದು ಭಾರತೀಯರೆಲ್ಲರೂ ಗಾಂಧೀಜಿಯವರನ್ನು ಗೌರವಿಸುವಂತೆ ಮಾಡಿತು. ಇದೆ ವೇಳೆಗೆ ಭಾರತದಲ್ಲಿ ರಾಜಾರಾಮ್ ಮೋಹನ್ ರಾಯ್, ಈಶ್ವರಚಂದ್ರ ವಿದ್ಯಾಸಾಗರ್, ಕೇಶವ ಚಂದ್ರಶೇನ್ ಇವರು ಬಾಲ್ಯ ವಿವಾಹ ನಿಷೇಧ, ವಿಧವಾ ವಿವಾಹ ಮುಂತಾದವುಗಳಿಂದ ಸ್ತ್ರೀ ಸ್ಥಾನಮಾನ ಎತ್ತಿ ಹಿಡಿದಿದ್ದರು. ಸ್ವಾತಂತ್ರದ ಪ್ರಥಮ ಹೋರಾಟದ ಪ್ರಭಾವ ವಲಯದಲ್ಲಿ ಗೋಪಾಲಕೃಷ್ಣ ಗೋಖಲೆ, ತಿಲಕ ಮುಂತಾದವರು ಚಳುವಳಿಯ ಮುನ್ನಲೆಯಲ್ಲಿದ್ದರು. ಇಂತಹ ಸಂದರ್ಭದಲ್ಲಿ ಗಾಂಧೀಜಿಯವರ ಪ್ರವೇಶವಾಯಿತು, ದೇಶವನ್ನು ಸುತ್ತಿದ್ದ ಗಾಂಧೀಜಿಯವರು ಸ್ವತಂತ್ರ ಚಳುವಳಿಗೆ ಧುಮುಕಿದರು. ಈ ಹೋರಾಟಕ್ಕೆ ದೇಶ ವಿದೇಶದಲ್ಲಿರುವ ಭಾರತೀಯರೆಲ್ಲರಿಂದ ಬೆಂಬಲ ದೊರೆಯಿತು.
ಇದೇ ಹೊತ್ತಿನಲ್ಲಿ ಅಂಬೇಡ್ಕರ್ ಅವರ ಹೋರಾಟ ಸಾಮಾಜಿಕ ಸಮಾನತೆ, ಅಕ್ಷರ, ಅರಿವು, ಅಸ್ಪೃಶ್ಯತೆ ನಿವಾರಣೆ ಇವುಗಳನ್ನು ಕೇಂದ್ರೀಕರಿಸಿತ್ತು, ಕೆರೆ ನೀರು ಮುಟ್ಟುವುದು, ದೇವಾಲಯ ಪ್ರವೇಶ ದಂತಹ ಹೋರಾಟಗಳನ್ನು ಮಾಡಿದರೆ ಇದೆಲ್ಲಕ್ಕೂ ಭಾರತೀಯ ಸಂಪ್ರದಾಯವಾದಿಗಳಿಂದ ವಿರೋಧ ವ್ಯಕ್ತವಾಯಿತು. ಪರಕೀಯರನ್ನು ವಿರೋಧಿಸುವುದು ಬಹಳ ಸುಲಭದ ಕೆಲಸ. ಆದರೆ ಅಸಮಾನತೆಯ ರೂವಾರಿಗಳಾದ ಆಂತರಿಕ ವೈರಿಗಳನ್ನು ವಿರೋಧಿಸುವುದು ಸುಲಭದ ವಿಷಯವಾಗಿರಲಿಲ್ಲ. ಸಮಾನತೆ ಕೇಳುವ ಸಮುದಾಯದಲ್ಲಿ ಅಕ್ಷರದ ಕೊರತೆ ಇತ್ತು. ಮೇಲಾಗಿ ದಲಿತರು, ಹಿಂದುಳಿದವರು ಒಗ್ಗಟ್ಟಾಗಿರಲಿಲ್ಲ. ಜಾತಿಯ ಅಹಂಕಾರದಲ್ಲಿದ್ದವರು ತಮ್ಮ ಕಾಲಾಳುಗಳನ್ನು ತಮ್ಮ ಸಮಾನರಾಗಿ ನೋಡಲು ಸಿದ್ದರಿರಲಿಲ್ಲ. ಸ್ವಾತಂತ್ರ್ಯ ವಿರೋಧಿಯಾಗಿರದ ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆ ಬರದೇ ಹೊರತು ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎಂದು ಹೇಳಿದ್ದರು. ರಾಜಕೀಯ ಸ್ವಾತಂತ್ರ್ಯವೆಂದರೆ ಒಂದು ಆಳುವ ವರ್ಗದಿಂದ ಇನ್ನೊಂದು ಜಾತಿವಾದಿ ಮನಸ್ಥಿತಿಯ ಆಳುವ ವರ್ಗಕ್ಕೆ ಅಧಿಕಾರ ಹಸ್ತಾಂತರವಾದರೆ ಅದರಿಂದ ಪರ ಸಮುದಾಯಗಳಿಗೆ ಲಾಭವೇನಾಗಲಾರದು ಎಂದು ಪ್ರತಿಪಾದಿಸಿದ್ದರು.
