ಗಂಗಾವತಿ ನಗರದಲ್ಲಿ ನಡೆದ ಶ್ರೀದುರ್ಗಾದೇವಿ ಜಾತ್ರೆ ಹಿಂದೂ-ಮುಸ್ಲಿಂ ಸಮುದಾಯಗಳ ಭಾವೈಕ್ಯತೆಗೆ ಸಾಕ್ಷಿಯಾಗಿದೆ.
ಒಂದೆಡೆ ರಾಜ್ಯದಲ್ಲಿ ಧರ್ಮ ದಂಗಲ್ ಹೆಸರಿನಲ್ಲಿ ಕೋಮು ಸೌಹಾರ್ದತೆ ಹಾಳು ಮಾಡುವ ಕೆಲಸಗಳು ನಡೆಯುತ್ತಿದ್ದರೆ. ಕೊಪ್ಪಳದ ಗಂಗಾವತಿ ನಗರದ ಶ್ರೀದುರ್ಗಾದೇವಿ ಜಾತ್ರೆಯಲ್ಲಿ ಎರಡು ಸಮುದಾಯಗಳ ನಡುವಿನ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ದುರ್ಗಾ ದೇವಿಯ ಜಾತ್ರೆಯಲ್ಲಿ ಮುಸ್ಲಿಂ ಬಾಂಧವರು ದೇವಿಗೆ ಬೃಹತ್ ಹಾರವನ್ನ ಸಮರ್ಪಿಸಿದರು.

ಅಲ್ಲದೇ ಕರ್ನೂಲಸಾಬ ದರ್ಗಾದಿಂದ ದುರ್ಗಾದೇವಿ ದೇವಸ್ಥಾನದವರೆಗೆ ನಡೆದ ಮೆರವಣಿಗೆಯಲ್ಲಿ ಆಗಮಿಸಿದ ನೂರಾರು ಮುಸ್ಲಿಂ ಬಾಂಧವರು ದೇವಿಗೆ ಪೂಜೆ ಸಲ್ಲಿಸಿದರು. ಅಲ್ಲದೇ ಕರ್ನೂಲಸಾಬ ದರ್ಗಾದ ಮೌಲ್ವಿ ಅವರು ಸಹ ಮೆರವಣಿಗೆಯಲ್ಲಿ ಪಾಲ್ಗೊಂಡು ದುರ್ಗಾದೇವಿಗೆ ನಮನ ಸಲ್ಲಿಸಿದರು.
ಕೊಪ್ಪಳದ ಗಂಗಾವತಿ ನಗರದ ದುರ್ಗಾದೇವಿ ಜಾತ್ರೆ 5 ವರ್ಷಕ್ಕೊಮ್ಮೆ ನಡೆಯಲಿದೆ. ಈ ಸಂದರ್ಭದಲ್ಲಿ ದುರ್ಗಾದೇವಿ ಜಾತ್ರೆಗೆ ದರ್ಗಾಗಳಿಂದ ಹೂವು, ಹಾರ, ಕಾಯಿ ಕಳುಹಿಸುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರಾದಯವಾಗಿದೆ. ಅಲ್ಲದೇ ದರ್ಗಾಗಳಲ್ಲಿ ನಡೆಯುವ ಉರುಸ್ ಸಂದರ್ಭದಲ್ಲಿ ದೇವಸ್ಥಾನದಿಂದ ಚಾದರ ಕಳುಹಿಸುವ ಪದ್ಧತಿ ಸಹ ಹಲವು ವರ್ಷಗಳಿಂದ ನಡೆದು ಬಂದಿದೆ.





