ಮಂಗಳೂರು ಮಹಾನಗರ ಪಾಲಿಕೆ ಮತ್ತು ಉಳ್ಳಾಲ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ‘ರೇಶನಿಂಗ್’ ಆರಂಭವಾಗಿದೆ. ಬೃಹತ್ ಕೈಗಾರಿಕೆಗಳು ನೀರಿಲ್ಲದೆ ಸ್ಥಾವರ ಬಂದ್ ಮಾಡಿ ದುರಸ್ತಿ ಕೆಲಸದಲ್ಲಿ ತೊಡಗಿವೆ. ಕರಾವಳಿಯ ಬಹುತೇಕ ನದಿಗಳ ಹರಿವು ನಿಂತಿದೆ. ವೆಂಟೆಂಡ್ ಡ್ಯಾಂಗಳಲ್ಲಿ ಮಾತ್ರ ಅಲ್ಪಸ್ವಲ್ಪ ನೀರು ಸಂಗ್ರಹವಿದೆ. ಗ್ರಾಮೀಣ ಪ್ರದೇಶದಲ್ಲಿ ಬೋರ್‌ವೆಲ್ ಲಾರಿಗಳ ಭರಾಟೆ ಜೋರಾಗಿದೆ. ಅಡಕೆ, ತೆಂಗು, ಬಾಳೆ ತೋಟಗಳಿಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ.
ಚುನಾವಣೆ ಮುಗಿದ ಮರುದಿನವೇ ಮಂಗಳೂರು, ಉಳ್ಳಾಲ, ಸುರತ್ಕಲ್ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ನಿಯಂತ್ರಣ ತರಲಾಯಿತು. ಮಂಗಳೂರು ಸುತ್ತಮುತ್ತಲ ನಗರ ಪ್ರದೇಶಗಳಿಗೆ ಬಂಟ್ವಾಳ ಸಮೀಪದ ತುಂಬೆ ಸಮೀಪ ನೇತ್ರಾವತಿ ನದಿಗೆ ಹೊಸದಾಗಿ ನಿರ್ಮಿಸಲಾದ ವೆಂಟೆಡ್ ಡ್ಯಾಂನಿಂದ ನೀರು ಪೂರೈಕೆ ಮಾಡಲಾಗುತ್ತದೆ. ಈ ವರ್ಷ ಒಂದು ಮೀಟರ್ ಹೆಚ್ಚೇ ಜಲಾಶಯದಲ್ಲಿ ನೀರು ಶೇಖರಣೆ ಮಾಡಲಾಗಿತ್ತು. ಆದರೂ, ಮಳೆ ಪರಿಸ್ಥಿತಿಯನ್ನು ಅವಲೋಕಿಸಿದಾಗ ಜೂನ್ ಮೊದಲ ವಾರದ ತನಕ ಸುಸೂತ್ರವಾಗಿ ಕುಡಿಯುವ ನೀರು ಪೂರೈಕೆ ಮಾಡಲು ನೀರಿನ ರೇಶನಿಂಗ್ ಅನಿವಾರ್ಯ ಆಗಿತ್ತು. ಕಳೆದ ವರ್ಷ ಸುರತ್ಕಲ್ ಪ್ರದೇಶಗಳಿಗೆ ಕುದುರೆಮುಖದ ಲಕ್ಯಾ ಡ್ಯಾಂನಿಂದ ಸದ್ದಿಲ್ಲದೆ ನೀರು ಪೂರೈಕೆ ಮಾಡಲಾಗಿತ್ತು.