ಅಂಬೇಡ್ಕರ್ ಅವರು ಅಮೆರಿಕದಲ್ಲಿ ಓದುವಾಗ ಲಾಲಾ ರಜಪತರಾಯ ಅವರು ಭೇಟಿಯಾಗುತ್ತಾರೆ. ದೇಶದಲ್ಲಿ ಯುವಕರು ದೇಶದ ಸ್ವಾತಂತ್ರದ ಚಳುವಳಿಯಲ್ಲಿ ಭಾಗಿಯಾಗುತ್ತಿದ್ದಾರೆ. ನೀವು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ. ‘ನಾನು ಬೇರೆಯವರ ಆರ್ಥಿಕ ನೆರವಿನಿಂದ ವಿದ್ಯಾಭ್ಯಾಸ ಮಾಡಲು ಬಂದಿದ್ದೇನೆ. ಆದ್ದರಿಂದ ಇದು ನನ್ನ ಆದ್ಯ ಕರ್ತವ್ಯವಾಗಿದ್ದು, ಮೊದಲು ನಾನು ವಿದ್ಯಾಭ್ಯಾಸ ಪೂರ್ಣಗೊಳಿಸುತ್ತೇನೆ’ ಎಂದು ಹೇಳಿದ್ದರು. ಇದಲ್ಲದೆ ದುಂಡುಮೇಜಿನ ಸಭೆಯಲ್ಲಿ ಬ್ರಿಟಿಷರನ್ನು ಕಟ್ಟುವಾಗ ಮಾತುಗಳಿಂದ ಅಂಬೇಡ್ಕರ್ ಅವರು ಜರಿದಿದ್ದರು. ಇದನ್ನು ನಾವು ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಪರಿಗಣಿಸಲೇ ಇಲ್ಲ. ಒಂದೆಡೆ ಅಂಬೇಡ್ಕರ್ ಸ್ವಾತಂತ್ರ ವಿಷಯವಾಗಿ ಮಾತನಾಡುತ್ತಾ ದೇಶಕ್ಕಾಗಿ ಪ್ರಾಣ ಕೊಡಲು ಸಿದ್ಧ ಎಂದಿದ್ದರು. ದೇಶದ ಸ್ವಾತಂತ್ರ್ಯದ ವಿಷಯ ಬಂದಾಗ ನಾನು ಗಾಂಧೀಜಿಯವರಿಗಿಂತ ಎರಡು ಮೈಲು ಮುಂದಿದ್ದೇನೆ ಎಂದು ಹೇಳಿಕೊಂಡಿದ್ದರು.

