ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು ಸಿಡಿಲಬ್ಬರದ ಹೋರಾಟದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡ 11 ರನ್ ಗಳಿಂದ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲುಂಡಿದೆ. ಈ ಮೂಲಕ ಐಪಿಎಲ್ ಟಿ-20 ಟೂರ್ನಿಯಲ್ಲಿ 5ನೇ ಬಾರಿ ಆಘಾತ ಅನುಭವಿಸಿದೆ.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಗಳಿಸಲಷ್ಟೇ ಶಕ್ತವಾಯಿತು.
ಒಂದು ಹಂತದಲ್ಲಿ ಚೆನ್ನೈ 40 ರನ್ ಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ ಋತುರಾಜ್ ಗಾಯಕ್ವಾಡ್ (30) ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಅಂಬಟಿ ರಾಯುಡು 39 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್ ನೊಂದಿಗೆ 78 ರನ್ ಬಾರಿಸಿ ಗೆಲುವಿನ ಭರವಸೆ ಮೂಡಿಸಿದರು. ಆದರೆ ರಾಯುಡು ಔಟಾಗುತ್ತಿದ್ದಂತೆ ತಂಡದ ಆಸೆ ಕಮರಿತು.
ಕೊನೆಯ ಓವರ್ ನಲ್ಲಿ 27 ರನ್ ಬೇಕಿತ್ತು. ಈ ಸಂದರ್ಭದಲ್ಲಿ ಅಖಾಡಕ್ಕೆ ಇಳಿದಿದ್ದ ಧೋನಿ 8 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 12 ರನ್ ಗಳಿಸಿ ಔಟಾಗುತ್ತಿದ್ದಂತೆ ಚೆನ್ನೈ ತಂಡದ ಆಸೆ ಕಮರಿತು. ನಾಯಕ ರವೀಂದ್ರ ಜಡೇಜಾ 16 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 21 ರನ್ ಬಾರಿಸಿ ಔಟಾಗದೇ ಉಳಿದರು.