ಈ ವರ್ಷ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತೆ ಕ್ರಮಗಳಿಂದಾಗಿ ಕುಡಿಯುವ ನೀರಿನ ಸಮಸ್ಯೆ ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಗಂಭೀರವಾಗಿಲ್ಲ. ಆದರೆ, ಇತರೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅಂತರ್ಜಲ ಮಟ್ಟ ಕರಾವಳಿ ಜಿಲ್ಲೆಗಳಲ್ಲಿ ತೀವ್ರವಾಗಿ ಕುಸಿದಿದ್ದು, ತೋಟಗಾರಿಕಾ ಬೆಳೆಗಳಿಗೆ ನೀರಿನ ಕೊರತೆ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಕೃಷಿಗೆ ನೀರಿನ ಸಮಸ್ಯೆ ಗಂಭೀರವಾಗಿರುವುದು ರೈತರು ತಮ್ಮ ಗಮನಕ್ಕೆ ತಂದಿದ್ದಾರೆ ಎನ್ನುತ್ತಾರೆ ಬಂಟ್ವಾಳದ ತೋಟಗಾರಿಕಾ ಇಲಾಖೆ ಅಧಿಕಾರಿಗಳು. ಮುಂಗಾರು ಮಳೆಯ ಅನಂತರ ಕಾಲಕಾಲಕ್ಕೆ ಮಳೆಯಾಗದಿರುವುದು ಈ ಬಾರಿ ನೀರಿನ ಅಭಾವಕ್ಕೆ ಕಾರಣ ಎನ್ನುತ್ತಾರೆ ಅಧಿಕಾರಿಗಳು. ಸುಬ್ರಹ್ಮಣ್ಯ ಸೇರಿದಂತೆ ಪಶ್ಚಿಮಘಟ್ಟದ ತಪ್ಪಲು ಪ್ರದೇಶಗಳಲ್ಲಿ ಕೊಂಚ ಮಳೆಯಾಗಿದ್ದು, ಕರಾವಳಿಯಲ್ಲಿ ಬಹುತೇಕ ಕಡೆ ಮಳೆಯಾಗಿಲ್ಲ.
ಕಳೆದ ಮುಂಗಾರು ಅವಧಿಯಲ್ಲಿ ಅಕ್ಟೋಬರ್ ತಿಂಗಳ ಅಂತ್ಯಕ್ಕೆ 4,582 ಎಂಎಂ ಮಳೆ ದಾಖಲಾಗಿತ್ತು. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗಿಂತ ಹೆಚ್ಚಿನ ಪ್ರಮಾಣದ ಮಳೆ ಉಡುಪಿ ಜಿಲ್ಲೆಯಲ್ಲಿ ಕಳೆದ ಬಾರಿ ಸುರಿದಿತ್ತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ ತಿಂಗಳಿನಿಂದ ಆರಂಭವಾಗುವ ಮುಂಗಾರು ಮಳೆ ಸರಾಸರಿ 3,990ರಿಂದ 4,000 ಎಂಎಂನಷ್ಟು ಸುರಿದರೂ ಎಲ್ಲವೂ ಸರಸರನೆ ನದಿಗೆ ಸೇರಿ ಆದಷ್ಟು ಬೇಗ ಅರಬ್ಬಿ ಸಮುದ್ರ ಸೇರಿಬಿಡುವುದರಿಂದ ಏಪ್ರಿಲ್-ಮೇ ತಿಂಗಳ ಬೇಸಿಗೆ ಕಾಲದಲ್ಲಿ ನೀರಿಗಾಗಿ ಹಾಹಾಕಾರ ನಿಲ್ಲದು.
ಪಶ್ಚಿಮವಾಹಿನಿ

ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಭಾರಿ ಪ್ರಮಾಣದಲ್ಲಿ ಸುರಿಯುವ ಮಳೆಯನ್ನು ಹಿಡಿದಿಟ್ಟುಕೊಳ್ಳಲು ಎರಡು ಯೋಜನೆಗಳನ್ನು ಎರಡು ದಶಕಗಳ ಹಿಂದೆಯೇ ಪ್ರಸ್ತಾಪಿಸಲಾಗಿತ್ತು. ಅವುಗಳೆಂದರೆ, ನದಿಗಳ ಉಗಮ ಪ್ರದೇಶದಲ್ಲೇ ನೀರನ್ನು ಎತ್ತಿ ಕೋಲಾರ-ಚಿಕ್ಕಬಳ್ಳಾಪುರಕ್ಕೆ ಹರಿಯಬಿಡುವ ಎತ್ತಿನಹೊಳೆ ಯೋಜನೆ ಹಾಗೂ ಅದಕ್ಕೆ ಮೊದಲೇ ಕಾರ್ಯಗತ ಆಗಬೇಕಾಗಿದ್ದ ಪಶ್ಚಿಮವಾಹಿನಿ ಯೋಜನೆ.