ಗಾಂಧೀಜಿ – ಅಂಬೇಡ್ಕರ್ ಅವರ ಕಾರ್ಯ ಸಾಧನೆಗಳ ಕುರಿತು ವಿಚಾರ ಮಾಡುವಾಗ ‘ಅಹಿಂಸಾವಾದ’ ಕೂಡ ಹೆಚ್ಚು ಗಮನ ಸೆಳೆಯುತ್ತದೆ. ಗಾಂಧೀಜಿಯವರು ಶ್ರೇಷ್ಠ ಅಹಿಂಸಾವಾದಿಯಾಗಿದ್ದರು ಎಂಬುದನ್ನು ನಾವೆಲ್ಲರೂ ಬಲ್ಲೆವು. ಲೂಯಿಫಿಶರ್ ಅವರು ಗಾಂಧೀಜಿ ಕುರಿತು He was a natural fighter and born peacemaker (Life of Mahatma Gandhi 1951) ಎಂದು ಹೊಗಳಿದ್ದಾರೆ. ಈ ವಿಷಯವನ್ನು ನಿರ್ವಿವಾದದ ಮೂಲಕ ಒಪ್ಪಿಕೊಳ್ಳಬಹುದು. ಅದೇ ರೀತಿ ಅಂಬೇಡ್ಕರ್ ಅವರು ಒಬ್ಬ ದೊಡ್ಡ ಅಹಿಂಸಾವಾದಿಯಾಗಿದ್ದರು. ಅವರ ಬದುಕಿನ ಬಹು ಮುಖ್ಯ ಹೋರಾಟಗಳಲ್ಲಿ ಮಹಾಡ್ ಕೆರೆ ನೀರು ಮುಟ್ಟುವ ಹೋರಾಟ (1927), ನಾಸಿಕ್ ಕಾಲರಾಮ ದೇವಾಲಯ ಪ್ರವೇಶ ಹೋರಾಟ ಪ್ರಮುಖವಾದವುಗಳು. ಮಹಾಡ್ ಕೆರ ನೀರು ಮುಟ್ಟಿದ ನಂತರ ಸವರ್ಣಿಯರಿಂದ ನಿಮ್ನ ವರ್ಗದವರ ಮೇಲೆ ಹಲ್ಲೆ ನಡೆಯುತ್ತದೆ. ಕಾಲರಾಮ ದೇವಾಲಯ ಪ್ರವೇಶದ ಹೋರಾಟದ ಸಂದರ್ಭದಲ್ಲೂ ಸಂಘರ್ಷ ನಡೆಯುತ್ತದೆ. ಈ ಎರಡು ಸಂದರ್ಭದಲ್ಲಿ ಅಂಬೇಡ್ಕರವರು ತಮ್ಮ ಸಮುದಾಯದವರಿಗೆ ಒಂದೇ ಒಂದು ಸೊನ್ನೆ ಮಾಡಿದ್ದರೆ, ಆ ಎರಡು ಸ್ಥಳಗಳಲ್ಲಿ ಮರಣ ಹೋಮವೇ ನಡೆದು ಹೋಗುತ್ತಿತ್ತು. ಇದು ಮುಂದೆ ನಾಗರಿಕ ಯುದ್ಧಕ್ಕೆ ನಾಂದಿಯಾಗುತ್ತಿತ್ತೇನೋ? ಆದರೆ ಅಂಬೇಡ್ಕರ್ ಅವರ ಹಾಗೆ ಮಾಡುವುದಿಲ್ಲ. ಅವರು ಕಾನೂನು ಬಲ್ಲವರಾಗಿದ್ದರಿಂದ, ಬುದ್ಧನ ತತ್ವದ ಅನುಯಾಯಿಗಳು ಆಗಿದ್ದರಿಂದ ಕಾನೂನು ಹೋರಾಟ ಮಾತ್ರ ಮಾಡಿದ್ದರು. ಇದು ಅವರ ಅಹಿಂಸಾವಾದವಲ್ಲದೆ ಮತ್ತೇನು? ಗೀತೆ, ರಾಮಾಯಣ, ಮಹಾಭಾರತಗಳು ಯುದ್ಧವನ್ನು ಪ್ರಚೋದಿಸಿದ್ದಲ್ಲದೆ, ಮನುಷ್ಯನಲ್ಲಿ ಭೇದ ಹುಟ್ಟು ಹಾಕಿ ಜಾತಿ/ವರ್ಣ ಪದ್ಧತಿಯನ್ನು ಎತ್ತಿಹಿಡಿಯುತ್ತವೆ. ಅವುಗಳನ್ನು ನಾವು ನಮ್ಮ ಶ್ರೇಷ್ಠ ಗ್ರಂಥಗಳೆಂದು ಮಾನ್ಯ ಮಾಡುತ್ತೇವೆ. ಸಂವಿಧಾನ ಜಾತಿ/ವರ್ಣ ವರ್ಗಗಳನ್ನು ನಿರಾಕರಿಸುತ್ತದೆ. ಸಂವಿಧಾನದೆದುರಿಗೆ ಎಲ್ಲರೂ ಸಮಾನರು, ಯಾರು ಕೀಳಲ್ಲ ಮೇಲಲ್ಲ. ಅದು ಕೂಡ ಗ್ರಂಥವೇ. ಗೀತೆ ಹಿಂಸಾವಾದವನ್ನು ಪ್ರತಿಪಾದಿಸಿದರೆ, ಸಂವಿಧಾನ ಅಹಿಂಸಾವಾದವನ್ನು ಪ್ರತಿಪಾದಿಸುತ್ತದೆ. ಮನಸ್ಮೃತಿ ‘ಸ್ತ್ರೀ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ’ ಎಂದು ಹೇಳಿದರೆ ಸಂವಿಧಾನ ‘ಸ್ತ್ರೀ ಪುರುಷರು ಸಮಾನರು’ ಎಂದು ಹೇಳುತ್ತದೆ. ಹೀಗಾಗಿ ನಮ್ಮ ಸಂವಿಧಾನ ಅದೊಂದು ಶ್ರೇಷ್ಠ ರಾಷ್ಟ್ರೀಯ ಗ್ರಂಥ. ಸಂವಿಧಾನ ರಚನೆಯಲ್ಲೂ ಅಂಬೇಡ್ಕರ್ ಅವರು ಅಹಿಂಸಾ ತತ್ವವನ್ನು ಪ್ರತಿಪಾದನೆ ಮಾಡಿದ್ದಾರೆ. ಇದನ್ನು ನಾವು ದೇಶಾಭಿಮಾನ ಎಂದು ಪರಿಗಣಿಸುತ್ತಿಲ್ಲವೇಕೆ?

ಗಾಂಧೀಜಿಯವರು ಹಿಂದೂ ಧರ್ಮದ ಒಳಗಿದ್ದುಕೊಂಡೇ ಅದರ ಕಿಲುಬನ್ನು ತೊಳೆಯಲು ಹುಳಿ ಹಿಂಡಿದರು. ಆದರೆ ಹಿಂದೂ ಧರ್ಮವೆಂಬ ಪಾತ್ರೆ ಕಿಲುಬು ಬಿಡಲಿಲ್ಲ, ಪಳಪಳ ಹೊಳೆಯಲು ಇಲ್ಲ. ಅಂಬೇಡ್ಕರ್ ಅವರು ಹಿಂದು ಧರ್ಮದ ಹೊರಗಿದ್ದು ಹಳೆಯದಾಗಿದ್ದ ಹಿಂದೂ ಧರ್ಮವೆಂಬ ಪಾತ್ರೆಯನ್ನು ಮೌಲ್ಡ್ ಮಾಡಿ ಶುದ್ಧ ಪಾತ್ರೆಯನ್ನಾಗಿ ಮಾಡಿ ಕಿಲುಬು ಬಿಡಿಸಲು ಶ್ರಮಿಸಿದರು. ಆದರೆ ಕರ್ಮದ ಜನರು ಅದಾಗದಂತೆ ನೋಡಿಕೊಂಡರು. ಪೂನಾ ಒಪ್ಪಂದದಲ್ಲಿ ಇಬ್ಬರು ಭಿನ್ನ ನಿಲುವು ಹೊಂದಿದ್ದರು. ಗಾಂಧೀಜಿಯವರು ತನ್ನ ಧರ್ಮ ಐಕ್ಯತೆಯಿಂದಿರಲಿ ಎಂದು ಆಟ ಹಿಡಿದರೆ ವಿನಃ ದಲಿತರ ಪ್ರತ್ಯೇಕ ಮೀಸಲು