ಕರ್ನಾಟಕದಲ್ಲಿ ನೂತನ ಸರ್ಕಾರ ರಚನೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಮೇ 13ರಂದು ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದ್ದು, ಚುನಾವಣಾ ಆಯೋಗ ಸಕಲ ತಯಾರಿ ಮಾಡಿಕೊಂಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಅನ್ನೋ ಲೆಕ್ಕಾಚಾರ ಮೇಲ್ನೋಟಕ್ಕೆ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಂಡು ಬಂದಿದ್ದರೂ ಕಾಂಗ್ರೆಸ್ ಹಾಗು ಬಿಜೆಪಿ ಎರಡೂ ನಾಯಕರು ಅಧಿಕಾರ ರಚನೆಯ ಕಸರತ್ತು ಆರಂಭ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಿರಂತರ ಸಭೆಗಳನ್ನು ನಡೆಸಿದ್ದು, ಒಂದು ವೇಳೆ ಸರಳ ಬಹುಮತಕ್ಕೆ ಕೆಲವೊಂದಿಷ್ಟು ಸ್ಥಾನಗಳು ಕಡಿಮೆ ಆದರೆ ಏನು ಮಾಡಬೇಕು. ನಮ್ಮ ಮುಂದಿರುವ ಆಯ್ಕೆಗಳು ಯಾವುವು ಅನ್ನೋದರ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡಿದ್ದಾರೆ.
ಬಿಜೆಪಿ ಆಪರೇಷನ್ ತಡೆಯುವುದು ಕಾಂಗ್ರೆಸ್ಗೆ ಸವಾಲು..!
ಈಗಾಗಲೇ ಬಿಜೆಪಿ ನಾಯಕರು ಆಪರೇಷನ್ ಕಮಲದ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಒಂದು ವೇಳೆ ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದರೆ ನಾವು ಅಧಿಕಾರ ರಚನೆ ಮಾಡುತ್ತೇವೆ ಎಂದು ಈ ಹಿಂದೆಯೇ ಅಶೋಕ್ ಹೇಳಿದ್ದರು. ಅದರಂತೆ ಈಗಾಗಲೇ ಬಿಜೆಪಿ ನಾಯಕರೂ ಕೂಡ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿವಾಸದಲ್ಲಿ ಸಭೆ ನಡೆಸಿದ್ದು, ಚುನಾವಣೋತ್ತರ ಸಮೀಕ್ಷೆ ಹಾಗು ಕಡಿಮೆ ಸ್ಥಾನಗಳು ಬಂದರೆ ಅಧಿಕಾರ ಹಿಡಿಯುವುದು ಹೇಗೆ..? ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕಾ..? ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದು ಉತ್ತಮವಾ..? ಅನ್ನೋ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ ಬಹುತೇಕ ನಾಯಕರು ಕಾಂಗ್ರೆಸ್ಗೆ ಅಧಿಕಾರ ಬಿಟ್ಟುಕೊಡುವುದು ಸರಿಯಲ್ಲ, ಜೆಡಿಎಸ್ ಜೊತೆಗೆ ಸರ್ಕಾರ ರಚನೆಗೆ ಹೈಕಮಾಂಡ್ ಜೊತೆಗೆ ಮಾತನಾಡಿ ಎನ್ನುವ ಸಲಹೆ ನೀಡಿದ್ದಾರೆ ಎನ್ನಲಾಗ್ತಿದೆ.