ಕರಾವಳಿಯ ಜಿಲ್ಲೆಗಳ ನೇತ್ರಾವತಿ, ಫಲ್ಗುಣಿ, ಕಾಳಿ, ಚಕ್ರಾ, ಶರಾವತಿ, ಸ್ವರ್ಣಾ ಸಹಿತ ಇಪ್ಪತ್ತೆರಡಕ್ಕೂ ಹೆಚ್ಚು ನದಿಗಳ ನೀರು ಸಮುದ್ರ ಸೇರುವ ಮುನ್ನ ಅವುಗಳನ್ನು ವೆಂಟೆಡ್ ಡ್ಯಾಂ ಮೂಲಕ ಸಂಗ್ರಹಿಸಿಡುವ ಮಹತ್ವದ ಯೋಜನೆ ಪಶ್ಚಿಮವಾಹಿನಿ. ನೇತ್ರಾವತಿ ನದಿಯೊಂದರಲ್ಲೇ ಜೂನ್-ಸೆಪ್ಟೆಂಬರ್ ತಿಂಗಳುಗಳಲ್ಲಿ 120 ಟಿಎಂಸಿಗೂ ಹೆಚ್ಚು ನೀರು ಪ್ರವಾಹದಂತೆ ಸಮುದ್ರ ಸೇರುತ್ತದೆ ಎಂದು ಅಂದಾಜಿಸಲಾಗಿದ್ದು, ರಾಜ್ಯದ ವಾರ್ಷಿಕ ನೀರಿನ ಬೇಡಿಕೆ 100 ಟಿಎಸಿಗಿಂತಲೂ ಕಡಿಮೆ ಎನ್ನುತ್ತಾರೆ.
ಮೂರು ಜಿಲ್ಲೆಗಳ 22ಕ್ಕೂ ಹೆಚ್ಚು ನದಿಗಳಿಗೆ ಅಡ್ಡಲಾಗಿ 783 ಚೆಕ್ ಡ್ಯಾಂ ನಿರ್ಮಾಣದ ಯೋಜನೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಪ್ರಸ್ತಾಪಿಸಲಾಗಿತ್ತು. ಕರಾವಳಿಯ ಜನಪ್ರತಿನಿಧಿಗಳ ಅಸಡ್ಡೆ ಮತ್ತು ಸಮುದಾಯ ಸಹಿಭಾಗಿತ್ವದ ಕೊರತೆಯಿಂದ ಯೋಜನೆ ಅನುಷ್ಠಾನ ಆಗಲಿಲ್ಲ. ಯಾವಾಗ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಬಂತೋ ಆಗ ಎಚ್ಚೆತ್ತುಕೊಂಡು, 2017ರಲ್ಲಿ ದಕ್ಷಿಣ ಕನ್ನಡದ ಶಾಸಕರು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದುಂಬಾಲು ಬಿದ್ದು ಬಜೆಟಿನಲ್ಲಿ ಪಶ್ಚಿಮವಾಹಿನಿಗೆ ಮತ್ತೊಮ್ಮೆ ಜೀವ ನೀಡಿದರು.
ಎತ್ತಿನಹೊಳೆಗೆ ಹೋಲಿಸಿದರೆ ಪಶ್ಚಿಮವಾಹಿನಿಯು ಅಂದಾಜು ಒಂದೂವರೆ ಸಾವಿರ ಕೋಟಿ ರೂಪಾಯಿ ಮೊತ್ತದ ಚಿಕ್ಕ ಯೋಜನೆ ಆಗಿದ್ದು, ಕರಾವಳಿಗೆ ದೊಡ್ಡ ಪ್ರಮಾಣದ ಪ್ರಯೋಜನ ಆಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 554 ಕೋಟಿ ರೂಪಾಯಿ ವೆಚ್ಚದಲ್ಲಿ 202 ಚೆಕ್ ಡ್ಯಾಂ, ಉಡುಪಿಯಲ್ಲಿ 665 ಕೋಟಿ ರೂಪಾಯಿ ವೆಚ್ಚದಲ್ಲಿ 406 ಚೆಕ್ ಡ್ಯಾಂ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 180 ಕೋಟಿ ರೂಪಾಯಿ ವೆಚ್ಚದಲ್ಲಿ 175 ಚೆಕ್ ಡ್ಯಾಂ ನಿರ್ಮಾಣ ಆಗಬೇಕಾಗಿತ್ತು. ಇದೀಗ ಮೊದಲ ಹಂತದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ 200 ಕೋಟಿ ರೂಪಾಯಿ ವೆಚ್ಚದಲ್ಲಿ 53 ಚೆಕ್ ಡ್ಯಾಂ ನಿರ್ಮಾಣಕ್ಕೆ ಚಾಲನೆ ದೊರೆತಿದೆ.
