ಬೆಂಗಳೂರು: ಅಧಿಕಾರಕ್ಕೆ ಬಂದು ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಖಜಾನೆ ಖಾಲಿ ಮಾಡಿಕೊಂಡಿರುವ ರಾಜ್ಯ ಸರ್ಕಾರ ಸಿಕ್ಕ ಸಿಕ್ಕ ಕಡೆ ಮೀಸಲಿಟ್ಟ ಅನುದಾನಕ್ಕೆ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ. ಇದೀಗ ಪೌರಕಾರ್ಮಿಕರ ಸಮಸವಸ್ತ್ರಕ್ಕೆ ಮೀಸಲಿಟ್ಟಿದ್ದ 15 ಕೋಟಿ ರೂ.ಗೂ ಕತ್ತರಿ ಹಾಕಿ ಬಿಬಿಎಂಪಿ ಪೌರಕಾರ್ಮಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸಮವಸ್ತ್ರಕ್ಕೆ ಮೀಸಲಿಟ್ಟಿದ್ದ 15 ಕೋಟಿ ರೂ. ಅನುದಾನ ಕಡಿತ ಮಾಡಿರುವುದಕ್ಕೆ ಬಿಬಿಎಂಪಿ ಪೌರಕಾರ್ಮಿಕರ ಸಂಘ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದೆ.
ಬಿಬಿಎಂಪಿ ಪೌರಕಾರ್ಮಿಕರಿಗೆ ಸಮಸವಸ್ತ್ರ, ವೃತ್ತಿ ಉಪಕರಣಗಳ ಖರೀದಿ ಹಾಗೂ ಇತರೆ ಖರ್ಚು ವೆಚ್ಚಕ್ಕೆಂದು 15 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಈ ಅನುದಾನದಲ್ಲೇ ಪೌರಕಾರ್ಮಿಕರಿಗೆ ಸಮಸವಸ್ತ್ರವನ್ನೆಲ್ಲಾ ಪಾಲಿಕೆ ಇದುವರೆಗೆ ಸರಿದೂಗಿಸಿಕೊಂಡಿತ್ತು. ಅಲ್ಲದೆ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿಗೂ ಇದೇ ಹಣವನ್ನು ಬಳಸಿಕೊಳ್ಳಲಾಗುತ್ತದೆ. ಹೀಗಿರುವಾಗ ಏಕಾಏಕಿ ಮೀಸಲಿಟ್ಟಿರುವ ಹಣವನ್ನು ರಾಜ್ಯ ಸರ್ಕಾರ ವಾಪಾಸ್ ಪಡೆದಿದೆ. ರಾಜ್ಯ ಸರ್ಕಾರದ ಈ ನಡೆಗೆ ಬಿಬಿಎಂಪಿ ಪೌರ ಕಾರ್ಮಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ಖಾಯಂ ನೇಮಕಾತಿಗೆ ಹೋರಾಡುತ್ತಿರುವ ಪೌರಕಾರ್ಮಿಕರು. ಭರವಸೆ ಕೊಟ್ಟು ಕಾಯಂಗೊಳಿಸದೇ ಯಾಮಾರಿಸುತ್ತಲೆ ಬಂದಿರುವ ಸರ್ಕಾರ. ನಮ್ಮ ನೋವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಸಮವಸ್ತ್ರ ಹಾಗೂ ಇತರೆ ಉಪಕರಣಗಳ ಖರೀದಿಗೆ ಮೀಸಲಿಟ್ಟಿರುವ ಹಣವನ್ನು ವಾಪಾಸ್ ಕೊಡಬೇಕು. 15 ಕೋಟಿಯಲ್ಲಿ ಒಟ್ಟು 18,500 ಪೌರ ಕಾರ್ಮಿಕರಿಗೆ ಅನುಕೂಲ ಒದಗಿಸಲಾಗುತ್ತಿತ್ತು.ಈ ವರ್ಷದಿಂದ ಅದೂ ಕೂಡ ಕಾರ್ಮಿಕರ ಕೈ ತಪ್ಪಲಿದೆ. ಅನುದಾನ ವಾಪಸ್ ನೀಡದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ ಎಂದಿರುವ ಬಿಬಿಎಂಪಿ ನೌಕರರು.