ಪಂಚಮಸಾಲಿ ಸಮುದಾಯಕ್ಕೆ ಸರ್ಕಾರ 2A ಮೀಸಲಾತಿ ಕೊಡಬೇಕು ಎನ್ನುವ ಆಗ್ರಹಕ್ಕೆ ಡಿಸೆಂಬರ್ 22 ಕೊನೆ ದಿನವಾಗಿತ್ತು. ಸರ್ಕಾರವೇ ನೀಡಿದ್ದ ಗಡುವು ಮುಕ್ತಾಯವಾದ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣಸೌಧದ ಬಳಿ ಪಂಚಮಸಾಲಿ ಸಮುದಾಯ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಡಿಸೆಂಬರ್ 22ರಂದು ಮೀಸಲಾತಿ ಘೋಷಣೆ ಮಾಡಿದ್ರೆ ಸಿಎಂ ಬಸವರಾಜ ಬೊಮ್ಮಾಯಿಗೆ ಸನ್ಮಾನ, ಇಲ್ಲದಿದ್ರೆ ಲಕ್ಷಾಂತರ ಜನರ ಜೊತೆಗೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅಬ್ಬರಿಸಿದ್ದರು. ಇದು ಪಕ್ಷಾತೀತವಾಗಿ ನಡೆದಿದ್ದ ಹೋರಾಟ ಆಗಿದ್ದರಿಂದ ದಾರಿ ತಪ್ಪುವುದಿಲ್ಲ ಎನ್ನುವ ನಿರೀಕ್ಷೆ ಎಲ್ಲರಿಗೂ ಇತ್ತು. ಆದರೆ ಬಿಜೆಪಿಯ ಒಳ ರಾಜಕೀಯ ದಾರಿ ತಪ್ಪಿಸಿ, ಪಂಚಮಸಾಲಿಗಳಿಗೂ ಮೀಸಲಾತಿ ನೀಡದೆ ಹೋರಾಟವನ್ನೂ ತಣಿಸುವ ಕೆಲಸ ಮಾಡಿದೆ. ಸರ್ಕಾರದ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಏನು ಎನ್ನುವುದನ್ನು ಪ್ರತಿಧ್ವನಿ ನಿಮ್ಮ ಮುಂದಿಡುತ್ತಿದೆ.
ಸಿಎಂ ಸಭೆಯಲ್ಲಿ ನಡೆದಿದ್ದು ಏನು? ರಾಜಕೀಯ ಆಗಿದ್ದು ಎಲ್ಲಿ?
ಸುವರ್ಣಸೌಧ ಮುತ್ತಿಗೆ ಹಾಕುವ ಉದ್ದೇಶದಿಂದ ಸಾವಿರಾರು ಜನರನ್ನು ಸಮಾವೇಶ ಮಾಡಿದ್ದ ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ವೇದಿಕೆ ಮೇಲೆ ನಿಂತು ಭಾಷಣ ಮಾಡುವ ಮುನ್ನವೇ ಸುವರ್ಣಸೌಧದಲ್ಲಿ ಕಾರ್ಯಚಟುವಟಿಕೆಗಳು ಆರಂಭ ಆಗಿದ್ದವು. ಶಾಶ್ವತ ಹಿಂದುಳಿವ ವರ್ಗಗಳ ಆಯೋಗದಿಂದ ವರದಿ ಪಡೆದಿದ್ದ ಸಿಎಂ, ಮಾತನಾಡುವ ಉದ್ದೇಶದಿಂದ ಪಂಚಮಸಾಲಿ ಸಮುದಾಯದ ಮುಖಂಡರನ್ನು ಸಭೆಗೆ ಆಹ್ವಾನ ಮಾಡಿದ್ದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯಸಭಾ ಸಂಸದ ಈರಣ್ಣ ಕಡಾಡಿ, ಮಾಜಿ ಸಚಿವ ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್, ವೀಣಾ ಕಾಶಪ್ಪನವರ್ ಸೇರಿದಂತೆ ಪ್ರಮುಖರನ್ನು ಸಭೆಗೆ ಕರೆದಿದ್ದರು. ಆದರೆ ಸಭೆಯಲ್ಲಿ ಸಂಧಾನ ಸಫಲ ಆಗಲಿಲ್ಲ, ಆದರೂ ಹೋರಾಟ ನಡೆಯಲಿಲ್ಲ. ಆಲ್ಲಿ ಆದಂತಹ ಘಟನೆ ಪಂಚಮಸಾಲಿ ಸಮುದಾಯದ ಜನರನ್ನು ತಣ್ಣಗೆ ಮಾಡುವಲ್ಲಿ ಸರ್ಕಾರ ಯಶಸ್ಸು ಸಾಧಿಸಿತ್ತು.
ಸ್ವಾಮೀಜಿ ಹೇಳಿದ್ದೇ ಒಂದು ಯತ್ನಾಳ್ ತಣಿಸಿದ್ದೇ ಇನ್ನೊಂದು !
