ರಣದೀಪ್ ಸಿಂಗ್ ಸುರ್ಜೇವಾಲಾ (Ranadeep singh surjewala) ರಾಜ್ಯ ಭೇಟಿ & ಬಳಿಕ ಸಿಎಂ ಸಿದ್ದರಾಮಯ್ಯ (Cm Siddaramaiah) ಶಾಸಕರಿಗೆ ಅನುದಾನ ಬಿಡುಗಡೆ ಮಾಡಲು ಮುಂದಾಗಿರುವ ಬಗ್ಗೆ ಬಿಜೆಪಿ (Bjp) ನಾಯಕರು ಸಾಲು ಸಾಲು ವಾಗ್ದಾಳಿ ನಡೆಸುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್.ಅಶೋಕ್ (R ashok) ಸಿಎಂ ಕುರ್ಚಿ ಉಳಿಸಿಕೊಳ್ಳುವ ಕಸರತ್ತು ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಸೂಪರ್ ಸಿಎಂ ಆಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶಾಸಕರೊಂದಿಗೆ ನಡೆಸಿದ ಸಭೆ ನಂತರ, ಸ್ವಪಕ್ಷೀಯರ ಬಹಿರಂಗ ಅಸಮಾಧಾನಕ್ಕೆ ಬೆಚ್ಚಿ ಬಿದ್ದಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ ಶಾಸಕರಿಗೆ ತಲಾ ₹50 ಕೋಟಿ ಅನುದಾನ ನೀಡಲು ಮುಂದಾಗಿದ್ದಾರೆ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.

ಸ್ವಾಮಿ ಸಿದ್ದರಾಮಯ್ಯನವರೇ, ಮಾತೆತ್ತಿದರೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿರಲ್ಲ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ₹50 ಕೋಟಿಯ ಬೆಣ್ಣೆ ಹಚ್ಚಿ, ವಿಪಕ್ಷ ಶಾಸಕರ ಕ್ಷೇತ್ರಗಳಿಗೆ ದೊಡ್ಡ ಸೊನ್ನೆ ಸುತ್ತಿ ಸುಣ್ಣ ಹಚ್ಚಿದ್ದೀರಲ್ಲ, ಇದು ಮಲತಾಯಿ ಧೋರಣೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿರುವವರು ಮಾತ್ರ ಕರ್ನಾಟಕದ ಪ್ರಜೆಗಳಾ? ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿರುವ ಕ್ಷೇತ್ರಗಳಿಗೆ ಮಾತ್ರ ತಾವು ಮುಖ್ಯಮಂತ್ರಿನಾ? ಕನ್ನಡಿಗರಿಗೆ ದ್ರೋಹ ಬಗೆಯುತ್ತಿರುವ ಲಜ್ಜೆಗೆಟ್ಟ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದು ಆರ್.ಅಶೋಕ್ ಅನುದಾನ ತಾರತಮ್ಯದ ವಿರುದ್ಧ ವಾಚಮಗೋಚರ ವಾಗ್ದಾಳಿ ನಡೆಸಿದ್ದಾರೆ.