2001ರಲ್ಲಿ ಪಶ್ಚಿಮವಾಹಿನಿ ಯೋಜನೆಯನ್ನು ಪ್ರಸ್ತಾಪಿಸಿದಾಗ ಕರಾವಳಿಯ ಭಟ್ಕಳ, ಕಾರವಾರ, ಹೊನ್ನಾವರ, ಕುಂದಾಪುರ, ಉಡುಪಿ, ಮಂಗಳೂರು, ಪುತ್ತೂರು ಮುಂತಾದ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಉದ್ದೇಶಗಳನ್ನು ಈ ಅಣೆಕಟ್ಟುಗಳು ಹೊಂದಿದ್ದವು. ಈ ಮಧ್ಯೆ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಸಾಲ ಆಧಾರಿತ ಕರ್ನಾಟಕ ನಗರ ಅಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣಾ ಯೋಜನೆ (ಕುಡ್ಸೆಂಪ್) ಮೂಲಕ ಈ ಪಟ್ಟಣಗಳಿಗೆ ಡ್ಯಾಂ ನಿರ್ಮಾಣ ಸಹಿತ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲಾಗಿತ್ತು.
ಈ ನಡುವೆ, ಕುಡಿಯುವ ನೀರು ಮಾತ್ರವಲ್ಲದೆ, ಕರಾವಳಿಯ ಅಂತರ್ಜಲ ಮಟ್ಟ ಹೆಚ್ಚಿಸುವ ಮತ್ತು ಕೃಷಿ ಜಮೀನಿಗೆ ನೀರು ಉಣಿಸುವ ಮಹತ್ವದ ಪಶ್ಚಿಮವಾಹಿನಿ ಯೋಜನೆ ಕಡತದಲ್ಲಿ ಉಳಿಯಬೇಕಾಯಿತು. ಸುಮಾರು ಇಪ್ಪತ್ತಕ್ಕೂ ಹೆಚ್ಚು ಪಟ್ಟಣಗಳಿಗೆ ಕುಡಿಯುವ ನೀರಿನ ಮೂಲಗಳಾಗಿ ಈ ಚೆಕ್ ಡ್ಯಾಂಗಳು ಕೆಲಸ ಮಾಡಲಿವೆ.
ಎತ್ತಿನಹೊಳೆ

ಪಶ್ಚಿಮವಾಹಿನಿ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಕೇವಲ 200 ಕೋಟಿ ರೂಪಾಯಿ ನೀಡಲಾಗಿದ್ದರೆ, ಎತ್ತಿನಹೊಳೆ ಏತ ನೀರಾವರಿ ಯೋಜನೆ ಡಿಪಿಆರ್ (ಡಿಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್) ಸಿದ್ಧಪಡಿಸಲು 200 ಕೋಟಿ ರೂಪಾಯಿಯನ್ನು 2012ರಲ್ಲಿ ನೀಡಲಾಗಿತ್ತು. ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ 13,000 ಕೋಟಿ ರೂಪಾಯಿ ಮೊತ್ತದ ಎತ್ತಿನಹೊಳೆ ಯೋಜನೆಯ ವೇಗದಲ್ಲಿ ಪಶ್ಚಿಮವಾಹಿನಿ ಯೋಜನೆ ಅನುಷ್ಠಾನ ಆಗುತ್ತಿಲ್ಲ ಎಂಬುದಕ್ಕೆ ಕರಾವಳಿಯ ಜನಪ್ರತಿನಿಧಿಗಳು ನೇರ ಹೊಣೆಗಾರರು.
ಗುಂಡ್ಯ ಅಥವಾ ನೇತ್ರಾವತಿ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಎರಡು ಹಂತಗಳಲ್ಲಿ ಎಂಟು ಕಿರು ಅಣೆಕಟ್ಟುಗಳನ್ನು ಕಟ್ಟಿ, ಮಳೆಗಾಲದಲ್ಲಿ ಸಂಗ್ರಹಿಸಲಾಗುವ ನೀರನ್ನು ಸಕಲೇಶಪುರದ ದೊಡ್ಡ ನಗರಕ್ಕೆ ಪಂಪ್ ಮಾಡಿ, ಅಲ್ಲಿಂದ ಹರವನಹಳ್ಳಿಗೆ ಪಂಪ್ ಮಾಡಿ, ಅಲ್ಲಿಂದ ಗುರುತ್ವಾಕರ್ಷಣೆಯಲ್ಲಿ ಮುಂಬರುವ ಜಿಲ್ಲೆಗಳಿಗೆ ಹರಿಸಿ ಕೆರೆಗಳನ್ನು ತುಂಬಿಸುವುದು ಎತ್ತಿನಹೊಳೆ ಯೋಜನೆಯ ಸ್ಥೂಲ ಸ್ವರೂಪ.
