ಪೂರ್ಣಕ್ರಾಂತಿಯ ಜಯಪ್ರಕಾಶ್ ನಾರಾಯಣ್ ಪ್ರಶಸ್ತಿಗೆ ಸಮಾಜವಾದಿ ಹೋರಾಟಗಾರ ಬಿ.ಆರ್.ಪಾಟೀಲ್ ಅವರ ಆಯ್ಕೆ ಅತ್ಯಂತ ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ಸೂಚಿಸಿದರು.
ಭಾರತ ಯಾತ್ರಾ ಕೇಂದ್ರ ಮತ್ತು ಲೋಕನಾಯಕ ಜೆ.ಪಿ. ವಿಚಾರ ವೇದಿಕೆ ಸಹಯೋಗದಲ್ಲಿ ಚಿತ್ರಕಲಾ ಪರಿಷತ್ ನಲ್ಲಿ ಹಮ್ಮಿಕೊಂಡಿದ್ದ ಜಯಪ್ರಕಾಶ್ ನಾರಾಯಣ್-122 ಕಾರ್ಯಕ್ರಮದಲ್ಲಿ ಜೆ.ಪಿ.ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಬಿ.ಆರ್.ಪಾಟೀಲ್ ಜನಪರ ಕಾಳಜಿ ಮತ್ತು ಸಮಾಜವಾದಿ ಮೌಲ್ಯಗಳಲ್ಲಿ ಯಾವತ್ತೂ ರಾಜಿ ಮಾಡಿಕೊಂಡವರಲ್ಲ. ತುರ್ತು ಪರಿಸ್ಥಿಯಲ್ಲಿ ಆರು ತಿಂಗಳು ಜೈಲುವಾಸ ಅನುಭವಿಸಿದ್ದಾರೆ. ಈಗಲೂ ಅದೇ ಕಾಳಜಿಗಳನ್ನು ಇಟ್ಟುಕೊಂಡಿದ್ದಾರೆ ಎಂದರು.
ಜಾತಿ ಮತ್ತು ಆರ್ಥಿಕ ಅಸಮಾನತೆ ತೊಡೆದು ಹಾಕದೆ ಹೋದರೆ ರಾಜಕೀಯ ಸ್ವಾತಂತ್ರ್ಯದ ಸೌಧವನ್ನು ಶೋಷಿತ ಜನರೇ ಧ್ವಂಸ ಮಾಡ್ತಾರೆ ಎನ್ನುವ ಅಂಬೇಡ್ಕರ್ ಅವರ ಎಚ್ಚರಿಕೆಯ ಮಾತುಗಳು ನನ್ನನ್ನು ಸದಾ ಎಚ್ಚರಿಸುತ್ತಿರುತ್ತವೆ ಎಂದರು.
ನಾನು ಪ್ರತಿ ವರ್ಷ ಬಜೆಟ್ ಮಂಡಿಸುವಾಗಲೂ ಪ್ರಣಾಳಿಕೆಯನ್ನು ಅಂಗೈಯಲ್ಲಿ ಇಟ್ಟುಕೊಂಡೇ ಕಾರ್ಯಕ್ರಮ ರೂಪಿಸುತ್ತೇನೆ. ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ಎಲ್ಲಾ ಭರವಸೆ ಈಡೇರಿಸಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಕೊಟ್ಟ ಎಲ್ಲಾ ಭರವಸೆಗಳನ್ನು ನಾನು ಈಡೇರಿಸುತ್ತೇನೆ ಎಂದರು.
ಕಳೆದ ಐದು ವರ್ಷಗಳಲ್ಲಿ ಬಿಜೆಪಿ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿಟ್ಟಿದ್ದಾರೆ. ಹಣ ಒದಗಿಸಲಾಗದಿದ್ದರೂ ಅವೈಜ್ಞಾನಿಕ ಯೋಜನೆಗಳನ್ನು ಘೋಷಿಸಿದ್ದಾರೆ. ಆದರೂ ನಾವು 56 ಸಾವಿರ ಕೋಟಿಗಳನ್ನು ಐದು ಗ್ಯಾರಂಟಿಗಳಿಗೆ ಒದಗಿಸುವುದರ ಜತೆಗೆ ಇತರೆ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಹಣ ಕೊಡುತ್ತಿದ್ದೇವೆ. ಐದೂ ಗ್ಯಾರಂಟಿಗಳೂ ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಸಲ್ಲುತ್ತಿದೆ ಎಂದು ವಿವರಿಸಿದರು.
ಸರ್ವರ ಸರ್ವೋದಯದ ಕಾರಣಕ್ಕೆ ಐದು ಗ್ಯಾರಂಟಿಗಳನ್ನು ಸರ್ವ ಜಾತಿ-ಧರ್ಮದವರಿಗಾಗಿ ಜಾರಿ ಮಾಡಿದ್ದೇವೆ. ಈ ಗ್ಯಾರಂಟಿಗಳಿಂದ ಜನರ ಕೊಳ್ಳುವ ಶಕ್ತಿ ಹೆಚ್ಚುತ್ತದೆ. ಆರ್ಥಿಕತೆಗೆ ಚೈತನ್ಯ ಬಂದಿದೆ. ರಾಜ್ಯದ ಜಿಡಿಪಿ ಬೆಳವಣಿಗೆಯಾಗಿದೆ ಎಂದರು.
ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಡಾ.ಬಿ.ಎಲ್.ಶಂಕರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜವಾದಿ ಚಿಂತಕ ನಟರಾಜ್ ಹುಳಿಯಾರ್, ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಾ.ಎಂ.ಪಿ.ನಾಡಗೌಡ, ಮೋಹನ ಕೊಂಡಜ್ಜಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಡಾ.ವಸುಂಧರಾ ಭೂಪತಿ ಉಪಸ್ಥಿತರಿದ್ದರು.