ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ RTE ಯೋಜನೆ ಬಹು ದೊಡ್ಡ ವರದಾನವಾಗಿದೆ. ಆದರೆ ಈ ಯೋಜನೆಗೆ ಈ ವರ್ಷ ಬ್ರೇಕ್ ಹಾಕಲು ಖಾಸಗಿ ಶಾಲೆಗಳು ಮುಂದಾಗಿವೆ. ಯಾಕೆಂದರೆ ಖಾಸಗಿ ಶಾಲೆಗಳಿಗೆ ಬರಬೇಕಾದ ಬಾಕಿ ಮೊತ್ತವನ್ನು ಸರ್ಕಾರ ನೀಡುತ್ತಿಲ್ಲ. ಇದರಿಂದ ರಾಜ್ಯದ ಕೆಲ ಖಾಸಗಿ ಶಾಲೆಗಳು ಸರ್ಕಾರಕ್ಕೆ ಸೆಡ್ಡು ಹೊಡೆಯಲು ಮುಂದಾಗಿದೆ.
ಮೇಲಿಂದ ಮೇಲೆ ಬೆಲೆ ಏರಿಕೆಯಾಗುತ್ತಿದೆ. ಇಂಥ ಬೆಲೆ ಬಿಸಿ ಏರಿಕೆ ನಡುವೆ ಬಡ ಮಕ್ಕಳು ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಓದುವ ಸರಕಾರದ ಪ್ರಮುಖ RTE ಯೋಜನೆಗೆ ಇದೀಗ ಸಂಕಷ್ಟ ಎದುರಾಗಿದೆ. ಸರ್ಕಾರ ಪ್ರತಿ ವರ್ಷ ಖಾಸಗಿ ಶಾಲೆಗಳಿಗೆ ಹಣ ನೀಡಿ ಬಡ ವಿದ್ಯಾರ್ಥಿಗಳಿಗೆ ಸೀಟು ಕೊಡಿಸಿ ಉಚಿತ ಶಿಕ್ಷಣ ನೀಡುತ್ತಿದೆ. ಆದರೆ ಕಳೆದ ಮೂರು ವರ್ಷದಿಂದ ಖಾಸಗಿ ಶಾಲೆಗಳಿಗೆ ನೀಡುವ ಬಾಕಿ ಮೊತ್ತವನ್ನು ಸಮರ್ಪಕವಾಗಿ ನೀಡಿಲ್ಲ. ರಾಜ್ಯದಲ್ಲಿ 12 ಸಾವಿರ ಖಾಸಗಿ ಶಾಲೆಗಳಲ್ಲಿ ಒಟ್ಟು 7 ಲಕ್ಷ ಬಡ ವಿದ್ಯಾರ್ಥಿಗಳು RTE ಫಲಾನುಭವಿಗಳಿದ್ದಾರೆ. ಈ ವರ್ಷ 6.5 ಲಕ್ಷ ವಿದ್ಯಾರ್ಥಿಗಳು RTE ವಿದ್ಯಾರ್ಥಿಗಳು ಇದ್ದಾರೆ. ಬರುವ ಶೈಕ್ಷಣಿಕ ವರ್ಷಕ್ಕೆ ಏಳು ಸಾವಿರ ವಿದ್ಯಾರ್ಥಿಗಳು RTE ಸೇರ್ಪಡೆಯಾಗಿದ್ದಾರೆ. ಆದರೆ ಖಾಸಗಿ ಶಾಲೆಗಳಿಗೆ ಸರ್ಕಾರ ಇದುವರೆಗೆ 370 ಕೋಟಿ ಹಣ ಬಾಕಿ ಮೊತ್ತವನ್ನು ಸರ್ಕಾರ ನೀಡಬೇಕಿದೆ. ಅನುದಾನ ಬಿಡುಗಡೆಯಾಗದೇ ಹೋದಲ್ಲಿ RTE ದಾಖಲಾತಿ ಮಾಡದೇ ಇರಲು ಖಾಸಗಿ ಶಾಲೆಗಳ ಸಂಘ ನಿರ್ಧರಿಸಿದೆ.

ಕಳೆದೆರಡು ವರ್ಷ ಕೊರೋನಾದಿಂದ ಶೈಕ್ಷಣಿಕ ಚಟುವಟಿಕೆ ಸಮರ್ಪಕವಾಗಿ ನಡೆದಿಲ್ಲ. ಖಾಸಗಿ ಶಾಲೆಗಳಿಗೆ ಕಳೆದ ವರ್ಷದ RTE ಹಣ ಬಿಡುಗಡೆ ಆಗಿಲ್ಲ. 60% ರಷ್ಟು ಖಾಸಗಿ ಶಾಲೆಗಳಿಗೆ ಕಳೆದ ವರ್ಷದ RTE ಅನುದಾನ ಬಿಡುಗಡೆಯಾಗಿಲ್ಲ. ಕಳೆದ ಮೂರು ವರುಷಗಳಿಂದ ಸಮರ್ಪಕವಾಗಿ ಅನುದಾನ ಬಿಡುಗಡೆಯಾಗಿಲ್ಲ. ಹಣ ಬಿಡುಗಡೆಗೆ ಈಗಾಗಲೇ ಸರ್ಕಾರಕ್ಕೆ ಖಾಸಗಿ ಶಾಲೆಗಳು ಮನವಿ ಮಾಡಿವೆ. ಸಿಎಂ ಬಸವರಾಜ್ ಬೊಮ್ಮಾಯಿಗೇ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ. ಅದರೂ 370 ಕೋಟಿ ಅನುದಾನದಲ್ಲಿ ಅರ್ದದಷ್ಟಾದ್ರೂ RTE ಅನುದಾನ ಬಿಡುಗಡೆ ಮಾಡದೇ ನಿರ್ಲಕ್ಷ್ಯ ತೋರಿದೆ.
RTE ಅಡಿ ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ವಿದ್ಯಾಭ್ಯಾಸ ಮಾಡ್ತಿದಾರೆ. ಆರ್ ಟಿ ಇ ಸ್ಥಗಿತಗೊಳಿಸಿದರೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ RTE ಅಡಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಶಾಲೆ ನಡೆಸಿ ಎಂದು ಪೋಷಕರು ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ. RTE ಅನುದಾನಕ್ಕೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರಕಾರಕ್ಕೆ 15 ದಿನ ಕಾಲಾವಕಾಶ ಕೊಟ್ಟಿದ್ದೇವೆ. RTE ಹಣ ಬಿಡುಗಡೆ ಮಾಡದೆ ಹೋದರೆ 2022-23 ನೇ ಶೈಕ್ಷಣಿಕ ವರ್ಷದಿಂದ RTE ದಾಖಲಾತಿ ಮಾಡಿಸಿಕೊಳ್ಳದೇ ಇರಲು ಖಾಸಗಿ ಶಾಲೆಗಳ ಒಕ್ಕೂಟ ನಿರ್ಧಾರ ಮಾಡಿದೆ.






