ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರತರವಾದ ಬರ ಇದೆ, ಎಲ್ಲಾ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆ ನಿಟ್ಟಿನಲ್ಲಿ ಯಾವುದೇ ಕ್ರಮ ಆಗಿಲ್ಲ, ದೆಹಲಿಯಲ್ಲಿ ಎಲ್ಲಾ ಶಾಸಕರನ್ನು ಕರೆ ತಂದಿರೋದು ಎಷ್ಟು ಸರಿ? ಪ್ರಧಾನಿಗಳ ಜೊತೆ ಮಾತನಾಡುವುದು ಸರಿ? ಶಾಸಕರನ್ನು ಕರೆದುಕೊಂಡು ಹೋಗೋದು ದೊಂಬರಾಟ ಎಂದು ಟೀಕಿಸಿದರು.

ಇದೇ ವೇಳೆ ಲೋಕಸಭಾ ಚುನಾವಣೆ ಕುರಿತು ಮಾತನಾಡಿದ ಬಿಎಸ್‌ವೈ, ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರ ಗೆಲ್ಲುವ ಗುರಿ ಇದೆ, ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡ್ತಿದ್ದೇವೆ. ಬಹುತೇಕ ಯಶಸ್ವಿ ಆಗುವ ವಿಶ್ವಾಸ ಇದೆ. ವಿಜಯೇಂದ್ರ ಅಧ್ಯಕ್ಷ ಆದ ಮೇಲೆ ಪ್ರವಾಸ, ಓಡಾಟ ದೊಡ್ಡ ಶಕ್ತಿ ನೀಡಿದೆ. ಪಕ್ಷ ಬಲ ಪಡಿಸಲು ಹೆಚ್ಚು ಒತ್ತು ನೀಡಿದಂತಾಗಿದೆ. ಕಿಸಾನ್ ಸಮಾನ್ ಯೋಜನೆಗೆ ರೈತರ ಅನುಕೂಲಕ್ಕೆ ಮಾಡಿದ್ದೆವು, ಈ ಎಲ್ಲವನ್ನೂ ಸ್ಥಗಿತ ಮಾಡಿ, ಪುಕ್ಕಟೆ ಕಾರ್ಯಕ್ರಮ ಕೊಡುವುದಾಗಿ ಹೇಳಿಕೊಂಡು ಓಡಾಡ್ತಿದ್ದಾರೆ. ಬರುವ ದಿನಗಳಲ್ಲಿ ದೇಶದ ಜನರು, ರಾಜ್ಯದ ಜನರು ಮೋದಿ ಪರವಾಗಿ ನಿಲ್ಲುತ್ತಾರೆ ಎಂದರು.

ಯಡಿಯೂರಪ್ಪ ಪೆದ್ದು ಪೆದ್ದಾಗಿ ರಾಜಕೀಯ ಹೇಳಿಕೆ ಕೊಡ್ತಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಟಾಂಗ್ ನೀಡಿದ ಮಾಜಿ ಸಿಎಂ, ಸಿದ್ದರಾಮಯ್ಯ ಈಗಾಗಲೇ ದೆಹಲಿಗೆ ಹೋಗಿದ್ದಾರೆ, ಹೇಳಿದ್ದನ್ನೇ ಹೇಳಿಕೊಂಡು ಕೂತಿದ್ದಾರೆ. ಅದರ ಉದ್ದೇಶ ಪ್ರಚಾರ ತೆಗೆದುಕೊಳ್ಳುವುದೇ ಹೊರತು, ಸಮಸ್ಯೆ ಬಗೆಹರಿಸುವುದಲ್ಲ. 15 ಅಥವಾ 16ನೇ ಹಣಕಾಸು ಆಯೋಗ ಇರಲಿ, ಯಾವುದೇ ವಿಚಾರದಲ್ಲಿ ಅವರೇ ಅಧಿಕಾರದಲ್ಲಿ ಇದ್ದಾಗ ಪ್ರಶ್ನೆ ಉದ್ಭವ ಆಗುತ್ತದೆ. ಕೇವಲ ಪ್ರಚಾರಕ್ಕೆ ದೆಹಲಿಗೆ ಹೋಗಿದ್ದಾರೆ, ಇದರಿಂದ ಯಾವುದೇ ಲಾಭ ಇಲ್ಲ, ಪಕ್ಷಕ್ಕೂ, ಜನರಿಗೂ ಹಾನಿಯಾಗುತ್ತದೆ ಎಂದು ತಿರುಗೇಟು ನೀಡಿದರು.
#BSY #BJPKarnataka #Siddaramaiah #BYVijayendra #BJPIndia