ಕಾಂಗ್ರೆಸ್-ಜೆಡಿಎಸ್ಗೆ ಓಪನ್ ಆಫರ್ ಕೊಟ್ಟ HDK
ಮತದಾನ ಮುಗಿಯುತ್ತಿದ್ದ ಹಾಗೆ ಸಿಂಗಾಪುರಕ್ಕೆ ತೆರಳಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಸಿಂಗಾಪುರದಿಂದಲೇ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ರಾಜ್ಯದಲ್ಲಿ ಜೆಡಿಎಸ್ ಈ ಬಾರಿ 50 ಸ್ಥಾನಗಳಲ್ಲಿ ಗೆಲ್ಲಲ್ಲಿದ್ದು, ನಾವು ಇಲ್ಲದೆ ಸರ್ಕಾರ ರಚನೆ ಸಾಧ್ಯವೇ ಇಲ್ಲ. ಎರಡೂ ಪಕ್ಷಗಳ ಜೊತೆಗೆ ಹೊಂದಾಣಿಕೆಗೆ ಮುಕ್ತವಾಗಿದ್ದು, ಯಾರು ಜೆಡಿಎಸ್ ಪಕ್ಷದ ನಿಯಮಗಳಿಗೆ ಒಪ್ಪಿಗೆ ಸೂಚಿಸುತ್ತಾರೋ ಅವರ ಜೊತೆಗೆ ಸರ್ಕಾರ ರಚನೆ ಮಾಡಲು ನಾವು ತಯಾರಿದ್ದೇವೆ. ನಾವು ಕೊಟ್ಟಿರುವ ಯೋಜನೆಗಳ ಜಾರಿಗೆ ತೊಡಕಾಗಬಾರದು. ಸರ್ಕಾರದಲ್ಲಿ ಪ್ರಮುಖ ಸಚಿವ ಸ್ಥಾನ ಜೆಡಿಎಸ್ಗೆ ಸಿಗಬೇಕು, ಹಾಸನ. ಮಂಡ್ಯ ರಾಜಕಾರಣದಲ್ಲಿ ಮೂಗು ತೂರಿಸಬಾರದು ಅನ್ನೋ ಕಂಡಿಷನ್ಸ್ ಹಾಕಿದ್ದಾರೆ. ಇದೀಗ ಕಾಂಗ್ರೆಸ್ ಅಥವಾ ಬಿಜೆಪಿ ಯಾವ ಪಕ್ಷದ ಜೊತೆಗೆ ಹೊಂದಾಣಿಕೆ ಆಗಲಿದೆ ಅನ್ನೋದು ಜೆಡಿಎಸ್ ಕಾರ್ಯಕರ್ತರಲ್ಲಿ ಸೃಷ್ಟಿಯಾಗಿರುವ ಕುತೂಹಲ.
ಕಾಂಗ್ರೆಸ್-ಜೆಡಿಎಸ್ ಅಥವಾ ಜೆಡಿಎಸ್-ಬಿಜೆಪಿ ಯಾರದ್ದು ಸರ್ಕಾರ..!?
ಕಾಂಗ್ರೆಸ್ ಹಾಗು ಬಿಜೆಪಿ ನಾಯಕರು ನಾವೇ ಅಧಿಕಾರಕ್ಕೆ ಬರ್ತೇವೆ ಎಂದು ಎರಡೂ ರಾಷ್ಟ್ರೀಯ ಪಕ್ಷಗಳು ಹೇಳಿಕೊಳ್ಳುತ್ತಿವೆ. ಆದರೆ ಎರಡೂ ಪಕ್ಷಗಳಲ್ಲಿ ಸರಳ ಬಹುಮತ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ ಎನ್ನಲಾಗಿದ್ದು, ಒಳಗೊಳಗೆ ಅಧಿಕಾರ ಹಿಡಿಯುವ ಕಸರತ್ತು ಆರಂಭವಾಗಿದೆ. ಪಕ್ಷೇತರವಾಗಿ ಗೆಲ್ಲಬಹುದಾದ ನಾಯಕರಿಗೆ ಸ್ವತಃ ಸಿದ್ದರಾಮಯ್ಯ ಕರೆ ಮಾಡಿ ಮಾತನಾಡಿದ್ದು, ಗೆದ್ದ ಬಳಿಕ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ವಿಶೇಷ ಅಂದರೆ ಇತ್ತೀಚಿಗೆ ಲೋಕಾಯುಕ್ತ ದಾಳಿಗೆ ಒಳಗಾಗಿ ಬಿಜೆಪಿಗೆ ಮುಜುಗರ ತಂದಿದ್ದ ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಾಡಾಳು ಮಲ್ಲಿಕಾರ್ಜುನಗೂ ಕರೆ ಮಾಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇದೇ ರೀತಿ ಬಿಜೆಪಿ ನಾಯಕರೂ ಸಹ ಕಾಂಗ್ರೆಸ್ನಿಂದ ಸಿಡಿದು ಹೋಗಿ ಸ್ಪರ್ಧೆ ಮಾಡಿರುವ ನಾಯಕರನ್ನು ಪತ್ತೆ ಮಾಡಿ ಬೆಂಬಲ ಕೇಳಲಾಗ್ತಿದೆ ಎನ್ನಲಾಗಿದೆ. ಇನ್ನೂ ಒಂದು ಮಾಹಿತಿ ಪ್ರಕಾರ ಜೆಡಿಎಸ್ ಶಾಸಕರನ್ನೂ ಕಾಂಗ್ರೆಸ್ ಸಂಪರ್ಕ ಮಾಡುವ ಪಯತ್ನ ಮಾಡಿದ್ದು, ಯಾರಿಗೆ ಯಾರು ಆಪರೇಷನ್ ಮಾಡಲಿದ್ದಾರೆ ಅನ್ನೋದು ಮುಂದಿನ 24 ಗಂಟೆಯಲ್ಲಿ ರಾಜ್ಯದ ಜನರ ಎದುರು ತೆರೆದುಕೊಳ್ಳಲಿದೆ.
ಕೃಷ್ಣಮಣಿ