ಎತ್ತಿನಹೊಳೆ ಯೋಜನೆ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಹೋರಾಟಗಳು ನಡೆದರೂ, ಪಶ್ಚಿಮವಾಹಿನಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನ ಮಾಡಲು ಯಾವುದೇ ಸರಕಾರ ಆಸಕ್ತಿ ವಹಿಸಲಿಲ್ಲ. ಈಗ ಯೋಜನೆಗೆ ಮಂಜೂರಾಗಿರುವ ನಿಧಿಯಲ್ಲಿ ಪ್ರಭಾವಿ ಸಚಿವರು ಮಾತ್ರ ತಮಗೆ ಬೇಕಾದ ವೆಂಟೆಂಡ್ ಡ್ಯಾಂ ನಿರ್ಮಾಣಕ್ಕೆ ಪ್ರಯತ್ನ ನಡೆಸಿದ್ದಾರೆ. ಅಂತಹದೊಂದು ಡ್ಯಾಂ/ಮೇಲುಸೇತುವೆ ಅಡ್ಯಾರ್ ಸಮೀಪ ನಿರ್ಮಾಣ ಆಗಲಿದ್ದು, ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಅಣೆಕಟ್ಟಿಗಾಗಿ ಸಚಿವ ಯು.ಟಿ.ಖಾದರ್ ಆಸಕ್ತಿ ವಹಿಸಿದ್ದಾರೆ. ಏಕೆಂದರೆ, ಅವರ ಕ್ಷೇತ್ರದ ಜನತೆಗೆ ಸೇತುವೆಯೊಂದಿಗೆ ಉಳ್ಳಾಲ ಮತ್ತು ಪರಿಸರದ ಪಟ್ಟಣಗಳಿಗೆ ಕುಡಿಯುವ ನೀರಿನ ಪೂರೈಕೆ ಇಲ್ಲಿಂದಲೇ ಆಗಲಿದೆ.
ಕರಾವಳಿಯ ಬಹುತೇಕ ಹೊಳೆಗಳಿಗೆ ರೈತರೇ ತಾತ್ಕಾಲಿಕ ಒಡ್ಡುಗಳನ್ನು ನಿರ್ಮಾಣ ಮಾಡುತ್ತಾರೆ. ಹಲವೆಡೆ ಉದ್ಯೋಗ ಖಾತರಿ ಯೋಜನೆಯ ಶ್ರಮದಾನದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುತ್ತದೆ. ಆದರೆ, ಅಂತಹ ಒಡ್ಡುಗಳಲ್ಲಿ ಈ ಬಾರಿ ಬಹುಬೇಗ ನೀರು ಖಾಲಿಯಾಗಿದೆ. ಬಹುತೇಕ ನದಿಗಳಲ್ಲಿ ನೀರಿನ ಒರತೆಯ ಹರಿವು ಕೂಡ ಬಹುಬೇಗ ನಿಂತಿದೆ.
ಮಳೆಗಾಲದಲ್ಲಿ ಅಷ್ಟೊಂದು ಪ್ರಮಾಣದ ಮಳೆ ಬಿದ್ದರೂ ಬೇಸಿಗೆ ಕಾಲದ ನೀರಿನ ಸಂಕಷ್ಟಕ್ಕೆ ನದಿ, ಹೊಳೆ, ತೊರೆಗಳಿಗೆ ಸರಣಿ ಒಡ್ಡುಗಳನ್ನು, ವೆಂಟೆಡ್ ಡ್ಯಾಂಗಳನ್ನು ನಿರ್ಮಿಸುವುದು ಬಹುದೊಡ್ಡ ಪರಿಹಾರ. ಇದರೊಂದಿಗೆ, ತೀರಾ ಕಡಿಮೆ ಪ್ರಮಾಣದಲ್ಲಿ ಇರುವ ಕೆರೆಗಳ ಪುನರುಜ್ಜೀವನ ಆಗಬೇಕಾಗಿದೆ. ಇವೆಲ್ಲವೂ ಸಾರ್ವಜನಿಕರ, ಫಲಾನುಭವಿಗಳ ಸಹಭಾಗಿತ್ವದಲ್ಲಿ ಆಗಬೇಕಾಗಿದೆ. ಸರಕಾರ ಮತ್ತು ನೌಕರಶಾಹಿ ಈ ನಿಟ್ಟಿನತ್ತ ಆಲೋಚಿಸುವುದು ಅಗತ್ಯವಾಗಿದೆ.