ಆಗುವುದರಿಂದ ಮುಂದಾಗುವ ಅಭಿವೃದ್ಧಿ ಅರಿಯದೇ ಹೋದರು. ದೇಶದ ಐಕ್ಯತೆ ದೃಷ್ಟಿಯಿಂದ ಪೂನಾ ಒಪ್ಪಂದಕ್ಕೆ ಅಂಬೇಡ್ಕರ್ ಅವರು ಅನಿವಾರ್ಯವಾಗಿ ಸಹಿ ಹಾಕಿದರು. ಅಂಬೇಡ್ಕರ್ ಅವರು ಗುಣ ದ್ವೇಷಿಗಳಾಗಿದ್ದರೆ ವಿನಃ ವ್ಯಕ್ತಿ ದ್ವೇಷಿಗಳಾಗಿರಲಿಲ್ಲ .ಅವರೇ ಹೇಳುವಂತೆ ‘ವ್ಯಕ್ತಿ ಮತ್ತು ಸಮಾಜದ ಹಿತ ಬಂದಾಗ ಸಮಾಜದ ಹಿತ ಕಾಪಾಡುತ್ತೇನೆ. ದೇಶ ಮತ್ತು ಸಮಾಜದ ಹಿತ ಬಂದಾಗ ದೇಶದ ಹಿತ ಕಾಪಾಡುತ್ತೆನೆ’ ಎಂದು ದೇಶದ ಐಕ್ಯತೆಗೆ, ಸಮಗ್ರತೆಗೆ ಹೆಗಲು ಕೊಟ್ಟು ನಿಲ್ಲುತ್ತಾರೆ. ಗಾಂಧೀಜಿಯವರ ಜೀವ ಉಳಿಸುವ ಮೂಲಕ ಜೀವ ಕಾರುಣ್ಯದ ವ್ಯಕ್ತಿಯಾಗಿ ಹೊರಹೊಮ್ಮುತ್ತಾರೆ.
ಅಂಬೇಡ್ಕರ್ ಅವರು ‘ಬದುಕಿನದ್ದಕ್ಕೂ ಹಿಂದೂ ಧರ್ಮ, ಮತ್ತು ಧರ್ಮಿಯರನ್ನು ವಿರೋಧಿಸಿದ್ದೇನೆ, ಕಟುವಾಗಿ ಟೀಕಿಸಿದ್ದೇನೆ. ಆದರೆ ಈ ದೇಶಕ್ಕೆ ನಾನು ಕಡಿಮೆ ಅಪಾಯವನ್ನುಂಟು ಮಾಡುವ ಧರ್ಮ (ಬೌದ್ಧಧಮ್ಮ)ನ್ನು ನೀಡಿದ್ದೇನೆ. ಅಷ್ಟೇ ಅಲ್ಲ ಸಂವಿಧಾನ ರಚನಾ ಸಮಿತಿಯ ಸದಸ್ಯನಾಗಿ, ಅಧ್ಯಕ್ಷನಾಗಿ ಕಾರ್ಯ ಮಾಡುವ ಅವಕಾಶ ಇದು ಕೂಡ ನನ್ನ ರಾಷ್ಟ್ರseeve’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅದೇ ರೀತಿ ಗಾಂಧೀಜಿಯವರು ಬದುಕಿರುವವರೆಗೆ ಅಹಿಂಸಾ ತತ್ವವನ್ನೇ ಬೋಧಿಸಿದರು. ಆದರೆ ಅವರು ಹಿಂಸಾವಾದಿಗಳ ಕುತಂತ್ರಕ್ಕೆ ಬಲಿಯಾದರು. ಅಂಬೇಡ್ಕರ್ ಅವರು ಅಹಿಂಸಾ ತತ್ವದ ಧರ್ಮ ಪಾಲನೆ ಮಾಡಿದ್ದಲ್ಲವೇ, ಬುದ್ಧನನ್ನು ಮರಳಿ ಭಾರತಕ್ಕೆ ತಂದರು. ಗಾಂಧೀಜಿಯವರು ಅನೇಕ ವೈರುಧ್ಯಗಳಿಂದ ಬದುಕಿದ್ದರೂ ಅಸ್ಪೃಶ್ಯತೆ ನಿವಾರಣೆ, ಮಹಿಳಾ ಸ್ವತಂತ್ರ ಪರವಾಗಿದ್ದು , ಅಷ್ಟೇ ಅಲ್ಲ ಒಬ್ಬ ಶ್ರೇಷ್ಠ ಮಾನವತಾವಾದಿಯಾಗಿದ್ದರು ಎಂಬುದು ನಿರ್ವಿವಾದ. ಅಂಬೇಡ್ಕರ್ ಅವರು ಸ್ಪಷ್ಟ ಗುರಿ ಹೊಂದಿ ಅದನ್ನು ಮುಟ್ಟಲು ಹಗಲಿರುಳು ಶ್ರಮಿಸಿದರು. ಇಬ್ಬರ ದಾರಿ ಬೇರೆ ಬೇರೆಯಾಗಿದ್ದರು ತಮ್ಮ ನಡುವೆ ದೇಶದ ಹಿತವನ್ನೇ ಹಂಬಲಿಸಿದವರಾಗಿದ್ದರು. ಆಧುನಿಕ ಭಾರತದ ಭದ್ರ ಬುನಾದಿಗೆ ಈ ನೆಲದ ದಲಿತರ, ಶೋಷಿತರ ತ್ಯಾಗವೆಂಬ ಕಲ್ಲು ಅಡಿಗಲ್ಲಾದುದಂತೂ ಸತ್ಯವಾದುದು. ಪ್ರಸ್ತುತ ಸಂದರ್ಭದಲ್ಲಿ ಗಾಂಧೀಜಿ ಬದುಕಿದ್ದರೆ ದಲಿತರ, ದಲಿತ ಮಹಿಳೆಯರ ಮೇಲಿನ ಅತ್ಯಾಚಾರ, ಬಹಿಷ್ಕಾರ, ಅಸ್ಪೃಶ್ಯತೆ ಆಚರಣೆಗಳು ಇನ್ನೂ ಜೀವಂತವಾಗಿರುವುದನ್ನು ಕಂಡು ಅಂಬೇಡ್ಕರ್ ಅವರು ಪ್ರತಿಪಾದಿಸಿದ ಪ್ರತ್ಯೇಕ ಮೀಸಲು ಸಲುವಾಗಿ ಮತ್ತೊಮ್ಮೆ ಅಹಿಂಸಾತ್ಮಕ ಹೋರಾಟಕ್ಕಿಳಿಯುತ್ತಿದ್ದರೇನೋ?

ಒಟ್ಟಾರೆಯಾಗಿ ಬಿಡುಗಡೆಯ ಪ್ರಜ್ಞೆಯ ಸಂಕೇತವಾಗಿ, ನೊಂದವರ ಹೊರಗಣ್ಣು ಮತ್ತು ಒಳಗಣ್ಣುಗಳಾಗಿ ಕಾಣಿಸಿಕೊಂಡ ಗಾಂಧೀಜಿ ಮತ್ತು ಅಂಬೇಡ್ಕರ್ ಈ ದೇಶದ ಭಾವಕ್ಕೆ ಜೀವ ತುಂಬಿದವರು. ದೇಸ ಅಂತಃಸತ್ವದಿಂದಲೇ ರೂಪುಗೊಂಡ ಇವರ ಆಲೋಚನೆಗಳು ಹೇರುವಿಕೆಯ ವಿರುದ್ಧವಾಗಿತ್ತು. ಇಬ್ಬರು ನಡೆ ಬಿಡುಗಡೆ ಎನ್ನುವ ಅಪರಿಮಿತ ಧ್ಯಾನದ ಕಡೆಗೆ ಸಾಗಿತ್ತು. ಆಗಾಗಿ ಬಿಡುಗಡೆನೇ ಅವರಿಗೆ ವಿಕಾಸದ ಮಾರ್ಗವಾಗಿ ಕಾಣಿಸುತ್ತದೆ. ಬಿಡುಗಡೆಯ ಪ್ರಜ್ಞೆ ಭಿನ್ನ ದಾರಿಗಳಲ್ಲಿ ಗುಂಪುಗೊಂಡಿದ್ದಾಗಲೂ ಅವರಿಬ್ಬರು ಒಂದೇ ಹಾದಿಯ ಪಯಣಿಗರು. ವರ್ತಮಾನದ ಸಂಕೀರ್ಣ, ಸಂದಿದ್ದ ಸಾಮಾಜಿಕ ಬದುಕಿನ ಪರಿವರ್ತನೆಗೆ ಇಬ್ಬರ ಚಿಂತನೆಗಳು ಸಹಕಾರಿಯಾಗಬಲ್ಲವೂ,
ನವೀನ ಹೆಚ್ ಎ
ಹನುಭನಹಳ್ಳಿ ಅಂಕಣಕಾರರು ಲೇಖಕರು
ಕೆ ಆರ್ ನಗರ