ಸಿಎಂ ಸಭೆಗೆ ತೆರಳಿದ್ದ ವೇಳೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನಮ್ಮ ಸಮಾಜದ ಜನರೆ ನಮ್ಮ ಜಗದ್ಗುರು. ಬೆಳಗಾವಿ ಜಿಲ್ಲೆಯಿಂದಲೇ ಪಂಚಮಸಾಲಿ 2A ಮೀಸಲಾತಿ ಹೋರಾಟ ಆರಂಭ ಆಗಿತ್ತು. ಇದೀಗ ಇದೇ ಜಿಲ್ಲೆಯಲ್ಲೇ ವಿರಾಟ ಸಮಾವೇಶ ನಡೆಯುತ್ತಿದೆ. ಜನರು ನನ್ನನ್ನು ಗುರುಗಳನ್ನಾಗಿ ಮಾಡಿದ್ದು ಶಾಸಕರು, ಮಂತ್ರಿಗಳನ್ನು ಮಾಡಲಿಕ್ಕೆ ಅಲ್ಲ. ಬಂಡವಾಳಶಾಹಿಗಳ ಪರ ಕೆಲಸ ಮಾಡಲಿಕ್ಕೆ ನಾನು ಸ್ವಾಮಿ ಆಗಿಲ್ಲ ಎನ್ನುವ ಮೂಲಕ ಮುರುಗೇಶ್ ನಿರಾಣಿ ಪರವಾಗಿ ನಿಂತಿರುವ ಪಂಚಮಸಾಲಿ ಸಮುದಾಯದ ಮತ್ತೊಂದು ಮಠ ಹರಿಹರ ಪೀಠದ ವಚನಾನಂದ ಶ್ರೀಗಳನ್ನು ಟೀಕಿಸಿದ್ರು. ಯಡಿಯೂರಪ್ಪನವರು ಕೊಟ್ಟ ಮಾತು ತಪ್ಪಿದ ಕಾರಣ ನಾನು ಪಾದಯಾತ್ರೆ ಮಾಡಿದೆ. ಮೀಸಲಾತಿ ಹೋರಾಟ ಹತ್ತಿಕ್ಕಲು ನಮ್ಮ ಒಳಗಿರುವ ಜನರೇ ಮತ್ತೊಂದು ಪೀಠವನ್ನ ಹುಟ್ಟಿಹಾಕಿದ್ರು ಎನ್ನುವ ಮೂಲಕ ಸಚಿವ ಮುರಗೇಶ ನಿರಾಣಿ ವಿರುದ್ಧ ವಾಗ್ದಾಳಿ ಮಾಡಿದ್ರು. ಆದರೆ ಸಿಎಂ ಸಭೆಯಿಂದ ವಾಪಸ್ ಬರುವ ವೇಳೆಗೆ ಎಲ್ಲವೂ ತಣಿದಿತ್ತು.

ಬಿಸಿ ಹಾರಿದ್ದ ಸಮಾವೇಶಕ್ಕೆ ತಣ್ಣೀರು ಊಯ್ದ ಯತ್ನಾಳ್ !
ಕೂಡಲ ಸಂಗಮ ಪೀಠ ಕಟ್ಟಿದ್ದು ಬಡ ಮಕ್ಕಳಿಗಾಗಿ, ಪಾದಯಾತ್ರೆ ಬೆಂಗಳೂರು ಮುಟ್ಟಬಾರದು ಎಂದು ಹಲವರು ಪ್ರಯತ್ನಿಸಿದ್ರು. ಅರಮನೆ ಮೈದಾನದಲ್ಲಿ ಸಮಾವೇಶ ಮಾಡದಂತೆ ಕುತಂತ್ರ ಮಾಡಿದ್ರು. ಈ ನಡುವೆ ಯತ್ನಾಳ್ ಹಾಗು ಕಾಶಪ್ಪನವರ್ ಬಂಧಿಸುವ ಹುನ್ನಾರವೂ ನಡೆದಿತ್ತು. ಪರ್ಯಾಯ ಪೀಠ ರಚಿಸಿ ಸಮಾಜ ಒಡೆಯುವ ಯತ್ನ ಮಾಡಿದ್ರು.ವಿನಯ ಕುಲಕರ್ಣಿ ಅವರಿಗೆ ಕೊಟ್ಟಿರುವ ತೊಂದರೆ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತದೆ ಎಂದರು. ನಮ್ಮ ಸಮಾಜಕ್ಕೆ ಬೆಂಬಲವಾಗಿ ನಿಂತವರಿಗೆ ನೀವು ಮತ ಹಾಕಬೇಕು. ಮುಂಬರುವ ಚುನಾವಣೆಯಲ್ಲಿ ಪಕ್ಷಾತೀತವಾಗಿ ನಮ್ಮ ಸಮಾಜದ ಬೆಂಬಲಿಗರಿಗೆ ಮತ ಹಾಕಿ. ಸಮಾಜಕ್ಕಾಗಿ ಪ್ರಾಮಾಣಿಕವಾಗಿ ಹೋರಾಡುವ ಹತ್ತೇ ಹತ್ತು ಜನ ಶಾಸಕರಿದ್ದರೂ ಸಾಕು. ಸಮಾಜಕ್ಕಾಗಿ ಒಗ್ಗಟ್ಟಾಗಿ ಹೋರಾಡೋಣ, ಪಕ್ಷಕ್ಕಿಂತ ಜನ್ಮ ಕೊಟ್ಟ ಸಮಾಜ ಮುಖ್ಯ, ಮುಖ್ಯಮಂತ್ರಿ ಐದು ಬಾರಿ ಮಾತು ಕೊಟ್ಟು ಮಾತು ತಪ್ಪಿದ್ದಾರೆ ಎಂದು ಬಿಜೆಪಿ ಸರ್ಕಾರ ಹಾಗು ಪಕ್ಷದ ವಿರುದ್ಧ ಕೆಂಡಕಾರಿದ್ದರು. ಆ ಬಳಿಕ ಮಾಧ್ಯಮಗ ಜೊತೆಗೆ ಮಾತನಾಡಿ ನನಗೆ ಸಮಾಧಾನವಿಲ್ಲ. ಆದರೆ ಡಿಸೆಂಬರ್ 29ಕ್ಕೆ ಮತ್ತೊಂದು ಗಡುವು ತೆಗೆದುಕೊಂಡಿದ್ದಾರೆ ನೋಡೋಣ ಎಂದಿದ್ದಾರೆ. ಇದಕ್ಕೆ ಕಾರಣ ಯತ್ನಾಳ್ ಹೇಳಿದ ಈ ಮಾತು.
ತಾಯಿ ಮೇಲೆ ಆಣೆ ಮಾಡಿ ಸಮಾಧಾನ ಮಾಡಿದ್ಯಾಕೆ ?
ಸಿಎಂ ಸಭೆ ಬಳಿಕ ಸಮಾವೇಶದ ಸ್ಥಳದಲ್ಲಿ ಭಾಷಣ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ ಮಾತನಾಡಿ. ಹಿಂದುಳಿದ ಆಯೋಗದ ವರದಿಯನ್ನ ಸಿಎಂ ಪಡೆದಿದ್ದಾರೆ. ಪಂಚಮಸಾಲಿಗಳು ಹಿಂದುಳಿದ ಜನಾಂಗ ಇವರನ್ನು ಮೀಸಲಾತಿಗೆ ಒಳಪಡಿಸಬೇಕು ಎಂದು ಆಯೋಗ ಸಲಹೆ ನೀಡಿದೆ. ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಆಗಿದೆ, CM ತನ್ನ ತಾಯಿ ಮೇಲೆ ಪ್ರಮಾಣ ಮಾಡಿದ್ದಾರೆ. ಆಯೋಗದ ವರದಿಯನ್ನು ಸರಕಾರ ಒಪ್ಪಿಕೊಂಡಿದೆ. 29ರಂದು ಸರ್ವ ಪಕ್ಷದ ಸಭೆ ಕರೆದು 2A ಮೀಸಲಾತಿ ಮಾಡುವುದಾಗಿ ಹೇಳಿದ್ದಾರೆ ಎಂದರು. ಆದರೆ ಕಾಂಗ್ರೆಸ್ ನಾಯಕರನ್ನೂ ಕಟ್ಟಿಕೊಂಡು ಸರ್ಕಾರದ ವಿರುದ್ಧ ಹೋರಾಟ ಮಾಡಿದ ಯತ್ನಾಳ್ಗೆ ಬಿಜೆಪಿ ನಾಯಕರು ಕಿವಿ ಹಿಂಡಿದ್ದು, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಟ್ಟರೂ ನಮ್ಮ ಪಕ್ಷಕ್ಕೆ ಲಾಭ ಆಗುವುದಿಲ್ಲ. ಹೀಗಾಗಿ ನಾವು ಮುಂದಿನ ದಿನಗಳಲ್ಲಿ ಮೀಸಲಾತಿ ಕೊಡುತ್ತೇವೆ, ಜೊತೆಗೆ ಬಿಜೆಪಿಗೆ ಜನರು ಮತ ಹಾಕುವಂತೆ ಮಾಡುತ್ತೇವೆ. ನೀವು ಕಾಂಗ್ರೆಸ್ ಜೊತೆಗೆ ಬಂದಿದ್ದು ಸರಿಯಲ್ಲ ಎಂದಿದ್ದಾರೆ ಎನ್ನಲಾಗಿದೆ. 29ಕ್ಕೆ ಸರ್ವ ಪಕ್ಷ ಸಭೆ ಕರೆದು ಆ ಬಳಿಕ 2023ರಲ್ಲಿ ಘೋಷಣೆ ಮಾಡುವ ಎಲ್ಲಾ ಸಾಧ್ಯತೆಗಳು ಇವೆ ಎನ್ನುತ್ತಿದ್ದಾರೆ ನಾಯಕರು.
ಕೃಷ್ಣಮಣಿ





